ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ.ವ್ಯಾಲಿ ಯೋಜನೆ: ತಡೆಯಾಜ್ಞೆ ತೆರವು

ಹೈಕೋರ್ಟ್‌ ವಿಚಾರಣೆಗೆ ‘ಸುಪ್ರೀಂ’ ಸೂಚನೆ
Last Updated 5 ಏಪ್ರಿಲ್ 2019, 19:54 IST
ಅಕ್ಷರ ಗಾತ್ರ

ನವದೆಹಲಿ: ಕೆ.ಸಿ. ವ್ಯಾಲಿ (ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ) ಯೋಜನೆಗೆ ಅನುಮತಿ ನೀಡಿ ಹೈಕೋರ್ಟ್‌ ಹೊರಡಿಸಿದ್ದ ಮಧ್ಯಂತರ ಆದೇಶಕ್ಕೆ ಕಳೆದ ಜನವರಿ 7ರಂದು ತಡೆ ನೀಡಿದ್ದ ತನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.

ಮಧ್ಯಂತರ ಆದೇಶ ನೀಡಿರುವ ರಾಜ್ಯ ಹೈಕೋರ್ಟ್‌ನಲ್ಲಿಯೇ ಮುಂದಿನ ವಿಚಾರಣೆ ಎದುರಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಪೀಠ ಅರ್ಜಿದಾರರಿಗೆ ಸೂಚಿಸಿದೆ.

ಕುಡಿಯುವ ನೀರು ಪೂರೈಸುವುದು ಯೋಜನೆಯ ಉದ್ದೇಶವಾಗಿರದೆ, ಅಂತರ್ಜಲ ವೃದ್ಧಿಯೇ ಆಗಿದೆ. ಅಲ್ಲದೆ, ಚರಂಡಿ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸುವ ಜಗತ್ತಿನ ಮೊದಲ ಯೋಜನೆ ಇದಾಗಿದೆ ಎಂದು ಬೆಂಗಳೂರು ನೀರು ಸರಬ
ರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲ ಶ್ಯಾಂ ದಿವಾನ್‌ ನ್ಯಾಯಪೀಠಕ್ಕೆ ವಿವರಿಸಿದರು.

ವಿಶೇಷವಾಗಿ ಕೆರೆಗಳಲ್ಲಿ ಸಂಗ್ರಹವಾಗುವ ಶುದ್ಧೀಕರಿಸಿದ ನೀರು ಭೂಮಿಯೊಳಗೆ ಇಂಗುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇಂಗುವ ನೀರು ತಳ ಮುಟ್ಟುವ ಹೊತ್ತಿಗೆ ಹಲವಾರು ಪದರಗಳಲ್ಲಿ ಶುದ್ಧಗೊಳ್ಳುವುದರಿಂದ ರಾಸಾಯನಿಕ ಅಂಶ ಉಳಿಯುವ ಅಪಾ
ಯವೂ ಇಲ್ಲ ಎಂದು ಅವರು ಹೇಳಿದರು.

ಶುದ್ಧೀಕರಿಸಿ ಕೆರೆಗಳಿಗೆ ಹರಿಬಿಡುವ ನೀರಿನಲ್ಲಿ ಭಾರಿ ಪ್ರಮಾಣದ ರಾಸಾಯನಿಕ ಇರುವುದು ಪರೀಕ್ಷಾ ವರದಿಗಳಿಂದ ತಿಳಿದುಬಂದಿದೆ ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌ ತಿಳಿಸಿದರಾದರೂ, ಹೈಕೋರ್ಟ್‌ನಲ್ಲೇ ವಾದ ಮಂಡಿಸುವಂತೆ ನ್ಯಾಯಪೀಠ ಹೇಳಿತು.

ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳಿಗೆ ಶುದ್ಧೀಕರಿಸಿದ ಚರಂಡಿ ನೀರು ಹರಿಸುವ ಈ ಮಹತ್ವದ ಯೋಜನೆಗೆ ನೀಡಿದ್ದ ತಡೆಯನ್ನು ತೆರವುಗೊಳಿಸಿ ರಾಜ್ಯ ಹೈಕೋರ್ಟ್‌ ಕಳೆದ ಸೆಪ್ಟೆಂಬರ್‌ 28ರಂದು ಮಧ್ಯಂತರ ಆದೇಶ ನೀಡಿತ್ತು.

ಅದನ್ನು ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತಡೆಯಾಜ್ಞೆ ನೀಡಿದ್ದ ಪೀಠವು,ರಾಜ್ಯ ಸರ್ಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಲಮಂಡಳಿಗಳಿಂದ ಪ್ರತಿಕ್ರಿಯೆ ಕೋರಿತ್ತು.

ಆದೇಶ ಮಾರ್ಪಾಡು ಮಾಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಕಳೆದ ಮಾರ್ಚ್‌ 11ರಂದು ವಜಾಗೊಳಿಸಿದ್ದ ನ್ಯಾಯಪೀಠ, ಮೇಲ್ಮನವಿ ಜಾಳುಜಾಳಾಗಿದೆ. ಆದೇಶದ ದಿನಾಂಕಗಳೂ ಸಮರ್ಪಕವಾಗಿ ನಮೂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT