ಮಂಗಳವಾರ, ಜೂನ್ 28, 2022
27 °C
ಜಮ್ಮು ಕಾಶ್ಮೀರದ ನಿರ್ಬಂಧ ಮರುಪರಿಶೀಲನೆಗೆ ಸೂಚನೆ

ಇಂಟರ್ನೆಟ್ ಸಹ ಮೂಲಭೂತ ಹಕ್ಕು, ಬೇಕಾಬಿಟ್ಟಿ ನಿರ್ಬಂಧ ಸಲ್ಲದು: ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸಿರುವ ನಿರ್ಧಾರವನ್ನು ಒಂದು ವಾರದ ಒಳಗೆ ಪುನರ್‌ ಪರಿಶೀಲಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಸಂವಿಧಾನದ 370ನೇ ವಿಧಿ) ರದ್ದತಿ ಸಂಬಂಧ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ನಿಗದಿತ ಅವಧಿಗೆ ಮಾತ್ರ ಇಂಟರ್ನೆಟ್‌ ನಿರ್ಬಂಧ ಹೇರಬಹುದು. ಆದರೆ ಇಂಥ ನಿರ್ಬಂಧಗಳು ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತವೆ’ ಎಂದು ಹೇಳಿದೆ.

ನಿರ್ಬಂಧವನ್ನು ಪ್ರಶ್ನಿಸಿ ‘ಕಾಶ್ಮೀರ್ ಟೈಮ್ಸ್‌’ ಪತ್ರಿಕೆಯ ಸಂಪಾದಕ ಅನುರಾಧ ಭಾಸಿನ್‌, ಕಾಂಗ್ರೆಸ್‌ ನಾಯಕ ಗುಲಾಂ ನಬಿ ಅಜಾದ್‌ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ‘ರಾಜ್ಯದಲ್ಲಿ ವಿಧಿಸಲಾಗಿರುವ ನಿರ್ಬಂಧಗಳು ಜನರ ಮೂಲಭೂತ ಹಕ್ಕುಗಳಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯದ ಸ್ಪಷ್ಟ ಉಲ್ಲಂಘನೆ. 19ನೇ ವಿಧಿ ಅನ್ವಯ ಇರುವ ಮುಕ್ತವಾಗಿ ಸಂಚರಿಸುವ ಹಕ್ಕನ್ನೂ ಮೊಟಕುಗೊಳಿಸಿವೆ’ ಎಂದು ವಾದಿಸಲಾಗಿದೆ.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಆರ್.ಸುಭಾಷ್ ರೆಡ್ಡಿ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು, ‘ಜಮ್ಮು ಮತ್ತು ಕಾಶ್ಮೀರದ ಮೇಲೆ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ಒಂದು ವಾರದ ಒಳಗೆ ಮರುಪರಿಶೀಲನೆ ಮಾಡಬೇಕು’ ಎಂದು ಸೂಚಿಸಿತು.

ಕಾಶ್ಮೀರ ಕಣಿವೆಗೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಮಸೂದೆಗೆ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಕೆಲ ದಿನಗಳ ಮೊದಲಿನಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ನಿರ್ಬಂಧವನ್ನು ಹೇರಲಾಗಿತ್ತು. ಕಳೆದ 160 ದಿನಗಳಿಂದ ಕಣಿವೆ ರಾಜ್ಯದ ಜನರು ಸಂಪರ್ಕ ಸೌಲಭ್ಯವಿಲ್ಲದೆ ಕಷ್ಟ ಅನುಭವಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು.

‘ಸಂವಿಧಾನದ 19ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಇಂಟರ್ನೆಟ್‌ ಸಹ ಸೇರುತ್ತದೆ. ಹೀಗಾಗಿ ಇಂಟರ್ನೆಟ್‌ ಮೇಲೆ ನಿರ್ಬಂಧ ವಿಧಿಸುವ ವಿಚಾರದಲ್ಲಿಯೂ ಸಂವಿಧಾನದ 19 (2) ಪರಿಚ್ಛೇದದ ಅನ್ವಯ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಅತ್ಯಗತ್ಯ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ವಿಧಿಸಿರುವ ಎಲ್ಲ ನಿರ್ಬಂಧಗಳ ವಿವರಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಜನರಿಗೆ ಅಂಥ ನಿರ್ಬಂಧಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಅವಕಾಶ ಇರಬೇಕು. ಮೂಲಭೂತ ಹಕ್ಕುಗಳನ್ನು ಬೇಕಾಬಿಟ್ಟಿ ಅಧಿಕಾರ ಚಲಾವಣೆಯ ಮೂಲಕ ನಿರ್ಬಂಧಿಸುವಂತಿಲ್ಲ’ ಎಂದು ನ್ಯಾಯಪೀಠ ಹೇಳಿತು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್‌ 5, 2019ರಂದು ರದ್ದುಪಡಿಸಿ, ರಾಜ್ಯವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಕಾಶ್ಮೀರ ಕಣಿವೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು.

‘ಭದ್ರತೆ ಮತ್ತು ಜನರ ಸ್ವಾತಂತ್ರ್ಯ ನಡುವೆ ಸಮತೋಲನ ಇರಬೇಕು ಎನ್ನುವುದು ನಮ್ಮ ಕಾಳಜಿ. ಜನರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಲು ನಾವಿಲ್ಲಿ ಇದ್ದೇವೆ. ನಿರ್ಬಂಧ ವಿಧಿಸುವುದರ ಹಿಂದೆ ಇದ್ದ ರಾಜಕೀಯ ಕಾರಣಗಳ ಬಗ್ಗೆ ನಾವು ಏನೂ ಹೇಳುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ವಿಶೇಷ ಸ್ಥಾನ ರದ್ದತಿ ಘೋಷಣೆ ವೇಳೆ ಪ್ರತಿಭಟನೆ ನಡೆಯದಂತೆ ತಡೆಯಲು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು. ನೂರಾರು ಮಂದಿಯನ್ನು ಬಂಧಿಸಲಾಗಿತ್ತು. ರಾಜ್ಯದಲ್ಲಿ ವಿಧಿಸಿದ್ದ ಹಲವು ನಿರ್ಬಂಧಗಳನ್ನು ಇದೀಗ ಸಡಿಲಿಸಲಾಗಿದೆ. ಆದರೆ ಹಿರಿಯ ರಾಜಕಾರಿಣಿಗಳು ಮಾತ್ರ ಇಂದಿಗೂ ಬಂಧನದಲ್ಲಿಯೇ ಇದ್ದಾರೆ. ಇಂಟರ್ನೆಟ್‌ ಮೇಲಿನ ನಿರ್ಬಂಧ ಬಹುತೇಕ ಮುಂದುವರಿದಿದೆ.

 

ಇನ್ನಷ್ಟು...

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು