ಮಂಗಳವಾರ, ಸೆಪ್ಟೆಂಬರ್ 21, 2021
26 °C
ಉತ್ತರ ಪ್ರದೇಶ: ಬಿಜೆಪಿ ಅಭ್ಯರ್ಥಿಗಳ ಮತ ಕಸಿದು ಎಸ್‌ಪಿ–ಬಿಎಸ್‌ಪಿಗೆ ನೆರವಾಗುವುದು ಕಾರ್ಯತಂತ್ರ

ಮಹಾಮೈತ್ರಿ–ಕಾಂಗ್ರೆಸ್‌ ಒಳ ಒಪ್ಪಂದ ತಂತ್ರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದಲ್ಲಿ ಈ ಲೋಕಸಭಾ ಚುನಾವಣೆಗೆ ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಕೂಟಕ್ಕೆ ಕಾಂಗ್ರೆಸ್‌ ಪಕ್ಷವನ್ನು ಸೇರಿಸಿಕೊಳ್ಳಲಾಗಿಲ್ಲ.

ಇದರ ಬಗ್ಗೆ ಮೈತ್ರಿಕೂಟದ ಪಕ್ಷಗಳು ಮತ್ತು ಕಾಂಗ್ರೆಸ್‌ನ ಮುಖಂಡರ ನಡುವೆ ವಾಗ್ಯುದ್ಧವೂ ನಡೆದಿದೆ. ಆದರೆ, ಈ ಮೈತ್ರಿಕೂಟ ಮತ್ತು ಕಾಂಗ್ರೆಸ್‌ನ ನಡುವೆ ಒಳ ಒಪ್ಪಂದ ಆಗಿದೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಲೇ ಇದೆ. 

ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಬಗ್ಗೆ ವಿಶ್ಲೇಷಣೆ ನಡೆಸಿದರೆ ಒಳ ಒಪ್ಪಂದದ ಸುದ್ದಿ ಆಧಾರವಿದೆ ಅನಿಸುತ್ತದೆ. 

ಮೊದಲ ಹಂತದಲ್ಲಿ ಎಂಟು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈ ಎಂಟು ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಗಳನ್ನೇ ಹಾಕಿಲ್ಲ. ಆರ್‌ಎಲ್‌ಡಿ ಅಧ್ಯಕ್ಷ ಅಜಿತ್‌ ಸಿಂಗ್‌ ಮತ್ತು ಅವರ ಮಗ ಜಯಂತ್‌ ಚೌಧರಿ ಸ್ಪರ್ಧಿಸುತ್ತಿರುವ ಮುಜಫ್ಫರ್‌ನಗರ ಮತ್ತು ಬಾಘ್‌ಪತ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಕಾಂಗ್ರೆಸ್‌ ಘೋಷಿಸಿದೆ.

ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೀಳುವ ಮತಗಳಲ್ಲಿ ಸ್ವಲ್ಪವನ್ನು ಕಸಿದುಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಗಳನ್ನು ಹಾಕಿದೆ. ಇದು ಮೈತ್ರಿಕೂಟದ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ನೆರವಾಗಲಿದೆ. 

ಹೀಗಿದೆ ಕಾಂಗ್ರೆಸ್‌ ಕಾರ್ಯತಂತ್ರ:  ಮೀರಠ್‌ನಿಂದ ಹರೇಂದ್ರ ಅಗರ್‌ವಾಲ್ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಅಗರ್‌ವಾಲ್‌ ಅವರು ಬನಿಯಾ ಜಾತಿಗೆ ಸೇರಿದವರು. ಇಲ್ಲಿನ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಅಗರ್‌ವಾಲ್‌ ಅವರೂ ಇದೇ ಜಾತಿಯವರು. ಬನಿಯಾ ಸಮುದಾಯದ ಮತಗಳು ಇಬ್ಬರ ನಡುವೆ ಹಂಚಿಹೋಗಲಿ ಎಂಬುದು ಲೆಕ್ಕಾಚಾರ. ಮೀರಠ್‌ ಕ್ಷೇತ್ರದಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಹಾಜಿ ಯಾಕೂಬ್‌ ಖುರೇಷಿ ಅವರು ಬಿಎಸ್‌ಪಿಯ ಅಭ್ಯರ್ಥಿ. ಬನಿಯಾ ಮತ ವಿಭಜನೆ ಖುರೇಷಿಗೆ ನೆರವಾಗಬಹುದು.

ಗಾಜಿಯಾಬಾದ್‌ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಇದೇ ಕಾರ್ಯತಂತ್ರ ಅನುಸರಿಸಿದೆ. ಬ್ರಾಹ್ಮಣ ಸಮುದಾಯದ ಡಾಲಿ ಶರ್ಮಾ ಅವರು ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿಯ ಬ್ರಾಹ್ಮಣ ಮತಬ್ಯಾಂಕ್‌ಗೆ ಕನ್ನ ಕೊರೆಯುವುದು ಇದರ ಉದ್ದೇಶ. ಗೌತಮಬುದ್ಧ ನಗರದಲ್ಲಿ ಠಾಕೂರ್‌ ಸಮುದಾಯದ ವ್ಯಕ್ತಿಯನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಠಾಕೂರ್‌ ಸಮುದಾಯ ಇಲ್ಲಿ ಪ್ರಭಾವಿ. ಹಾಗಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ. ಬಿಜೆಪಿ ಜತೆಗೆ ಗುರುತಿಸಿಕೊಳ್ಳುವ ಠಾಕೂರ್‌ ಸಮುದಾಯದ ಗಣನೀಯ ಪ್ರಮಾಣದ ಮತಗಳು ಕಾಂಗ್ರೆಸ್‌ ಅಭ್ಯರ್ಥಿ ಪಾಲಾಗಬಹುದು.  

ಕೈರಾನಾ ಉಪಚುನಾವಣೆ ಸಂದರ್ಭದಲ್ಲಿಯೂ ಇದೇ ತಂತ್ರವನ್ನು ಅನುಸರಿಸಲು ಕಾಂಗ್ರೆಸ್ ಯೋಜಿಸಿತ್ತು. ಬಿಜೆಪಿ ಸಂಸದರಾಗಿದ್ದ ಜಾಟ್‌ ಜಾತಿಯ ಹುಕುಂ ಸಿಂಗ್‌ ಅವರ ವಿಧವೆ ಮೃಗಾಂಕಾ ಸಿಂಗ್‌ ಅವರನ್ನು ಬಿಜೆಪಿ ಕಣಕ್ಕೆ ಇಳಿಸಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರವಾಗಿತ್ತು. ಹಾಗಾಗಿ ಜಾಟ್‌ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಉಮೇದುವಾರರನ್ನಾಗಿಸಿತ್ತು. ಆದರೆ, ಕಾಂಗ್ರೆಸ್‌ನ ಈ ತಂತ್ರವನ್ನು ಮೊದಲೇ ಊಹಿಸಿದ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿತ್ತು.  ಅಮ್ರೊಹಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಲಾಗಿದ್ದ ರಶೀದ್‌ ಅಲ್ವಿ ಅವರನ್ನು ಕಾಂಗ್ರೆಸ್‌ ಬದಲಾಯಿಸಿದೆ. ಬಿಎಸ್‌ಪಿ ಅಭ್ಯರ್ಥಿಯಾಗಿ ಡ್ಯಾನಿಷ್‌ ಅಲಿ ಅವರು ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ. ಮುಸ್ಲಿಂ ಮತಗಳು ವಿಭಜನೆ ಆಗದಿರಲಿ ಎಂಬ ಕಾರಣಕ್ಕೆ ಈ ನಡೆ ಎನ್ನಲಾಗಿದೆ. 

ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ

ಸಹರಾನ್‌ಪುರ ಮತ್ತು ಬಿಜ್ನೋರ್‌ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಸಹರಾನ್‌ಪುರದಿಂದ ಸ್ಪರ್ಧಿಸುತ್ತಿರುವ ಇಮ್ರಾನ್‌ ಮಸೂದ್‌ ಮತ್ತು ಬಿಜ್ನೋರ್‌ನ ಅಭ್ಯರ್ಥಿ ನಸೀಮುದ್ದೀನ್‌ ಸಿದ್ದಿಕಿ ಅವರು ಪ್ರಬಲ ಅಭ್ಯರ್ಥಿಗಳು. 

ರಾಂಪುರದಲ್ಲಿ ಶತ್ರುಗಳ ಮುಖಾಮುಖಿ

ನಟಿ ಜಯಪ್ರದಾ ಮತ್ತು ಎಸ್‌ಪಿ ಮುಖಂಡ ಅಜಂ ಖಾನ್‌ ಅವರು ಒಂದು ಕಾಲದ ಆತ್ಮೀಯರು. ಆದರೆ, ದಶಕದ ಹಿಂದೆಯೇ ಈ ಆತ್ಮೀಯತೆಯಲ್ಲಿ ಬಿರುಕು ಬಿಟ್ಟಿತು. ಬಳಿಕ ಇಬ್ಬರೂ ಬದ್ಧ ಶತ್ರುಗಳಾದರು. ಈಗ, ಇವರಿಬ್ಬರೂ ರಾಂಪುರ ಲೋಕಸಭಾ ಕ್ಷೇತ್ರದಲ್ಲಿ ಮುಖಾಮುಖಿಯಾಗುವುದು ಖಚಿತವಾಗಿದೆ.

ಎಸ್‌ಪಿ ಮುಖಂಡರಾಗಿದ್ದ ಅಮರ್‌ ಸಿಂಗ್‌ ಅವರ ಆಪ್ತೆ ಜಯಪ್ರದಾ ಅವರನ್ನು ತಮ್ಮ ಪ್ರಭಾವದ ರಾಂಪುರ ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಮಾಡಿದ್ದೇ ಅಜಂ ಖಾನ್‌. 2004ರಲ್ಲಿ ಜಯಪ್ರದಾ ರಾಂಪುರದಿಂದ ಗೆದ್ದದ್ದರಲ್ಲಿ ಅಜಂ ಖಾನ್‌ ನೆರವು ಗಣನೀಯ. ಆದರೆ, 2009ರ ಲೋಕಸಭಾ ಚುನಾವಣೆಯ ಹೊತ್ತಿಗೆ ಇಬ್ಬರ ಸಂಬಂಧ ಹದಗೆಟ್ಟಿತ್ತು. ಜಯಪ್ರದಾ ಅವರಿಗೆ ರಾಂಪುರದಿಂದ ಟಿಕೆಟ್‌ ನೀಡುವುದನ್ನು ಅಜಂ ಖಾನ್‌ ಖಂಡತುಂಡವಾಗಿ ವಿರೋಧಿಸಿದ್ದರು. ಹಾಗಿದ್ದರೂ ಟಿಕೆಟ್‌ ಪಡೆದ ಜಯಪ್ರದಾ ಅಲ್ಲಿಂದ ಗೆದ್ದರು. 

ಇಬ್ಬರ ನಡುವೆ ಹಲವು ಬಾರಿ ವಾಕ್ಸಮರವೂ ನಡೆದಿದೆ. ಅಜಂ ಖಾನ್‌ ಅವರು ‘ಅಲ್ಲಾವುದ್ದೀನ್‌ ಖಿಲ್ಜಿ’ ಎಂದು ಜಯಪ್ರದಾ ಹೇಳಿದ್ದರು.

ಜಯಪ್ರದಾ ಅವರು ‘ನರ್ತಕಿ’ ಎಂದು ಖಾನ್‌ ತಿರುಗೇಟು ನೀಡಿದ್ದರು. 

ಜಯ ವಿರುದ್ಧ ಕೀಳುಮಟ್ಟದ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಅಜಂ ಖಾನ್‌ ಅವರನ್ನು ಪಕ್ಷದಿಂದ ಸ್ವಲ್ಪ ಕಾಲ ಅಮಾನತು ಮಾಡಿಸುವಲ್ಲಿಯೂ ಅಮರ್‌ ಸಿಂಗ್‌ ಯಶಸ್ವಿಯಾಗಿದ್ದರು. 

2010ರಲ್ಲಿ ಅಮರ್‌ ಮತ್ತು ಜಯ ಇಬ್ಬರನ್ನೂ ಎಸ್‌ಪಿಯಿಂದ ಹೊರಗೆ ಅಟ್ಟುವಲ್ಲಿ ಖಾನ್‌ ಯಶಸ್ವಿಯಾದರು. 2014ರಲ್ಲಿ ಆರ್‌ಎಲ್‌ಡಿ ಸೇರಿದ್ದ ಜಯ ಬಿಜ್ನೋರ್‌ನಿಂದ ಸ್ಪರ್ಧಿಸಿದ್ದರು. ಅವರಿಗೆ ಠೇವಣಿಯೂ ದಕ್ಕಿರಲಿಲ್ಲ. ಹಾಗಾಗಿ, ಅವರ ರಾಜಕೀಯ ಜೀವನ ಕೊನೆಯಾಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ರಾಜಕೀಯದಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿರುವುದಾಗಿ ಒಮ್ಮೆ ಅವರು ಹೇಳಿದ್ದರು. 

ಅಮರ್‌ ಸಿಂಗ್‌ ಅವರು ಬಿಜೆಪಿಯತ್ತ ಮುಖ ಮಾಡುವುದರೊಂದಿಗೆ ಪರಿಸ್ಥಿತಿ ಬದಲಾಯಿತು. ಆಜಂಗಡ ಗ್ರಾಮದಲ್ಲಿರುವ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಅಮರ್‌ ಅವರು ಆರ್‌ಎಸ್‌ಎಸ್‌ಗೆ ಕೆಲವು ತಿಂಗಳ ಹಿಂದೆ ಕೊಟ್ಟಿದ್ದಾರೆ. 

ಈಗ, ಬದ್ಧ ಶತ್ರುಗಳಲ್ಲಿ ಯಾರು ಗೆಲುವಿನ ನಗೆ ಬೀರುತ್ತಾರೆ ಎಂಬ ಕುತೂಹಲ ಮೂಡಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು