ಕೆಪಿಎಸ್‌ಸಿ ಮಧ್ಯಂತರ ಅರ್ಜಿ ವಜಾ

ಶುಕ್ರವಾರ, ಜೂಲೈ 19, 2019
28 °C

ಕೆಪಿಎಸ್‌ಸಿ ಮಧ್ಯಂತರ ಅರ್ಜಿ ವಜಾ

Published:
Updated:

ಬೆಂಗಳೂರು: ‘1998, 1999 ಮತ್ತು 2004ನೇ ಸಾಲಿನ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ 2016ರ ಜೂನ್‌ 21ರಂದು ವಿಭಾಗೀಯ ನ್ಯಾಯಪೀಠ ನೀಡಿರುವ ಆದೇಶ ಪಾಲನೆ ವಿಷಯದಲ್ಲಿ ಕೆಲವೊಂದು ಅಂಶಗಳ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಕೋರಿ ಕೆಪಿಎಸ್‌ಸಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

‘2016ರ ಜೂನ್‌ 21ರಂದು ಹೈಕೋರ್ಟ್‌ ನೀಡಿರುವ ತೀರ್ಪಿನ ಜಾರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಖಲೀಲ್‌ ಮೊಹಮದ್‌ ಸೇರಿದಂತೆ 25 ಜನರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ವಿಭಾಗೀಯ ವಿಶೇಷ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ‘ಸುಮ್ಮನೇ ಕೋರ್ಟ್‌ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನೀವು (ಕೆಪಿಎಸ್‌ಸಿ) ನೆಪಮಾತ್ರಕ್ಕೆ ಈ ಅರ್ಜಿ ಸಲ್ಲಿಸಿದ್ದೀರಿ. ಈ ಪ್ರಕರಣದ ವಿಚಾರಣೆಗೆಂದೇ ವಿಶೇಷ ನ್ಯಾಯಪೀಠ ರಚನೆಯಾಗಿದೆ. ನಿಮಗೆ ಅನುಕೂಲ ಆದೇಶ ದೊರಕಲಿಲ್ಲ ಎಂದಾಕ್ಷಣ ಮಧ್ಯಂತರ ಅರ್ಜಿಗಳನ್ನು ಸಲ್ಲಿಸುತ್ತಾ ವಿಳಂಬದ ದಾರಿ ಹುಡುಕುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ಕೆಪಿಎಸ್‌ಸಿಗೆ ಕೋರ್ಟ್‌ ವೆಚ್ಚ ವಿಧಿಸಿ ಆದೇಶಿಸಿತು. ಆದರೆ, ವೆಚ್ಚದ ಮೊತ್ತವನ್ನು ನಮೂದಿಸಿಲ್ಲ.

ಅರ್ಜಿಯಲ್ಲಿ ಏನಿತ್ತು?: ‘91 ಜನರನ್ನು ಮೂರನೇ ಮೌಲ್ಯಮಾಪನದ ಅಂಕಗಳ ಅನುಸಾರ ಸೇರ್ಪಡೆ ಮಾಡುವುದರಿಂದ ಸಂಪೂರ್ಣ ಪಟ್ಟಿಯೇ ಬದಲಾಗುತ್ತದೆ. ಇನ್ನೂ ಹಲವರ ಸ್ಥಾನಪಲ್ಲಟವಾಗಲಿದೆ ಮತ್ತೂ ಕೆಲವರು ಪಟ್ಟಿಯಿಂದ ಹೊರಗುಳಿಯುತ್ತಾರೆ. ಇದನ್ನು ಬಗೆಹರಿಸುವ ಮಾರ್ಗೋಪಾಯಗಳ ಬಗ್ಗೆ ನ್ಯಾಯಪೀಠ ನಿರ್ದೇಶಿಸಬೇಕು’ ಎಂದು ಮಧ್ಯಂತರ ಅರ್ಜಿಯಲ್ಲಿ ಕೋರಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !