ಮಂಗಳವಾರ, ಮೇ 18, 2021
28 °C

ಟ್ವಿಟರ್‌ನಲ್ಲಿ ಕಾಂಗ್ರೆಸ್ ಹೆಸರು ಕೈಬಿಟ್ಟ ಜ್ಯೋತಿರಾದಿತ್ಯ ಸಿಂಧಿಯಾ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿನ ಉಲ್ಲೇಖದಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನು ಬದಲಾಯಿಸಿದ್ದಾರೆ.

ತಮ್ಮ ಅಧಿಕೃತ ಖಾತೆಯಲ್ಲಿ ಈ ಮೊದಲು ಇದ್ದ ಸಂಸತ್‌ನ ಮಾಜಿ ಸದಸ್ಯ, ಇಂಧನ ಖಾತೆಯ ಮಾಜಿ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಖಾತೆ ಸಚಿವ; ಸಂವಹನ, ಐಟಿ ಖಾತೆಯ ರಾಜ್ಯ ಖಾತೆ ಸಚಿವ ಎಂದಿದ್ದ ಉಲ್ಲೇಖವನ್ನು ಕೈಬಿಟ್ಟಿದ್ದಾರೆ. ಬದಲಿಗೆ ‘ಸಾರ್ವಜನಿಕರ ಸೇವಕ ಮತ್ತು ಕ್ರಿಕೆಟ್ ಉತ್ಸಾಹಿ’ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿರುವ ಸಿಂಧಿಯಾ, ಒಂದು ತಿಂಗಳ ಹಿಂದೆಯೇ ನಾನು ಟ್ವಿಟರ್‌ನಲ್ಲಿನ ಉಲ್ಲೇಖವನ್ನು ಬದಲಾಯಿಸಿದ್ದೆ. ಜನರ ಸಲಹೆಯಂತೆ ನನ್ನ ವಿವರಗಳ ಉಲ್ಲೇಖವನ್ನು ಕಡಿಮೆ ಮಾಡಿದ್ದೇನೆ. ಈ ಕುರಿತು ಹರಡಿರುವ ವದಂತಿಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್‌ನಾಥ್ ಅವರು ಅಧಿಕಾರ ಸ್ವೀಕರಿಸಿದಾಗಿನಿಂದಲೂ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗರು ಸಿಂಧಿಯಾ ಅವರನ್ನು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯಿಸಿದ್ದರು.

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಕಮಲ್ ನಾಥ್ ಅವರು ಮಧ್ಯ ಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ದಿವಂಗತ ಅರ್ಜುನ್ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಅವರನ್ನು ಶಿಫಾರಸು ಮಾಡಿರುವುದರಿಂದ ಬೇಸರಗೊಂಡು ಸಿಂಧಿಯಾ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಸಿಂಧಿಯಾ ಅವರು ರಾಹುಲ್ ಗಾಂಧಿಗೆ ಹತ್ತಿರವಾಗಿದ್ದಾರೆಂದು ತಿಳಿದ ಪಕ್ಷದ ಹಿರಿಯ ನಾಯಕರು ಅವರನ್ನು ನಿರ್ಲಕ್ಷಿಸಿದ್ದರಿಂದಾಗಿ ಈ ರೀತಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ ಎಂದೂ ಹೇಳಲಾಗುತ್ತಿದೆ.

ಹರಿಯಾಣದ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಅವರು ಪಕ್ಷವನ್ನು ತೊರೆಯುವಾಗ, ಹಿರಿಯ ನಾಯಕರಿಂದ ಯುವ ನಾಯಕರನ್ನು ರಾಜಕೀಯವಾಗಿ ಮುಗಿಸಲಾಗುತ್ತಿದೆ ಎಂದು ದೂರಿದ್ದರು.

ಇದೀಗ ಸಿಂಧಿಯಾ ಅವರ ಈ ನಡೆಯು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ. ಆದರೆ ಸಿಂಧಿಯಾ ರಾಜೀನಾಮೆ ಕುರಿತು ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು