ಗುರುವಾರ , ಜನವರಿ 20, 2022
15 °C

ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ 58ಕ್ಕಿಂತ ಹೆಚ್ಚು: ಡಾ. ಹರ್ಷವರ್ಧನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣವು ಶೇ 58ಕ್ಕಿಂತ ಹೆಚ್ಚಾಗಿದೆ. ಇದುವರೆಗೂ ಸುಮಾರು 3 ಲಕ್ಷದಷ್ಟು ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.

ನಮ್ಮ ಚೇತರಿಕೆಯ ಪ್ರಮಾಣವು ಶೇ 58ಕ್ಕಿಂತ ಹೆಚ್ಚಾಗಿದೆ ಮತ್ತು ಒಟ್ಟು ಐದು ಲಕ್ಷ ಕೋವಿಡ್ ಸೋಂಕಿತರಲ್ಲಿ 3 ಲಕ್ಷ ಜನರು ಈಗಾಗಲೇ ಚೇತರಿಸಿಕೊಂಡಿದ್ದಾರೆ. ಉಳಿದವರು ಸಹ ಚೇತರಿಕೆಯ ಹಾದಿಯಲ್ಲಿದ್ದಾರೆ ಮತ್ತು ಅವರು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಮರಳುತ್ತಾರೆ ಎನ್ನುವ ಭರವಸೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

ಸೋಂಕಿತರಲ್ಲಿ 85 ಪ್ರತಿಶತದಷ್ಟು ಜನರು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದವರಾಗಿದ್ದಾರೆ. ಅಲ್ಲದೆ ಸೋಂಕಿನಿಂದ ಮೃತಪಟ್ಟ ಪ್ರಕರಣಗಳಲ್ಲಿ ಶೇ 87ಕ್ಕಿಂತಲೂ ಹೆಚ್ಚಿನ ಜನರು ಈ ಎಂಟು ರಾಜ್ಯಗಳವರೇ ಆಗಿದ್ದಾರೆ. ನಮ್ಮ ಮರಣ / ಸಾವಿನ ಪ್ರಮಾಣವು ಶೇ 3ರ ಸಮೀಪದಲ್ಲಿದ್ದು, ಇತರೆಡೆಗಳಿಗೆ ಹೋಲಿಸಿದರೆ ಅದು ತುಂಬಾ ಕಡಿಮೆಯಿದೆ ಎಂದು ತಿಳಿಸಿದರು.

ದೇಶದಲ್ಲಿ ಕೋವಿಡ್-19 ಪರೀಕ್ಷೆಗಾಗಿ ಸೌಲಭ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಮತ್ತು ನಿನ್ನೆಯಷ್ಟೇ ದೇಶದಲ್ಲಿ ಸುಮಾರು 2,30,000 ಪರೀಕ್ಷೆಗಳನ್ನು ದೇಶದ 1,026 ಅನುಮೋದಿತ ಪ್ರಯೋಗಾಲಯಗಳಲ್ಲಿ ನಡೆಸಲಾಗಿದೆ ಎಂದರು. 

ಶನಿವಾರವಷ್ಟೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು 5 ಲಕ್ಷದ ಗಡಿ ದಾಟಿದ್ದು, ಒಂದೇ ದಿನ 24 ಗಂಟೆಗಳಲ್ಲಿ ಹೊಸದಾಗಿ 18,552 ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 384 ಜನರು ಸೋಂಕಿನಿಂದ ಸಾವಿಗೀಡಾಗಿದ್ದರೆ, ಒಟ್ಟಾರೆ ಮೃತರ ಸಂಖ್ಯೆಯು 16 ಸಾವಿರದ ಗಡಿ ಸಮೀಪಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಈವರೆಗೂ ದೇಶದಲ್ಲಿ 1,97,387 ಸಕ್ರಿಯ ಪ್ರಕರಣಗಳಿದ್ದು, 2,95,880 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು