ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ವಿಡಿಯೊ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್

Last Updated 6 ಜನವರಿ 2020, 11:33 IST
ಅಕ್ಷರ ಗಾತ್ರ

‘ಭಾರತೀಯ ಪೊಲೀಸರು ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಇಮ್ರಾನ್ ಖಾನ್ ಶುಕ್ರವಾರ ರಾತ್ರಿ ಭಾರತಕ್ಕೆ ಸಂಬಂಧವೇಪಡದಹಳೆಯ ವಿಡಿಯೊ ತುಣುಕನ್ನು ಟ್ವೀಟ್ ಮಾಡಿ ವಿಶ್ವದ ಎದುರು ನಗೆಪಾಟಲಿಗೀಡಾದರು.

‘ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ಪೊಲೀಸರ ದೌರ್ಜನ್ಯ’ ಎಂಬ ಒಕ್ಕಣೆಯೊಂದಿಗೆ ಇಮ್ರಾನ್‌ ಖಾನ್ ವಿಡಿಯೊ ತುಣುಕೊಂದನ್ನು ಟ್ವೀಟ್ ಮಾಡಿದ್ದರು. ವಾಸ್ತವವಾಗಿ ಅದು 2013ರಲ್ಲಿ ಬಾಂಗ್ಲಾದಲ್ಲಿ ಚಿತ್ರೀಕರಿಸಿದ್ದ ವಿಡಿಯೊ ಆಗಿತ್ತು. ಇದನ್ನು ಗುರುತಿಸಿ ಟ್ವೀಟಿಗರು ಇಮ್ರಾನ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೊನೆಗೆ ಅನಿವಾರ್ಯವಾಗಿ ಇಮ್ರಾನ್‌ ಖಾನ್ ತಮ್ಮ ಟ್ವೀಟ್ ಡಿಲೀಟ್ ಮಾಡಬೇಕಾಯಿತು.

‘ಪಾಕಿಸ್ತಾನದ ನನಕಾನಾ ಸಾಹಿಬ್ ಗುರುದ್ವಾರದ ಮೇಲೆ ಪುಂಡರು ದಾಳಿ ನಡೆಸಿದ್ದಾರೆ. ಅಲ್ಲಿರುವ ಸಿಖ್ಖರಿಗೆ ರಕ್ಷಣೆ ಕೊಡಿ’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಅವರಿಗೆ ಮನವಿ ಮಾಡಿದ್ದರು. ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ವಿನಂತಿಸಿದ್ದರು.

ಅಮರಿಂದರ್ ಸಿಂಗ್ ವಿನಂತಿ ಮಾಡಿದ ಕೆಲ ಸಮಯದ ನಂತರ ಇಮ್ರಾನ್ ವಿವಾದಿತ ವಿಡಿಯೊ ಟ್ವೀಟ್ ಮಾಡಿ, ‘ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ’ ಎಂದು ಬಿಂಬಿಸಲು ಯತ್ನಿಸಿದ್ದರು.

ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದ ವಿಡಿಯೊದಲ್ಲಿದ್ದ ಪೊಲೀಸರ ರಕ್ಷಣಾ ಉಪಕರಣದ ಮೇಲೆಬಾಂಗ್ಲಾದೇಶ ಪೊಲೀಸರ ‘ರ‍್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್’ (ಆರ್‌ಎಬಿ) ಎಂಬ ಬರಹ ಇತ್ತು. 2013ರಲ್ಲಿ ಬಾಂಗ್ಲಾ ಪೊಲೀಸರ ದೌರ್ಜನ್ಯ ಒಕ್ಕಣೆಯೊಂದಿಗೆ ಈ ವಿಡಿಯೊ ತುಣುಕುಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್ ಆಗಿತ್ತು.

ಲೇವಡಿ ಮಾಡಿದ ಅಕ್ಬರುದ್ದೀನ್

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಅಕ್ಬರುದ್ದೀನ್ ಅವರು ಪಾಕ್ ಪ್ರಧಾನಿಯ ಟ್ವೀಟ್‌ ಕುರಿತು ‘ರಿಪೀಟ್ ಅಫೆಂಡರ್ಸ್‌’ (ಪುನರಾವರ್ತಿತ ಅಪರಾಧಿಗಳು) ಎಂದು ಲೇವಡಿ ಮಾಡಿದ್ದಾರೆ. #oldhabitsdiehard (ಹಳೆಯ ಹವ್ಯಾಸಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ) ಎಂಬ ಹ್ಯಾಷ್‌ಟ್ಯಾಗ್‌ ಬಳಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರರವೀಶ್ ಕುಮಾರ್ ಸಹ ಇಮ್ರಾನ್‌ ಖಾನ್ ಟ್ವೀಟ್‌ ಖಂಡಿಸಿದ್ದಾರೆ. ‘ಸುಳ್ಳು ಮಾಹಿತಿ ಟ್ವೀಟ್ ಮಾಡಿ, ಸಿಕ್ಕಿಹಾಕಿಕೊಳ್ಳಿ, ಡಿಲೀಟ್ ಮಾಡಿ, ಅದನ್ನೇ ಇನ್ನೊಮ್ಮೆ ಮತ್ತೊಮ್ಮೆ ಮಾಡುತ್ತಿರಿ. ಹಳೆಯ ಹವ್ಯಾಸಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

ಇಮ್ರಾನ್‌ಗೆ ಉತ್ತರ ಪ್ರದೇಶ ಪೊಲೀಸರ ಪಾಠ

ತಪ್ಪು ವಿಡಿಯೊ ಟ್ವೀಟ್ ಮಾಡಿ ಸಿಕ್ಕಿಬಿದ್ದ ಇಮ್ರಾನ್‌ಖಾನ್‌ಗೆ ಉತ್ತರ ಪ್ರದೇಶ ಪೊಲೀಸರು ‘ಈ ಲಿಂಕ್‌ಗಳಲ್ಲಿರು ಮಾಹಿತಿಯನ್ನು ಒಮ್ಮೆ ಓದಿಕೊಳ್ಳಿ. ಸತ್ಯ ಏನೆಂದು ನಿಮಗೇ ಅರ್ಥವಾದೀತು’ ಎಂದು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಫ್ಯಾಕ್ಟ್‌ಚೆಕ್ ಬರಹಗಳ ಲಿಂಕ್ ಟ್ವೀಟ್ ಮಾಡಿದ್ದಾರೆ. ಅವರನ್ನು ಬಾಂಗ್ಲಾದೇಶದ ಪೊಲೀಸರು ಎಂದು ಗುರುತಿಸುವುದು ಹೇಗೆಂಬ ಬಗ್ಗೆಪಾಠವನ್ನೂ ಮಾಡಿದ್ದಾರೆ.

ಗುರುದ್ವಾರದ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ,‘ಕಳೆದ ವರ್ಷ ಸಿಖ್‌ ಬಾಲಕಿಯನ್ನು ಅಪಹರಿಸಿ, ಮತಾಂತರಗೊಳಿಸಲಾಗಿತ್ತು. ಗುಂಪೊಂದು ಕಲ್ಲು ತೂರಾಟ ನಡೆಸಿರುವುದು ಸಿಖ್‌ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಮುಂದುವರಿದಿರುವುದರ ದ್ಯೋತಕ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT