ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಸೀಟಿಗಾಗಿ ವಿಧ ವಿಧ ಪಟ್ಟು, ಮಹಾಮೈತ್ರಿಯೊಳಗೆ ಚೌಕಾಶಿ ಆಟ

Last Updated 19 ಡಿಸೆಂಬರ್ 2018, 19:36 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಮೈತ್ರಿ ಪಕ್ಷಗಳ ನಡುವೆ ಸೀಟುಗಳಿಗೆ ಭಾರಿ ಚೌಕಾಶಿ ನಡೆಯುವುದು ಸಾಮಾನ್ಯ. ಇಲ್ಲಿ 80 ಲೋಕಸಭಾ ಕ್ಷೇತ್ರಗಳು ಇರುವುದೇ ಇದಕ್ಕೆ ಕಾರಣ.

ಮೂರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲುವು ಆ ಪಕ್ಷದ ಆತ್ಮವಿಶ್ವಾಸ ಹೆಚ್ಚಿಸಿದೆ. ಹಾಗಾಗಿ, ಉತ್ತರ ಪ್ರದೇಶದಲ್ಲಿಯೂ ಮಹಾಮೈತ್ರಿಯಲ್ಲಿ ಹೆಚ್ಚಿನ ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ ಇರಿಸಬಹುದು. ಅದರ ಭಾಗವಾಗಿಯೇ ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಭಾಗಿಯಾಗಲು ಕಾಂಗ್ರೆಸ್‌ ಆತುರ ತೋರುತ್ತಿಲ್ಲ.

ಉತ್ತರ ಪ್ರದೇಶದ ಪ್ರಮುಖ ಪಕ್ಷಗಳಾದ ಬಿಎಸ್‌ಪಿ ಮತ್ತು ಎಸ್‌ಪಿ ನಡುವಣ ಸೀಟು ಹಂಚಿಕೆ ಮುಗಿದೇ ಹೋಗಿದೆ ಎಂಬ ವರದಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ ಎಂಬರ್ಥದಲ್ಲಿ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಮಾತನಾಡಿದ್ದಾರೆ. ಬಿಎಸ್‌ಪಿ–ಎಸ್‌ಪಿ ನಡುವೆ ಸೀಟು ಹಂಚಿಕೆ ಅಂತಿಮವಾಗಿದೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಜನ್ಮದಿನವಾದ ಜನವರಿ 15ರಂದು ಅದನ್ನು ಪ್ರಕಟಿಸಲಾಗುವುದು ಎಂಬ ಸುದ್ದಿ ಈಗ ಗಟ್ಟಿಯಾಗಿ ಕೇಳಿ ಬರುತ್ತಿದೆ.

ಕಾಂಗ್ರೆಸ್‌ ಕಿವಿಗೆ ಕರ್ಕಶ ಎನಿಸುವಂತಹ ಸದ್ದನ್ನೇ ಬಿಎಸ್‌ಪಿ ಮತ್ತು ಎಸ್‌ಪಿ ಇತ್ತೀಚೆಗೆ ಮಾಡುತ್ತಿವೆ. ಇತ್ತೀಚೆಗೆ ಚುನಾವಣೆ ನಡೆದ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಈ ಎರಡೂ ಪಕ್ಷಗಳು ಕಾಂಗ್ರೆಸ್‌ ಜತೆಗೆ ಹೋಗಿಲ್ಲ. ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿಗಳ ಪ್ರಮಾಣವಚನಕ್ಕೂ ಮಾಯಾವತಿ ಮತ್ತು ಎಸ್‌ಪಿ ನಾಯಕ ಅಖಿಲೇಶ್‌ ಹೋಗಲಿಲ್ಲ.

ಬಿಜೆಪಿಗೆ ಸೋಲುಣಿಸುವ ಯಾವುದೇ ಪ್ರಯತ್ನಕ್ಕೆ ಕಾಂಗ್ರೆಸ್‌ ಉತ್ಸುಕವಾಗಿದೆ ಮತ್ತು ಸಿದ್ಧವಾಗಿದೆ. ಆದರೆ, ಅದರ ಭಾಗವಾಗಿ ಮಾಡಿಕೊಳ್ಳುವ ಮೈತ್ರಿಕೂಟವು ಕಾಂಗ್ರೆಸ್‌ ಅಥವಾ ಇತರ ಪಕ್ಷಗಳಿಗೆ ಹಾನಿ ಉಂಟು ಮಾಡಬಾರದು, ಗೌರವಾರ್ಹವಾಗಿರಬೇಕು ಎಂದು ಸಿಂಘ್ವಿ ಹೇಳಿದ್ದಾರೆ. 80 ಕ್ಷೇತ್ರಗಳ ಪೈಕಿ 78 ಕ್ಷೇತ್ರಗಳನ್ನು ಎಸ್‌ಪಿ, ಬಿಎಸ್‌ಪಿ ಮತ್ತು ರಾಷ್ಟ್ರೀಯ ಲೋಕದಳ ಹಂಚಿಕೊಂಡಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿನಿಧಿಸುತ್ತಿರುವ ಅಮೇಠಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯಬರೇಲಿಯಲ್ಲಿ ಅಭ್ಯರ್ಥಿಗಳನ್ನು ಹಾಕದಿರಲೂ ಈ ಪಕ್ಷಗಳು ನಿರ್ಧರಿಸಿವೆ ಎನ್ನಲಾಗಿದೆ.

ಇದೊಂದು ಚೌಕಾಶಿ ತಂತ್ರ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದ್ದಾರೆ.

*
ಒಂದು ವೇಳೆ ಮೈತ್ರಿ ನಮಗೆ ಬೇಕಾದಂತೆ ಆಗದಿದ್ದರೆ ನಾವು ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತೇವೆ. ಉತ್ತರ ಪ್ರದೇಶದಲ್ಲಿಹಿಂದೆಯೂ ನಾವು ಏಕಾಂಗಿಯಾಗಿ ಸ್ಪರ್ಧಿಸಿದ್ದೇವೆ.
-ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ವಕ್ತಾರ

ಸೀಟು ಹಂಚಿಕೆ?
38:ಬಿಎಸ್‌ಪಿ
37:ಎಸ್‌ಪಿ
3:ರಾಷ್ಟ್ರೀಯ ಲೋಕದಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT