ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಆನ್–ಆಫ್‌ ಸ್ವಿಚ್ ಅಲ್ಲ, ಮೇ 17 ನಂತರ ಏನು: ರಾಹುಲ್ ಗಾಂಧಿ ಪ್ರಶ್ನೆ

Last Updated 8 ಮೇ 2020, 8:01 IST
ಅಕ್ಷರ ಗಾತ್ರ

ನವದೆಹಲಿ: ಮೇ 17ರಂದು ಕೋವಿಡ್‌–19 ಲಾಕ್‌ಡೌನ್‌ ಕೊನೆಯಾದ ನಂತರ ದೇಶದಲ್ಲಿ ಚಟುವಟಿಕೆಗಳು ಪುನರಾರಂಭಗೊಳ್ಳಲು ಹಾಗೂ ಆರ್ಥಿಕತೆ ಬಗ್ಗೆ ರೂಪಿಸಲಾಗಿರುವ ಯೋಜನೆಗಳ ಕುರಿತು ಸರ್ಕಾರ ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.

'ಸರ್ಕಾರ ಕೈಗೊಳ್ಳುವ ಕಾರ್ಯಾಚರಣೆಗಳಲ್ಲಿ ಸ್ವಲ್ಪ ಮಟ್ಟಿನ ಪಾರದರ್ಶಕತೆ ಕಾಯ್ದುಕೊಳ್ಳುವುದು ಇಂದಿನ ಅಗತ್ಯವಾಗಿದೆ. ದೇಶದಲ್ಲಿ ಚಟುವಟಿಕೆಗಳು ಯಾವತ್ತಿನಿಂದ ಪುನರಾರಂಭಗೊಳ್ಳಲಿವೆ, ಏನೆಲ್ಲ ಮಾನದಂಡಗಳನ್ನು ಅನುಸರಿಸಬೇಕಿದೆ, ಆರಂಭಕ್ಕೂ ಮುನ್ನ ಯಾವೆಲ್ಲ ನಿಯಮಗಳನ್ನು ಅನುಸರಿಬೇಕಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ' ಎಂದು ರಾಹುಲ್‌ ಗಾಂಧಿ ಶುಕ್ರವಾರ ಡಿಜಿಟಲ್‌ ಮಾಧ್ಯಮ ಗೋಷ್ಟಿಯಲ್ಲಿ ಹೇಳಿದ್ದಾರೆ.

'ನೀವು ತೆರೆದ ಕೂಡಲೇ ತೆರೆದುಕೊಳ್ಳುವುದಕ್ಕೆ ಲಾಕ್‌ಡೌನ್‌ ಎಂದರೆ ಕೀ ಅಲ್ಲ. ಅದಕ್ಕಾಗಿ ಹಲವು ಕಾರ್ಯಗಳು ನಡೆಯಬೇಕು. ಮಾನಸಿಕವಾದ ಸಿದ್ಧತೆಯ ಅಗತ್ಯವಿದೆ. ಇದು ಆನ್‌–ಆಫ್‌ ಮಾಡುವ ಸ್ವಿಚ್‌ ಅಲ್ಲ ಎಂಬುದನ್ನು ಸರ್ಕಾರ ತಿಳಿದುಕೊಳ್ಳಬೇಕಿದೆ' ಎಂದರು.

ಕೋವಿಡ್‌–19 ಕುರಿತು ಮಾತನಾಡಿರುವ ಅವರು, 'ಸೋಂಕು ರೋಗ ಕೆಲವು ವರ್ಗದ ಜನರಿಗೆ ಅಪಾಯಕಾರಿಯಾಗಿದೆ. ಹಿರಿಯ ವಯಸ್ಸಿನವರು, ಡಯಾಬಿಟಿಸ್‌ ಹಾಗೂ ಹೈಪರ್‌ಟೆನ್ಷನ್‌ ಹೊಂದಿರುವವರಿಗೆ ಅಪಾಯಕಾರಿಯಾಗಿದೆ. ಅದನ್ನು ಹೊರತುಪಡಿಸಿ ಉಳಿದವರಲ್ಲಿ ಇದುಅಪಾಯಕಾರಿಯಾದುದಲ್ಲ. ಹಾಗಾಗಿ, ನಾವು ಜನರ ಮನಸ್ಸಿನಲ್ಲಿ ಬದಲಾವಣೆಯನ್ನು ತರುವುದು ಅಗತ್ಯವಾಗಿದೆ. ಈಗಂತೂ ಜನರು ಭಯಭೀತರಾಗಿದ್ದಾರೆ. ಸರ್ಕಾರ ಮತ್ತೆ ಚಟುವಟಿಕೆಗಳನ್ನು ಆರಂಭಿಸಲು ಮುಂದಾಗುವುದಾದರೆ, ಈ ಭಯವನ್ನು ವಿಶ್ವಾಸವಾಗಿ ಬದಲಿಸಬೇಕಿದೆ' ಎಂದು ಸಲಹೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಕೋವಿಡ್‌–19 ಬಿಕ್ಕಟ್ಟಿನ ಸಮಯದಲ್ಲಿ ಭಾರತ ಅನುಸರಿಸಬೇಕಾದ ಕ್ರಮಗಳ ಕುರಿತು ವಿಡಿಯೊ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸಿದ್ದಾರೆ. ಈಗಾಗಲೇ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಮತ್ತು ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರೊಂದಿಗೆ ಚರ್ಚಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, 'ಮೇ 17ರ ಬಳಿಕ ದೇಶದಾದ್ಯಂತ ಲಾಕ್‌ಡೌನ್‌ ಮುಂದುವರಿಯಲಿದೆಯೇ ಅಥವಾ ಲಾಕ್‌ಡೌನ್‌ ಕೊನೆಯಾಗಲಿದೆಯೇ; ರೂಪಿಸಿರುವ ಯೋಜನೆ ಏನು' ಎಂದು ಕೇಂದ್ರ ಸರ್ಕಾರವನ್ನು ಕೇಳಿದ್ದರು.

ಹಲವು ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವಂತೆ ಕಾಂಗ್ರೆಸ್‌ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿತ್ತು. ಕಾಂಗ್ರೆಸ್‌ ಅವರ ಪ್ರಯಾಣ ವೆಚ್ಚ ಭರಿಸುವುದಾಗಿ ಘೋಷಿಸಿದ್ದರಿಂದ ಬಿಜೆಪಿ–ಕಾಂಗ್ರೆಸ್‌ ನಡುವೆ ಜಟಾಪಟಿ ಸೃಷ್ಟಿಯಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ವಲಸೆ ಕಾರ್ಮಿಕರ ಪ್ರಯಾಣಕ್ಕೆರೈಲ್ವೆ ಶೇ 85ರಷ್ಟು ವೆಚ್ಚ ಭರಿಸಲಿದೆ ಹಾಗೂ ರಾಜ್ಯ ಸರ್ಕಾರಗಳು ಶೇ 15ರಷ್ಟು ವೆಚ್ಚ ನೀಡಬೇಕು ಎಂದು ಬಿಜೆಪಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT