ಶುಕ್ರವಾರ, ಜುಲೈ 30, 2021
28 °C
ಚೀನಾ ಕಡೆಯೂ ಸಾವು–ನೋವು

ಗಡಿಯಲ್ಲಿ ಚೀನಾ ಅಟ್ಟಹಾಸ: ಕರ್ನಲ್‌ ಸೇರಿ 20 ಯೋಧರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿನ ಸಂಘರ್ಷದಲ್ಲಿ 45 ವರ್ಷಗಳಲ್ಲಿ ಇದೇ ಮೊದಲಿಗೆ ರಕ್ತ ಹರಿದಿದೆ. ಭಾರತೀಯ ಸೇನೆಯ ತುಕಡಿಯೊಂದರ ಕಮಾಂಡಿಂಗ್‌ ಅಧಿಕಾರಿ ಸೇರಿ ಇಪ್ಪತ್ತು ಯೋಧರು, ಚೀನಾದ ಸೈನಿಕರ ಜತೆ ಸೋಮವಾರ ರಾತ್ರಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ, ಗಡಿಯಲ್ಲಿನ ಅತ್ಯಂತ ನಾಜೂಕು ಶಾಂತಿ ಪರಿಸ್ಥಿತಿಗೆ ಭಂಗ ಬಂದಿದೆ. 

ಮೃತರಲ್ಲಿ 16 ಬಿಹಾರ ರೆಜಿಮೆಂಟ್‌ನ ಕರ್ನಲ್‌ ಬಿ. ಸಂತೋಷ್‌ ಬಾಬು, ಯೋಧರಾದ ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಸೇರಿದ್ದಾರೆ. ಚೀನಾದ ಕಡೆಯಲ್ಲಿಯೂ ಸಾವು ನೋವು ಸಂಭವಿಸಿದೆ. ಆದರೆ, ವಿವರಗಳು ಲಭ್ಯವಿಲ್ಲ. ಭಾರತದ ಸೇನೆಗೆ ಆಗಿರುವ ಹಾನಿಗೆ ಸಮನಾದ ಹಾನಿ ಅಲ್ಲಿಯೂ ಆಗಿದೆ ಎನ್ನಲಾಗಿದೆ.

ಎರಡೂ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳು ಉದ್ವಿಗ್ನ ಪರಿಸ್ಥಿತಿ ಶಮನಕ್ಕಾಗಿ ಮಾತುಕತೆ ಆರಂಭಿಸಿದ್ದಾರೆ ಎಂದು ಸೇನೆಯ ಹೇಳಿಕೆಯು ತಿಳಿಸಿದೆ.

ದಶಕಗಳಿಂದ, ಗಾಲ್ವನ್‌ ಕಣಿವೆಯ ವಿಚಾರದಲ್ಲಿ ಯಾವುದೇ ವಿವಾದ ಇರಲಿಲ್ಲ. ಭಾರತದ ಭೂಪ್ರದೇಶದ ಒಳಗೇ ಇದು ಇದೆ ಮತ್ತು ಈ ಬಗ್ಗೆ ಚೀನಾ ಯಾವತ್ತೂ ತಕರಾರು ಎತ್ತಿದ್ದಿಲ್ಲ.

45 ವರ್ಷಗಳ ಬಳಿಕ ಭಾರತ–ಚೀನಾ ಗಡಿಯಲ್ಲಿ ಹಿಂಸೆ ನಡೆದಿದೆ. 1975ರಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನಾ ಸೈನಿಕರು ಭಾರತದ ನಾಲ್ವರು ಯೋಧರನ್ನು ಕೊಂದಿದ್ದರು.

ಮುಖಾಮುಖಿಯಲ್ಲಿ ಗುಂಡಿನಹಾರಾಟ ನಡೆದಿಲ್ಲ. ಕೈಕೈ ಮಿಲಾಯಿಸುವಿಕೆಯೇ ಸಾವು ನೋವಿಗೆ ಕಾರಣವಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 9ರಂದು ಕೂಡ ಎರಡೂ ಸೇನೆಯ ಯೋಧರ ನಡುವೆ ಸಂಘರ್ಷ ನಡೆದಿತ್ತು. ಸಿಕ್ಕಿಂನ ನಕು–ಲಾ ಎಂಬಲ್ಲಿ ನಡೆದ ಮುಖಾಮುಖಿಯಲ್ಲಿ ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದರು. ಈ ಮುಖಾಮುಖಿ ಕೂಡ ಕೈ ಕೈ ಮಿಲಾಯಿಸುವಿಕೆ ಮತ್ತು ಕಲ್ಲೆಸೆತಕ್ಕೆ ಸೀಮಿತಗೊಂಡಿತ್ತು. 

ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆಯಿಂದಾಗಿ ಸಕಾರಾತ್ಮಕ ಸಹಮತಕ್ಕೆ ಬರುವುದು ಸಾಧ್ಯವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಕಳೆದ ವಾರ ಹೇಳಿತ್ತು. ಗಡಿಯಲ್ಲಿನ ಸಮಸ್ಯೆ ಪರಿಹಾರ ಮತ್ತು ಶಾಂತಿ ಸ್ಥಾಪನೆಗೆ ಮಾತುಕತೆ ಮುಂದುವರಿಯಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯವೂ ತಿಳಿಸಿತ್ತು. ಕೆಲವು ಭಾಗಗಳಿಂದ ಸೈನಿಕರು ಹಿಂದಕ್ಕೆ ಹೋಗುವ ಪ್ರಕ್ರಿಯೆ ಆರಂಭವಾಗಿದೆ ಎಂಬ ವರದಿಗಳೂ ಬಂದಿದ್ದವು. 

ಆದರೆ, ಗಾಲ್ವನ್‌ ಕಣಿವೆ ಮತ್ತು ಪಾಂಗಾಂಗ್‌ ತ್ಸೊ ಸರೋವರದ ಉತ್ತರ ದಂಡೆಯಲ್ಲಿ ಚೀನಾದ ಸೈನಿಕರು ಇನ್ನೂ ಬೀಡು ಬಿಟ್ಟಿದ್ದಾರೆ ಎಂದು ಭಾರತದ ಮೂಲಗಳು ಮತ್ತು ಮಾಧ್ಯಮ ವರದಿಗಳು ಹೇಳಿವೆ.

ಗಡಿ– ಭಿನ್ನ ನಿಲುವು: ಗಡಿಯ ವಿಚಾರದಲ್ಲಿ ಭಾರತ ಮತ್ತು ಚೀನಾದ ನಡುವೆ ಸಹಮತ ಇಲ್ಲ. ಎಷ್ಟು ಉದ್ದದ ಗಡಿ ಭಾಗ ಇದೆ ಎಂಬುದರಲ್ಲಿಯೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. 

3,500 ಕಿ.ಮೀ. ಉದ್ದದ ಗಡಿ ಇದೆ ಎಂಬುದು ಭಾರತದ ಪ್ರತಿಪಾದನೆ. ಚೀನಾದ ಬಳಿಯಲ್ಲಿ ಇಂತಹ ನಿಖರ ಸಂಖ್ಯೆ ಇಲ್ಲ. ಆದರೆ, ಸುಮಾರು 2,000 ಕಿ.ಮೀ. ಗಡಿ ಇದೆ ಎಂಬುದು ಚೀನಾದ ಲೆಕ್ಕಾಚಾರ. ಜಮ್ಮು, ಕಾಶ್ಮೀರ, ಲಡಾಖ್‌ ಮತ್ತು ಇತರ ಭಾಗಗಳಲ್ಲಿ ಚೀನಾವು ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿರುವ ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡರೆ ಗಡಿಯ ಉದ್ದ ಸುಮಾರು 2,000 ಕಿ.ಮೀ. ಎಂದು  ಆ ದೇಶ ಹೇಳುತ್ತಿದೆ.

ಪ್ರಧಾನಿಗೆ ಮಾಹಿತಿ  

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಘರ್ಷ ಮತ್ತು ಪೂರ್ವ ಲಡಾಖ್‌ನ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ್ದಾರೆ. ಅದಕ್ಕೂ ಮೊದಲು, ರಾಜನಾಥ್‌ ಅವರು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರೊಂದಿಗೆ ಚರ್ಚೆ ನಡೆಸಿದ್ದರು.

ಐದು ವಾರಗಳಿಂದ ಬಿಕ್ಕಟ್ಟು

ಗಾಲ್ವನ್‌ ಕಣಿವೆ ಮತ್ತು ಪೂರ್ವ ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಎರಡೂ ದೇಶಗಳ ಸೈನಿಕರ ಮುಖಾಮುಖಿ ಐದು ವಾರಗಳಿಂದ ಮುಂದುವರಿದಿದೆ. ಪಾಂಗಾಂಗ್‌ ತ್ಸೊ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಚೀನಾದ ಸೇನೆಯು ಭಾರತದ ಗಡಿಯನ್ನು ಉಲ್ಲಂಘಿಸಿವೆ. ಭಾರತ ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದೆ. 

ಗಾಲ್ವನ್‌ ಕಣಿವೆ, ಡೆಮ್‌ಚಾಕ್‌ ಮತ್ತು ದೌಲತ್‌ ಬೇಗ್‌ ಓಲ್ಡಿ ಪ್ರದೇಶಗಳಲ್ಲಿ ಸಂಘರ್ಷ ಇದೆ. 

ಚೀನಾ ಯೋಧರು ಕಳೆದ ತಿಂಗಳು ಅತಿಕ್ರಮಣ ನಡೆಸಿದಾಗಲೇ ಅದನ್ನು ಗಟ್ಟಿಯಾಗಿ ಎದುರಿಸಲು ಭಾರತದ ಸೇನಾ ನಾಯಕತ್ವವು ನಿರ್ಧರಿಸಿತ್ತು. ಹಾಗಾಗಿ, ವಿವಾದಾತ್ಮಕವಾದ ಎಲ್ಲ ಪ್ರದೇಶಗಳಲ್ಲಿಯೂ ಯೋಧರ ನಿಯೋಜನೆಯನ್ನು ಹೆಚ್ಚಿಸಿತ್ತು. 

ಚೀನಾ ಕೂಡ ಎಲ್‌ಎಸಿಯ ಸಮೀಪದಲ್ಲಿ ಸೇನೆ, ಫಿರಂಗಿ, ಸಶಸ್ತ್ರ ವಾಹನಗಳು ಮತ್ತು ಭಾರಿ ಸಲಕರಣೆಗಳನ್ನು ಜಮಾವಣೆ ಮಾಡಿದೆ.

ಭಾರತದಿಂದ ಉಲ್ಲಂಘನೆ: ಚೀನಾ ಆರೋಪ

ಚೀನಾ ಮತ್ತು ಭಾರತದ ಗಡಿ ರಕ್ಷಣಾ ಪಡೆಗಳ ನಡುವೆ ಗಾಲ್ವನ್‌ ಕಣಿವೆಯಲ್ಲಿ ಸೋಮವಾರ ಸಂಘರ್ಷ ಏರ್ಪಟ್ಟಿದೆ. ಭಾರತದ ಪಡೆಯು ಅಕ್ರಮವಾಗಿ ಗಡಿಯನ್ನು ಉಲ್ಲಂಘಿಸಿದೆ ಮತ್ತು ಚೀನಾದ ಸೈನಿಕರ ಮೇಲೆ ಪ್ರಚೋದನಾತ್ಮಕ ದಾಳಿ ನಡೆಸಿದೆ. ಈ ಬಗ್ಗೆ ಬಲವಾದ ಪ್ರತಿಭಟನೆ ದಾಖಲಿಸಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿದೆ.

ಗಡಿ ಬಿಕ್ಕಟ್ಟು ಶಮನಕ್ಕಾಗಿ ಭಾರತ ಮತ್ತು ಚೀನಾದ ನಡುವೆ ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆ ನಡೆಯುತ್ತಿದೆ. ಅದರ ನಡುವೆಯೇ, ಭಾರತದ ಯೋಧರು ಗಡಿಯನ್ನು ಉಲ್ಲಂಘಿಸಿ, ಚೀನಾದ ಭೂಪ್ರದೇಶಕ್ಕೆ ಪ್ರವೇಶಿಸಿದ್ದಾರೆ. ಜೂನ್‌ 6ರಂದು ನಡೆದ ಕಮಾಂಡರ್‌ ಮಟ್ಟದ ಮಾತುಕತೆಯಲ್ಲಿ ಒಪ್ಪಿತವಾದ ವಿಚಾರಗಳನ್ನು ಉಲ್ಲಂಘಿಸಲಾಗಿದೆ. ಇಂತಹ ಉಲ್ಲಂಘನೆ ಎರಡು ಬಾರಿ ನಡೆದಿದೆ. ಚೀನಾದ ಯೋಧರ ಮೆಲೆ ನಡೆಸಿದ ಹಲ್ಲೆಯು ಗಂಭೀರವಾದ ಸಂಘರ್ಷಕ್ಕೆ ಕಾರಣವಾಯಿತು ಎಂದು ಚೀನಾದ ವಿದೇಶಾಂಗ ವಕ್ತಾರ ಜಾವೊ ಲಿಜಿನ್‌ ಹೇಳಿದ್ದಾರೆ. 

ಎರಡೂ ದೇಶಗಳ ನಡುವೆ ಉಂಟಾಗಿರುವ ಸಹಮತಕ್ಕೆ ಅನುಗುಣವಾಗಿ ಭಾರತದ ಮುನ್ನೆಲೆ ಯೋಧರು ನಡೆದುಕೊಳ್ಳಬೇಕು. ಗಡಿ ರೇಖೆಯನ್ನು ದಾಟಬಾರದು. ಏಕಪಕ್ಷೀಯವಾಗಿ ಕೈಗೊಳ್ಳುವ ಯಾವುದೇ ಕ್ರಮ ಗಡಿ ಪರಿಸ್ಥಿತಿಯನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸುತ್ತದೆ ಎಂದು ಜಾವೊ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು