ಶುಕ್ರವಾರ, ಮೇ 20, 2022
19 °C

ಪಕ್ಷಗಳಲ್ಲಿ ಭೀತಿ ಹುಟ್ಟಿಸಿದ ನಿರ್ಭೀತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಚುನಾವಣೆಯ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಅಧಿಕಾರಿಗಳು ನಿಷ್ಕ್ರಿಯರಾಗಿದ್ದರು; ರಾಜಕೀಯ ಪಕ್ಷಗಳಿಗೆ ಇಂತಹ ನಿಯಮಗಳ ಬಗ್ಗೆ ಇದ್ದದ್ದು ಅಸಡ್ಡೆ ಮಾತ್ರ. ಆದರೆ, ಅದು 1990ರಲ್ಲಿ ಟಿ.ಎನ್‌. ಶೇಷನ್‌ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರಕ್ಕೆ ಬರುವವರೆಗೆ ಮಾತ್ರ. 1996ರವರೆಗೆ ಆರು ವರ್ಷ ಅವರು ಆ ಹುದ್ದೆಯಲ್ಲಿದ್ದರು. ಆ ಅವಧಿಯಲ್ಲಿ ಭಾರತದ ಚುನಾವಣೆ ಹೊಸ ಸ್ವರೂಪವನ್ನೇ ಪಡೆದುಕೊಂಡಿತು. 

ತಿರುನೆಲ್ಲಿ ನಾರಾಯಣ ಅಯ್ಯರ್‌ ಶೇಷನ್‌, 1932ರ ಡಿಸೆಂಬರ್‌ 15ರಂದು ಕೇರಳದ ಪಾಲಕ್ಕಾಡ್‌ ಜಿಲ್ಲೆಯ ತಿರುನೆಲ್ಲಿಯಲ್ಲಿ ಜನಿಸಿದವರು. ತಮ್ಮ 86ನೇ ವಯಸ್ಸಿನಲ್ಲಿ, ಭಾನುವಾರ ರಾತ್ರಿ ಚೆನ್ನೈಯಲ್ಲಿ ನಿಧನರಾದರು.

ರಾಜಕೀಯ ಪಕ್ಷಗಳ ತೀವ್ರ ಅತೃಪ್ತಿಯ ನಡುವೆಯೂ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದರು. ಅವರು ಅಧಿಕಾರಕ್ಕೆ ಬರುವವರೆಗೆ,  ರಾಜಕೀಯ ಪಕ್ಷಗಳು ಮತದಾರರನ್ನು ಮತಗಟ್ಟೆಗೆ ಕರೆತರುವುದು ಸಾಮಾನ್ಯವಾಗಿತ್ತು. ಆದರೆ, ಮಾದರಿ ನೀತಿ ಸಂಹಿತೆ ಎಂಬುದು ಉಲ್ಲಂಘಿಸುವುದಕ್ಕಾಗಿ ಇರುವುದಲ್ಲ, ಅದನ್ನು ಚಾಚೂತಪ್ಪದೆ ಪಾಲಿಸಬೇಕು ಎಂಬುದನ್ನು ಅಧಿಕಾರಯುತವಾಗಿ, ಗಟ್ಟಿಧ್ವನಿಯಲ್ಲಿ ಶೇಷನ್‌ ಹೇಳಿದರು. ನಕಲಿ ಮತದಾನವನ್ನು ಬಹುಮಟ್ಟಿಗೆ ತಡೆದರು. 

10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅವರು ಬರುವವರೆಗೆ ಇಂತಹ ಸುಧಾರಣೆಗಳನ್ನು ಯಾರೂ ಕೇಳಿಯೇ ಇರಲಿಲ್ಲ. 

ಚುನಾವಣಾ ವ್ಯವಸ್ಥೆಯನ್ನು ಸರಿಪಡಿಸಬೇಕು, ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು ಎಂಬುದು ಅವರ ಮನದಾಳದ ತುಡಿತದಂತೆ ಅನಿಸುತ್ತಿತ್ತು. ಸುಧಾರಣೆಯ ಬಗ್ಗೆ ಅವರಲ್ಲಿದ್ದ ಕೆಚ್ಚಿನಿಂದಾಗಿ ರಾಜಕಾರಣಿಗಳ ಆಕ್ರೋಶಕ್ಕೂ ಅವರು ಪಾತ್ರರಾಗಿದ್ದರು. ‘ಶೇಷನ್‌ ಅಹಂಕಾರಿ’ ಎಂದು ಎಐಎಡಿಎಂಕೆ ಮುಖ್ಯಸ್ಥೆಯಾಗಿದ್ದ ಜಯಲಲಿತಾ ಅವರು ಒಮ್ಮೆ ಹೇಳಿದ್ದರು. 

ಆದರೆ, ಶೇಷನ್‌ ಕೆಲಸಕ್ಕೆ ಅಪಾರವಾದ ಮೆಚ್ಚುಗೆಯೂ ವ್ಯಕ್ತವಾಗಿದೆ. ಸರ್ಕಾರಿ ಅಧಿಕಾರಿಯಾಗಿ ಸಲ್ಲಿಸಿದ ಅಸಾಧಾರಣ ಸೇವೆಗೆ ಅವರಿಗೆ 1996ರಲ್ಲಿ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿಯೂ ಬಂತು. 

‘ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಚುನಾವಣೆಗಳಲ್ಲಿ ಶಿಸ್ತು, ನ್ಯಾಯಸಮ್ಮತತೆ ತರಲು ನಡೆಸಿದ ದೃಢ ಪ್ರಯತ್ನಕ್ಕಾಗಿ ಮ್ಯಾಗ್ಸೇಸೆ ಪ್ರಶಸ್ತಿಗೆ ಶೇಷನ್‌ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಪ್ರಶಸ್ತಿಪತ್ರವು ಹೇಳಿದೆ.

ಸ್ಥಳೀಯ ಗೂಂಡಾಗಳನ್ನು ಮಟ್ಟ ಹಾಕಲು, ಮತಪೆಟ್ಟಿಗೆ ಹೊತ್ತೊಯ್ಯುವವರನ್ನು ತಡೆಯಲು ಕೇಂದ್ರದ ಪೊಲೀಸ್‌ ಪಡೆಯನ್ನು ಬಳಸಿದ ಶೇಷನ್‌ ಕ್ರಮವನ್ನೂ ಮ್ಯಾಗ್ಸೇಸೆ ಪ್ರಶಸ್ತಿ ಸಮಿತಿಯು ಉಲ್ಲೇಖಿಸಿತ್ತು. 

1955ರ ತಂಡದ ಐಎಎಸ್‌ ಅಧಿಕಾರಿಯಾಗಿದ್ದ ಅವರು, ಹಲವು ಮಹತ್ವದ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ರಕ್ಷಣಾ ಕಾರ್ಯದರ್ಶಿ ಮತ್ತು ಕೇಂದ್ರ ಸಂಪುಟ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗಳನ್ನೂ ನಿಭಾಯಿಸಿದ್ದರು. ಆದರೆ, ಮುಖ್ಯ ಚುನಾವಣಾ
ಆಯುಕ್ತರಾದ ಮೇಲಷ್ಟೇ ಮನೆಮಾತಾದರು. 

ನೇರ–ನಿಷ್ಠುರ ನಡವಳಿಕೆ ಅವರ ಹೆಗ್ಗುರುತು. ನಾಮಪತ್ರ ಪರಿಶೀಲನೆಯಿಂದ ತೊಡಗಿ, ಮತ ಎಣಿಕೆಯವರೆಗೆ ಎಲ್ಲವೂ ನಿಯಮದಂತೆಯೇ ನಡೆಯುವುದಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಅವರು ನಡೆಸುತ್ತಿದ್ದರು. 

ನ್ಯಾಯಯುತವಾಗಿ ಚುನಾವಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಚುನಾವಣಾ ವೀಕ್ಷಕರ ನೇಮಕವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಭದ್ರತಾ ಪಡೆಗಳು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿ ಭದ್ರತಾ ಕೆಲಸದಲ್ಲಿ ತೊಡಗಿಕೊಳ್ಳುವುದು ಸುಲಭವಾಗುವುದಕ್ಕೆ ಹಂತ ಹಂತವಾಗಿ ಮತದಾನ ನಡೆಸುವುದನ್ನೂ ಚೆನ್ನಾಗಿ ಬಳಸಿಕೊಂಡರು. 

ಚುನಾವಣಾ ಪ್ರಕ್ರಿಯೆಗೆ ಹಿಂಸಾಚಾರದಿಂದ ಧಕ್ಕೆಯಾಗಬಾರದು ಎಂಬುದಕ್ಕಾಗಿ 1991ರಲ್ಲಿ ಪಂಜಾಬ್‌ನ ಚುನಾವಣೆಯನ್ನು ರದ್ದು ಮಾಡುವ ಎದೆಗಾರಿಕೆಯನ್ನೂ ತೋರಿದ್ದರು. ಅವರ ದಿಟ್ಟತನವೂ ಶ್ಲಾಘನೆಗೆ ಒಳಗಾಗಿದೆ. ‘ಆ  ವ್ಯಕ್ತಿ ನಮ್ಮ ಪ್ರಜಾಪ್ರಭುತ್ವದ ಒಂದು ಆಧಾರಸ್ತಂಭವಾಗಿದ್ದರು’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಹೇಳಿದ್ದಾರೆ. 

ಚುನಾವಣಾ ಆಯೋಗವು ಮೂವರು ಆಯುಕ್ತರ ಸಮಿತಿಯಾಗುವಂತೆ 1993ರಲ್ಲಿ ಸರ್ಕಾರ ನಿರ್ಧಾರ ಕೈಗೊಂಡಿತು. ಆಯೋಗಕ್ಕೆ ಇನ್ನಿಬ್ಬರು ಆಯುಕ್ತರನ್ನು ನೇಮಿಸಲಾಯಿತು. ಶೇಷನ್‌ ಅವರನ್ನು ಕಟ್ಟಿಹಾಕುವುದೇ ಇದರ ಉದ್ದೇಶ ಎಂದು ಆಗ ವಿಶ್ಲೇಷಿಸಲಾಗಿತ್ತು. 

ನಿವೃತ್ತಿಯ ನಂತರ, ಮನೆಯಂಗಳದ ಕೈತೋಟವನ್ನು ನೋಡಿಕೊಳ್ಳುತ್ತೇನೆಯೇ ಹೊರತು ಸರ್ಕಾರದಲ್ಲಿ ಯಾವುದೇ ಹುದ್ದೆಯನ್ನು ಎದುರು ನೋಡುತ್ತಿಲ್ಲ ಎಂದು ಶೇಷನ್‌ ಒಮ್ಮೆ ಹೇಳಿದ್ದರು. ನಿವೃತ್ತಿಯ ನಂತರ ಅವರು ಸರ್ಕಾರದ ಯಾವುದೇ ಹುದ್ದೆಗೆ ಹೋಗಲಿಲ್ಲ.‌

ಆದರೆ, ನಿವೃತ್ತಿಯ ನಂತರದ ದಿನಗಳಲ್ಲಿಯೂ ಬಿಡುವಿಲ್ಲದಷ್ಟು ಚಟುವಟಿಕೆಗಳು ಅವರಿಗಾಗಿ ಕಾದಿದ್ದವು. 1997ರಲ್ಲಿ ಕೆ.ಆರ್‌.ನಾರಾಯಣನ್‌ ವಿರುದ್ಧ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದರು. 1999ರ ಲೋಕಸಭಾ ಚುನಾವಣೆಯಲ್ಲಿ, ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಅಡ್ವಾಣಿ ವಿರುದ್ಧ ಸ್ಪರ್ಧಿಸಿ ಸೋತರು. 

ಅಧ್ಯಾತ್ಮಿಕ ವ್ಯಕ್ತಿಯಾಗಿದ್ದ ಅವರು, ಕಂಚಿ ಶಂಕರ ಮಠದ ಅನುಯಾಯಿಯಾಗಿದ್ದರು. 

ಅಗ್ನಿಯಲ್ಲಿ ಲೀನ
ಭಾನುವಾರ ನಿಧನರಾದ ಟಿ.ಎನ್‌. ಶೇಷನ್‌ ಅವರ ಮೃತದೇಹದ ಅಂತ್ಯಸಂಸ್ಕಾರ ಚೆನ್ನೈನ ಬೆಸೆಂಟ್‌ ನಗರ ವಿದ್ಯುತ್‌ ಚಿತಾಗಾರದಲ್ಲಿ, ಹಿಂದೂ ಪದ್ಧತಿಯಂತೆ ಸೋಮವಾರ ನಡೆಯಿತು. 

ಚೆನ್ನೈನ ಸಂತ ಮೇರಿ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಬಂದು ಅಂತಿಮ ದರ್ಶನ ಪಡೆದರು. ಶೇಷನ್‌ ಅವರ ಅಭಿಲಾಷೆಯಂತೆ, ಅವರ ಗೆಳೆಯ ರಾಮದೇವನ್‌ ಕೃಷ್ಣಸ್ವಾಮಿ ವಿಧಿವಿಧಾನಗಳನ್ನು ನೆರವೇರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು