ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಹ್ಲೋಟ್‌ ಗೆಲುವು ಸುಲಲಿತ

Last Updated 29 ನವೆಂಬರ್ 2018, 19:34 IST
ಅಕ್ಷರ ಗಾತ್ರ

ಜೋಧಪುರ: ಇಲ್ಲಿ ಎಲ್ಲರ ಕಣ್ಣೂ ಸರ್ದಾರ್‌ಪುರದ ಮೇಲಿದೆ. ಯಾಕೆಂದರೆ, ಇಲ್ಲಿನ ಜನ ಆಯ್ಕೆ ಮಾಡುವ ವ್ಯಕ್ತಿ ರಾಜಸ್ಥಾನದ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಹಳ ಹೆಚ್ಚು. ಹೌದು, ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಈ ನಗರ ಕ್ಷೇತ್ರದಿಂದ ಐದನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ನಿರಾಯಾಸ ಗೆಲುವು ಸಾಧ್ಯ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಥಾರ್‌ ಮರುಭೂಮಿ ವ್ಯಾಪ್ತಿಯ ಮರ್ವಾರ್‌ ಪ್ರದೇಶದ ಈ ಕ್ಷೇತ್ರದಿಂದ ಗೆಹ್ಲೋಟ್‌ 1998ರಿಂದ ನಿರಂತರವಾಗಿ ಸ್ಪರ್ಧಿಸುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಅವರು ಜೋಧಪುರ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಗೆದ್ದವರು.

ತಾವು ಮುಂದಿನ ಮುಖ್ಯಮಂತ್ರಿಯನ್ನೇ ಆಯ್ಕೆ ಮಾಡುತ್ತಿದ್ದೇವೆ ಎಂದು ಈ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಗೆಹ್ಲೋಟ್‌ ಗೆಲುವಿನ ಬಗ್ಗೆ ಬಿಜೆಪಿ ಬೆಂಬಲಿಗರಿಗೂ ಅಂತಹ ಅನುಮಾನ ಏನೂ ಇಲ್ಲ.

ಬಿಜೆಪಿಯ ಶಂಭು ಸಿಂಗ್‌ ಖಾತೆಸರ್‌ ಈ ಕ್ಷೇತ್ರದಲ್ಲಿ ಗೆಹ್ಲೋಟ್‌ ಅವರ ಎದುರಾಳಿ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖಾತೆಸರ್‌ ಎರಡನೇ ಸ್ಥಾನದವರೆಗೆ ಏರಿದ್ದರು. 2009ರಲ್ಲಿ ಬಿಎಸ್‌ಪಿ ಸೇರಿದ್ದ ಅವರು ಲೋಕಸಭೆಗೆ ಸ್ಪರ್ಧಿಸಿದ್ದರು. ಅಲ್ಲಿಯೂ ಸೋತಿದ್ದರು. ಈ ಬಾರಿ ಇಲ್ಲಿಂದ 70 ಕಿ.ಮೀ. ದೂರದ ಸರ್ದಾರ್‌ಪುರದಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ, ಮುಖ್ಯಮಂತ್ರಿ ವಸುಂಧರಾ ರಾಜೇ ಅವರೇ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಖಾತೆಸರ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಖಾತೆಸರ್‌ ಅವರು ರಜಪೂತ ಸಮುದಾಯದವರಾದರೆ, ಗೆಹ್ಲೋಟ್‌ ಮಾಲಿ (ಒಬಿಸಿ) ಜಾತಿಯವರು. ಬೇರೆ ಕ್ಷೇತ್ರಗಳಂತೆ ಈ ಕ್ಷೇತ್ರದಲ್ಲಿ ಜಾತಿಗೆ ಹೆಚ್ಚಿನ ಮಹತ್ವ ಇಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಹಾಗಿದ್ದರೂ, ರಜಪೂತರ ಬೆಂಬಲ ಬಿಜೆಪಿಗೆ ಇದ್ದೇ ಇದೆ. ಬ್ರಾಹ್ಮಣರು ಬಿಜೆಪಿಗೆ ಮತ ಹಾಕುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಕಾಂಗ್ರೆಸ್‌ ಜತೆಗೆ ಭಿನ್ನಾಭಿಪ್ರಾಯ ಇಲ್ಲ: ನಾಯ್ಡು
ರಾಜಕೀಯವಾಗಿ ನಮ್ಮಲ್ಲಿ (ಟಿಡಿಪಿ ಮತ್ತು ಕಾಂಗ್ರೆಸ್‌) ವ್ಯತ್ಯಾಸಗಳಿವೆ. ಟಿಡಿಪಿ ಆರಂಭದಿಂದಲೂ ಕಾಂಗ್ರೆಸ್‌ ವಿರುದ್ಧವೇ ಇತ್ತು ಎಂಬುದು ವಾಸ್ತವ. ಸೈದ್ಧಾಂತಿಕವಾಗಿ ನಮ್ಮಲ್ಲಿ ಯಾವುದೇ ಭಿನ್ನತೆ ಇಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದು ಬಿಜೆಪಿ ಜತೆಗೆ. ಈಗ ನಮ್ಮ ಮುಂದೆ ಪ್ರಜಾಸತ್ತಾತ್ಮಕವಾದ ಒತ್ತಡವಿದೆ. ದೇಶದ ಸಂವಿಧಾನ ಮತ್ತು ಸಂಸ್ಥೆಗಳನ್ನು ಉಳಿಸಲು ಬಿಜೆಪಿಯ ವಿರುದ್ಧ ಹೋರಾಡುವ ಅಗತ್ಯ ಉಂಟಾಗಿದೆ.
(ಕಾಂಗ್ರೆಸ್‌–ಟಿಡಿಪಿ ಮೈತ್ರಿಯ ಬಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು)

*
‘ಪ್ರಾಮಾಣಿಕ ಪ್ರಧಾನಿ’ ಭರವಸೆಯೂ ಈಡೇರಿಲ್ಲ
ನರೇಂದ್ರ ಮೋದಿ ಅವರು ಕೊಟ್ಟ ಒಂದೇ ಒಂದು ಭರವಸೆ ಈಡೇರಿಲ್ಲ. ಪ್ರಾಮಾಣಿಕ ಪ್ರಧಾನಿಯಾಗಿರುತ್ತೇನೆ ಎಂಬುದು ಸುಳ್ಳಾಗಿದೆ. ಪ್ರತಿ ಪ್ರಜೆಯ ಬ್ಯಾಂಕ್‌ ಖಾತೆಗೆ ₹15 ಲಕ್ಷ ಹಣ ಜಮೆ ಮಾಡುತ್ತೇನೆ ಎಂದಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ರೈತರ ಸಾಲ ಮನ್ನಾ ಮತ್ತು ನ್ಯಾಯಯುತ ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರು. ಯಾವುದನ್ನೂ ಈಡೇರಿಸಿಲ್ಲ. 15 ಮಂದಿ ಅತ್ಯಂತ ಶ್ರೀಮಂತ ಮೂರೂವರೆ ಲಕ್ಷ ಕೋಟಿ ರೂಪಾಯಿ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಯಾಕೆ ಮಾಡಿಲ್ಲ?
(ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ಆಧ್ಯಕ್ಷ ರಾಹುಲ್‌ ಗಾಂಧಿ)

*
ಖಾನ್‌ ಪರ ಯೋಗಿ ಮತ ಕೇಳುತ್ತಾರೆಯೇ?
ಹಿಂದುತ್ವದ ಭಾವನೆಗಳನ್ನು ಕೆರಳಿಸುವ ಭಾಷಣಕ್ಕೆ ಪ್ರಸಿದ್ಧರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಯೂನುಸ್‌ ಖಾನ್‌ ಅವರ ಪರವಾಗಿ ಟೊಂಕ್‌ ಕ್ಷೇತ್ರದಲ್ಲಿ ಮತ ಯಾಚನೆ ಮಾಡಲಿದ್ದಾರೆಯೇ? ನಾನು ಅದನ್ನು ಎದುರು ನೋಡುತ್ತಿದ್ದೇನೆ...
(ಟೊಂಕ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಚಿನ್‌ ಪೈಲಟ್‌ ಸ್ಪರ್ಧಿಸುತ್ತಿದ್ದಾರೆ)

*
ಅವರು ಪೈಲಟ್‌, ನಾನು ಸೇವಕ
ಸಚಿನ್‌ ಪೈಲಟ್‌ ಅವರಿಗೆ ಶಾಸಕನಾಗಿ, ಮುಖ್ಯಮಂತ್ರಿಯಾಗುವುದು ಮಾತ್ರ ಕನಸು. ಆದರೆ, ನಾನು ಜನರ ಸೇವಕ. ನಾನು ಶಾಸಕನಾಗುತ್ತೇನೆ. ಯಾಕೆಂದರೆ ಅದಷ್ಟೇ ನನ್ನ ಸ್ಥಾನ. ಆದರೆ, ಸಚಿನ್‌ ಪೈಲಟ್‌ ದೊಡ್ಡವರು. ಅವರೊಬ್ಬ ಪೈಲಟ್‌. ನಾನು ಸೇವಕ ಮಾತ್ರ. ಟೊಂಕ್‌ನ ಜನರಲ್ಲಿ ವಿಮಾನ ಇದೆಯೇ? ಅವರಲ್ಲಿ ಹೆಲಿಕಾಪ್ಟರ್ ಇದೆಯೇ? ಇಲ್ಲ, ಹಾಗಾಗಿ ಇಲ್ಲಿಗೆ ಪೈಲಟ್‌ ಬೇಕಾಗಿಲ್ಲ.
(ಟೊಂಕ್‌ ಕ್ಷೇತ್ರದಲ್ಲಿ ಸಚಿನ್ ಪೈಲಟ್‌ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಯೂನುಸ್‌ ಖಾನ್‌ ಲೇವಡಿ)

ಸಾಲ ಮನ್ನಾ, ನಿರುದ್ಯೋಗ ಭತ್ಯೆ: ಕಾಂಗ್ರೆಸ್‌ ಭರವಸೆ
ಜೈಪುರ (ಪಿಟಿಐ): ರೈತರ ಸಾಲ ಮನ್ನಾ, ಬಾಲಕಿಯರು ಮತ್ತು ಮಹಿಳೆಯರಿಗೆ ಉಚಿತ ಶಿಕ್ಷಣ, ನಿರುದ್ಯೋಗಿಗಳಿಗೆ ತಿಂಗಳಿಗೆ ₹3,500 ವರೆಗೆ ಭತ್ಯೆ, ಹಿರಿಯ ಕೃಷಿಕರಿಗೆ ಮಾಸಾಶನ ಮುಂತಾದವುಗಳು ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಗುರುವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು. ನಿರುದ್ಯೋಗಿಗಳಿಗೆ ₹5,000 ತಿಂಗಳ ಭತ್ಯೆ ನೀಡಲಾಗುವುದು ಎಂದು ಬಿಜೆಪಿಯ ಪ್ರಣಾಳಿಕೆಯಲ್ಲಿ ಭರವಸೆ ಕೊಡಲಾಗಿದೆ. ಪ್ರಣಾಳಿಕೆಗಾಗಿ ಸಾಮಾಜಿಕ ಮಾಧ್ಯಮ ಸೇರಿ ವಿವಿಧ ಮಾಧ್ಯಮಗಳ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿದ್ದವು. ಅವುಗಳನ್ನು ಪರಿಗಣಿಸಲಾಗಿದೆ. ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಕಾಲಮಿತಿಯಲ್ಲಿ ಜಾರಿಗೆ ತರಲಾಗುವುದು ಎಂದು ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಹೇಳಿದ್ದಾರೆ.

ಕೃಷಿ ಉಪಕರಣಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರಿಸಲು ಯತ್ನಿಸಲಾಗುವುದು. ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿಯೊಳಕ್ಕೆ ಸೇರಿಸುವಂತೆ ಜಿಎಸ್‌ಟಿ ಮಂಡಳಿ ಮೇಲೆ ಒತ್ತಡ ಹೇರಲಾಗುವುದು. ಗ್ರಾಮ ಪಂಚಾಯಿತಿ ಸೇರಿ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಲು ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆಯನ್ನು ರದ್ದುಪಡಿಸಲಾಗುವುದು ಎಂದು ಕಾಂಗ್ರೆಸ್‌ ಪ್ರಣಾಳಿಕೆ ಹೇಳಿದೆ. ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಿತ್ತು.

‘ತೆಲಂಗಾಣ ಹಿರಿಮೆ’ ಚುನಾವಣಾ ಕಣಕ್ಕೆ
ಸಿದ್ದಿಪೇಟ್‌ (ಪಿಟಿಐ):
ತೆಲಂಗಾಣ ವಿಧಾನಸಭೆಗೆ ಮತದಾನ ನಡೆಯಲು ಇನ್ನೊಂದು ವಾರವೂ ಇಲ್ಲ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತೆಲಂಗಾಣದಲ್ಲಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಅದನ್ನು ತಡೆಯಲು ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರ ಪಕ್ಷ ಟಿಆರ್‌ಎಸ್‌ ತೆಲಂಗಾಣ ಹಿರಿಮೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ನಾಯ್ಡು ಅವರು ತೆಲಂಗಾಣದ ಜನರಿಗೆ ವಂಚಿಸಿದ್ದಾರೆ. ಅವರು ತೆಲಂಗಾಣವನ್ನು ಪರೋಕ್ಷವಾಗಿ ನಿಯಂತ್ರಿಸುವುದನ್ನು ತಡೆಯಬೇಕಿದೆ ಎಂದು ಸಚಿವ ಟಿ.ಹರೀಶ್‌ ರಾವ್‌ ಅವರು ಹೇಳಿದ್ದಾರೆ. ಹರೀಶ್‌ ಅವರು ಆಡಳಿತಾರೂಢ ಟಿಆರ್‌ಎಸ್‌ನ ಆಪ‍ದ್ಬಾಂಧವ ಎಂದೇ ಹೆಸರಾದವರು.

‘ನಾಯ್ಡು ಅವರು ತೆಲಂಗಾಣಕ್ಕೆ ಬಾರದಿರುತ್ತಿದ್ದರೆ ತೆಲಂಗಾಣ ಹಿರಿಮೆಯ ವಿಚಾರವನ್ನು ನಾವು ಎತ್ತುತ್ತಲೇ ಇರಲಿಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಈ ವಿಚಾರ ಬರುತ್ತಲೇ ಇರಲಿಲ್ಲ. ಆದರೆ, ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಯಲ್ಲಿ ನಾಯ್ಡು ಅವರೂ ಇರುವುದಿರಂದ ತೆಲಂಗಾಣ ಹಿರಿಮೆ ವಿಚಾರ ಚರ್ಚೆಗೆ ಬಂದೇ ಬರುತ್ತದೆ’ ಎಂದು ಹರೀಶ್‌ ಹೇಳಿದ್ದಾರೆ.

***
ರಾಹುಲ್‌ಗೆ ಮೋದಿ ಗೇಲಿ: ನಾಯ್ಡು ಬೇಸರ
ಹೈದರಾಬಾದ್‌:
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಬುದ್ಧ ನಾಯಕ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಎನ್‌.ಚಂದ್ರಬಾಬು ನಾಯ್ಡು ತಾರೀಫು ಮಾಡಿದ್ದಾರೆ.

ರಾಹುಲ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗೇಲಿ ಮಾಡಿದ್ದನ್ನು ಖಂಡಿಸಿದ್ದಾರೆ.ರಾಹುಲ್‌ ಅವರು ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷ. ಪ್ರಧಾನಿಯಾದವರು ಕೆಟ್ಟ ಭಾಷೆ ಬಳಸಿ ಲೇವಡಿ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆ ಅಂಗವಾಗಿ ರಾಹುಲ್‌ ಜೊತೆಗೆ ಗುರುವಾರ ರೋಡ್‌ ಷೋ ನಡೆಸಿದ ವೇಳೆ ಆಯ್ದ ಪತ್ರಕರ್ತರೊಂದಿಗೆ ಅವರು ಸಂವಾದ ನಡೆಸಿದರು.

‘ಆಂಧ್ರ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡುವ ಕುರಿತು ನಡೆದ ಚರ್ಚೆಯ ದಿನದಂದು ಪ್ರಧಾನಿ ಇದೇ ರೀತಿ ವರ್ತಿಸಿದ್ದರು. ರಾಷ್ಟ್ರದ ಹಿರಿಯ ರಾಜಕಾರಣಿಯಾದವರು ಈ ರೀತಿ ವರ್ತಿಸುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಹೇಳಿದರು.

‘ಬಿಜೆಪಿ ವಿರೋಧಿ ಮೈತ್ರಿಕೂಟವು ಚುನಾವಣೆ ಫಲಿತಾಂಶದ ಬಳಿಕವೂ ಮುಂದುವರಿಯಲಿದೆ. ಡಿಸೆಂಬರ್‌ 10ರಂದು ನವದೆಹಲಿಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಕಾರ್ಯಸೂಚಿ ಬಗ್ಗೆ ಒಬ್ಬರೇ ನಿರ್ಧರಿಸುವುದು ಸರಿಯಲ್ಲ. ಇದು ರಾಜಕೀಯ ಪಕ್ಷಗಳ ಒಕ್ಕೂಟ. ಯುಪಿಎದಲ್ಲಿ ಇರದ ಕೆಲವು ರಾಜಕೀಯ ಪಕ್ಷಗಳು ಇವೆ. ಅವುಗಳನ್ನು ಒಗ್ಗೂಡಿಸಿಕೊಂಡು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು’ ಎಂದರು.

‘ಈಗ ನಡೆದಿರುವ ಚುನಾವಣೆಗಳು ನಮಗೆ ಮಹತ್ವದ್ದಾಗಿವೆ. ಇದರಲ್ಲಿ ಗೆದ್ದರೂ ಸೋತರೂ ಮೈತ್ರಿಕೂಟ ಮುಂದುವರಿಯಲಿದೆ. ಅಖಿಲೇಶ್‌ ಯಾದವ್‌ ಹಾಗೂ ಮಾಯಾವತಿ ಅವರು ಸಂಪರ್ಕದಲ್ಲಿದ್ದಾರೆ. ನವೀನ್‌ ಪಟ್ನಾಯಕ್‌ ಸಹ ನಮ್ಮ ಜೊತೆಗೆ ಕೈಜೋಡಿಸುವ ವಿಶ್ವಾಸವಿದೆ’ ಎಂದರು.

‘ನಾನು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ. ನನಗೆ ಈ ಬಗ್ಗೆ ಆಸೆಯೂ ಇಲ್ಲ. ಅಮರಾವತಿ ನಗರವನ್ನು ಸುಂದರವಾಗಿ ನಿರ್ಮಿಸುವುದು ನನ್ನ ಗುರಿ. ಆಂಧ್ರ ಪ್ರದೇಶದಲ್ಲಿಯೇ ಇರಬೇಕು ಎಂಬುದು ನನ್ನ ಜನರ ಬಯಕೆಯಾಗಿದೆ’ ಎಂದು ನಾಯ್ಡು ಹೇಳಿದರು.

‘ಹನುಮ ದಲಿತ’: ಯೋಗಿಗೆ ಆಕ್ಷೇಪ
ಬಲಿಯಾ (ಉತ್ತರ ಪ್ರದೇಶ):
‘ಹನುಮಂತ ವಂಚಿತ, ದಲಿತ ಮತ್ತು ಅರಣ್ಯವಾಸಿ’ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆಗೆ ಬಿಜೆಪಿ ಮುಖಂಡರಿಂದಲೇ ಪ್ರತಿರೋಧ ವ್ಯಕ್ತವಾಗಿದೆ. ರಾಜಸ್ಥಾನದ ಅಲ್ವರ್‌ ವಿಧಾನಸಭಾ ಕ್ಷೇತ್ರದ ಮಾಲಖೇಡದಲ್ಲಿ ಯೋಗಿ ಈ ಹೇಳಿಕೆ ನೀಡಿದ್ದರು. ‘ರಾಮ ಭಕ್ತರು ಬಿಜೆಪಿಗೆ ಮತ ಹಾಕಬೇಕು, ರಾವಣನನ್ನು ನಂಬುವವರು ಕಾಂಗ್ರೆಸ್‌ಗೆ ಮತ ಹಾಕಲಿ’ ಎಂದು ಅವರು ಕರೆ ಕೊಟ್ಟಿದ್ದರು.ಹನುಮಂತನನ್ನು ಹಿಂದೂಗಳು ದೇವರು ಎಂದು ಪರಿಗಣಿಸುತ್ತಾರೆ. ದೇವರನ್ನು ಜಾತಿಯೊಂದಿಗೆ ಜೋಡಿಸುವುದು ಸರಿಯಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡ ಪ್ರಮೋದ್ ತಿವಾರಿ ಅವರೂ ಯೋಗಿ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಜನರು ಮತ್ತು ಸಮಾಜವನ್ನು ಒಡೆಯುವುದು ಬಿಜೆಪಿಗೆ ಸಾಮಾನ್ಯ. ಇದೇ ಮೊದಲ ಬಾರಿಗೆ ದೇವರನ್ನೂ ಜಾತಿಯ ಹೆಸರಿನಲ್ಲಿ ವಿಭಜಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಸರ್ವ ಬ್ರಾಹ್ಮಣ ಮಹಾಸಭಾ ಕೂಡ ಯೋಗಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಯೋಗಿ ಅವರು ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಮಹಾಸಭಾದ ಅಧ್ಯಕ್ಷ ಸುರೇಶ್‌ ಮಿಶ್ರಾ ಅವರು ಯೋಗಿಗೆ ನೋಟಿಸ್‌ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT