ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ ಗಳಿಗೆಯಲ್ಲಿ ಶೆಟ್ಟರ್ ಮುಂದೆ, ಸಿ.ಎಂ. ಹಿಂದೆ

Last Updated 5 ಮಾರ್ಚ್ 2018, 9:12 IST
ಅಕ್ಷರ ಗಾತ್ರ

ಮತ್ತೊಂದು ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ಈ ಹೊತ್ತಿನಲ್ಲಿ, ಶಾಸಕರನ್ನು ಅವರ ಮತದಾರರಿಂದ ಮೌಲ್ಯಮಾಪನ ಮಾಡಿಸುವ ಪ್ರಯತ್ನವೊಂದನ್ನು ‘ಪ್ರಜಾವಾಣಿ’ ಮಾಡುತ್ತಿದೆ. ಇದಕ್ಕಾಗಿ, ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವವನ್ನು ಉತ್ತೇಜಿಸುವುದಕ್ಕಾಗಿ ಕೆಲಸ ಮಾಡುತ್ತಿರುವ ‘ದಕ್ಷ್’ ಜೊತೆ ಕೈ ಜೋಡಿಸಿದೆ. ಈ ಪ್ರಯತ್ನದ ಮೊದಲ ಭಾಗ ಇಂದು ಪ್ರಕಟವಾಗುತ್ತಿದೆ. ಎಲ್ಲಾ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಈ ಸಮೀಕ್ಷೆಯಲ್ಲಿ 13 ಸಾವಿರಕ್ಕೂ ಹೆಚ್ಚು ಮತದಾರರು ಪಾಲ್ಗೊಂಡಿದ್ದರು.

ಕುಡಿಯುವ ನೀರು, ಶಾಲೆಗಳು, ವಿದ್ಯುತ್, ರಸ್ತೆ ಮತ್ತು ಶಾಸಕರು ಎಷ್ಟು ಸುಲಭವಾಗಿ ಕೈಗೆ ಸಿಗುತ್ತಾರೆ ಎಂಬ ಪ್ರಮುಖ ಮಾನದಂಡಗಳೂ ಸೇರಿದಂತೆ ಮತದಾರರ ಮೇಲೆ ಪರಿಣಾಮ ಬೀರಬಹುದಾದ 25 ಅಂಶಗಳನ್ನು ಸಮೀಕ್ಷೆ ಒಳಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸೇರಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವ ಆರು ರಾಜಕಾರಣಿಗಳು ಹಾಗೂ ಅತ್ಯುತ್ತಮ ಸಾಧನೆ ದಾಖಲಿಸಿದ ಐವರು ಮತ್ತು ಅತಿ ಕಳಪೆ ಸಾಧನೆ ಮಾಡಿದ ಐವರು ಶಾಸಕರ ಕುರಿತ ಮಾಹಿತಿ ಇಂದಿನ ಆವೃತ್ತಿಯಲ್ಲಿದೆ. ಈ ಸರಣಿ ಮುಂದುವರಿಯಲಿದ್ದು, ರಾಜ್ಯದ ಎಲ್ಲಾ ಮತದಾರರು ನಡೆಸಿದ ಶಾಸಕರ ಮೌಲ್ಯಮಾಪನ ‘ಪ್ರಜಾವಾಣಿ’ಯ ಪುಟಗಳಲ್ಲಿ ಅನಾವರಣಗೊಳ್ಳಲಿದೆ.

ಬೆಂಗಳೂರು: ‘ನುಡಿದಂತೆ ನಡೆದಿದ್ದೇವೆ, ನಡೆಯುತ್ತಿದ್ದೇವೆ. ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳ ‍ಪೈಕಿ ಶೇ 98ರಷ್ಟು ಈಡೇರಿಸಿದ್ದೇವೆ’ ಎಂದು ಪ್ರತಿಪಾದಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾಗಿ ತಮ್ಮ ಸ್ವಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸುವುದು, ಮತದಾರರ ಅಪೇಕ್ಷೆ–ನಿರೀಕ್ಷೆಗಳನ್ನು ಪೂರೈಸುವಲ್ಲಿ ಮಾತ್ರ ತಮ್ಮ ಎದುರಾಳಿ ಪಕ್ಷಗಳ ನಾಯಕರಿಗಿಂತ ಹಿಂದೆ ಬಿದ್ದಿದ್ದಾರೆ.

ವಿರೋಧ ಪಕ್ಷದ ನಾಯಕರಾದ ಬಿಜೆಪಿಯ ಜಗದೀಶ ಶೆಟ್ಟರ್‌, ಹೆಚ್ಚಿನ ಅಂಕ ಪಡೆದು ಮುನ್ನಡೆ ಸಾಧಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಮಧ್ಯಮ ಸ್ತರ ಕಾಯ್ದುಕೊಂಡಿದ್ದಾರೆ.

ಶಾಸಕರಾಗಿ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ‘ನಾಯಕರು’ ಏನು ಮಾಡಿದ್ದಾರೆ ಎಂಬ ಬಗ್ಗೆ ಮತದಾರರನ್ನು ವಿಚಾರಿಸಿದಾಗ, ಶಾಸಕರು ಪ್ರತಿಪಾದಿಸುತ್ತಿರುವುದಕ್ಕಿಂತ ಭಿನ್ನವಾದ ಅಭಿಮತ ವ್ಯಕ್ತವಾಗಿದೆ.

ವರುಣಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಒಟ್ಟಾರೆ 10 ಅಂಕಗಳಿಗೆ 7.07 ಅಂಕ ಪಡೆದಿದ್ದಾರೆ. ಅವರ ಪಕ್ಷದ ಎಲ್ಲ ಶಾಸಕರು ಪಡೆದಿರುವ ಅಂಕಗಳ ಸರಾಸರಿ ತೆಗೆದಾಗ ಕಾಂಗ್ರೆಸ್‌ನ ಒಟ್ಟಾರೆ ಗಳಿಕೆ 7.20ರಷ್ಟಿದೆ. ಈ ವಿಷಯದಲ್ಲೂ ತಮ್ಮ ಪಕ್ಷ  ಪಡೆದ ಸರಾಸರಿ ಅಂಕಗಳಿಗಿಂತ ಸಿದ್ದರಾಮಯ್ಯ ಹಿಂದೆ ಬಿದ್ದಿದ್ದಾರೆ.

ಹುಬ್ಬಳ್ಳಿ–ಧಾರವಾಡ ಕೇಂದ್ರ ಕ್ಷೇತ್ರ ಪ್ರತಿನಿಧಿಸುವ ಶೆಟ್ಟರ್‌, ಒಟ್ಟಾರೆ 8.62 ಅಂಕ ಪಡೆದು ನಾಯಕರ ಪೈಕಿ ಅಗ್ರಗಣ್ಯರಾಗಿದ್ದರೆ, ರಾಮನಗರ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ 7.22 ಅಂಕ ಗಿಟ್ಟಿಸಿದ್ದಾರೆ.

ಎರಡನೇ ಹಂತದ ನಾಯಕರ ಅಂಕ

ಎರಡನೇ ಹಂತದ ನಾಯಕರ ಪೈಕಿ ಕಡೂರು ಕ್ಷೇತ್ರದ ಶಾಸಕ ವೈ.ಎಸ್‌.ವಿ. ದತ್ತ ಸರಾಸರಿ 7.43 ಅಂಕ ಪಡೆದು ಮುಂಚೂಣಿಯಲ್ಲಿದ್ದಾರೆ.

ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ (ಶಾಸಕತ್ವದ ಹಿರಿತನ) ಬೃಹತ್ ಕೈಗಾರಿಕೆ ಸಚಿವ, ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ, ತಮ್ಮ ನಾಯಕನಿಗಿಂತ ಹಿನ್ನಡೆ ಅನುಭವಿಸಿದ್ದಾರೆ. ಅವರು ಪಡೆದಿರುವ ಸರಾಸರಿ ಅಂಕ 6.57.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರಿನ ಅಭಿವೃದ್ಧಿ ಕುಸಿದು ಬಿದ್ದು ಹೋಗಿದೆ ಎಂದು ಆರೋಪಿಸಿ ‘ಬೆಂಗಳೂರು ರಕ್ಷಿಸಿ’ ಎಂಬ ಯಾತ್ರೆಯ ನೇತೃತ್ವ ವಹಿಸಿರುವ ವಿರೋಧ ಪಕ್ಷ ಬಿಜೆಪಿಯ ಉಪನಾಯಕ ಆರ್. ಅಶೋಕ್‌ 6.18 ಅಂಕ ಗಳಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಪಡೆದ ಅಂಕ

ಶಾಸಕರು ಮತದಾರರ ಕೈಗೆ ಸಿಗುತ್ತಾರೆಯೇ, ಮೂಲಸೌಕರ್ಯ ಕಲ್ಪಿಸುವಲ್ಲಿ ಶಾಸಕರ ಸಾಧನೆಯೇನು ಎಂಬ ಪ್ರಮುಖ ವಿಷಯಗಳಲ್ಲಿ ಕೂಡ ಶೆಟ್ಟರ್ ಮುಂಚೂಣಿಯಲ್ಲಿದ್ದಾರೆ.

ಶಾಸಕರು ಕೈಗೆ ಸಿಗುತ್ತಾರೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಶೆಟ್ಟರ್ 10, ಎಚ್.ಡಿ. ಕುಮಾರಸ್ವಾಮಿ 7.8 ಹಾಗೂ ಸಿದ್ದರಾಮಯ್ಯ 7.3 ಅಂಕ ಪಡೆದಿದ್ದಾರೆ.

ಆದರೆ, ರಸ್ತೆ ಉತ್ತಮ ಸ್ಥಿತಿಯಲ್ಲಿದೆಯೇ ಎಂಬ ಪ್ರಶ್ನೆಗೆ ಮಾತ್ರ ಸಿದ್ದರಾಮಯ್ಯ 7.9 ಅಂಕ ಪಡೆದು ಉಳಿದ ನಾಯಕರನ್ನು ಹಿಂದಿಕ್ಕಿದ್ದಾರೆ. ಶೆಟ್ಟರ್‌ ಹಾಗೂ ಕುಮಾರಸ್ವಾಮಿ ಇಬ್ಬರೂ 7.4 ಅಂಕ ಪಡೆದಿದ್ದಾರೆ.

ಕುಡಿಯುವ ನೀರಿನ ವಿಷಯದಲ್ಲಿ ಶೆಟ್ಟರ್‌ 9.9 ಅಂಕ ಪಡೆದಿದ್ದರೆ ಸಿದ್ದರಾಮಯ್ಯ 9 ಅಂಕ ಗಿಟ್ಟಿಸಿದ್ದಾರೆ. ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ 7.1 ಕ್ಕೆ ನಿಂತು ಬಿಟ್ಟಿದ್ದಾರೆ.

ಶಿಕ್ಷಣ ಮತ್ತು ವಿದ್ಯುತ್ ವಿಷಯದಲ್ಲಿ ಶೆಟ್ಟರ್ 10ಕ್ಕೆ 10 ಅಂಕ ಗಳಿಸಿ ಮುನ್ನೆಲೆಯಲ್ಲೇ ಉಳಿದಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಕ್ರಮವಾಗಿ 8.2, 7.9 ಹಾಗೂ ಕುಮಾರಸ್ವಾಮಿ 7.1 ಹಾಗೂ 7.1 ಅಂಕ ಪಡೆದಿದ್ದಾರೆ.

ಶಾಸಕರ ಕೈಗೆ ಸಿಗುವ ಎರಡನೇ ಹಂತದ ನಾಯಕರ ಪೈಕಿ ವೈ.ಎಸ್‌.ವಿ. ದತ್ತ ಮೊದಲ ಸ್ಥಾನದಲ್ಲಿದ್ದರೆ, ಆರ್. ಅಶೋಕ್ ಮೂರನೇ ಸ್ಥಾನದಲ್ಲಿದ್ದಾರೆ.

ಈ ವಿಷಯದಲ್ಲಿ ದತ್ತ 7.4, ದೇಶಪಾಂಡೆ 6.7 ಹಾಗೂ ಅಶೋಕ್ 6.3 ಅಂಕ ಗಿಟ್ಟಿಸಿದ್ದಾರೆ.

ಕುಡಿಯುವ ನೀರಿನ ಪೂರೈಕೆ ವಿಷಯದಲ್ಲಿ ದತ್ತ 8.3, ದೇಶಪಾಂಡೆ 7.1 ಅಂಕ ಗಳಿಸಿದ್ದರೆ, ಅಶೋಕ್ 6.7 ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದಾರೆ.

ರಸ್ತೆ ಸಂಪರ್ಕ ಹಾಗೂ ವಿದ್ಯುತ್‌ ಪೂರೈಕೆ ವಿಷಯದಲ್ಲಿ ದತ್ತ ಕ್ರಮವಾಗಿ 8.9 ಹಾಗೂ 7.8 ಅಂಕ ಪಡೆದಿದ್ದಾರೆ.

ಆದರೆ, ರಸ್ತೆ ಮತ್ತು ವಿದ್ಯುತ್‌ ವಿಷಯದಲ್ಲಿ ದೇಶಪಾಂಡೆ ಅವರನ್ನು ಅಶೋಕ್ ಹಿಂದಿಕ್ಕಿದ್ದಾರೆ. ರಸ್ತೆ, ವಿದ್ಯುತ್ ಪೂರೈಕೆ ವಿಷಯದಲ್ಲಿ ದೇಶಪಾಂಡೆ ಕ್ರಮವಾಗಿ 6.4 ಹಾಗೂ 6.5 ಅಂಕ ಗಳಿಸಿದ್ದರೆ, ಅಶೋಕ್‌ 6.9 ಹಾಗೂ 6.7 ಅಂಕ ಗಳಿಸಿದ್ದಾರೆ.

ಶಿಕ್ಷಣದ ವಿಷಯದಲ್ಲಿ ದತ್ತ 7.9 ಅಂಕ ಗಳಿಸಿ ಮುನ್ನಡೆ ಸಾಧಿಸಿದ್ದರೆ, ದೇಶಪಾಂಡೆ 6.6 ಹಾಗೂ ಅಶೋಕ್ 6.4 ಅಂಕ ಗಿಟ್ಟಿಸಿದ್ದಾರೆ.

ಮೊದಲ ಐದು ಸ್ಥಾನಗಳಲ್ಲಿ ಕೈ ಶಾಸಕರು!

ಅಂಕ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಕೈ ಶಾಸಕರೇ ಇದ್ದಾರೆ. ಅತೀ ಹೆಚ್ಚು ಅಂಕ (9.08) ಪಡೆದಿರುವ ಉಡುಪಿ ಶಾಸಕ ಪ್ರಮೋದ್‌ ಮಧ್ವರಾಜ್‌ ಮೊದಲ ಸ್ಥಾನದಲ್ಲಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ರಸ್ತೆ ಸೌಲಭ್ಯ ಮತ್ತು ವಿದ್ಯುತ್‌ ಕಲ್ಪಿಸುವ ವಿಷಯದಲ್ಲಿ ಅವರು ತಲಾ 9.17 ಅಂಕ ಪಡೆದಿದ್ದಾರೆ. ಉದ್ಯೋಗ ಮತ್ತು ಶಿಕ್ಷಣ ವಿಷಯದಲ್ಲಿ ಮಧ್ವರಾಜ್‌ ಪೂರ್ಣ ಅಂಕ ಗಳಿಸಿದ್ದಾರೆ. ಲಭ್ಯತೆ ವಿಷಯದಲ್ಲಿ ನಗರ ಪ್ರದೇಶದಲ್ಲಿ 9.67 ಅಂಕ ಪಡೆದರೆ, ಗ್ರಾಮೀಣ ಪ್ರದೇಶದಲ್ಲಿ ಕೇವಲ 8 ಅಂಕ ಗಳಿಸಿದ್ದಾರೆ.

ಅತ್ಯುತ್ತಮ ಸಾಧನೆ ತೋರಿದವರಲ್ಲಿ ಎರಡನೇ ಸ್ಥಾನದಲ್ಲಿ 9.01 ಅಂಕ ಪಡೆದಿರುವ, ಬೈಂದೂರಿನ ಶಾಸಕ ಕೆ. ಗೋಪಾಲ ಪೂಜಾರಿ ಇದ್ದಾರೆ. ಹಳ್ಳಿ ಪ್ರದೇಶಗಳಿಗೆ ವಿದ್ಯುತ್‌ ಪೂರೈಕೆ ವಿಚಾರದಲ್ಲಿ 8.98 ಅಂಕ ಪಡೆದಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಾಲೆಗಳಿಗೆ ಅವರು ಅಷ್ಟೇ ಪ್ರಮಾಣದ ಅಂಕ ಪಡೆದಿದ್ದಾರೆ.

ತೇರದಾಳ ಕ್ಷೇತ್ರ ಪ್ರತಿನಿಧಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮೂರನೇ ಸ್ಥಾನದಲ್ಲಿದ್ದಾರೆ (8.87). ಕ್ಷೇತ್ರದಲ್ಲಿ ನಗರ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಗೆ ಉಮಾಶ್ರೀ 9.67 ಅಂಕ ಪಡೆದಿದ್ದಾರೆ.

ಧಾರವಾಡ ಶಾಸಕ, ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಮತ್ತು ಅವರದೇ ಜಿಲ್ಲೆಯ ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ನಗರ ಪ್ರದೇಶದಲ್ಲಿ ಲಭ್ಯತೆಗೆ ಕುಲಕರ್ಣಿ 7.31 ಅಂಕ ಪಡೆದರೆ, ಶಿವಳ್ಳಿ 9.81 ಅಂಕ ಪಡೆದಿದ್ದಾರೆ.

ಗ್ರಾಮಾಂತರ ಪ್ರದೇಶಕ್ಕೆ ವಿದ್ಯತ್‌ ಪೂರೈಕೆಗೆ ಒತ್ತು ನೀಡುವ ವಿಚಾರದಲ್ಲಿ ಕುಲಕರ್ಣಿ, 9.50 ಅಂಕ ಪಡೆದರೆ, ನಗರ ಪ್ರದೇಶಕ್ಕೆ ವಿದ್ಯುತ್‌ ಒದಗಿಸುವ ವಿಚಾರದಲ್ಲಿ ಶಿವಳ್ಳಿ  9.52 ಅಂಕ ಪಡೆದಿದ್ದಾರೆ.

ಹಿಂದೆ ಬಿದ್ದವರು....

ತೀರಾ ಹಿಂದುಳಿದ ಕ್ಷೇತ್ರಗಳಲ್ಲಿ ಒಂದಾದ ಬಾಗೇಪಲ್ಲಿಯ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ, ತಮ್ಮ ವೈಯಕ್ತಿಕ ಸಾಧನೆಯ ಅಂಕಪಟ್ಟಿಯಲ್ಲೂ ತೀರಾ ಹಿಂದೆ ಇದ್ದಾರೆ. ಅವರು ಕೇವಲ 3.94 ಅಂಕ ಪಡೆದಿದ್ದಾರೆ. ಹಳ್ಳಿಗಳ ರಸ್ತೆಗೆ 3.94 ಅಂಕ ಪಡೆದಿರುವ ಸುಬ್ಬಾ ರೆಡ್ಡಿ, ನಗರ ಪ್ರದೇಶದ ಜನರಿಗೆ ಲಭ್ಯವಾಗುವ ವಿಚಾರಕ್ಕೆ 3.45 ಅಂಕ ಪಡೆದಿದ್ದಾರೆ.

ಉಳಿದಂತೆ, ಅತ್ಯಂತ ಕಳಪೆ ಸಾಧನೆ ಮಾಡಿದ ಶಾಸಕರ ಪಟ್ಟಿಯಲ್ಲಿ ಡಾ. ಕೆ. ಸುಧಾಕರ (ಚಿಕ್ಕಬಳ್ಳಾಪುರ), ಎಚ್‌.ಪಿ. ರಾಜೇಶ್‌ (ಜಗಳೂರು), ಎಂ.ಟಿ. ಕೃಷ್ಣಪ್ಪ (ತುರುವೇಕೆರೆ), ಸಿ.ಬಿ. ಸುರೇಶಬಾಬು (ಚಿಕ್ಕನಾಯಕಹಳ್ಳಿ) ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಐದರಲ್ಲಿ ಬಿಜೆಪಿ ಮುಂದು

ಜನರಿಗೆ ನೇರವಾಗಿ ಸಂಬಂಧಪಡುವ ಐದು ಪ್ರಮುಖ ವಿಷಯಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ತಲಾ ಒಂದು ಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಇವೆ.

ಶಾಸಕರು ಕೈಗೆ ಸಿಗುತ್ತಾರೆಯೇ ಎಂಬ ಪ್ರಶ್ನೆಗೆ ಬಿಜೆಪಿ ಶಾಸಕರು ಸರಾಸರಿ 7.39 ಅಂಕ ಪಡೆದಿದ್ದರೆ, ಜೆಡಿಎಸ್‌ನವರು 7.10 ಅಂಕ ಗಿಟ್ಟಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ನವರು 7.10 ಅಂಕ ಗಳಿಸಿದ್ದಾರೆ.

ಕುಡಿಯುವ ನೀರಿನ ವಿಷಯದಲ್ಲಿ 7.57 ಅಂಕ ಬಿಜೆಪಿಗೆ ಬಂದಿದ್ದರೆ, ಕಾಂಗ್ರೆಸ್‌ಗೆ 7.48 ಅಂಕ, ಜೆಡಿಎಸ್‌ 7.35 ಅಂಕ ಪಡೆದಿವೆ. ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಕೂಡ ಬಿಜೆಪಿ 8.00 ಕಾಂಗ್ರೆಸ್‌ 7.88 ಹಾಗೂ 7.56 ಅಂಕವನ್ನು ಗಳಿಸಿವೆ.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಯೋಜನೆಯನ್ನು ಅನುಷ್ಠಾನ ಮಾಡಲೇಬೇಕು ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಲೇ ಇರುತ್ತಾರೆ. ಆದರೆ ಸ್ವಚ್ಛತೆ ಮತ್ತು ಒಳಚರಂಡಿ ನಿರ್ವಹಣೆಯ ಮೇಲುಸ್ತುವಾರಿಯಲ್ಲಿ ಬಿಜೆಪಿಯ ಎಲ್ಲ ಶಾಸಕರು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.‌

ಈ ಕ್ಷೇತ್ರದ 10 ಅಂಕಗಳ ಪೈಕಿ ಜೆಡಿಎಸ್ 7.14, ಬಿಜೆಪಿ 7.12 ಹಾಗೂ ಕಾಂಗ್ರೆಸ್‌ 6.96 ಅಂಕ ಗಳಿಸಿವೆ.

ಉತ್ತಮ ಶಾಲೆ ವಿಷಯದಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿದೆ, ಬಿಜೆಪಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಾಂಗ್ರೆಸ್ 7.97, ಬಿಜೆಪಿ 7.87 ಹಾಗೂ ಜೆಡಿಎಸ್‌ 7.55 ಅಂಕಗಳನ್ನು ಪಡೆದಿವೆ.

4 ಸಮೀಕ್ಷಾ ವಿಧಾನ

ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವವನ್ನು ಉತ್ತೇಜಿಸುವುದಕ್ಕಾಗಿ ಸಂಶೋಧನಾ ಪ್ರಕ್ರಿಯೆಗಳ ಮೂಲಕ ಕೆಲಸ ಮಾಡುತ್ತಿರುವ ‘ದಕ್ಷ್’ ಮತ್ತು ಚುನಾವಣಾ ಸುಧಾರಣೆಗಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಎಂಬ ಎರಡು ಸರ್ಕಾರೇತರ ಸಂಸ್ಥೆಗಳು ಕರ್ನಾಟಕ ಮತದಾರರ ಸಮೀಕ್ಷೆ– 2017ನ್ನು ನಡೆಸಿವೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿರುವ ಈ ಸಮೀಕ್ಷೆ, ಶಾಸಕರ ಕಾರ್ಯನಿರ್ವಹಣೆ ಕುರಿತಂತೆ ಜನರ ಅಭಿಪ್ರಾಯವನ್ನು ಸಂಗ್ರಹಿಸುವುದಾಗಿತ್ತು.

ಪ್ರಶ್ನಾವಳಿಯನ್ನು ಮೊಬೈಲ್ ಆ್ಯಪ್ ಒಂದರಲ್ಲಿ ಸಮೀಕ್ಷಕರಿಗೆ ಒದಗಿಸಲಾಗಿತ್ತು. ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸುವವರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನೂ ಈ ಪ್ರಕ್ರಿಯೆಯಲ್ಲಿ ದಾಖಲಿಸಲಾಗಿದೆ. ಮತದಾರರನ್ನು ಪ್ರಭಾವಿಸಿರಬಹುದಾದ 25 ವಿಷಯಗಳನ್ನು ಗುರುತಿಸಲಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶದ ಮತದಾರರಿಗೆ ಅವರ ಹಿನ್ನೆಲೆಗೆ ಅನುಗಣವಾಗಿ ಕೆಲವು ಭಿನ್ನ ಪ್ರಶ್ನೆಗಳನ್ನು ಕೇಳಲಾಗಿತ್ತು.

ಸಂಖ್ಯಾಶಾಸ್ತ್ರೀಯವಾಗಿ ಯಾದೃಚ್ಛಿಕಗೊಳಿಸಿದ (Randomized) ಪ್ರದೇಶಗಳಲ್ಲಿ ಸಮೀಕ್ಷಕರು ಮತದಾರರನ್ನು ಭೇಟಿಯಾದರು. ಸಮೀಕ್ಷೆ ನಡೆಸುವ ಪ್ರದೇಶ ಪ್ರತೀ ಐದನೇ ಮನೆಯನ್ನು ಆರಿಸಿಕೊಳ್ಳುವ ಸೂತ್ರದಂತೆ ಈ ಕಾರ್ಯ ನಡೆಯಿತು. ಸಮೀಕ್ಷಕರು ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದುದರಿಂದ ಅದನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿತ್ತು. ಇದರಿಂದ ಉತ್ತರಗಳ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಿಕೊಳ್ಳಲು ಸಾಧ್ಯವಾಗಿದೆ. ಸಮೀಕ್ಷೆಯಲ್ಲಿ ಉತ್ತರ ನೀಡಿದವರ ಒಟ್ಟು ಸಂಖ್ಯೆ 13,440. ಪ್ರತೀ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 60 ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT