ಭಾನುವಾರ, ಸೆಪ್ಟೆಂಬರ್ 27, 2020
24 °C

ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಿದ ನೌಷಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಯಿಕ್ಕೋಡ್: ಕೇರಳದಲ್ಲಿನ ಪ್ರವಾಹ ಮತ್ತು ಭೂಕುಸಿತದಲ್ಲಿ ಇಲ್ಲಿಯವರೆಗೆ 78 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರವಾಹದಲ್ಲಿ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡವರೆಷ್ಟೋ. ಸಂಕಷ್ಟಕ್ಕೆ ಸಿಲುಕಿರುವವರ ಸಹಾಯಕ್ಕೆ ಇಡೀ ಕೇರಳದ ಜನತೆ ಒಗ್ಗೂಡಿ ಮುಂದೆ ಬಂದಿದೆ. ಈ ವೇಳೆ ಸಹಾಯ ಕಾರ್ಯದಲ್ಲಿ ಮಾನವೀಯತೆ ಮೆರೆದ ವ್ಯಕ್ತಿಗಳನ್ನು ಜನರು ಮರೆಯುವಂತಿಲ್ಲ.

ಕಳೆದ ವರ್ಷ ಪ್ರಳಯವುಂಟಾದಾಗ ಮಧ್ಯಪ್ರದೇಶದಿಂದ ಕೇರಳಕ್ಕೆ ಕಂಬಳಿ ಮಾರಲು ಬಂದಿದ್ದ ವಿಷ್ಣು ಎಂಬ ಯುವಕ 50 ಕಂಬಳಿಗಳನ್ನು ಮಾಂಞಾಡ್ ನಿರ್ಮಲ ಎಲ್‌ಪಿ ಶಾಲೆಯ ಸಂತ್ರಸ್ತರ ಶಿಬಿರಕ್ಕೆ ನೀಡಿ ಸಹಾಯ ಮಾಡಿದ್ದರು. ದೂರದ ರಾಜ್ಯವೊಂದರಿಂದ ಬಂದು ಕೇರಳದಲ್ಲಿ ಕಂಬಳಿ ಮಾರಿ ಜೀವನ ಸಾಗಿಸುತ್ತಿದ್ದ ವಿಷ್ಣು ಆನಂತರ ತನ್ನಲ್ಲಿದ್ದ 400 ಕಂಬಳಿಗಳನ್ನೂ ಸಂತ್ರಸ್ತರಿಗೆ ನೀಡಿ ತಮ್ಮ ಊರಿಗೆ ಮರಳಿದ್ದರು. 


ವಿಷ್ಣು

ಈ ಬಾರಿ ಎರ್ನಾಕುಳಂ ಬ್ರಾಡ್‌ವೇಯ ರಸ್ತೆ ಬದಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವ ನೌಷಾದ್ ಎಂಬವರು ತಮ್ಮ ಅಂಗಡಿಯಲ್ಲಿದ್ದ ಎಲ್ಲ ಬಟ್ಟೆಗಳನ್ನು ನೆರೆ ಸಂತ್ರಸ್ತರಿಗೆ ಕೊಟ್ಟು ಸಹಾಯ ಮಾಡಿದ್ದಾರೆ.
ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ಸ್ವಯಂ ಸೇವಕರು ಬಂದಾಗ ಅಲ್ಲಿದ್ದ ಎಲ್ಲ ಬಟ್ಟೆಗಳನ್ನು ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಿ ಎಂದಿದ್ದಾರೆ ನೌಷಾದ್.

''ನಾವು ಹೋಗುವಾಗ ಇದನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಅಲ್ಲವೇ ಎನ್ನುವ  ನೌಷಾದ್ ಅವರಲ್ಲಿ, ಇಷ್ಟೊಂದು ಬಟ್ಟೆಗಳನ್ನು ಕೊಡುವಾಗ ನಷ್ಟವಾಗುವುದಿಲ್ಲವೇ ಎಂದು ಕೇಳಿದರೆ, ದೇವರು ಸಹಾಯ ಮಾಡುತ್ತಾನೆ. ನನ್ನ ನಾಡಿನ ಜನರಿಗೆ ಸಹಾಯ ಮಾಡುವುದೇ ಲಾಭ ಎಂದು ಭಾವಿಸುತ್ತೇನೆ. ನಾಳೆ ಪೆರುನಾಳ್ (ಬಕ್ರೀದ್ ಹಬ್ಬ) ಅಲ್ಲವೇ, ನನ್ನ ಹಬ್ಬ ಹೀಗೆ ಇದೆ '' ಎಂದು ನೌಷಾದ್ ಹೇಳಿದ್ದಾರೆ.

ನೌಷಾದ್ ಅವರ ಈ ಸಹಾಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.  ಸಂತ್ರಸ್ತರಿಗಾಗಿ ತನ್ನ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಬಟ್ಟೆಗಳನ್ನು ಕೊಟ್ಟ ನೌಷಾದ್ ಅವರನ್ನು ಮಾತುಗಳನ್ನು ಉಲ್ಲೇಖಿಸಿ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ನಾಡಿನ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದ್ದಾರೆ.
 

ಇದನ್ನೂ ಓದಿ: ಕೇರಳ ಮಹಾ ಮಳೆ: ಸತ್ತವರ ಸಂಖ್ಯೆ 76ಕ್ಕೆ ಏರಿಕೆ, 58 ಮಂದಿ ನಾಪತ್ತೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು