ಬುಧವಾರ, ಜುಲೈ 15, 2020
25 °C

ಭಾರತ–ಚೀನಾ ಗಡಿ ಸಂಘರ್ಷ| ಲಡಾಖ್‌‌ನಲ್ಲಿ ಕ್ಷಿಪಣಿ ವ್ಯವಸ್ಥೆ ನಿಯೋಜಿಸಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾದ ಯುದ್ಧ ವಿಮಾನಗಳ ಹಾರಾಟ ಹೆಚ್ಚಾಗಿರುವ ಬೆನ್ನಹಿಂದೆಯೇ ಭಾರತೀಯ ಸೇನೆಯು ಪೂರ್ವ ಲಡಾಖ್‌ ವಲಯಕ್ಕೆ ಸುಧಾರಿತ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನು ರವಾನಿಸಿದೆ.

ಗಡಿಯಲ್ಲಿ ಈಗಾಗಲೇ ಭಾರತದ ಸುಖೋಯ್‌–30ಎಂಕೆಐ ಮತ್ತು ಮಿಗ್‌–29 ಯುದ್ಧ ವಿಮಾನಗಳು, ಅಪಾಚೆ ಹಾಗೂ ಚಿನೂಕ್‌ ಹೆಲಿಕಾಪ್ಟರ್‌ಗಳು ವಾಯುಗಸ್ತನ್ನು ಹೆಚ್ಚಿಸಿವೆ. ಈಗ ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನೂ ಆ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ.

‘ಲಡಾಖ್‌ನ ಗಡಿ ಪ್ರದೇಶದಲ್ಲಿ ಎರಡೂ ದೇಶಗಳ ಸೇನಾ ಜಮಾವಣೆ ಹೆಚ್ಚಾಗಿದೆ. ಚೀನಾದ ಸಂಭಾವ್ಯ ದಾಳಿಯನ್ನು ಸಮರ್ಥವಾಗಿ ಎದುರಿಸಲು ಭೂ ಹಾಗೂ ವಾಯು ಪಡೆಯನ್ನು ಅಗತ್ಯ ಪ್ರಮಾಣದಲ್ಲಿ ನಿಯೋಜನೆ ಮಾಡಲಾಗಿದೆ’ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆಯು ವರದಿ ಮಾಡಿದೆ.

ವಾಯುಪಡೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಹಾಗೂ ಭೂಸೇನೆ ಮುಖ್ಯಸ್ಥ ಎಂ.ಎಂ. ನರವಣೆ ಇಬ್ಬರೂ ಕಳೆದ ಹದಿನೈದು ದಿನಗಳಲ್ಲಿ ಲಡಾಖ್‌ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಹಾಗೂ ಸೇನೆಯ ಸನ್ನದ್ಧತೆಯನ್ನು
ಪರಿಶೀಲಿಸಿದ್ದಾರೆ.

ಚೀನಾದ ಸುಖೋಯ್‌–30 ಯುದ್ಧ ವಿಮಾನಗಳು ಕೆಲವು ದಿನಗಳಿಂದ ಭಾರತೀಯ ಸರಹದ್ದಿನಿಂದ ಕೇವಲ ಹತ್ತು ಕಿ.ಮೀ. ಅಂತರದಲ್ಲಿಯೇ ಹಾರಾಟ ನಡೆಸುತ್ತಿವೆ. ಗಡಿಯಲ್ಲಿನ ವಾಯು ಪ್ರದೇಶದಲ್ಲಿ ಗಡಿಬಿಡಿ ಹೆಚ್ಚಾಗಿದೆ.

‘ಭಾರತಕ್ಕೆ ಅದರ ಮಿತ್ರರಾಷ್ಟ್ರವೊಂದು ವಾಯು ದಾಳಿಯನ್ನು ಸಮರ್ಥವಾಗಿ ಎದುರಿಸುವಂತಹ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯನ್ನು ಒದಗಿಸುತ್ತಿದ್ದು, ಅದನ್ನೂ ಲಡಾಖ್‌ ಪ್ರದೇಶದಲ್ಲಿ ನಿಯೋಜನೆ ಮಾಡಲಾಗುತ್ತಿದೆ’ ಎಂದೂ ವರದಿಯಾಗಿದೆ.

ವಾಸ್ತವ ನಿಯಂತ್ರಣ ರೇಖೆಯ ದೌಲತ್‌ ಬೇಗ್‌ ಓಲ್ಡಿ, ಗಾಲ್ವನ್‌ ಕಣಿವೆಯ ಗಸ್ತು ಪಾಯಿಂಟ್‌ಗಳಾದ‌ 14, 15, 17, 17ಎ (ಹಾಟ್‌ ಸ್ಪ್ರಿಂಗ್‌ ಪ್ರದೇಶ), ಪಾಂಗಾಂಗ್‌ ಸರೋವರ ಮತ್ತು ಫಿಂಗರ್–3 ವಲಯಗಳಲ್ಲಿ ವಿಮಾನಗಳ ಹಾರಾಟ ಹೆಚ್ಚಾಗಿದೆ.

ರಕ್ಷಣಾ ಸಚಿವರ ಭೇಟಿ

ರಷ್ಯಾ ಪ್ರವಾಸದಿಂದ ಹಿಂದಿರುಗಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಶನಿವಾರ ಭೇಟಿ ಮಾಡಿದ ಭೂಸೇನೆಯ ಮುಖ್ಯಸ್ಥ ಎಂ.ಎಂ. ನರವಣೆ, ಲಡಾಖ್‌ನ ಪರಿಸ್ಥಿತಿ ಹಾಗೂ ಸೇನಾ ಸನ್ನದ್ಧತೆಯ ಕುರಿತು ವಿವರಣೆ ನೀಡಿದರು. ನರವಣೆ ಅವರು ಲಡಾಖ್‌ನಲ್ಲಿ ಎರಡು ದಿನ ಇದ್ದು, ಪರಿಸ್ಥಿತಿಯನ್ನು ಪರಾಮರ್ಶಿಸಿ ಬಂದಿದ್ದಾರೆ. ಗಾಲ್ವನ್‌ ಸಂಘರ್ಷದ ಬಳಿಕ ಅರುಣಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂನಲ್ಲಿರುವ ಗಡಿ ಪ್ರದೇಶಗಳೂ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆಯ ವಿವಿಧ ಕಡೆಗಳಲ್ಲಿ ಸೇನೆಯ ಜಮಾವಣೆಯನ್ನು ಹೆಚ್ಚಿಸಲಾಗಿದೆ.

ಚೀನಾ ವಿರುದ್ಧ ಆಸಿಯಾನ್‌ ಸಡ್ಡು

ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಪ್ರತಿಪಾದಿಸುತ್ತಿರುವ ಚೀನಾ ವಿರುದ್ಧ ಆಗ್ನೇಯ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಬಲವಾಗಿ ದನಿ ಎತ್ತಿದೆ.

1982ರ ವಿಶ್ವಸಂಸ್ಥೆಯ ಸಾಗರ ಒಪ್ಪಂದವು (ಯುಎನ್‌ಸಿಎಲ್‌ಒಎಸ್) ದಕ್ಷಿಣ ಚೀನಾ ಸಮುದ್ರದ ಮೇಲೆ ಸಾರ್ವಭೌಮತೆ, ಕಾನೂನುಬದ್ಧ ಹಿತಾಸಕ್ತಿಗಳನ್ನು ಒತ್ತಿ ಹೇಳುತ್ತದೆ. ಸಮುದ್ರದ ವಿವಾದಿತ ಪ್ರದೇಶದ ಮೇಲಿನ ಹಕ್ಕು ಆ ಒಪ್ಪಂದದ ಆಧಾರದ ಮೇಲೆಯೇ ನಿರ್ಧಾರವಾಗಬೇಕಿದೆ. ಚೀನಾ ಸಹ ಅದಕ್ಕೆ ಬದ್ಧವಾಗಿ ನಡೆಯಬೇಕು ಎಂದು ಆಸಿಯಾನ್ ನೆನಪಿಸಿದೆ. 

ಹತ್ತು ದೇಶಗಳ ಪರವಾಗಿ ವಿಯಟ್ನಾಂ ಈ ಕುರಿತ ಹೇಳಿಕೆ ಬಿಡುಗಡೆ ಮಾಡಿದೆ. ಇಂಡೊನೇಷ್ಯಾ, ಥಾಯ್ಲೆಂಡ್, ವಿಯಟ್ನಾಂ, ಸಿಂಗಪುರ, ಮಲೇಷ್ಯಾ, ಫಿಲಿಪ್ಪೀನ್ಸ್, ಕಾಂಬೊಡಿಯಾ, ಮ್ಯಾನ್ಮಾರ್, ಬ್ರುನೈ ಮತ್ತು ಲಾವೋಸ್ ದೇಶಗಳು ಆಸಿಯಾನ್‌ ಸದಸ್ಯ ರಾಷ್ಟ್ರಗಳಾಗಿವೆ. 

ಒಕ್ಕೂಟದ ಎಲ್ಲ ಸದಸ್ಯ ರಾಷ್ಟ್ರಗಳ ನಾಯಕರು ಶನಿವಾರ ವಿಡಿಯೊ ಸಂವಾದ ನಡೆಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು