ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ನಿನ್ನೆ ಹುತಾತ್ಮರಾದ ಕರ್ನಲ್ ಆಶುತೋಷ್ ಶರ್ಮಾ ಯಾರು?

ಆರೂವರೆ ವರ್ಷದ ಸತತ ಪ್ರಯತ್ನ | 13ನೇ ಪ್ರಯತ್ನದಲ್ಲಿ ಸೇನೆಗೆ ಸೇರ್ಪಡೆ
ಅಕ್ಷರ ಗಾತ್ರ

ಉತ್ತರ ಕಾಶ್ಮೀರದಲ್ಲಿ ಶನಿವಾರ ರಾತ್ರಿಯಿಂದ ನಡೆಯುತ್ತಿದ್ದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಐವರು ಭದ್ರತಾ ಸಿಬ್ಬಂದಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳೂ ಇದ್ದಾರೆ.

ಕುಪ್ವಾರ ಜಿಲ್ಲೆ ಹಂದ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್,ಲ್ಯಾನ್ಸ್‌ ನಾಯಕ್ ದಿನೇಶ್ಮತ್ತುಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸಗೀರ್ ಅಹ್ಮದ್ ಪಠಾಣ್ ಹುತಾತ್ಮರಾದರು.

ಧೈರ್ಯಕ್ಕೆ ಹೆಸರುವಾಸಿಯಾದ ಕರ್ನಲ್ ಶರ್ಮಾ 21ನೇ ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎರಡು ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು.

ಹುತಾತ್ಮರು... ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್, ಲ್ಯಾನ್ಸ್ ನಾಯಕ್ ದಿನೇಶ್. ಸಬ್ ಇನ್‌ಸ್ಪೆಕ್ಟರ್ ಎಸ್.ಎ.ಖಾಜಿ

ಶರ್ಮಾ ಅವರ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು...

1) ಕರ್ನಲ್ ಆಶುತೋಷ್ ಶರ್ಮಾ ಅವರ ಹುಟ್ಟೂರು ಉತ್ತರ ಪ್ರದೇಶದ ಬುಲಂದ್‌ಶಹರ್. ಪತ್ನಿ ಮತ್ತು 12 ವರ್ಷದ ಮಗಳಿದ್ದಾಳೆ.

2) ಹಲವು ಯಶಸ್ವಿ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗಳಲ್ಲಿ ಶರ್ಮಾ ಪಾಲ್ಗೊಂಡಿದ್ದರು. ಕಾಶ್ಮೀರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರು. ಒಮ್ಮೆ ಸೇನಾ ಮೆಡಲ್ ಮತ್ತು ಒಮ್ಮೆ ಶೌರ್ಯ ಪ್ರಶಸ್ತಿ ಬಂದಿತ್ತು.

3) ಬಟ್ಟೆಗಳಲ್ಲಿ ಗ್ರೆನೇಡ್ ಅಡಗಿಸಿಕೊಂಡುಸೇನಾ ಸಿಬ್ಬಂದಿಯತ್ತ ಓಡಿ ಬರುತ್ತಿದ್ದ ಉಗ್ರಗಾಮಿಯೊಬ್ಬನನ್ನು ಹತ್ತಿರದಿಂದ ಗುಂಡಿಕ್ಕಿ ಕೊಂದಿದ್ದರು. ಇವರ ಚುರುಕುತನ ಮತ್ತು ಧೈರ್ಯವನ್ನು ಗುರುತಿಸಿದ್ದ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.

4) ಕಳೆದ 5 ವರ್ಷಗಳಲ್ಲಿ ಹುತಾತ್ಮರಾದ ಮೊದಲ ಕರ್ನಲ್ ದರ್ಜೆಯ ಅಧಿಕಾರಿ ಇವರು. ಈ ಹಿಂದೆ, 2015ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕರ್ನಲ್ ದರ್ಜೆಯ ಅಧಿಕಾರಿಗಳು ಹುತಾತ್ಮರಾಗಿದ್ದರು.

5) ಲಷ್ಕರ್ ಎ ತಯ್ಯಾಬಾದ ಕಮಾಂಡರ್‌ನನ್ನು ಬಂಧಿಸುತ್ತೇನೆ ಅಥವಾ ಕೊಂದು ಹಾಕುತ್ತೇನೆ ಎಂದು ಶಿಬಿರದಿಂದ ಹೊರಡುವ ಮೊದಲು ಸಹವರ್ತಿಗಳಿಗೆ ಭರವಸೆ ಕೊಟ್ಟಿದ್ದರು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

6) ಸೇನೆಗೆ ಸೇರಬೇಕೆಂದು ಸತತವಾಗಿ ಆರೂವರೆ ವರ್ಷ ಕಷ್ಟಪಟ್ಟಿದ್ದರು. 13ನೇ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಕ್ಕಿತ್ತು.

7) ಸೈನಿಕರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಹಲವು ಬಾರಿ ನಿಯಮಗಳನ್ನು ಮೀರಿದ್ದರು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

8) ಚಂಗಿಮುಲ್ಲಾ ಗ್ರಾಮದಲ್ಲಿ ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ವ್ಯಾಪಕ ತಪಾಸಣೆ ಕಾರ್ಯಾಚರಣೆ ಆರಂಭಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಗುಂಡಿನ ಚಕಮಕಿ ಆರಂಭವಾಯಿತು.

9) ಉಗ್ರರು ವ್ಯಾಪಕವಾಗಿ ಗುಂಡಿನ ದಾಳಿ ಆರಂಭಿಸಿದಾಗ ನಾಗರಿಕರ ರಕ್ಷಣೆಗೆ ಭದ್ರತಾ ಸಿಬ್ಬಂದಿ ಆದ್ಯತೆ ಕೊಟ್ಟರು. ಈ ಸಂದರ್ಭ ಕರ್ನಲ್ ಮತ್ತು ಅವರೊಂದಿಗಿದ್ದ ತಂಡದ ಜೊತೆಗೆ ಸಂಪರ್ಕ ಕಡಿದುಹೋಯಿತು.

10) ಮೇ 5ರಂದು ಶ್ರೀನಗರದಲ್ಲಿ ಅಂತಿಮ ನಮನ ಸಲ್ಲಿಸಲಾಗುವುದು. ನಂತರ ಅವರ ಸ್ವಗ್ರಾಮಗಳಿಗೆ ಪಾರ್ಥಿವ ಶರೀರಗಳನ್ನು ಕಳಿಸಲಾಗುವುದು. ಕೊರೊನಾ ವೈರಸ್‌ ಸುರಕ್ಷತೆಯ ಶಿಷ್ಟಾಚಾರದ ಅನ್ವಯ ಅಂತ್ಯಸಂಸ್ಕಾರ ನಡೆಯಲಿದೆ.

ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಸಬ್ ಇನ್‌ಸ್ಪೆಕ್ಟರ್ ಖಾಜಿ ಎಸ್.ಎ.ಪಠಾಣ್ ಅವರಿಗೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT