ಸೋಮವಾರ, ಮೇ 17, 2021
23 °C
ಭಾರತದಿಂದ ನೆರೆಯ ದೇಶದ ಕರಾವಳಿಯಲ್ಲಿ 6 ಕಣ್ಗಾವಲು ಕೇಂದ್ರ ನಿರ್ಮಾಣ

ಚೀನಾದ ಕಣ್ಗಾವಲಿಗೆ ಬಾಂಗ್ಲಾದಲ್ಲಿ ರೇಡಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಂಗಾಳಕೊಲ್ಲಿ ಸಮುದ್ರದಲ್ಲಿ ಚೀನಾದ ಹಡಗುಗಳ ಮೇಲೆ ಕಣ್ಗಾವಲು ಇರಿಸಲು ಭಾರತವು ಬಾಂಗ್ಲಾದೇಶದ ಕರಾವಳಿಯಲ್ಲಿ 20 ರೇಡಾರ್‌ಗಳನ್ನು ನಿರ್ಮಿಸಲಿದೆ. ಈ ಸಂಬಂಧ ಎರಡೂ ದೇಶಗಳು ಶನಿವಾರ ಒಪ್ಪಂದಕ್ಕೆ ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ನಡುವೆ ಶನಿವಾರ ಇಲ್ಲಿ ನಡೆದ ಸುದೀರ್ಘ ಮಾತುಕತೆಯ ನಂತರ ಎರಡೂ ದೇಶಗಳ ರಾಜತಾಂತ್ರಿಕರು ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಕರಾವಳಿ ಕಣ್ಗಾವಲು ರೇಡಾರ್‌ ಸೇರಿದಂತೆ ಒಟ್ಟು ಏಳು ಒಪ್ಪಂದಗಳಿಗೆ ಶನಿವಾರ ಸಹಿ ಮಾಡಲಾಗಿದೆ. ಜಲಸಂಪನ್ಮೂಲದ ಸದ್ಬಳಕೆ ಮತ್ತು ಹಂಚಿಕೆ, ಯುವಜನ ಮತ್ತು ಸಂಸ್ಕೃತಿ, ಶಿಕ್ಷಣ ಹಾಗೂ ಕರಾವಳಿ ಗಸ್ತು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ದಕ್ಷಿಣ ಚೀನಾ ಸಮುದ್ರದಿಂದ ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದ ಮೂಲಕ ಚೀನಾದ ವಾಣಿಜ್ಯ ಮತ್ತು ನೌಕಾಪಡೆ ಹಡಗುಗಳು ಪಾಕಿಸ್ತಾನದ ಕರಾವಳಿಯನ್ನು ತಲುಪುತ್ತವೆ. 2018ರಲ್ಲಿ ಇದೇ ಮಾರ್ಗದಲ್ಲಿ ಚೀನಾದ ಜಲಾಂತರ್ಗಾಮಿಗಳು ಅಕ್ರಮವಾಗಿ ಭಾರತದ ಜಲಗಡಿಯನ್ನು ಪ್ರವೇಶಿಸಿದ್ದವು. ಹೀಗಾಗಿ ಬಂಗಾಳಕೊಲ್ಲಿಯಲ್ಲಿ ಕಣ್ಗಾವಲಿನ ಅವಶ್ಯಕತೆ ಇದೆ. ಬಾಂಗ್ಲಾದಲ್ಲಿ ನಿರ್ಮಿಸಲಿರುವ ರೇಡಾರ್‌ಗಳು ಬಂಗಾಳ ಕೊಲ್ಲಿ ಮೇಲಿನ ಭಾರತದ ಕಣ್ಗಾವಲನ್ನು ಹೆಚ್ಚಿಸಲಿದೆ.

ಗುರುವಾರದಿಂದ ಭಾರತದ ಪ್ರವಾಸದಲ್ಲಿರುವ ಶೇಖ್ ಹಸೀನಾ ಅವರು ಶನಿವಾರ ಮೋದಿ ಅವರನ್ನು ಭೇಟಿ ಮಾಡಿದ್ದರು. ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಮತ್ತು ಶೇಖ್ ಹಸೀನಾ ಅವರೂ ಬಾಂಗ್ಲಾದ ಪ್ರಧಾನಿಯಾಗಿ ಎರಡನೇ ಬಾರಿ ಆಯ್ಕೆಯಾದ ನಂತರ ಅವರು ಭಾರತಕ್ಕೆ ಭೇಟಿ ನೀಡಿದ್ದು ಇದೇ ಮೊದಲು.

ಜಲಸಂಪನ್ಮೂಲದ ಸದ್ಬಳಕೆ ಮತ್ತು ಹಂಚಿಕೆ, ಯುವಜನ ಮತ್ತು ಸಂಸ್ಕೃತಿ, ಶಿಕ್ಷಣ ಹಾಗೂ ಕರಾವಳಿ ಗಸ್ತು ಕ್ಷೇತ್ರಗಳಲ್ಲಿ ಸಹಕಾರದ ಅಗತ್ಯವಿದೆ ಎಂಬ ಅಭಿಪ್ರಾಯವು ಇಬ್ಬರು ನಾಯಕರ ಮಾತುಕತೆ ವೇಳೆ ವ್ಯಕ್ತವಾಗಿತ್ತು. ಈ ಬಗ್ಗೆ ಮೋದಿ ಮತ್ತು ಹಸೀನಾ ಬಹಳ ವಿವರವಾಗಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಅನಿಲ ಕೊಳವೆ ಮಾರ್ಗ

ಈ ಇಬ್ಬರು ನಾಯಕರೂ ಎರಡು ವರ್ಷಗಳ ಹಿಂದೆ ಐದು ಒಪ್ಪಂದಗಳಿಗೆ ಸಮ್ಮತಿ ಸೂಚಿಸಿದ್ದರು. ಇವುಗಳಲ್ಲಿ ಮೂರನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು. ಅದರಲ್ಲಿ ಬಾಂಗ್ಲಾದಿಂದ ಈಶಾನ್ಯ ಭಾರತದ ರಾಜ್ಯಗಳ ಮಧ್ಯೆ ನಿರ್ಮಿಸಲಾಗಿರುವ ಅನಿಲ ಕೊಳವೆ ಮಾರ್ಗ ಪ್ರಮುಖವಾದುದು.

ಭಾರತದ ಬೇರೆ ಭಾಗಗಳಿಮದ ಈಶಾನ್ಯ ರಾಜ್ಯಗಳಿಗೆ ರಸ್ತೆ ಮೂಲಕ ವರ್ಷ ಪೂರ್ತಿ ಅಡುಗೆ ಅನಿಲ ಪೂರೈಕೆ ಸಾಧ್ಯವಿರಲಿಲ್ಲ.ಈಗ ಬಾಂಗ್ಲಾದಿಂದ ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಆಮದು ಮಾಡಿಕೊಳ್ಳುವುದರಿಂದ, ಈಶಾನ್ಯ ರಾಜ್ಯಗಳ ಜನರಿಗೆ ಅಡುಗೆ ಅನಿಲ ಸಿಲಿಂಡರ್‌ ಸದಾ ಲಭ್ಯವಿರಲಿದೆ. ಸಾಗಣೆ ವೆಚ್ಚವೂ ಕಡಿಮೆ ಆಗುವುದರಿಂದ ಅಡುಗೆ ಅನಿಲ ಸಿಲಿಂಡರ್‌ಗಳ ದರವೂ ಕಡಿಮೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಅನಿಲ ಮಾರ್ಗ

* 15,000 ಕಿ.ಮೀ. ಕೊಳವೆ ಮಾರ್ಗದ ಉದ್ದ
* ₹ 6,000 ಕೋಟಿ ಯೋಜನೆಯ ಅಂದಾಜು ವೆಚ್ಚ

ದಕ್ಷಿಣ ಏಷ್ಯಾದಲ್ಲಿ ನೆರೆಯ ದೇಶಗಳ ಜತೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಇದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕಿದೆ. ಇದಕ್ಕಾಗಿ ಭಾರತ–ಬಾಂಗ್ಲಾ ನಡುವಣ ಸಹಕಾರ ಒಪ್ಪಂದಗಳು ಮಹತ್ವ ಪಡೆದಿವೆ ಎಂದು ಎರಡೂ ದೇಶಗಳ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.

‘ಎನ್‌ಆರ್‌ಸಿ ಮುಗಿಯಲಿ’

ಅಸ್ಸಾಂನಲ್ಲಿನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಎನ್‌ಆರ್‌ಸಿಯಿಂದ ಹೊರಗೆ ಉಳಿದವರನ್ನು ಏನು ಮಾಡಬೇಕು ಎಂಬುದರ ಬಗ್ಗೆ, ಬಾಂಗ್ಲಾ ಜತೆ ಚರ್ಚಿಸಬೇಕೇ ಎಂಬುದನ್ನು ಆನಂತರವಷ್ಟೇ ನಿರ್ಧರಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಿಲುವು ಬದಲಿಸದ ಬಾಂಗ್ಲಾ

ಎನ್‌ಆರ್‌ಸಿಯಿಂದ ಹೊರಗೆ ಇಟ್ಟವರನ್ನು ಬಾಂಗ್ಲಾಗೆ ಕಳುಹಿಸಲಾಗುತ್ತದೆಯೇ ಎಂಬುದು ನಮ್ಮ ಪ್ರಶ್ನೆ. ಇವರು ಬಾಂಗ್ಲಾ ಪ್ರಜೆಗಳಲ್ಲ. ಹೀಗಾಗಿ ಅಷ್ಟು ಜನರನ್ನು ನಾವು ಬರಮಾಡಿಕೊಳ್ಳುವುದಿಲ್ಲ ಎಂಬ ನಮ್ಮ ನಿಲುವಿಗೆ ನಾವು ಬದ್ಧ ಎಂದು ಶೇಖ್ ಹಸೀನಾ ಹೇಳಿದ್ದಾರೆ.

‘ಜಂಟಿ ಹೇಳಿಕೆ ಇಲ್ಲ’

‘ಎನ್‌ಆರ್‌ಸಿಯಿಂದ ಬಾಂಗ್ಲಾದೇಶದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ’ ಎಂಬ ಘೋಷಣೆಯನ್ನು, ಮೋದಿ ಮತ್ತು ಹಸೀನಾ ಅವರ ಶನಿವಾರದ ಜಂಟಿ ಹೇಳಿಕೆಯಲ್ಲಿ ಸೇರಿಸಲು ಭಾರತ ನಿರಾಕರಿಸಿದೆ.

**

ನಮ್ಮ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಿದೆ. 2 ವರ್ಷದಲ್ಲಿ 12 ಯೋಜನೆಗಳನ್ನು ಆರಂಭಿಸಿದ್ದೇವೆ. ಅದರಲ್ಲಿ ಮೂರನ್ನು ಉದ್ಘಾಟಿಸಿದ್ದೇವೆ. ಇದು ಎರಡೂ ದೇಶಗಳ ಬಾಂಧವ್ಯದ ಪ್ರತೀಕ
– ನರೇಂದ್ರ ಮೋದಿ, ಪ್ರಧಾನಿ

**

ಕಳೆದ ಕೆಲವು ವರ್ಷಗಳಿಂದ ಎರಡೂ ದೇಶಗಳ ನಡುವಣ ಸಹಕಾರ ಸಂಬಂಧ ವೃದ್ಧಿಯಾಗುತ್ತಿದೆ. ಪ್ರಮುಖವಾಗಿ ಕರಾವಳಿ ಕಾವಲು, ಪರಮಾಣು ವಿದ್ಯುತ್ ಕ್ಷೇತ್ರ ಮತ್ತು ವಾಣಿಜ್ಯ ವ್ಯವಹಾರದಲ್ಲಿ ಗಣನೀಯ ಬೆಳವಣಿಗೆಯಾಗಿದೆ
– ಶೇಖ್ ಹಸೀನಾ , ಬಾಂಗ್ಲಾ ಪ್ರಧಾನಿ

**

ಶೇಖ್ ಹಸೀನಾ ಅವರ ಜತೆಗಿನ ಮಾತುಕತೆ ಅತ್ಯಮೂಲ್ಯವಾಗಿತ್ತು. ಭಾರತವು ತನ್ನ ನೆರೆಯ ಬಾಂಗ್ಲಾದೇಶಕ್ಕೆ ಎಂದಿಗೂ ಆದ್ಯತೆ ನೀಡುತ್ತದೆ ಎಂಬುದನ್ನು ಈ ಒಪ್ಪಂದಗಳು ತೋರಿಸುತ್ತವೆ
– ರವೀಶ್ ಕುಮಾರ್, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು