ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್‌ಗಿಂತ ಪ್ರಗತಿಯೇ ಶಕ್ತಿಶಾಲಿ: ಕಾಶ್ಮೀರವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ

‘ಮನದ ಮಾತು’ ಕಾರ್ಯಕ್ರಮ
Last Updated 28 ಜುಲೈ 2019, 20:02 IST
ಅಕ್ಷರ ಗಾತ್ರ

ನವದೆಹಲಿ: ‘ಕಾಶ್ಮೀರದಲ್ಲಿ ದ್ವೇಷ ಬಿತ್ತುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುವವರ ಉದ್ದೇಶ ಯಾವತ್ತೂ ಈಡೇರಲಾರದು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಜುಲೈ ತಿಂಗಳ ‘ಮನದ ಮಾತು’ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಮೂಲಕ ದೇಶದ ಜನರನ್ನುದ್ದೇಶಿಸಿ ಅವರು ಮಾತನಾಡಿದರು. ಜಮ್ಮು ಕಾಶ್ಮೀರದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೈಗೊಂಡ ‘ಮರಳಿ ಗ್ರಾಮಕ್ಕೆ’ ಕಾರ್ಯಕ್ರಮವನ್ನು ಉಲ್ಲೇಖಿಸುತ್ತಾ, ‘ಅಭಿವೃದ್ಧಿಯ ಶಕ್ತಿಯು ಗುಂಡು ಹಾಗೂ ಬಾಂಬ್‌ಗಳ ಶಕ್ತಿಗಿಂತ ಹೆಚ್ಚಾಗಿರುತ್ತದೆ ಎಂಬುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿದೆ’ ಎಂದರು.

‘ಮರಳಿ ಗ್ರಾಮಕ್ಕೆ’ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಅತ್ಯಂತ ಸೂಕ್ಷ್ಮ ಮತ್ತು ದೂರ ದೂರದ ಹಳ್ಳಿಗಳಿಗೂ ಅಧಿಕಾರಿಗಳು ಭೇಟಿನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಮುಖ್ಯವಾಹಿನಿಗೆ ಸೇರಲು ರಾಜ್ಯದ ಜನರು ಎಷ್ಟು ಉತ್ಸುಕರಾಗಿದ್ದಾರೆ ಎಂಬುದು ಜನರ ಪ್ರತಿಕ್ರಿಯೆಯಿಂದ ಸ್ಪಷ್ಟವಾಗಿದೆ. ದ್ವೇಷ ಬಿತ್ತುವ ಮೂಲಕ ಅಭಿವೃದ್ಧಿಗೆ ಅಡ್ಡಿಪಡಿಸುವವರು ತಮ್ಮ ಯೋಜನೆಯಲ್ಲಿ ಯಶಸ್ಸು ಗಳಿಸುವುದಿಲ್ಲ ಎಂಬುದೂ ಈ ಕಾರ್ಯಕ್ರಮದಿಂದ ಸ್ಪಷ್ಟವಾಗಿದೆ’ ಎಂದರು.

‘ಮರಳಿ ಗ್ರಾಮಕ್ಕೆ’ ಯೋಜನೆಯಡಿ ಇದೇ ಮೊದಲ ಬಾರಿಗೆ ಸರ್ಕಾರದ ಅಧಿಕಾರಿಗಳು 4,500 ಗ್ರಾಮಗಳ ಮನೆಗಳಿಗೆ ಭೇಟಿನೀಡಿದ್ದಾರೆ. ಗಡಿಯಾಚೆಗಿನ ಗುಂಡಿನ ದಾಳಿಯ ಭಯದಲ್ಲಿಯೇ ಇರುವ ಶೋಪಿಯಾನ್‌, ಪುಲ್ವಾಮಾ, ಕುಲ್ಗಾಂ, ಅನಂತನಾಗ್‌ ಮುಂತಾದ ಹಳ್ಳಿಗಳ ಮನೆಗಳಿಗೂ ಅಧಿಕಾರಿಗಳು ಹೋಗಿದ್ದಾರೆ ಎಂದರು.

‘ಅಮರನಾಥ ಯಾತ್ರೆಯಲ್ಲಿ ಈ ಬಾರಿ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದಾರೆ. 2015ರಲ್ಲಿ ಎರಡು ತಿಂಗಳ ಅವಧಿಯಲ್ಲಿ ಭೇಟಿನೀಡಿದ್ದ ಭಕ್ತರ ಸಂಖ್ಯೆಯನ್ನು ಈ ವರ್ಷ ಈಗಾಗಲೇ ಮೀರಿಯಾಗಿದೆ. ಉತ್ತರಾಖಂಡದ ಚಾರ್‌ಧಾಮ್‌ ಯಾತ್ರೆಯಲ್ಲೂ ಹಚ್ಚು ಜನರು ಪಾಲ್ಗೊಂಡಿದ್ದಾರೆ. ಕೇದಾರನಾಥಕ್ಕೆ ಈ ಬಾರಿ ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿನೀಡಿದ್ದಾರೆ. 2013ರಲ್ಲಿ ಸಂಭವಿಸಿದ ಪ್ರವಾಹದ ನಂತರ ಇದೇ ಮೊದಲ ಬಾರಿ ಇಷ್ಟೊಂದು ಜನರು ಕೇದಾರನಾಥಕ್ಕೆ ಬಂದಿದ್ದಾರೆ’ ಎಂದು ಮೋದಿ ಹೇಳಿದರು.

25 ನಿಮಿಷಗಳ ತಮ್ಮ ಭಾಷಣದಲ್ಲಿ ಮೋದಿ ಅವರು, ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸುವಂತೆ ಜನರಿಗೆ ಕರೆ ನೀಡಿದರು. ‘ಸ್ವಾತಂತ್ರ್ಯೋತ್ಸವ ಜನರ ಉತ್ಸವವಾಗುವ ರೀತಿಯಲ್ಲಿ ಆಚರಣೆ ಆಗಬೇಕು’ ಎಂದರು.

ನಂಬಿಕೆ ಮತ್ತು ನಿರ್ಭೀತಿ– ಚಂದ್ರಯಾನ ಯೋಜನೆಯ ಪಾಠಗಳು

‘ನಂಬಿಕೆ ಮತ್ತು ನಿರ್ಭೀತಿ– ಇವು ‘ಚಂದ್ರಯಾನ–2’ ಯೋಜನೆಯಿಂದ ನಾನು ಕಲಿತ ಬಹುದೊಡ್ಡ ಪಾಠಗಳು’ ಎಂದು ಪ್ರಧಾನಿ ಮೋದಿ ಹೇಳಿದರು.

‘ಮನದ ಮಾತು’ ಕಾರ್ಯಕ್ರಮದಲ್ಲಿ ಚಂದ್ರಯಾನ ಯೋಜನೆಯನ್ನು ಉಲ್ಲೇಖಿಸಿದ ಅವರು, ‘ವಿದ್ಯಾರ್ಥಿಗಳಿಗಾಗಿ ಚಂದ್ರಯಾನದ ಬಗ್ಗೆ ಶೀಘ್ರದಲ್ಲೇ ಒಂದು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗುವುದು. ಅದರಲ್ಲಿ ಜಯಶಾಲಿಯಾದವರನ್ನು ಸರ್ಕಾರದ ವೆಚ್ಚದಲ್ಲೇ ಸೆಪ್ಟಂಬರ್‌ ತಿಂಗಳಲ್ಲಿ ಶ್ರೀಹರಿಕೋಟಕ್ಕೆ ಕರೆದೊಯ್ಯಲಾಗುವುದು. ಬಾಹ್ಯಾಕಾಶನೌಕೆಯು ಚಂದ್ರನಮೇಲೆ ಇಳಿಯುತ್ತಿರುವುದರ ನೇರ ಪ್ರಸಾರವನ್ನು ವೀಕ್ಷಿಸುವ ಅವಕಾಶ ಅಲ್ಲಿ ಅವರಿಗೆ ಲಭ್ಯವಾಗಲಿದೆ. ಸ್ಪರ್ಧೆಯ ಜಯಶಾಲಿಗಳ ಪಾಲಿಗೆ ಇದು ಚಾರಿತ್ರಿಕ ದಿನವಾಗಲಿದೆ’ ಎಂದರು.

‘ಚಂದ್ರಯಾನ ಯೋಜನೆಯ ಕೊನೆಯ ಹಂತದಲ್ಲಿ ಕಾಣಿಸಿಕೊಂಡಅಡೆತಡೆಗಳನ್ನು ಇಸ್ರೊದ ವಿಜ್ಞಾನಿಗಳು ನಿವಾರಿಸಿದ ರೀತಿಯು ಅನುಕರಣೀಯ ಮತ್ತು ಸಾಟಿ ಇಲ್ಲದುದಾಗಿದೆ. ನಾವು ನಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಇದು ಸಂಪೂರ್ಣವಾಗಿ ಭಾರತದ್ದೇ ಯೋಜನೆ. ಚಂದ್ರಯಾನದ ಹೃದಯ, ಆತ್ಮ ಎಲ್ಲವೂ ಭಾರತದ್ದೇ ಎಂದರು.

‘ವಿಜ್ಞಾನವು ಅಭಿವೃದ್ಧಿಯ ಹಾದಿಯಾಗಿದೆ. ಚಂದ್ರಯಾನ–2 ಯೋಜನೆಯು ನಮ್ಮ ದೇಶದ ಅನೇಕ ಯುವಕರನ್ನು ವಿಜ್ಞಾನದತ್ತ ನಡೆಯಲು ಪ್ರೋತ್ಸಾಹಿಸುವುದು ಎಂಬ ವಿಶ್ವಾಸವಿದೆ. ಹೊಸತನಗಳ ಉತ್ಸಾಹದೊಂದಿಗೆ, ಹೊಸ ಯುಗದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯುವ ವಿಚಾರದಲ್ಲಿ ನಮ್ಮ ವಿಜ್ಞಾನಿಗಳು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಈ ಯೋಜನೆಯು ಸಾಬೀತುಪಡಿಸಿದೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT