ಶನಿವಾರ, ಜುಲೈ 24, 2021
27 °C

ಗಾಲ್ವನ್ ಕಣಿವೆ ಸಂಘರ್ಷ | ವಿದೇಶಾಂಗ ಸಚಿವರ ಮಾತುಕತೆ; ಚೀನಾಗೆ ಜೈಶಂಕರ್ ಎಚ್ಚರಿಕೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಸಂಘರ್ಷದಿಂದಾಗಿ ಎರಡೂ ಕಡೆ ಸಾವು ನೋವು ಸಂಭವಿಸಿತ್ತು. ಅದಾದ ಬಳಿಕ ಭಾರತದ ಎಸ್‌.ಜೈಶಂಕರ್‌ ಹಾಗೂ ಚೀನಾದ ಸಚಿವ ವಾಂಗ್‌ ಯಿ ಅವರು ಬುಧವಾರ ಮಾತುಕತೆ ನಡೆಸಿದ್ದಾರೆ.

ಸಂಘರ್ಷವು ಪೂರ್ವ ನಿರ್ಧಾರಿತವಾಗಿದ್ದು, ಸಾವು–ನೋವುಗಳಿಗೆ ಕಾರಣವಾಗಿದೆ ಎಂದು ಜೈಶಂಕರ್‌ ನೇರ ಆರೋಪ ಮಾಡಿದ್ದಾರೆ. ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ ಜೈಶಂಕರ್, ‘ಕಣಿವೆಯಲ್ಲಿ ನಡೆದ ಈ ಬೆಳವಣಿಗೆಯು ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ’ ಎಂದು ಎಚ್ಚರಿಸಿದ್ದಾರೆ. ಮುಂದುವರಿದು, ‘ಚೀನಾ ತನ್ನ ಕ್ರಮಗಳನ್ನು ಮತ್ತೊಮ್ಮೆ ಪರೀಶಿಲಿಸಬೇಕು ಮತ್ತು ಅದನ್ನು ಸರಿಪಡಿಸಿಕೊಳ್ಳುವುದು ಸದ್ಯ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.

‘ಗಾಲ್ವನ್‌ ಕಣಿವೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪ್ರಭುತ್ವ ಸಾಧಿಸಲು ಚೀನಾ ಪ್ರಯತ್ನಿಸುತ್ತಿತ್ತು. ಇದು ವಿವಾದದ ಮೂಲವಾಗಿದ್ದರೂ, ಅದು ಪೂರ್ವ ಜ್ಞಾನ ಹೊಂದಿದ್ದರೂ, ಯೋಜಿತ ಕ್ರಮಗಳನ್ನು ಕೈಗೊಂಡಿತ್ತು. ಇದು ಸಂಘರ್ಷ ಮತ್ತು ಅದರ ಪರಿಣಾಮವಾಗಿ ಸಂಭವಿಸಿದ ಸಾವು–ನೋವಿಗೆ ಕಾರಣವಾಗಿದೆ. ಇದು ನಮ್ಮ ಒಪ್ಪಂದಗಳ ಉಲ್ಲಂಘಿಸಿ, ಈ ಪ್ರದೇಶದಲ್ಲಿ ಅಧಿಕಾರ ಸ್ಥಾಪಿಸುವ ಚೀನಾದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

ಕರ್ನಲ್‌ ಸೇರಿ ಭಾರತದ 20 ಯೋಧರು ಮತ್ತು ಚೀನಾ ಸೇನೆಯ ಕಮಾಂಡಿಂಗ್‌ ಅಧಿಕಾರಿ ಸೇರಿ 43 ಜನರು ಮೃತಪಟ್ಟಿದ್ದರು.

ಭಾರತದೊಂದಿಗೆ ಇಂತಹ ಮತ್ತಷ್ಟು ಘರ್ಷಣೆಗಳನ್ನು ನೋಡಲು ಬಯಸುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್‌ ಇಂದು ಬೆಳಿಗ್ಗೆ ಹೇಳಿಕೆ ನೀಡಿದ್ದರು.

ನಾವು ರಾಜತಾಂತ್ರಿಕ ಮತ್ತು ಮಿಲಿಟರಿ ಮೂಲಕ ಸಂವಹನ ನಡೆಸುತ್ತಿದ್ದೇವೆ. ಸಂಘರ್ಷವು ಚೀನಾದ ವಾಸ‌್ತವಿಕ ನಿಯಂತ್ರಣ ಗೆರೆ (ಎಲ್‌ಎಸಿ) ಬಳಿ ನಡೆದಿದೆ. ಇದಕ್ಕೆ ಚೀನಾ ಕಾರಣವಲ್ಲ ಎಂದು ಸಮರ್ಥನೆಯನ್ನೂ ನೀಡಿದ್ದರು.

ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ, ಜೂನ್‌ 15ರ ರಾತ್ರಿ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ಪಡೆಗಳ ಪ್ರಚೋದನೆ ಬಳಿಕ ಸಂಘರ್ಷ ಆರಂಭವಾಯಿತು. ಉನ್ನತ ಮಟ್ಟದಲ್ಲಿ ಕೈಗೊಂಡಿದ್ದ ಒಪ್ಪಂದವನ್ನು ಚೀನಾ ಪಾಲಿಸಿದ್ದರೆ, ಹಿಂಸಾತ್ಮಕ ಮುಖಾಮುಖಿಯನ್ನು ತಡೆಯಬಹುದಿತ್ತು. ಸಂಘರ್ಷದ ವೇಳೆ ಎರಡೂ ಕಡೆ ಸಾವು–ನೋವು ಸಂಭವಿಸಿದೆ. ಇದೀಗ ಗಲ್ವಾನ್‌ ಕಣಿವಯಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಚೀನಾ ಸೇನೆ ನಿರ್ಗಮಿಸಿದೆ ಎಂದು ಮಂಗಳವಾರ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು