ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿತ್ತು ಮತ್ತೊಂದು ಆನೆ

Last Updated 3 ಜೂನ್ 2020, 10:03 IST
ಅಕ್ಷರ ಗಾತ್ರ

ಕೊಚ್ಚಿ: ಕೇರಳದಲ್ಲಿ ಗರ್ಭಿಣಿ ಆನೆಯ ಹತ್ಯೆಗೆ ಸಂಬಂಧಿಸಿ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಒಂದು ತಿಂಗಳ ಹಿಂದೆಯೂ ಇಂತಹದ್ದೇ ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೊಲ್ಲಂ ಜಿಲ್ಲೆಯಲ್ಲಿ ತಿಂಗಳ ಹಿಂದೆ ಬಾಯಿಯಲ್ಲಿ ತೀವ್ರವಾಗಿ ಗಾಯಗೊಂಡು ಆನೆಯೊಂದು ಮೃತಪಟ್ಟಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಶಕ್ತಿಶಾಲಿ ಪಟಾಕಿ ತುಂಬಿಸಿದ ಅನಾನಸ್ಹಣ್ಣುಗಳನ್ನು ತಿನ್ನಲು ನೀಡಿದ ಪರಿಣಾಮ ಸೈಲೆಂಟ್ ವ್ಯಾಲಿ ಅರಣ್ಯ ಪ್ರದೇಶದಲ್ಲಿ ಮೇ 27ರಂದು ಗರ್ಭಿಣಿ ಆನೆಯೊಂದು ಸಾವಿಗೀಡಾಗಿತ್ತು. ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೊಲ್ಲಂ ಜಿಲ್ಲೆಯ ಪುನಲೂರ್ ವಿಭಾಗದ ಪತನಪುರಂ ಅರಣ್ಯಪ್ರದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ಹೆಣ್ಣಾನೆಯೊಂದು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಿಂಡಿನಿಂದ ದೂರವಾಗಿದ್ದ ಆನೆಯ ದವಡೆ ಮುರಿದಿದ್ದು ಆಹಾರ ಸೇವಿಸಲು ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ, ನಿತ್ರಾಣಗೊಂಡಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಆನೆ ಹಿಂಡಿನೊಂದಿಗೆ ಓಡಿ ಹೋಗಿತ್ತು. ಆದರೆ ಮರುದಿನ ಮತ್ತದೇ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಚಿಕಿತ್ಸೆ ನೀಡಲಾಯಿತಾದರೂ ದುರದೃಷ್ಟವಶಾತ್, ಅದು ಮೃತಪಟ್ಟಿತ್ತು ಎಂದು ಅವರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಆನೆಗೂ ಪಟಾಕಿ ತುಂಬಿಸಿದ ಆಹಾರ ನೀಡಿರುವ ಬಗ್ಗೆ ಅನುಮಾನವಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇಂತಹ ಪ್ರಕರಣಗಳಲ್ಲಿ ತನಿಖೆ ನಡೆಸುವುದು ತುಂಬಾ ಸವಾಲಿನ ವಿಚಾರ. ಮಾಹಿತಿ ಕಲೆ ಹಾಕುವುದು ಕಷ್ಟದ ಕೆಲಸ ಕೆಲಸ. ಆನೆಗಳು ದಿನವೊಂದರಲ್ಲಿ ನೂರಾರು ಕಿಲೋಮೀಟರ್ ದೂರ ಸಂಚರಿಸುವುದರಿಂದ ಎಲ್ಲಿ ಅಂತಹ ಘಟನೆ ನಡೆದಿದೆ ಎಂದು ಪತ್ತೆ ಮಾಡುವುದು ಸುಲಭವಲ್ಲ ಎಂದು ಅವರು ಹೇಳಿದ್ದಾರೆ.

ಆನೆಗಳ ಸಾವಿಗೆ ಸಂಬಂಧಿಸಿ ವರದಿ ನೀಡುವಂತೆ ವನ್ಯಜೀವಿ ವಿಭಾಗದ ಉನ್ನತ ಅಧಿಕಾರಿಗಳಿಗೆ ಕೇರಳ ಅರಣ್ಯ ಸಚಿವ ಕೆ. ರಾಜು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT