ಬುಧವಾರ, ಮೇ 27, 2020
27 °C

ಲಾಕ್‌ಡೌನ್: ಜಮ್ಮು ಕಾಶ್ಮೀರದಲ್ಲಿ ಸಂಕಷ್ಟದಲ್ಲಿದ್ದಾರೆ 58,500 ವಲಸೆ ಕಾರ್ಮಿಕರು

ಜುಲ್ಫಿಕರ್‌ ಮಜೀದ್‌ Updated:

ಅಕ್ಷರ ಗಾತ್ರ : | |

kashmir

ಶ್ರೀನಗರ: ದೇಶವ್ಯಾಪಿ ಲಾಕ್‌ಡೌನ್ ಆಗಿರುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 58,500 ವಲಸೆ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಕೈಯಲ್ಲಿದ್ದ ಹಣ ಖರ್ಚಾಗಿದ್ದು, ಮನೆಯ ಬಾಡಿಗೆ ಕೊಡಲು ಸಾಧ್ಯವಾಗದೆ ಇತ್ತ ಆಹಾರಕ್ಕೂ ದುಡ್ಡಿಲ್ಲದೆ ಒದ್ದಾಡುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕಾರ್ಮಿಕ ಇಲಾಖೆಯ ಸಮೀಕ್ಷೆ ಪ್ರಕಾರ ಇಲ್ಲಿ ಈಗ  58,500 ಮಂದಿ ವಲಸೆ ಕಾರ್ಮಿಕರಿದ್ದಾರೆ. ಲಾಕ್‌ಡೌನ್ ಆಗಿರುವುದರಿಂದ ಇವರಿಗೆ ಅವರವರ ಊರುಗಳಿಗೆ ಹೋಗಲು ಸಾಧ್ಯವಾಗಿಲ್ಲ.

ಕೈಯಲ್ಲಿ ಹಣ ಖಾಲಿಯಾಗಿರುವುದರಿಂದ ಇವರೆಲ್ಲರೂ ಮನೆಗೆ ಹೋಗಲು ಬಯಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಊರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ನಮಗೆ ಆಹಾರ ಮತ್ತು ಸಾರಿಗೆ ವ್ಯವಸ್ಥೆ ಬೇಕು ಎಂದು ಬಿಹಾರದ ಬಿಜು ಕುಮಾರ್ ಎಂಬ ಕಾರ್ಮಿಕ ಹೇಳಿದ್ದಾರೆ.
ಬಿಜು ಕುಮಾರ್‌ನಂತೆ ಹಲವಾರು ಕಾರ್ಮಿಕರು ಶ್ರೀನಗರದ ಹೊರವಲಯ ಸೌರಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ನಮ್ಮನ್ನು ನಮ್ಮ ಊರಿಗೆ ತಲುಪಿಸಿ ಎಂದು ಇವರು ಸರ್ಕಾರವನ್ನು ಬೇಡುತ್ತಿದ್ದಾರೆ.

ಇಲ್ಲಿ ಹಸಿವೆಯಿಂದ ಸಾಯುವ ಬದಲು ಊರಿಗೆ ಹೋಗುವುದೇ ಒಳ್ಳೆಯದು. ಇಲ್ಲಿವರೆಗೆ ಕೆಲವು ಜನ ನಮಗೆ ಆಹಾರ ನೀಡುತ್ತಿದ್ದಾರೆ. ಹಾಗಂತ ಎಷ್ಟು ದಿನ ಹೀಗೆ ಇರಲಿ? ಎಂದು ಕೇಳುತ್ತಾರೆ ಬಿಜು.

ಕಳೆದ ಎರಡು ದಶಕಗಳಿಂದ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ ಉತ್ತರ ಪ್ರದೇಶದ ರಿಜ್ವಿ ಅಹಮ್ಮದ್. ನನ್ನ ಕೈಯಲ್ಲಿ  ಹಣವಿಲ್ಲ. ಕಳೆದ ಆಗಸ್ಟ್  ತಿಂಗಳಲ್ಲಿ ಸಂವಿಧಾನದ 370ನೇ ವಿಧಿ ರದ್ದುಮಾಡಿದಾಗ ಎಲ್ಲರೂ ಊರಿಗೆ ಹೋಗುವಂತೆ ಸರ್ಕಾರ ಹೇಳಿತ್ತು. ನಾವು ಊರಿಗೆ ಹೋಗಿ ಮತ್ತೆ ಮಾರ್ಚ್‌ನಲ್ಲಿ ವಾಪಸ್ ಬಂದೆವು. ಕಳೆದ ಆಗಸ್ಟ್‌ನಿಂದ ನನಗೆ ಸಂಪಾದನೆ ಇಲ್ಲ. ದುಡಿದ ಹಣ ಎಲ್ಲ ಖರ್ಚಾಗಿ ಹೋಗಿದೆ. ನನ್ನ ಕೈ ಖಾಲಿ. ಹಾಗಾಗಿ  ನಮ್ಮನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ಆದಾಗ್ಯೂ, ಅಲ್ಲಿರುವ  ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ನಾವು ಎಲ್ಲ ರೀತಿಯಲ್ಲಿಯೂ ಪ್ರಯತ್ನಿಸುತ್ತಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರದ ಕಾರ್ಮಿಕ ಇಲಾಖೆಯ ಆಯುಕ್ತ  ಅಬ್ದುಲ್ ರಶೀದ್ ವರ್ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಇದ್ದಾರೆ ಎಂದು  ತಿಳಿಯಲು ನಾವು ಮೊದಲು ಸಮೀಕ್ಷೆ  ಮಾಡಿದೆವು. ಆಮೇಲೆ ಸಹಾಯವಾಣಿ ಆರಂಭಿಸಿದೆವು. ಹಲವಾರು ಅಧಿಕಾರಿಗಳು ಈಗಾಗಲೇ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಆಹಾರ ಅಥವಾ ಸಾರಿಗೆ ಯಾವುದೇ ಸಮಸ್ಯೆ ಇರಲಿ. ಉಪ ಆಯುಕ್ತರ ಸಹಾಯದೊಂದಿಗೆ ನಾವು ಅವರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದೇವೆ ಎಂದಿದ್ದಾರೆ ರಶೀದ್ ವರ್.

ಕಳೆದ ಶುಕ್ರವಾರ ರಜೌರಿ- ಪೂಂಚ್ ಭಾಗದ ಎರಡು ತಂಡ ಕಾರ್ಮಿಕರು 100 ಕಿಮೀನಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಕಾಶ್ಮೀರದ ಶೋಪಿಯಾನ್‌ನಿಂದ ಪೂಂಚ್‌ನಲ್ಲಿರುವ ಸುರಾನ್‌ಕೋಟ್‌ಗೆ ತಲುಪಿದ್ದರು. ದೇಶವ್ಯಾಪಿ ಲಾಕ್‌ಡೌನ್ ಆಗಿದ್ದರೂ ಅಗತ್ಯವಸ್ತುಗಳು  ಲಭ್ಯವಾಗುವಂತೆ ಮಾಡಬೇಕು ಎಂದು ಸರ್ಕಾರ ಹೇಳಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಇಲ್ಲಿಯವರೆಗೆ 55 ಮಂದಿಗೆ ಕೋವಿಡ್-19 ರೋಗ ದೃಢೀಕರಿಸಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು