ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ ಕಾಣದಿದ್ದರೂ ವ್ಯಕ್ತಿಯ ಗುರುತು ಸಿಗುವ ವಿಶಿಷ್ಟ ಮಾಸ್ಕ್ ಆವಿಷ್ಕಾರ!

ಅಕ್ಷರ ಗಾತ್ರ

ಕೊಟ್ಟಾಯಂ(ಕೇರಳ): ವೈದ್ಯರು, ತಜ್ಞರ ಸಲಹೆಯ ಪ್ರಕಾರ ಕೊರೊನಾ ವೈರಸ್‌ಗೆ ಲಸಿಕೆ ಆವಿಷ್ಕರಿಸುವವರೆಗೂ ನಾವು ಅದರೊಂದಿಗೇ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮುಖವಾಡದ ಬದಕೂ ಕೂಡ ಅನಿವಾರ್ಯ! ಅದರಂತೆ, ಮಾಸ್ಕ್‌ಗಳು ನಮ್ಮ ನಿತ್ಯದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಆದರೆ ಇವು ಅನೇಕ ತೊಂದರೆಗಳನ್ನೂ ಸೃಷ್ಟಿಸುತ್ತವೆ. ಒಮ್ಮೆ ಮಾಸ್ಕ್‌ ಧರಿಸಿದರೆ ಮೂಗು, ಬಾಯಿ ಮತ್ತು ಗಲ್ಲವನ್ನು ಅದು ಸಂಪೂರ್ಣವಾಗಿ ಆವರಿಸುತ್ತದೆ. ಹೀಗಾಗಿ ವ್ಯಕ್ತಿಯ ಗುರುತು ಕಷ್ಟ. ಈ ಸಮಸ್ಯೆಗೆ ಕೇರಳದ ಫೋಟೊಗ್ರಾಫರ್‌ ಒಬ್ಬರು ಪರಿಹಾರ ಕಂಡು ಹಿಡಿದಿದ್ದಾರೆ.

ಕೊಟ್ಟಾಯಂನ ಎಟುಮನೂರಿನ ಫೋಟೊಗ್ರಾಪರ್‌ ಬಿನೇಶ್ ಜಿ ಪಾಲ್ (38) ಮಾಸ್ಕ್‌ನಿಂದ ಎದುರಾಗಿರುವ ಗುರುತಿನ ಸಮಸ್ಯೆಯನ್ನು ನಿವಾರಿಸಲು ವಿಶಿಷ್ಟ ಮುಖಗವಸನ್ನು ಅಭಿವೃದ್ಧಿಪಡಿಸಿದ್ದಾರೆ. ಅದನ್ನು ಧರಿಸಿದರೆ ವ್ಯಕ್ತಿಯನ್ನು ಸುಲಭವಾಗಿ ಎಂದಿನಂತೇ ಗುರುತಿಸಬಹುದು. ಮಾಸ್ಕ್‌ ಹಿಂದಿನ ಮುಖಕಾಣದೇ ಹೋದರೂ, ವ್ಯಕ್ತಿಯ ಮುಖ ಹೇಗಿದೆಯೋ ಹಾಗೆಯೇ ಕಾಣುತ್ತದೆ. ಈ ಮುಖವಾಡವನ್ನು ಹೇಗೆ ಸಿದ್ಧಪಡಿಸಲಾಗುತ್ತದೆ ಎಂಬುದನ್ನು ಬಿನೇಶ್ ಹೀಗೆ ವಿವರಿಸುತ್ತಾರೆ.

‘ಮೊದಲು ನಾವು ವ್ಯಕ್ತಿಯೊಬ್ಬರ ಹೈ ರೆಸಲ್ಯೂಶನ್ ಫೋಟೊವನ್ನು ಕ್ಯಾಮೆರಾದಲ್ಲಿ ತೆಗೆದುಕೊಳ್ಳುತ್ತೇವೆ. ಚಿತ್ರವನ್ನು ನಿರ್ದಿಷ್ಟ ಕಾಗದದ ಮೇಲೆ ಪ್ರಿಂಟ್‌ ಹಾಕುತ್ತೇವೆ. ಅದನ್ನು ಕತ್ತರಿಸಿಕೊಂಡು, ಹೆಚ್ಚಿನ ತಾಪಮಾನದೊಂದಿಗೆ ಬಟ್ಟೆಯ ಮಾಸ್ಕ್‌ ಮೇಲೆ ಮರುಮುದ್ರೆ ಹಾಕುತ್ತೇವೆ. ಮುಖಕ್ಕೆ ಸರಿಯಾಗಿ ಹೊಂದಲಿ ಎಂಬ ಕಾರಣಕ್ಕೆ ಕೆಲವೊಮ್ಮೆ ಗಲ್ಲದ ಸ್ಪಷ್ಟ ಅಳತೆಯನ್ನು ತೆಗೆದುಕೊಳ್ಳುತ್ತೇವೆ. ಅದರಂತೇ ಮಾಸ್ಕ್‌ ಮತ್ತು ಅದಕ್ಕೆ ಅವರ ಚಿತ್ರವನ್ನು ಹೊಂದಿಸುತ್ತೇವೆ. ಈ ಮುಖಗವಸು ಸಿದ್ಧಪಡಿಸಲು ಸುಮಾರು 20 ನಿಮಿಷ ಸಮಯ ಬೇಕಾಗುತ್ತದೆ,’ ಎಂದು ಬಿನೇಶ್‌ ತಿಳಿಸಿದ್ದಾರೆ.

‘ಕಳೆದ ಎರಡು ದಿನಗಳಲ್ಲಿ ನಾನು 1000 ಮಾಸ್ಕ್‌ಗಳನ್ನು ತಯಾರಿಸಿದ್ದೇನೆ. ಜೊತೆಗೆ, ಇನ್ನೂ 5000ಕ್ಕೆ ಆರ್ಡರ್‌ ಪಡೆದುಕೊಂಡಿದ್ದೇನೆ. ಜನರು ಭಾರಿ ಸಂಖ್ಯೆಯಲ್ಲಿ ಇದರ ಬಗ್ಗೆ ನನ್ನಲ್ಲಿ ವಿವರ ಪಡೆದುಕೊಳ್ಳುತ್ತಿದ್ದಾರೆ. ಬಹುಶಃ ಈ ಮೊದಲು ಯಾರೂ ಇಂಥ ಮಾಸ್ಕ್‌ಗಳನ್ನು ಮಾಡಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಹೆಚ್ಚಿನ ಆರ್ಡರ್‌ಗಳು ಬಂದರೂ ಸುರಕ್ಷತೆಗೆ ಧಕ್ಕೆಯಾಗದಂತೆ ನಾವು ಮಾಸ್ಕ್‌ಗಳನ್ನು ತಯಾರಿಸುತ್ತೇವೆ’ಎಂದು ಬಿನೇಶ್‌ ಹೇಳಿದ್ದಾರೆ.

ಬಿನೇಶ್‌ 10 ವರ್ಷಗಳಿಗಿಂತೂ ಹೆಚ್ಚು ಕಾಲದಿಂದ ಕೊಟ್ಟಾಯಂನಲ್ಲಿ ಫೋಟೊಗ್ರಫಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT