ತಿರುವನಂತಪುರ: ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ ಪಡೆಯಬೇಕೆಂಬ ಬಯಕೆಯಿಂದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ತಿದ್ದಿದ ಆರೋಪದ ಮೇಲೆ ಕೇರಳದ ಕೋಯಿಕ್ಕೊಡ್‌ನಲ್ಲಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
‘ಸದ್ಯ ಪ್ರಕರಣದ ತನಿಖೆಯನ್ನು ಕೇರಳದ ಶಿಕ್ಷಣ ಇಲಾಖೆಯೇ ನಡೆಸುತ್ತಿದ್ದು, ಅಗತ್ಯವಿದ್ದರೆ ತನಿಖೆಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗುವುದು’ ಎಂದು ಕೇರಳದ ಶಿಕ್ಷಣ ಸಚಿವ ಸಿ. ರವೀಂದ್ರನಾಥ್ ಹೇಳಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಪಡೆಯಬೇಕು ಎಂಬ ಕಾರಣಕ್ಕೆ ಕೋಯಿಕ್ಕೋಡ್ ಸಮೀಪದ ಮೊಕ್ಕಂನಲ್ಲಿರುವ ನೀಲೇಶ್ವರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 36 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಶಿಕ್ಷಕರೇ ತಿದ್ದಿದ್ದಾರೆ ಎನ್ನಲಾಗಿದೆ.
ಇದೇ ಶಾಲೆಯ ಕಂಪ್ಯೂಟರ್ ಶಿಕ್ಷಕ ಹಾಗೂ ಪರೀಕ್ಷೆಯ ಕೇಂದ್ರದ ಉಪಮುಖ್ಯಸ್ಥ ನಿಶಾದ್ ವಿ.ಮೊಹಮ್ಮದ್ ಅವರು ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥೆ ಕೆ.ರಜಿಯಾ ಹಾಗೂ ಇನ್ನೊಂದು ಶಾಲೆಯ ಶಿಕ್ಷಕ ಹಾಗೂ ಪರೀಕ್ಷಾ ಕೇಂದ್ರದ ಉಪಮುಖ್ಯಸ್ಥ ಫೈಜಲ್ ಅವರೊಡಗೂಡಿ ಉತ್ತರ ಪತ್ರಿಕೆ ತಿದ್ದಿದ್ದಾರೆ. ಈ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.