ಇದೇ ತಿಂಗಳ 31ಕ್ಕೆ ಭೂಸೇನಾ ಮುಖ್ಯಸ್ಥ ಜನರಲ್ಬಿಪಿನ್ ರಾವತ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಆ ಸ್ಥಾನಕ್ಕೆ ಆಯ್ಕೆಯಾಗಿರುವ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾಣೆ ಸೇನಾ ವಲಯದಲ್ಲಿ ‘ಚೀನಾ ತಜ್ಞ’ ಎಂದೇ ಹೆಸರುವಾಸಿ.ಹೊಸ ದಂಡನಾಯಕನ ಬಗ್ಗೆ ನೀವು ತಿಳಿಯಬೇಕಾದ5 ಅಂಶಗಳು ಇಲ್ಲಿವೆ.
1) ಚೀನಾ ತಜ್ಞ
ಲೆಫ್ಟಿನೆಂಟ್ ಜನರಲ್ ನರವಾಣೆ ಅವರಿಗೀಗ 59ರ ಹರೆಯ. ಸೇನಾ ವಲಯದಲ್ಲಿ ‘ಚೀನಾ ತಜ್ಞ’ಎಂಬ ಶ್ರೇಯವೂ ಅವರಿಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಗಳ ತಂತ್ರ ಹೆಣೆದ ಅನುಭವಿ. ಸೇನೆಯ ಉಪ ಮುಖ್ಯಸ್ಥರಾಗುವ ಮೊದಲು ಕೊಲ್ಕತ್ತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್‌ನ ಕಮಾಂಡರ್ ಆಗಿದ್ದರು. ದೇಶದ ಪೂರ್ವ ಭಾಗದಲ್ಲಿ ಚೀನಾ ಗಡಿಯ ಕಾವಲು ಪೂರ್ವ ಕಮಾಂಡ್‌ನ ಜವಾಬ್ದಾರಿ.
2) ಅತಿ ಹಿರಿಯ ಅಧಿಕಾರಿ
ಜನರಲ್ಬಿಪಿನ್ ರಾವತ್ ಅವರು ಡಿಸೆಂಬರ್ 31ಕ್ಕೆ ನಿವೃತ್ತರಾದ ನಂತರ ಸೇನೆಯಲ್ಲಿ ಉಳಿಯುವ ಅತಿ ಹಿರಿಯ ಅಧಿಕಾರಿ ನರವಾಣೆ. ಈ ಬಾರಿ ಸರ್ಕಾರವು ಅರ್ಹತೆಯ ಜೊತೆಗೆ ಹಿರಿತನವನ್ನೂ ಪರಿಗಣಿಸಿ ಮುಖ್ಯಸ್ಥರನ್ನು ನೇಮಿಸಿದೆ. ಈ ಹಿಂದೆ ಸಶಸ್ತ್ರಪಡೆಗಳಿಗೆ ಮುಖ್ಯಸ್ಥರನ್ನು ನೇಮಿಸುವಾಗ ಅನೇಕ ಬಾರಿ ಹಿರಿತನವನ್ನು ಬದಿಗೊತ್ತಿ, ಕಾರ್ಯಕ್ಷಮತೆಗೆ ಒತ್ತು ನೀಡಿದ್ದ ಉದಾಹರಣೆಗಳು ಇದ್ದವು. ಸರ್ಕಾರದ ಇಂಥ ನಿರ್ಧಾರವನ್ನು ನ್ಯಾಯಾಲಯಗಳೂ ಎತ್ತಿಹಿಡಿದಿದ್ದವು. ನರವಾಣೆ ಅವರ ವಿಚಾರದಲ್ಲಿ ಸೇವಾ ಹಿರಿತನ ಮತ್ತು ಕಾರ್ಯಕ್ಷಮತೆಗಳೆರಡೂ ಮೇಳೈಸಿರುವುದು ವಿಶೇಷ.
3) ಮುಂದಿದೆ ದೊಡ್ಡ ಸವಾಲು
ಸೇನೆಯನ್ನು ಸಮಕಾಲೀನಗೊಳಿಸುವ ಚಿಂತನೆಗೆ ಚಾಲನೆ ದೊರೆತಿರುವ ಸಂಧಿ ಕಾಲದಲ್ಲಿ ನರವಾಣೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಸೇನೆಯನ್ನು ಇನ್ನಷ್ಟು ಸದೃಢಗೊಳಿಸುವ, ಚುರುಕಾಗಿಸುವ ಮತ್ತು ತಕ್ಷಣದ ಪ್ರತಿಕ್ರಿಯೆಗೆ ಸನ್ನದ್ಧ ಸ್ಥಿತಿಯಲ್ಲಿಡುವ ಐತಿಹಾಸಿಕ ಪುನರ್ ಸಂಘಟನೆ ಪ್ರಯತ್ನಗಳು ಇದೀಗ ಆರಂಭಗೊಂಡಿವೆ. ಭಾರತದ ಸ್ವಾತಂತ್ರ್ಯ ನಂತರ ನಡೆಯುತ್ತಿರುವ ಮಹತ್ತರ ಬೆಳವಣಿಗೆಯಿದು. ಈ ಬದಲಾವಣೆಯನ್ನು ಕಾರ್ಯಾನುಷ್ಠಾನಗಳಿಸುವ ಮಹತ್ವದ ಜವಾಬ್ದಾರಿ ನರವಾಣೆ ಅವರ ಮೇಲಿದೆ.
ಇದನ್ನೂ ಓದಿ:ಹೈಟೆಕ್ ಸೇನೆ: ₹9 ಲಕ್ಷ ಕೋಟಿ ವೆಚ್ಚ
4) ಸಿಗುತ್ತಾ ಬಜೆಟ್ ಪಾಲು
ಸೇನೆಯ ಆಧುನೀಕರಣ ಪ್ರಕ್ರಿಯೆ ಮುಂದುವರಿಯಲು ಅಪಾರ ಪ್ರಮಾಣದ ನಿಧಿಯ ಅಗತ್ಯವಿದೆ. ದೇಶ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಈ ಕಾಲಘಟ್ಟದಲ್ಲಿ ಸರ್ಕಾರಕ್ಕೆ ಸೇನೆಯ ಅಗತ್ಯಗಳನ್ನು ಮನಗಾಣಿಸಿ ನಿಧಿ ಮಂಜೂರು ಮಾಡಿಸಿಕೊಳ್ಳುವುದು ಮುಖ್ಯಸ್ಥರಿಗೆ ದೊಡ್ಡ ಸವಾಲೇ ಸರಿ. ಶಸ್ತ್ರಾಸ್ತ್ರ ಮತ್ತು ಇತರ ಸಲಕರಣೆಗಳ ಖರೀದಿ ಪ್ರಕ್ರಿಯೆಯೂ ಆಧುನೀಕರಣದ ಒಂದು ಭಾಗ.
5) ಅನುಭವಿ ನಾಯಕ
ತಮ್ಮ 39 ವರ್ಷಗಳ ಸೇವಾ ಅವಧಿಯಲ್ಲಿ ಹತ್ತು ಹಲವು ಉನ್ನತ ಹುದ್ದೆಗಳನ್ನು ನರವಾಣೆ ನಿರ್ವಹಿಸಿದ್ದಾರೆ. ಇವರ ಸೇವೆಗೆ ಹಲವು ಗೌರವಗಳೂ ಸಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯುತ್ತಮ ಬೆಟಾಲಿಯನ್ ನಿರ್ವಹಣೆಗಾಗಿ ‘ಸೇನಾ ಪದಕ’, ನಾಗಾಲ್ಯಾಂಡ್‌ನಲ್ಲಿ ಅಸ್ಸಾಂ ರೈಫಲ್ಸ್‌ನ ಇನ್‌ಸ್ಪೆಕ್ಟರ್ ಜನರಲ್ ಆಗಿ ಸಲ್ಲಿಸಿದ ಸೇವೆಗೆ ‘ವಿಶಿಷ್ಟ ಸೇವಾ ಪದಕ’, ಪ್ರತಿಷ್ಠಿತ ದಾಳಿ ಪಡೆ (ಸ್ಟ್ರೈಕ್ ಕಾರ್ಪ್ಸ್) ಮುನ್ನಡೆಸಿದ್ದಕ್ಕಾಗಿ ‘ಅತಿ ವಿಶಿಷ್ಟ ಸೇವಾ ಪದಕ’ ನರವಾಣೆ ಅವರಿಗೆ ಒಲಿದಿವೆ. ಶಾಂತಿಪಾಲನಾ ಪಡೆಯೊಂದಿಗೆ ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸಿದ್ದ ನರವಾಣೆ ಕೆಲ ಕಾಲ ಮ್ಯಾನ್ಮಾರ್‌ನಲ್ಲಿಯೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಜೂನ್ 1980ರಲ್ಲಿ ಸಿಖ್ ರೆಜಿಮೆಂಟ್‌ನಲ್ಲಿ ಕೆಲಸ ಆರಂಭಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.