ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಬಳಸಿ ಮೊಬೈಲ್‌ಗೆ ಕನ್ನ

‘ಪೆಗಾಸಸ್‌’ ಮೂಲಕ ಮೊಬೈಲ್‌ನ ಕಾರ್ಯನಿರ್ವಹಣೆಯ ಮೇಲೆ ದಾಳಿಕೋರರಿಗೆ ನಿಯಂತ್ರಣ
Last Updated 31 ಅಕ್ಟೋಬರ್ 2019, 19:40 IST
ಅಕ್ಷರ ಗಾತ್ರ

ನವದೆಹಲಿ: ಇಸ್ರೇಲ್ ನಿರ್ಮಿತಗೂಢಚರ್ಯೆ ತಂತ್ರಾಂಶ ‘ಪೆಗಾಸಸ್‌’ ಬಳಸಿಕೊಂಡು ಜಗತ್ತಿನಾದ್ಯಂತ 1400
ವ್ಯಕ್ತಿಗಳ ವಾಟ್ಸ್‌ಆ್ಯಪ್‌ ಕರೆ, ಸಂದೇಶಮತ್ತು ಇತರ ಮಾಹಿತಿ ಕದಿಯಲಾಗಿದೆ.ಇಸ್ರೇಲ್‌ನ ‘ಎನ್‌ಎಸ್‌ಒ ಗ್ರೂಪ್’ ಈ ಗೂಢಚರ್ಯೆ ತಂತ್ರಾಂಶವನ್ನು ತಯಾರಿಸಿದೆ.

ಜಗತ್ತಿನಾದ್ಯಂತ ಈ ಗೂಢಚರ್ಯೆ ನಡೆದಿದೆ. ಆದರೆ, ಯಾರಿಗಾಗಿ ಈ ಕೆಲಸ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ವಾಟ್ಸ್‌ಆ್ಯಪ್‌ ಹೇಳಿದೆ.

ಭಾರತದಲ್ಲಿ ಎಷ್ಟು ಜನರ ವಾಟ್ಸ್‌ಆ್ಯಪ್‌ ಖಾತೆಗೆ ಕನ್ನ ಹಾಕಲಾಗಿದೆ ಮತ್ತು ಅವರು ಯಾರು ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಪೆಗಾಸಸ್‌ನ ಕಾರ್ಯನಿರ್ವಹಣೆಯನ್ನು ಮೇ ತಿಂಗಳಲ್ಲಿಯೇ ಸ್ಥಗಿತಗೊಳಿಸಲಾಗಿದೆ ಎಂದೂ ವಾಟ್ಸ್‌ಆ್ಯಪ್‌ ತಿಳಿಸಿದೆ.

ಈ ಗೂಢಚರ್ಯೆ ತಂತ್ರಾಂಶದ ದಾಳಿಗೆ ಒಳಗಾಗಿರಬಹುದು ಎಂದು ಭಾವಿಸಲಾದ 1,400 ಬಳಕೆದಾರರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ. ಭಾರತದಲ್ಲಿ ಎಷ್ಟು ಮಂದಿಯ ಫೋನ್‌ಗೆ ಈ ತಂತ್ರಾಂಶ ಅಳವಡಿಕೆಯಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿಲ್ಲ. ಜಗತ್ತಿನಾದ್ಯಂತ 150ಕೋಟಿ ವಾಟ್ಸ್‌ಆ್ಯಪ್ ಬಳಕೆದಾರರಿದ್ದಾರೆ. ಭಾರತದಲ್ಲಿ ಬಳಕೆದಾರರ ಸಂಖ್ಯೆ ಸುಮಾರು 40 ಕೋಟಿ.

ಖಾಸಗಿತನದ ಮೂಲಭೂತ ಹಕ್ಕಿಗೆ ವಾಟ್ಸ್‌ಆ್ಯಪ್‌ ಬದ್ಧವಾಗಿದೆ. ಈ ಹಕ್ಕನ್ನು ಉಲ್ಲಂಘಿಸುವ ಪ್ರಯತ್ನಗಳನ್ನು ವಿಫಲಗೊಳಿಸುವ ಯತ್ನ ಸದಾ ನಡೆಯಲಿದೆ ಎಂದು ಕ್ಯಾಥ್‌ಕಾರ್ಟ್‌ ಹೇಳಿದ್ದಾರೆ.

ಈ ಗೂಢಚರ್ಯೆ ಪ್ರಯತ್ನವನ್ನುಪತ್ತೆ ಮಾಡಲು ಟೊರಾಂಟೊ ವಿಶ್ವವಿದ್ಯಾಲಯದ ಸೈಬರ್‌ ಸುರಕ್ಷತೆ ಸಂಶೋಧನಾ ಘಟಕ ಸಿಟಿಜನ್ ಲ್ಯಾಬ್‌, ವಾಟ್ಸ್‌ಆ್ಯಪ್‌ಗೆ ನೆರವು ನೀಡಿತ್ತು.

ಎನ್‌ಎಸ್‌ಒ ಸ್ಪಷ್ಟನೆ: ಗೂಢಚರ್ಯೆ ತಂತ್ರಾಂಶವನ್ನು ರೂಪಿಸಿರುವ ಎನ್‌ಎಸ್‌ಒ ಸಂಸ್ಥೆಯು ವಾಟ್ಸ್‌ಆ್ಯಪ್‌ನ ಆರೋಪಗಳನ್ನು ಅಲ್ಲಗಳೆದಿದೆ. ಭಯೋತ್ಪಾದನೆ ಮತ್ತು ಗಂಭೀರ ಅಪರಾಧಗಳನ್ನು ತಡೆಯುವುದಕ್ಕೆ ನೆರವಾಗಲು ಸರ್ಕಾರದ ಗುಪ್ತಚರ ಮತ್ತು ಕಾನೂನು ಜಾರಿ ಸಂಸ್ಥೆಗಳಿಗಾಗಿ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಮಾನವ ಹಕ್ಕು ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಬಳಸಲು ಇದನ್ನು ವಿನ್ಯಾಸ ಮಾಡಲಾಗಿಲ್ಲ ಎಂದು ಎನ್‌ಎಸ್‌ಒ ಹೇಳಿದೆ.

ದೂರು ದಾಖಲು: ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ಎನ್‌ಎಸ್‌ಒ ಗ್ರೂಪ್‌ ವಿರುದ್ಧ ವಾಟ್ಸ್‌ಆ್ಯಪ್‌ ದೂರು ದಾಖಲಿಸಿದೆ.

ದಾಳಿ ಹೇಗೆ?

*ಪೆಗಾಸಸ್‌ ಗೂಢಚರ್ಯೆ ತಂತ್ರಾಂಶವು ವಿಡಿಯೊ ಕರೆ ಮೂಲಕ ಫೋನ್‌ಗೆ ಪ್ರವೇಶ ಪಡೆಯುತ್ತದೆ. ಫೋನ್‌ ರಿಂಗಣಿಸುತ್ತಿದ್ದಂತೆಯೇ ‘ದಾಳಿಕೋರರು’ ಸಂಕೇತವೊಂದನ್ನು ಫೋನ್‌ಗೆ ರವಾನಿಸುತ್ತಾರೆ. ಬಳಕೆದಾರರು ಕರೆಯನ್ನು ಸ್ವೀಕರಿಸದೇ ಇದ್ದರೂ ‘ಪೆಗಾಸಸ್‌’ ಫೋನ್‌ನಲ್ಲಿ ಸೇರಿಕೊಳ್ಳುತ್ತದೆ

* ಫೋನ್‌ನ ಕಾರ್ಯನಿರ್ವಹಣಾ ವ್ಯವಸ್ಥೆಗೆ ನೇರವಾಗಿ ಪ್ರವೇಶ ಪಡೆಯುವ ಪೆಗಾಸಸ್‌, ವಾಟ್ಸ್‌ಆ್ಯಪ್‌ ಸಂದೇಶ, ಕರೆಗಳು, ಪಾಸ್‌ವರ್ಡ್‌ಗಳು, ಸಂಪರ್ಕ ವ್ಯಕ್ತಿಗಳ ಪಟ್ಟಿ, ಅವರು ಫೋನ್‌ನಲ್ಲಿ ಇರಿಸಿರುವ ಕಾರ್ಯಕ್ರಮ ಪಟ್ಟಿ, ಕ್ಯಾಮರಾ ಎಲ್ಲದರ ಮೇಲೆಯೂ ದಾಳಿಕೋರರಿಗೆ ನಿಯಂತ್ರಣ ಒದಗಿಸುತ್ತದೆ

*ಫೋನ್‌ ಅನ್ನು ಧ್ವನಿ ದಾಖಲಾತಿ (ಮೈಕ್ರೊಫೋನ್‌) ವ್ಯವಸ್ಥೆಯಾಗಿಯೂ ಇದು ಪರಿವರ್ತಿಸುತ್ತದೆ. ಹಾಗಾಗಿ, ಆ ಫೋನ್‌ ಇರುವ ಕೋಣೆಯಲ್ಲಿ ನಡೆಯುವ ಸಂಭಾಷಣೆಯನ್ನು ಕೂಡ ದಾಳಿಕೋರರು ಆಲಿಸುವುದು ಸಾಧ್ಯವಾಗುತ್ತದೆ.

‘ಸಿಕ್ಕಿ ಬಿದ್ದ ಸರ್ಕಾರ’

‘ಮೋದಿ ಸರ್ಕಾರವು ಗೂಢಚರ್ಯೆ ನಡೆಸಿ ಸಿಕ್ಕಿಬಿದ್ದಿದೆ. ಇದು ದಿಗಿಲು ಹುಟ್ಟಿಸಿದರೂ ಅಚ್ಚರಿ ಏನಲ್ಲ. ಯಾಕೆಂದರೆ, ಬಿಜೆಪಿ ಸರ್ಕಾರವು ನಮ್ಮ ಖಾಸಗಿತನದ ಹಕ್ಕಿನ ವಿರುದ್ಧ ಹೋರಾಡಿದೆ. ಸುಪ್ರೀಂ ಕೋರ್ಟ್‌ ತಡೆ ಒಡ್ಡುವವರೆಗೆ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಕಣ್ಗಾವಲು ವ್ಯವಸ್ಥೆ ನಡೆಸಿತ್ತು. ಸುಪ್ರೀಂ ಕೋರ್ಟ್‌ ತಕ್ಷಣವೇ ಈ ಬಗ್ಗೆ ವಿಚಾರಣೆ ನಡೆಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಬೇಕು’ ಎಂಬು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

‘ಪತ್ರಕರ್ತರು, ಹೋರಾಟಗಾರರು, ವಿಪಕ್ಷ ನಾಯಕರ ಮೇಲೆ ಗೂಢಚರ್ಯೆ ನಡೆಸುವ ಮತ್ತು ತನ್ನ ಪ್ರಜೆಗಳನ್ನು ಅಪರಾಧಿಗಳಂತೆ ನೋಡುವ ಸರ್ಕಾರಕ್ಕೆ ನಮ್ಮ ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಹಕ್ಕು ಇಲ್ಲ. ಈ ಎಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನಿಸಿ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಣೆಯಿಂದ ಕೇಂದ್ರ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ಗೂಢಚರ್ಯೆಯ ಸಾಧನಗಳು ಖಾಸಗಿ ಬದುಕಿನ ಮಾಹಿತಿ ಪಡೆಯಲು ದುರ್ಬಳಕೆಯಾಗುತ್ತಿವೆ. ಇವು ಸರ್ಕಾರಗಳ ಕೈಗೆ ಸಿಕ್ಕರೆ ನಮಗೆಲ್ಲರಿಗೂ ಅಪಾಯ
-ವಿಲ್‌ ಕ್ಯಾಥ್‌ಕಾರ್ಟ್‌
ವಾಟ್ಸ್‌ಆ್ಯಪ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT