ಬುಧವಾರ, ಜೂನ್ 3, 2020
27 °C
ಮಲೇರಿಯಾ ಮಾತ್ರೆ ಪೂರೈಕೆ ಹಾದಿ ಸುಗಮ; ರಫ್ತು ಮೇಲಿನ ನಿರ್ಬಂಧ 3 ದಿನಗಳಲ್ಲೇ ಸಡಿಲಿಕೆ

ಟ್ರಂಪ್‌ ಬೆದರಿಕೆ: ಔಷಧ ರಫ್ತಿಗೆ ಭಾರತ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ಸೋಂಕು ನಿವಾರಣೆಗೆ ಬಳಸುವ ಮಾತ್ರೆಗಳನ್ನು ಪೂರೈಸದಿದ್ದರೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದ ಬೆನ್ನಲ್ಲೇ ಭಾರತ ಕ್ರಮಕ್ಕೆ ಮುಂದಾಗಿದೆ. ಮಲೇರಿಯಾ ನಿರೋಧಕ ಮಾತ್ರೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಹಾಗೂ ಪ್ಯಾರಾಸಿಟಾಮೋಲ್ ಮಾತ್ರೆಗಳ ರಫ್ತಿನ ಮೇಲೆ ಇದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಿಸಲು ಕೇಂದ್ರ ಸರ್ಕಾರ ಮಂಗಳವಾರ ನಿರ್ಧರಿಸಿದೆ. 

ಹೈಡ್ರಾಕ್ಸಿಕ್ಲೊರೊಕ್ವಿನ್‌ ಮಾತ್ರೆಗಳನ್ನು ಕೊರೊನಾ ಸೋಂಕಿನಿಂದ ಬಳಲುವ ರೋಗಿಗಳ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ಮಾತ್ರೆಗಳನ್ನು ಬಳಸಲಾಗುತ್ತದೆ. ಈ ಮಾತ್ರೆಗಳ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರದ ವಿದೇಶಿ ವ್ಯಾಪಾರ ನಿರ್ದೇಶನಾಲಯವು (ಡಿಜಿಎಫ್‌ಟಿ) ಏಪ್ರಿಲ್ 4ರಂದು ಆದೇಶ ಹೊರಡಿಸಿತ್ತು. ಆದರೆ ಟ್ರಂಪ್ ಅವರು ಮಾತ್ರೆ ಪೂರೈಸುವಂತೆ ಭಾರತಕ್ಕೆ ಒತ್ತಡ ಹೇರಿದರು. ನಿಷೇಧ ಹೇರಿ ಮೂರು ದಿನಗಳಲ್ಲೇ ಭಾರತ ತನ್ನ ನಿರ್ಧಾರವನ್ನು ಪರಿಷ್ಕರಿಸಿದೆ.  

‘ಕೋವಿಡ್‌–19 ಸೋಂಕಿನಿಂದ ಜಗತ್ತಿನ ಹಲವಾರು ದೇಶಗಳು ತೀವ್ರವಾಗಿ ತತ್ತರಿಸಿವೆ. ಮಾನವೀಯತೆ ನೆಲೆಗಟ್ಟಿನಲ್ಲಿ ಔಷಧ ರಫ್ತು ಮಾಡಲು ಸೋಮವಾರ ರಾತ್ರಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ. ಆದರೆ ಯಾವ ದೇಶಗಳಿಗೆ ಮಾತ್ರೆಗಳನ್ನು ರಫ್ತು ಮಾಡಲಾಗುತ್ತದೆ ಎಂಬ ಬಗ್ಗೆ ಅವರು ಖಚಿತವಾಗಿ ಹೇಳಲಿಲ್ಲ.

ಭಾನುವಾರ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದ ಟ್ರಂಪ್, ಮಾತ್ರೆಗಳ ರಫ್ತಿನ ಮೇಲಿನ ನಿರ್ಬಂಧ ತೆರವುಗೊಳಿಸಲು ಮನವಿ ಮಾಡಿದ್ದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ‘ಮೋದಿ ಅವರು ಔಷಧ ರಫ್ತು ಮಾಡಲು ಒಪ್ಪದಿದ್ದರೆ ತೊಂದರೆಯಿಲ್ಲ. ಆದರೆ ಅದಕ್ಕೆ ತಕ್ಕ ಪ್ರತೀಕಾರವನ್ನು ಅವರು ಎದುರಿಸಬೇಕಾಗಬಹುದು’ ಎಂದು ಟ್ರಂಪ್ ಖಾರವಾಗಿ ಪ್ರತಿಕ್ರಿಯಿಸಿದ್ದರು. 

ಟ್ರಂಪ್ ಅವರ ಪ್ರತೀಕಾರದ ಎಚ್ಚರಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್ ಸೋಂಕು ವಿಶ್ವವ್ಯಾಪಿಯಾಗಿ ಹರಡುತ್ತಿರುವ ಈ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಮುದಾಯದ ಜತೆ ಸೌಹಾರ್ದ ಮತ್ತು ಬಾಂಧವ್ಯ ಗಟ್ಟಿಗೊಳಿಸಲು ಭಾರತ ಯಾವಾಗಲೂ ಬಯಸುತ್ತದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ. 

ದೇಶೀಯ ಬೇಡಿಕೆಗೆ ತಕ್ಕಷ್ಟು ಮಾತ್ರೆ ಇರುವಂತೆ ನೋಡಿಕೊಂಡು, ನಂತರ ವಿವಿಧ ದೇಶಗಳ ಬೇಡಿಕೆಗೆ ಅನುಗುಣವಾಗಿ ರಫ್ತು ಮಾಡಲು ಸರ್ಕಾರ ನಿರ್ಧರಿಸಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್‌ ಸೇರಿ 14  ಔಷಧ ಉತ್ಪನ್ನಗಳ ಮೇಲಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್‌ ಹಾಗೂ ಪ್ಯಾರಾಸಿಟಾಮೋಲ್ ಮಾತ್ರೆಗಳಿಗೆ ಇರುವ ಬೇಡಿಕೆ ಮೇಲೆ ನಿರಂತರವಾಗಿ ನಿಗಾ ವಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.  

ಈ ಮಾತ್ರೆಗಳ ಉತ್ಪಾದನೆ ಹಾಗೂ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್‌ ಪೂರೈಕೆ ಮಾಡುವಂತೆ ನೆರೆಯ ಶ್ರೀಲಂಕಾ, ನೇಪಾಳ ಸೇರಿದಂತೆ ಕನಿಷ್ಠ 20 ರಾಷ್ಟ್ರಗಳು ಈಗ ಬೇಡಿಕೆ ಸಲ್ಲಿಸಿವೆ. ನೆರೆಯ ದೇಶಗಳು ಸೇರಿದಂತೆ ಬೇಡಿಕೆ ಸಲ್ಲಿಸಿರುವ ಎಲ್ಲ ದೇಶಗಳಿಗೆ ಮಲೇರಿಯಾ ನಿರೋಧಕ ಮಾತ್ರೆಗಳನ್ನು ಹಂತಹಂತವಾಗಿ ಭಾರತ ಪೂರೈಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 

ಭಾರತೀಯರಿಗೆ ಆದ್ಯತೆ: ರಾಹುಲ್ ಒತ್ತಾಯ

ಕೊರೊನಾ ವೈರಸ್ ವಿರುದ್ಧ ಹೋರಾಡುವ ಜೀವರಕ್ಷಕ ಔಷಧಗಳನ್ನು ಮೊದಲು ಭಾರತೀಯರಿಗೆ ಪೂರೈಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಒತ್ತಾಯಿಸಿದ್ದಾರೆ. 

‘ಸ್ನೇಹದಲ್ಲಿ ಪ್ರತೀಕಾರ ಎಂಬುದು ಇರಬಾರದು. ಔಷಧ ಅಗತ್ಯವಿರುವ ಎಲ್ಲ ದೇಶಗಳಿಗೂ ಭಾರತ ಪೂರೈಸಿದರೆ ತೊಂದರೆಯಿಲ್ಲ. ಆದರೆ ಭಾರತೀಯರಿಗೆ ಆದ್ಯತೆ ಸಿಗಬೇಕು’ ಎಂದು ರಾಹುಲ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು