ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸಾದ ಪಾಲಕರ ಶೋಷಣೆ: ಹೆಚ್ಚಾಗಲಿದೆ ಜೈಲು ಶಿಕ್ಷೆ ಅವಧಿ

Last Updated 30 ಸೆಪ್ಟೆಂಬರ್ 2019, 4:55 IST
ಅಕ್ಷರ ಗಾತ್ರ

ನವದೆಹಲಿ: ವಯಸ್ಸಾದ ಪಾಲಕರ ಶೋಷಣೆ ಮಾಡುವ ಅಥವಾ ತೊರೆಯುವ ಮಕ್ಕಳಿಗೆ ವಿಧಿಸುವ ಜೈಲು ಶಿಕ್ಷೆ ಅವಧಿಯನ್ನು ಹೆಚ್ಚಿಸುವ ಸಲುವಾಗಿ ‘ಪಾಲಕರ ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ–2007’ಕ್ಕೆ ತಿದ್ದುಪಡಿ ತರಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮುಂದಾಗಿದೆ.

‘ಈಗಿರುವ ಕಾನೂನಿನ ಪ್ರಕಾರ, ತಪ್ಪಿತಸ್ಥರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತಿದ್ದು, ಈ ಅವಧಿಯನ್ನು ಆರು ತಿಂಗಳಿಗೆ ಹೆಚ್ಚಿಸುವ ಪ್ರಸ್ತಾವ ಇದೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ಕಾನೂನಿಗೆ ಮತ್ತಷ್ಟು ಬಲ ತುಂಬುವುದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮೊದಲ ಆದ್ಯತೆಯಾಗಿದೆ’ ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಸದ್ಯ ಈ ಕಾನೂನು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂಬುದನ್ನು ಮೂರನೇ ಸ್ವತಂತ್ರ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡಿಸುವಂತೆ ಪ್ರಧಾನ ಮಂತ್ರಿ ಕಚೇರಿ ಸೂಚಿಸಿದೆ. ಅದರ ಅನುಸಾರ ಹಲವಾರು ತಿದ್ದುಪಡಿಗಳನ್ನು ಒಳಗೊಂಡಿರುವ ಕರಡು ಮಸೂದೆಯನ್ನು ಸಚಿವಾಲಯ ಪ್ರಧಾನಿ ಕಚೇರಿಗೆ ಕಳುಹಿಸಿದೆ.

ಈಗಿರುವ ಕಾನೂನಿನಲ್ಲಿ ‘ಮಕ್ಕಳು’ ಎಂದರೆ, ಪುತ್ರರು, ಪುತ್ರಿಯರು ಹಾಗೂ ಮೊಮ್ಮಕ್ಕಳು ಎಂದು ವ್ಯಾಖ್ಯಾನಿಸಲಾಗಿದೆ. ಉದ್ದೇಶಿತ ತಿದ್ದುಪಡಿಯಲ್ಲಿ ಇದರ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

‘ದತ್ತು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕಾನೂನು ರೀತ್ಯ ಪೋಷಕರನ್ನು ಹೊಂದಿರುವ ಅಪ್ರಾಪ್ತ ವಯಸ್ಕರನ್ನು ಸಹ ಮಕ್ಕಳು ಎಂದು ಪರಿಗಣಿಸಲು ಈ ಕರಡು ಮಸೂದೆಯಲ್ಲಿ ವಿವರಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಸದ್ಯ, ಜೀವನಾಂಶವಾಗಿ ಮಾಸಿಕ ಗರಿಷ್ಠ ₹ 10 ಸಾವಿರ ನೀಡಲು ಅವಕಾಶ ಇದೆ. ಈ ಮಿತಿಯನ್ನು ರದ್ದು ಮಾಡಿ, ಅಗತ್ಯಕ್ಕೆ ತಕ್ಕಂತೆ ಈ ಮೊತ್ತವನ್ನು ನಿಗದಿ ಮಾಡಲು ಸಹ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದೂ ಹೇಳಿದ್ದಾರೆ.

ಹಿರಿಯ ನಾಗರಿಕರ ಪೋಷಿಸುವ ಕೇಂದ್ರಗಳು, ವಿವಿಧ ಸೇವೆ ಒದಗಿಸುವ ‘ಡೇಕೇರ್‌ ಸೆಂಟರ್‌’ಗಳ ಗುಣಮಟ್ಟಕ್ಕೆ ಸಂಬಂಧಿಸಿದ ಮಾನದಂಡವನ್ನು ಸಹ ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT