ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ: ಫೆ.28ರೊಳಗೆ ಹೆಸರು ಸೂಚಿಸಲು ‘ಸುಪ್ರೀಂ’ ತಾಕೀತು

Last Updated 21 ಆಗಸ್ಟ್ 2019, 1:24 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರ ತಡೆ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕಕ್ಕೆ ಫೆಬ್ರುವರಿ 28ರೊಳಗೆ ಹೆಸರುಗಳನ್ನು ಸೂಚಿಸಬೇಕು ಎಂದು ಶೋಧ ಸಮಿತಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ಅವರು ಶೋಧ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಶೋಧ ಸಮಿತಿಯು ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇಕಾಗುವ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲದ ಕೊರತೆಯಿಂದಾಗಿ ಶೋಧ ಸಮಿತಿಯು ಕೆಲಸ ಮಾಡುವುದು ಸಾಧ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು. ಮುಂದಿನ ವಿಚಾರಣೆಯನ್ನು ಮಾರ್ಚ್‌ 7ಕ್ಕೆ ನಿಗದಿ ಮಾಡಲಾಗಿದೆ.

ಲೋಕಪಾಲ ನೇಮಕಕ್ಕೆ ಸಂಬಂಧಿಸಿ ಈತನಕ ಏನೇನು ಕ್ರಮ ಕೈಗೊಳ್ಳಲಾಗಿವೆ ಎಂಬ ಪ್ರಮಾಣಪತ್ರ ಸಲ್ಲಿಸುವಂತೆ ಇದೇ 4ರಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ಲೋಕಪಾಲ ನೇಮಕದ ಬಗೆಗಿನ ಅಸಡ್ಡೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು.

ಶೋಧ ಸಮಿತಿಯ ಸದಸ್ಯರ ಹೆಸರನ್ನು ಕೂಡ ಸರ್ಕಾರವು ತನ್ನ ವೆಬ್‌ಸೈಟ್‌ನಲ್ಲಿ ಹಾಕಿಲ್ಲ ಎಂದು ಲೋಕಪಾಲ ನೇಮಕ ವಿಳಂಬ ಕುರಿತು ದೂರು ಸಲ್ಲಿಸಿರುವ ಎನ್‌ಜಿಒ ‘ಕಾಮನ್‌ ಕಾಸ್‌’ ಪರ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದ್ದರು.

ಶೋಧ ಸಮಿತಿ ರಚನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಮಾಣಪತ್ರ ‘ಸಂಪೂರ್ಣವಾಗಿ ಅತೃಪ್ತಿಕರ’ ಎಂದು ಕಳೆದ ಜುಲೈ 24ರಂದು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ‘ಉತ್ತಮವಾದ’‍ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ ನೀಡಿತ್ತು.

ನೇಮಕಕ್ಕೆ ಕೇಂದ್ರ ಸರ್ಕಾರ ಅಸಡ್ಡೆ

*ಲೋಕಪಾಲ ನೇಮಕಕ್ಕೆ ಸಂಬಂಧಿಸಿ ಈತನಕ ಏನೇನು ಕ್ರಮ ಕೈಗೊಳ್ಳಲಾಗಿವೆ ಎಂಬ ಪ್ರಮಾಣಪತ್ರ ಸಲ್ಲಿಸುವಂತೆ ಇದೇ 4ರಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಲೋಕಪಾಲ ನೇಮಕದ ಬಗೆಗಿನ ಅಸಡ್ಡೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು. ಶೋಧ ಸಮಿತಿಯ ಸದಸ್ಯರ ಹೆಸರನ್ನು ಕೂಡ ಸರ್ಕಾರವು ತನ್ನ ವೆಬ್‌ಸೈಟ್‌ನಲ್ಲಿ ಹಾಕಿಲ್ಲ ಎಂದು ಲೋಕಪಾಲ ನೇಮಕ ವಿಳಂಬ ಕುರಿತು ದೂರು ಸಲ್ಲಿಸಿರುವ ಎನ್‌ಜಿಒ ‘ಕಾಮನ್‌ ಕಾಸ್‌’ ಪರ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದ್ದರು

*ಶೋಧ ಸಮಿತಿಯು ಲೋಕಪಾಲ ಹುದ್ದೆಗೆ ಹೆಸರುಗಳನ್ನು ಅಂತಿಮಗೊಳಿಸಿ ಆಯ್ಕೆ ಸಮಿತಿಗೆ ಕಳುಹಿಸಬೇಕು. ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ಅತಿ ದೊಡ್ಡ ವಿರೋಧ ಪಕ್ಷದ ನಾಯಕ, ಲೋಕಸಭೆಯ ಸ್ಪೀಕರ್‌ ಮತ್ತು ನ್ಯಾಯ ತಜ್ಞರೊಬ್ಬರು ಸದಸ್ಯರಾಗಿರುತ್ತಾರೆ

* ಶೋಧ ಸಮಿತಿ ರಚನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಮಾಣಪತ್ರ ‘ಸಂಪೂರ್ಣವಾಗಿ ಅತೃಪ್ತಿಕರ’ ಎಂದು ಕಳೆದ ಜುಲೈ 24ರಂದು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ‘ಉತ್ತಮವಾದ’‍ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ ನೀಡಿತ್ತು

* ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಮತ್ತು ನ್ಯಾಯ ತಜ್ಞ ಮುಕುಲ್‌ ರೋಹಟಗಿ ಇರುವ ಆಯ್ಕೆ ಸಮಿತಿಯು ಕಳೆದ ಜುಲೈ 19ರಂದು ಸಭೆ ನಡೆಸಿತ್ತು. ಶೋಧ ಸಮಿತಿಗೆ ಯಾರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಚರ್ಚೆಯಾಗಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಹೇಳಿತ್ತು

* ಆಯ್ಕೆ ಸಮಿತಿಯ ಇನ್ನೊಬ್ಬ ಸದಸ್ಯ, ಲೋಕಸಭೆಯ ಅತಿ ದೊಡ್ಡ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಭಾಗವಹಿಸಿರಲಿಲ್ಲ

* ಶೋಧ ಸಮಿತಿಯಲ್ಲಿ ಕನಿಷ್ಠ ಏಳು ಸದಸ್ಯರು ಇರಬೇಕು. ಭ್ರಷ್ಟಾಚಾರ ತಡೆ ನೀತಿ, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆ, ಹಣಕಾಸು, ವಿಮೆ, ಬ್ಯಾಂಕಿಂಗ್‌, ಕಾನೂನು ಮತ್ತು ಆಡಳಿತ ನಿರ್ವಹಣೆ ಕ್ಷೇತ್ರಗಳಲ್ಲಿ ಅನುಭವ ಇದ್ದವರನ್ನು ಸದಸ್ಯರಾಗಿ ನೇಮಿಸಬೇಕು ಎಂದು ಆಯ್ಕೆ ಸಮಿತಿಗೆ ಜುಲೈ 24ರಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು

* 2018ರ ಸೆಪ್ಟೆಂಬರ್‌ 27ರಂದು ಎಂಟು ಸದಸ್ಯರ ಶೋಧ ಸಮಿತಿಯನ್ನು ಆಯ್ಕೆ ಸಮಿತಿಯು ರಚಿಸಿತ್ತು. ನ್ಯಾಯಮೂರ್ತಿ ರಂಜನಾ ದೇಸಾಯಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು

* ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯಪ್ರಕಾಶ್‌, ಇಸ್ರೊ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌, ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಖರಾಮ್‌ ಸಿಂಗ್‌ ಯಾದವ್‌, ಗುಜರಾತ್‌ ಪೊಲೀಸ್‌ ಇಲಾಖೆಯ ಮಾಜಿ ಮುಖ್ಯಸ್ಥ ಶಬೀರ್‌ ಹುಸೇನ್‌ ಎಸ್‌. ಖಂಡಾವಾಲಾ, ರಾಜಸ್ಥಾನ ಕೇಡರ್‌ನ ನಿವೃತ್ತ ಐಎಎಸ್‌ ಅಧಿಕಾರಿ ಲಲಿತ್‌ ಕೆ. ಪನ್ವರ್‌ ಮತ್ತು ಮಾಜಿ ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌ ಅವರು ಶೋಧ ಸಮಿತಿಯ ಸದಸ್ಯರಾಗಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT