ಮಲೇರಿಯಾ ರೋಗಾಣು ಪ್ರತಿರೋಧ ಶಕ್ತಿ ಹೆಚ್ಚಳ

ನವದೆಹಲಿ: ಮಲೇರಿಯಾ ವಾಸಿ ಮಾಡುವ ಔಷಧಗಳ ವಿರುದ್ಧ ಮಲೇರಿಯಾ ರೋಗಾಣುಗಳು ನಿರೋಧಕ ಶಕ್ತಿ ಪಡೆದುಕೊಂಡಿರುವ ಪ್ರಕರಣ ಇದೇ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಗಿದೆ.
ಈ ಮೊದಲು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಮಾತ್ರ ಇಂತಹ ಪ್ರಕರಣ ಪತ್ತೆಯಾಗಿದ್ದವು.
ಮಲೇರಿಯಾಕ್ಕೆ ಕಾರಣವಾದ ‘ಪ್ಲಾಸ್ಮೋಡಿಯಂ ಫಾಲ್ಸಿಪರಂ’ ಎಂಬ ಪರಾವಲಂಬಿ ಸೂಕ್ಷ್ಮಾಣು ಜೀವಿಗಳು ನಿರೋಧಕ ಶಕ್ತಿ ಗಳಿಸಿರುವುದನ್ನು ಪಶ್ಚಿಮ ಬಂಗಾಳದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ರೋಗಾಣುಗಳ ಪ್ರತಿರೋಧ ಶಕ್ತಿ ಹೆಚ್ಚಿದರೆ ಮಲೇರಿಯಾ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದೆ.
ಹೊಸ ಔಷಧ ಅನಿವಾರ್ಯ: ಮಲೇರಿಯಾ ನಿಯಂತ್ರಣಕ್ಕೆ ಹೊಸ ಔಷಧ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಪಶ್ಚಿಮ ಬಂಗಾಳದ ವಿದ್ಯಾಸಾಗರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಸಂಶೋಧಕ ಸೋಮನಾಥ್ ರಾಯ್ ಸಲಹೆ ಮಾಡಿದ್ದಾರೆ.
ಇದರಿಂದಾಗಿ ಮಲೇರಿಯಾ ನಿವಾರಣೆಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ರಾಯ್ ಅವರು ಕೋಲ್ಕತ್ತ ಮತ್ತು ಪುಣೆಯ ಸಹೋದ್ಯೋಗಿಗಳ ಜತೆ ಸೇರಿ ಪಶ್ಚಿಮ ಬಂಗಾಳದ ಗಂಗಾ ನದಿ ಸುತ್ತಮುತ್ತಲಿನಲ್ಲಿ ನೆಲೆಸಿರುವ ಮಲೇರಿಯಾ ಸೋಂಕು ತಗುಲಿದ 136 ರೋಗಿಗಳ ರಕ್ತಪರೀಕ್ಷೆ ಮಾಡಿದ್ದಾರೆ. ಆ ಪೈಕಿ ಐವರು ರೋಗಿಗಳು ಗುಣಮಟ್ಟದ ಚಿಕಿತ್ಸೆಗೆ ಸ್ಪಂದಿಸಲಿಲ್ಲ.
ಲಂಡನ್‌ನಿಂದ ಪ್ರಕಟವಾಗುವ ನ್ಯೂ ಇಂಗ್ಲೆಂಡ್ ಅಂತರರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕದ ನವೆಂಬರ್ ಆವೃತ್ತಿಯಲ್ಲಿ ಈ ಸಂಬಂಧದ ವರದಿ ಪ್ರಕಟವಾಗಿದೆ.
ಆಫ್ರಿಕಾ, ಏಷ್ಯಾ ತವರೂರು
ಮಲೇರಿಯಾ ರೋಗಾಣುಗಳು ಔಷಧಗಳ ವಿರುದ್ಧ ನಿರೋಧಕ ಶಕ್ತಿ ಪಡೆದಿರುವುದು ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ.
ಕಾಂಬೋಡಿಯಾ, ಥಾಯ್ಲೆಂಡ್, ವಿಯೆಟ್ನಾಂ ಮತ್ತು ಮ್ಯಾನ್ಮಾರ್ ಮತ್ತು ಲಾವೋಸ್‌ನಲ್ಲಿ ಇಂತಹ ಪ್ರಕರಣಗಳು ಐದಾರು ವರ್ಷಗಳ ಹಿಂದೆ ವರದಿಯಾಗಿದ್ದವು. ಆಫ್ರಿಕಾ ರಾಷ್ಟ್ರಗಳನ್ನು ಹೊರತುಪಡಿಸಿದರೆ ದಕ್ಷಿಣ ಏಷ್ಯಾದಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಲೇರಿಯಾ ಪ್ರಕರಣ ವರದಿಯಾಗುತ್ತವೆ ಎಂದು ಕಳೆದ ವರ್ಷದ ವಿಶ್ವ ಮಲೇರಿಯಾ ವರದಿ ಹೇಳಿದೆ.
ಆದರೆ, ಇದುವರೆಗೂ ಭಾರತದಲ್ಲಿ ಮಲೇರಿಯಾ ರೋಗಾಣುಗಳು ಪ್ರತಿರೋಧ ಶಕ್ತಿ ಪಡೆದ ಪ್ರಕರಣ ಪತ್ತೆಯಾಗಿರಲಿಲ್ಲ.
*
ಮಲೇರಿಯಾ ರೋಗಾಣುಗಳು ನಿರೋಧಕ ಶಕ್ತಿ ಪಡೆದಿರುವ ವಿಷಯ ನಿಜಕ್ಕೂ ಆತಂಕಕಾರಿ. ವೈದ್ಯಕೀಯ ವಿಜ್ಞಾನಿಗಳು, ವೈದ್ಯರು ಮತ್ತು ಆರೋಗ್ಯ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
– ಸೋಮನಾಥ್ ರಾಯ್, ಸಂಶೋಧಕ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.