ಫಲಿತಾಂಶ ವಿಶ್ಲೇಷಣೆ | ಬಿಜೆಪಿ ಮುನ್ನಡೆ ವ್ಯಕ್ತಿಪೂಜೆಯ ದ್ಯೋತಕವೇ?

ಬುಧವಾರ, ಜೂನ್ 19, 2019
23 °C

ಫಲಿತಾಂಶ ವಿಶ್ಲೇಷಣೆ | ಬಿಜೆಪಿ ಮುನ್ನಡೆ ವ್ಯಕ್ತಿಪೂಜೆಯ ದ್ಯೋತಕವೇ?

Published:
Updated:

ಲೋಕಸಭೆ ಫಲಿತಾಂಶದ ಟ್ರೆಂಡ್‌ 12.30ರ ಹೊತ್ತಿಗೆ ಸ್ಪಷ್ಟವಾಗಿತ್ತು. ಈ ಅವಧಿಯಲ್ಲಿ ನಡೆದ ಫೇಸ್‌ಬುಕ್‌ ಲೈವ್‌ನಲ್ಲಿ ‘ಪ್ರಜಾವಾಣಿ‘ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮತ್ತು ಮುಖ್ಯ ಸಂಪಾದಕ ಕೆ.ಹಮೀದ್ ಪಾಲ್ಗೊಂಡಿದ್ದರು. ಸುದ್ದಿಮನೆಯ ಅನುಭವದ ಮೂಸೆಯಲ್ಲಿ ಅವರು 2019ರ ಲೋಕಸಭೆ ಚುನಾವಣೆ ಫಲಿತಾಂಶದ ಕಾರಣ–ಪರಿಣಾಮಗಳನ್ನು ವಿಶ್ಲೇಷಿಸಿದ್ದು ಹೀಗೆ.

ಹಮೀದ್: ಏಳು ಹಂತದಲ್ಲಿ ಎರಡು ತಿಂಗಳುಗಳ ಸುದೀರ್ಘ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಯ ಟ್ರೆಂಡ್‌ ಇದೀಗ ಸ್ಪಷ್ಟವಾಗಿದೆ. ಮೋದಿ ನೇತೃತ್ವದ ಸರ್ಕಾರ ಬಹುತೇಕ ಖಚಿತ ಎನ್ನುವಂತೆ ಇದೆ. ಎನ್‌ಡಿಎ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ (ಮಧ್ಯಾಹ್ನ 12.30ರಲ್ಲಿ) ಮುನ್ನಡೆ ಸಾಧಿಸಿದೆ. ಮತಗಟ್ಟೆ ಸಮೀಕ್ಷಾ ವರದಿಗಳು ಬಹುತೇಕ ನಿಜವಾಗಿವೆ. ಈ ಚುನಾವಣೆಯಲ್ಲಿ ಕೆಲವು ಮುಖ್ಯ ವಿಚಾರಗಳಿದ್ದವು. ಅದರಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮಹಾಮೈತ್ರಿಯಿಂದ ಬಿಜೆಪಿಗೆ ಹಿನ್ನಡೆ ಆಗಬಹುದು ಎನ್ನುವ ನಿರೀಕ್ಷೆಯೂ ಒಂದು. ಆದರೆ ಈಗ ಅದೆಲ್ಲಾ ಸುಳ್ಳಾದಂತೆ ಆಗಿದೆ. ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟಕ್ಕೆ ಹೆಚ್ಚು ಮುನ್ನಡೆ ಸಿಕ್ಕಿಲ್ಲ. ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿಯೂ ಬಿಜೆಪಿ ಹೆಚ್ಚು ಮುನ್ನಡೆ ಪಡೆದುಕೊಂಡಿದೆ. ಬಿಹಾರ ಮತ್ತು ಮಹಾರಾಷ್ಟ್ರದಲ್ಲಿಯೂ ಬಿಜೆಪಿಗೆ ತಡೆವೊಡ್ಡಲು ಯುಪಿಎಗೆ ಸಾಧ್ಯವಾಗಿಲ್ಲ.

ಮಹಾಮೈತ್ರಿಕೂಟ ಬಿಜೆಪಿಗೆ ಹೊಡೆತ ಕೊಡುತ್ತೆ. ಯಾದವ ಮತ್ತು ಮುಸ್ಲಿಂ ಮತಗಳಿಂದ ಹಿನ್ನಡೆ ಆಗಬಹುದು ಅಂದುಕೊಂಡಿದ್ದೆವು. ಆದರೆ ಹಾಗೆ ಆದಂತೆ ಕಾಣ್ತಿಲ್ಲ. ಎಸ್‌ಪಿ ಮತ್ತು ಬಿಎಸ್‌ಪಿ ಮತಗಳು ಪರಸ್ಪರ ವರ್ಗಾವಣೆ ಆಗಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿಯಲ್ಲಿ ಇರುವಂತೆ ಅಲ್ಲಿಯೂ ಸಮಸ್ಯೆ ಆದಂತೆ ಇದೆ. ನಿಮಗೂ ಹೀಗೆಯೇ ಅನ್ನಿಸುತ್ತಾ?

ರವೀಂದ್ರ ಭಟ್: ಹೌದು, ನನಗೆ ಹಾಗೆ ಅನ್ನಿಸ್ತಿದೆ. ನೋಡಿ ಹಮೀದ್, ಕಾರ್ಯಕರ್ತರು ಬೇರೆ, ನಾಯಕರು ಬೇರೆ. ಉತ್ತರ ಪ್ರದೇಶದಲ್ಲಿಯೂ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆ ಆಗಿಲ್ಲ. ಒಟ್ಟಾರೆ ಟ್ರೆಂಡ್ ಅಂದ್ರೆ ಇಡೀ ದೇಶದಲ್ಲಿ ಮೋದಿಗೆ ಪರ್ಯಾಯವಾದ ಇನ್ನೊಂದು ನಾಯಕತ್ವ ಬೆಳೆದಿಲ್ಲ. ಮೋದಿ–ಶಾ ಜೋಡಿ ಇಡೀ ದೇಶದಲ್ಲಿ ಕಮಾಂಡಿಂಗ್ ಆಗಿದೆ. ಚುನಾವಣೆಯ ಈಗಿನ ಟ್ರೆಂಡ್ ನೋಡಿದ್ರೆ ಅದು ವಿಧಾನಸಭೆ–ಲೋಕಸಭೆಗೆ ಜನರ ಪ್ರತಿಕ್ರಿಯೆ ಬೇರೆ ಇರುತ್ತೆ ಅನ್ನೋದು ನಿಚ್ಚಳವಾಗ್ತಿದೆ.

ಅದು ರಾಜಸ್ಥಾನ ಇರಬಹುದು, ಮಧ್ಯಪ್ರದೇಶ, ಛತ್ತೀಸಗಡ ಇರಬಹುದು. ಗುಜರಾತ್‌ ವಿಚಾರಕ್ಕೆ ಬರೋಣ.  ಗುಜರಾತ್‌ನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹಳ ಕಷ್ಟಪಟ್ಟು ಅಧಿಕಾರಕ್ಕೆ ಬಂದಿತ್ತು. ಲೋಕಸಭೆಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ. 2014ರ ಲೋಕಸಭಾ ಚುನಾವಣೆಯಂತೆ ಈ ಸಲವೂ 26ಕ್ಕೆ 26 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಅದೇ ಟ್ರೆಂಡ್ ಉತ್ತರ ಪ್ರದೇಶಕ್ಕೂ ಇದೆ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿ 71 ಸೀಟ್ ಬಿಜೆಪಿ ಮೈತ್ರಿಕೂಟ ಗೆದ್ದತ್ತು. ಈ ಸಲ ಮಹಾಘಟಬಂಧನ್ ಮಾಡಿ ಎಸ್‌ಪಿ, ಬಿಜೆಪಿ, ಆರ್‌ಜೆಡಿ ಸೇರಿದಕೊಂಡಿದ್ದರೂ ಬಿಜೆಪಿ ಮುನ್ನಡೆಗೆ ತಡೆಯೊಡ್ಡಲು ಆಗಲಿಲ್ಲ. ಲೋಕಸಭೆಯ ದೃಷ್ಟಿಯಿಂದ ಯೋಚಿಸಿದರೆ ಜನರಿಗೆ ಮೋದಿಯೇ ಇನ್ನೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಭಾವನೆ ಇರುವುದು ಗೋಚರಿಸುತ್ತದೆ. ದಕ್ಷಿಣದ ಕೆಲವು ರಾಜ್ಯಗಳನ್ನು ಬಿಟ್ಟರೆ ಬಾಕಿ ಎಲ್ಲೆಡೆ ಅದೇ ಭಾವನೆ ಇರುವಂತೆ ಕಾಣುತ್ತೆ.

ಹಮೀದ್: ಲೋಕಸಭೆ–ವಿಧಾನಸಭೆಗೆ ಬೇರೆಬೇರೆ ಥರ ಮತ ಹಾಕ್ತಾರೆ ಅಂತ ಹೇಳಿದ್ರಿ. ಅದು ಈ ಸಲವೂ ನಿಜ ಆಗ್ತಿದೆ. ಒಡಿಶಾ ವಿಧಾನಸಭೆ ಚುನಾವಣೆಗೆ ನವೀನ್ ಪಟ್ನಾಯಕ್ ಅವರ ಬಿಜೆಡಿಗೆ ಭಾರಿ ಬಹುಮತ ಬಂದಿದೆ. ಆದರೆ ಲೋಕಸಭೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಮೋದಿಗೆ ಪರ್ಯಾಯ ನಾಯಕ ಇಲ್ಲ ಅನ್ನುವ ಮಾತು ಕೇಳಿ ಬಂದಿದೆ. ರಾಹುಲ್ ಗಾಂಧಿ ಸಹ ಅಮೇಠಿಯಲ್ಲಿ ಹಿನ್ನಡೆ ಸಾಧಿಸ್ತಾ ಇದ್ದಾರೆ. ಅಲ್ಲಿನ ಜನರು ರಾಹುಲ್ ಗಾಂಧಿಯನ್ನು ಒಬ್ಬ ಎಂಪಿಯಾಗಿ ಕೂಡ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎನ್ನುವ ಸ್ಥಿತಿ ಇದೆ.

ರವೀಂದ್ರ ಭಟ್: ನೀವು ಪರ್ಯಾಯ ನಾಯಕತ್ವದ ಬಗ್ಗೆ ಮಾತನಾಡಿದ್ರಿ. ಅದನ್ನು ಹೀಗೆ ಯೋಚಿಸೋಣ. ಮೊದಲಿಗೆ ನಾವು ಕಾಂಗ್ರೆಸ್ಸಿಗೆ ಪರ್ಯಾಯ ಹುಡುಕ್ತಾ ಇದ್ವಿ. ಈಗ ಬಿಜೆಪಿಗೆ ಪರ್ಯಾಯ ಹುಡುಕ್ತಾ ಇದ್ದೀವಿ. ಇಂದಿನ ಫಲಿತಾಂಶ ಗಮನಿಸಿದಾಗ ನನಗೆ 1977 ಮತ್ತು 1980ರಲ್ಲಿ ಕಾಂಗ್ರೆಸ್ ಪರವಾಗಿ ಬಂದ ಫಲಿತಾಂಶಗಳು ನೆನಪಾಗ್ತಿದೆ. ಭಾರತದ ಪ್ರಜಾಪ್ರಭುತ್ವ ಈವರೆಗೆ ಸಾಗಿ ಬಂದ ಹಾದಿ ಗಮನಿಸಿದರೆ, ವ್ಯಕ್ತಿ ಆಧರಿತ ನಿಲುವು ಇದ್ದೇ ಇರುವುದು ಕಂಡು ಬರುತ್ತೆ. ದೇಶದ ಮಟ್ಟದಲ್ಲಿ ಅದು ಮೋದಿ, ಇಂದಿರಾಗಾಂಧಿ ಅಥವಾ ನೆಹರು ಇರಬಹುದು. ರಾಜ್ಯಗಳ ಮಟ್ಟದಲ್ಲಿ ನವೀನ್ ಪಟ್ಯಾಯಕ್, ಜಯಲಲಿತಾ ಇರಬಹುದು. ವ್ಯಕ್ತಿಯ ಮುಖ ನೋಡಿ ಮತ ಚಲಾಯಿಸುವ ಪದ್ಧತಿ ಹಿಂದಿನಿಂದಲೂ ಇದೆ. ಮೋದಿಯನ್ನು ಬದಲಾಯಿಸಿ ಇನ್ನೊಬ್ಬ ನಾಯಕ ಬರುವವರೆಗೂ ಇದು ಮುಂದುವರಿಯುತ್ತೆ.

ಹಮೀದ್: ಭಾರತ ಪ್ರಜಾಪ್ರಭುತ್ವ ದೇಶವಾದರೂ ನಮ್ಮ ಜನರಿಗೆ ಇನ್ನೂ ಫ್ಯೂಡಲ್ ಮನಸ್ಥಿತಿ ಇದೆ ಅನ್ನೋದು ನಿಮ್ಮ ಮಾತಿನ ಅರ್ಥವೇ?

ರವೀಂದ್ರ ಭಟ್: ಈಗ ನನಗೆ ಹಾಗೆ ಅನ್ನಿಸ್ತಿದೆ.

ಹಮೀದ್: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಭಾರೀ ಪ್ರಬಲವಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಸ್ಥಾನ ಗೆದ್ದಿದ್ರು. ಈ ಬಾರಿ ಅಲ್ಲಿ 18ರ 20 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಜೈ ಶ್ರೀರಾಮ್ ಘೋಷಣೆಯ ವಿವಾದ ಬಿಜೆಪಿ ಪರವಾಗಿ ಪರಿಣಾಮ ಬೀರಿದಂತೆ ಇದೆ. ಇನ್ನೊಂದು ಗಮನಾರ್ಹ ವಿಷಯ ಅಂದ್ರೆ ಎಡಪಕ್ಷಗಳ ಮತಗಳು ತುಂಬಾ ಕಡಿಮೆಯಾಗಿವೆ. ಕಳೆದ ಬಾರಿ ಎಡಪಕ್ಷಗಳು ಅಲ್ಲಿ ಶೇ 26ರಷ್ಟು ಮತ ತೆಗೆದುಕೊಂಡಿದ್ವು. ಅಲ್ಲಿ ಹೇಗಾಗಿದೆ ನೋಡಿ, ಎಡಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಸೇರಿದ್ದಾರಂತೆ. ಸೈದ್ಧಾಂತಿಕವಾಗಿ ಎನ್‌ಡಿಎ ಬಲಪಂಥೀಯ ಅಲ್ವಾ. ಎಡಪಕ್ಷಗಳು ಮತ್ತು ಬಿಜೆಪಿ ಎರಡು ಧ್ರುವಗಳಿದ್ದಂತೆ. ಆದರೆ ಪಶ್ಚಿಮ ಬಂಗಾಳದಲ್ಲಿ ಹಾಗೆ ಆಗಿಲ್ಲ. ಎಡಪಂಥೀಯರೆಲ್ಲಾ ಬಿಜೆಪಿಗೆ ಹೋಗ್ತಿದ್ದಾರೆ.

ರವೀಂದ್ರ ಭಟ್: ಇನ್ನೊಂದು ಮುಖ್ಯ ಅಂಶವನ್ನು ನೀವು ಗಮನಿಸಬೇಕು. ಉತ್ತರ ಪ್ರದೇಶದಲ್ಲಿ ಕಡಿಮೆಯಾಗುವ ಸೀಟನ್ನು ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎನ್‌ಡಿಎ ಪಡೆಯುತ್ತೆ ಆಂತ ಮತಗಟ್ಟೆ ಸಮೀಕ್ಷೆ ಹೇಳ್ತಿತ್ತು. ಈಗ ಏನಾಗಿದೆ? ಉತ್ತರ ಪ್ರದೇಶದಲ್ಲಿ ಬಹಳ ಎನೂ ಕಡಿಮೆಯಾಗ್ತಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಸ್ಥಾನ ಸಿಕ್ಕಿದೆ. ಈಶಾನ್ಯ ಭಾರತದಲ್ಲಿ ಹೆಚ್ಚು ಸಿಕ್ಕಿದೆ. ಮತಗಟ್ಟೆ ಸಮೀಕ್ಷೆಗಳನ್ನು ಮೀರಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಸ್ವೀಪ್ ಮಾಡುವ ಟ್ರೆಂಡ್ ಅಂದರೆ ಒಂದು ರಾಜ್ಯದ ಎಲ್ಲ 26 ಸ್ಥಾನಗಳಲ್ಲಿ 26, 46 ಸ್ಥಾನಗಳಲ್ಲಿ 46 ಸ್ಥಾನಗಳನ್ನು ಗೆಲ್ಲುವ ಟ್ರೆಂಡ್ ಕಂಡು ಬರ್ತಿದೆ. ಇಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿನಿಷ್ಠೆಯೇ ಹೆಚ್ಚು ಕೆಲಸ ಮಾಡಿದಂತೆ ಕಾಣಿಸುತ್ತೆ.

ಹಮೀದ್: ನಿಮ್ಮ ಮಾತನ್ನು ಹೀಗೂ ನೋಡಬಹುದು. ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸೀಟ್ ಬರ್ತಿದೆ. ಅದಕ್ಕೆ ಅಮರಿಂದರ್ ಸಿಂಗ್ ಅವರ ಪ್ರಭಾವವೇ ಕಾರಣ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಈ ಚುನಾವಣೆಯ ಇನ್ನೊಂದು ಮುಖ್ಯ ಅಂಶ ಒಂದು ಥರ ಸ್ವೀಪ್ ಅನ್ನಿಸ್ತಾ ಉಂಟು ನನಗೆ.

ರವೀಂದ್ರ ಭಟ್: ನಮ್ಮ ದೇಶದಲ್ಲಿ ಮೊದಲಿಂದಲೂ ಹಿಂದಿ ಮಾತನಾಡುವ, ಹಿಂದಿ ಭಾಷಿಕ ರಾಜ್ಯಗಳು ವರ್ತಿಸುವ ರೀತಿಯೇ ಬೇರೆ. ದಕ್ಷಿಣದ ರಾಜ್ಯಗಳ ವಿಚಾರವೇ ಬೇರೆ. ಈಗ ನೋಡಿ, ಕರ್ನಾಟಕ ಬಿಟ್ಟು ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಮುನ್ನಡೆ. ಕೇರಳದಲ್ಲಿ ಕಾಂಗ್ರೆಸ್ ಇದ್ದರೂ, ಉಳಿದ ಪಕ್ಷಗಳ ಸಹಯೋಗದಿಂದ ಮಾತ್ರ  ಮುನ್ನಡೆ ಸಾಧಿಸುತ್ತಿದೆ. ಆಂಧ್ರ– ತೆಲಂಗಾಣ– ತಮಿಳುನಾಡಿನಲ್ಲಿ ಹಾಗೆ ಆಗಿಲ್ಲ. ಆಂದ್ರದಲ್ಲಿ ಜಗನ್, ತಮಿಳುನಾಡಿನಲ್ಲಿ ಸ್ಟಾಲಿನ್ ಅವರ ವ್ಯಕ್ತಿಗತ ಸಾಧನೆಯೇ ಮುಖ್ಯವಾಗ್ತಿದೆ. ದೇಶದ ವಿಚಾರಕ್ಕೆ ಈ ವಿದ್ಯಮಾನವನ್ನು ಹೋಲಿಸಿ ನೋಡಿ. ರಾಹುಲ್ ಗಾಂಧಿಯೂ ಸೇರಿದಂತೆ ಮೋದಿಯನ್ನು ಮೀರಿದ ಇನ್ನೊಬ್ಬ ನಾಯಕ ಕಳೆದ ಐದು ವರ್ಷಗಳಲ್ಲಿ ಬೆಳೆಯಲಿಲ್ಲ.

ಹಮೀದ್: ಹಿಂದುತ್ವ ಪ್ರತಿಪಾದನೆ, ರಾಷ್ಟ್ರರಕ್ಷಣೆಯನ್ನು ಮುನ್ನೆಲೆಗೆ ತಂದಿದ್ದು ಬಿಜೆಪಿಯ ಮುನ್ನಡೆಗೆ ಮುಖ್ಯ ಕಾರಣ ಅನ್ನಿಸುತ್ತೆ ಅಲ್ವಾ?

ರವೀಂದ್ರ ಭಟ್: ನಿಮ್ಮ ಮಾತು ನಿಜ. ಯಾವಾಗಲು ನೀರು ಹರಿಯುವ ದಿಕ್ಕಿಗೆ ವಿರುದ್ಧವಾಗಿ ಈಜುವುದು ಕಷ್ಟ. ವಿರೋಧ ಪಕ್ಷದವರು ಪ್ರವಾಹಕ್ಕೆ ವಿರುದ್ಧ ದಿಕ್ಕಿನಲ್ಲಿ ಈಜಲು ಹೋದರು. ಆದರೆ ಬಿಜೆಪಿ ನೀರು ಹರಿಯುವ ದಿಕ್ಕು ಅರಿತು ಅದರೊಂದಿಗೆ ಈಜಿತು. ಹಿಂದುತ್ವ, ದೇಶಪ್ರೇಮ, ದೇಶರಕ್ಷಣೆಯ ವಿಷಯವನ್ನು ಚೆನ್ನಾಗಿ ಬಳಸಿಕೊಂಡ್ರು. ಇವೆಲ್ಲದರಿಂದ ಮತದಾರರನ್ನು ಗೆಲ್ಲುವುದು ಸುಲಭವಾಯಿತು. ಬಿಜೆಪಿ ಕಳೆದ 5 ವರ್ಷಗಳಲ್ಲಿ ಏನೆಲ್ಲಾ ಸಾಧನೆ ಮಾಡಿತ್ತೋ ಅದನ್ನು ಇಟ್ಟುಕೊಂಡು ಈ ಚುನಾವಣೆ ನಡೆಯಿತಾ? ನನಗೇನೋ ಇಲ್ಲ ಅನ್ಸುತ್ತೆ. ಹೇಳಿಕೊಳ್ಳುವಂಥ ಸಾಧನೆ ಇಲ್ಲದಿದ್ದರೂ ಬಾಲಾಕೋಟ್ ದಾಳಿ, ಪಾಕಿಸ್ತಾನವನ್ನು ಹೆದರಿಸಿದ್ದೀವಿ, ರಾಮಮಂದಿರ ಕಟ್ತೀವಿ ಅಂತ್ಲೇ ಬಿಜೆಪಿ ಜನರ ಎದುರು ಹೋಯ್ತು.

ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳು ಇದ್ದವು. ಆದರೆ ಅವನ್ನು ಜನರಿಗೆ ಮನಸ್ಸು ಮುಟ್ಟುವಂತೆ ಹೇಳಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಲಿಲ್ಲ. ರಫೇಲ್ ಆರೋಪಗಳನ್ನು ಕಾಂಗ್ರೆಸ್ ಪ್ರಸ್ತಾಪಿಸಿದ್ದು ನಿಜ. ಆದರೆ ಜನರಿಗೆ ಅದು ಎಷ್ಟರಮಟ್ಟಿಗೆ ಅರ್ಥವಾಯಿತು. ಮನಮೋಹನ್ ಸಿಂಗ್ ಅವರಂಥ ಮಾಜಿ ಪ್ರಧಾನಿ ಕಾಂಗ್ರೆಸ್‌ನಲ್ಲಿ ಇದ್ದರು. ದೇಶಕ್ಕೆ ಅವರ ಕೊಡುಗೆಯೂ ದೊಡ್ಡದು. ಆದರೆ ಅದನ್ನು ಮತವಾಗಿ ಪರಿವರ್ತಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ.

ಹಮೀದ್: ಎನ್‌ಡಿಎ ವೈಫಲ್ಯಗಳನ್ನು ಕಾಂಗ್ರೆಸ್ ಎತ್ತಿ ಹೇಳಲಿಲ್ಲ. ಮಾತ್ರವಲ್ಲ ಇವರು ಏನು ಮಾಡ್ತೀವಿ ಅಂತ್ಲೂ ಜನರಿಗೆ ಅರ್ಥ ಮಾಡಿಸಲಿಲ್ಲ.

ರವೀಂದ್ರ ಭಟ್: ಹಾಗೆ ಹೇಳೋಕೆ ಆಗಲ್ಲ. ಕಾಂಗ್ರೆಸ್‌ನವರು ಪ್ರಣಾಳಿಕೆ ತಂದ್ರು, ನ್ಯಾಯ್ ಮಾಡ್ತೀವಿ ಅಂದ್ರು. ನನಗೆ ಅವರ ಪ್ರಣಾಳಿಕೆಗಿಂತಲೂ ಅವರ ಬಗ್ಗೆ ಜನರು ಏನು ಹೇಳ್ತಾರೆ ಅನ್ನೋದು ಮುಖ್ಯ ಅನ್ಸುತ್ತೆ. ರಾಹುಲ್ ಗಾಂಧಿ ಮೇಲೆ ನಮಗೆ ನಂಬಿಕೆಯೇ ಬರದಿದ್ರೆ ಅವರು ಏನು ಹೇಳಿದ್ರೆ ತಾನೆ ಜನರು ನಂಬ್ತಾರೆ. ನಾನು ರಾಹುಲ್ ಗಾಂಧಿ ಅಂತ ಒಬ್ಬರ ಬಗ್ಗೆ ಹೇಳ್ತಿಲ್ಲ. ಒಟ್ಟಾರೆ ನಮ್ಮ ದೇಶದ ವಿರೋಧ ಪಕ್ಷದ ನಾಯಕತ್ವಕ್ಕೆ ಜನರು ನಂಬಿಕೆ ಗಳಿಸಲು ಆಗಲಿಲ್ಲ ಎನ್ನುವುದು ನನ್ನ ಮಾತಿನ ತಾತ್ಪರ್ಯ. ಜನರಿಗೆ ಒಬ್ಬ ವ್ಯಕ್ತಿಯ ಬಗ್ಗೆ, ಆತನ ದೇಶ ಮುನ್ನಡೆಸುವ ಶಕ್ತಿಯ ಬಗ್ಗೆ ಭರವಸೆ ಬರದಿದ್ರೆ ಉಳಿದದ್ದು ನಿಷ್ಫಲ. ಮೋದಿ ಸಮರ್ಥರು ಅಂತ ನಮ್ಮ ದೇಶದ ಯುವಕರು, ಮಹಿಳೆಯರು ನಂಬಿದ್ದಾರೆ. ಅದೇ ಅವರಿಗೆ ಪ್ಲಸ್ ಪಾಯಿಂಟ್. ಉತ್ತರ ಪ್ರದೇಶದಲ್ಲಿ ಈಗ ದಲಿತರು ಕಾಂಗ್ರೆಸ್ ಜೊತೆಗೆ ಇಲ್ಲ. ಬಿಹಾರ ಉತ್ತರಾ ಖಂಡದಲ್ಲಿಯೂ ದಲಿತರು ಕಾಂಗ್ರೆಸ್‌ ಬೆಂಬಲಿಸ್ತಿಲ್ಲ ಅನ್ನೋದು ಗೊತ್ತಾಗ್ತಿದೆ. ಜಾತಿ ರಾಜಕಾಣರವನ್ನೂ ಮೀರಿ, ಯಾರು ಜನರಲ್ಲಿ ಭರವಸೆ ಮೂಡಿಸ್ತಾರೆ ಅನ್ನೋದು ನನಗೆ ಮುಖ್ಯ ಅನ್ಸುತ್ತೆ. ಕೊನೆಗೂ ನಾವು ವ್ಯಕ್ತಿ ಪೂಜೆಗೆ ಬರ್ತೀವಿ. ಇವನು ನಮ್ಮ ದೇಶವನ್ನು ಮುನ್ನಡೆಸಬಲ್ಲ ಅಂತ ಜನರಿಗೆ ಮನಸ್ಸಿಗೆ ಬಂದು ಬಿಟ್ಟರೆ ಅದನ್ನು ಅಷ್ಟು ಸುಲಭವಾಗಿ ಕಿತ್ತು ಹಾಕಲು ಆಗಲ್ಲ. ಅದೇ ಕಾರಣಕ್ಕಾಗಿಯೇ ನಮ್ಮ ದೇಶವನ್ನು ಇಂದಿರಾಗಾಂಧಿ, ನೆಹರು ಅಷ್ಟು ವರ್ಷ ಆಡಳಿತ ಮಾಡಲು ಸಾಧ್ಯವಾಯಿತು.

ಹಮೀದ್: ನಾನು ದಕ್ಷಿಣ ಕನ್ನಡದ ಪುಟ್ಟ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪ್ರಸ್ತಾಪಿಸಿದ ’ನ್ಯಾಯ್‘ ಬಗ್ಗೆ ಮಾತನಾಡಿದೆ. ಅಲ್ಲಿದ್ದ ಕೆಲಸಗಾರರು ನಾವು ನಂಬಲ್ಲ ಅಂದಿದ್ರು…

ರವೀಂದ್ರ ಭಟ್: ಅದನ್ನೇ ನಾನು ಹೇಳಿದ್ದು. ಜನರು ನಂಬಲ್ಲ ಅಂತ. ಒಬ್ಬ ವ್ಯಕ್ತಿ ಏನು ಹೇಳ್ತಾರೆ ಎನ್ನುವುದರಷ್ಟೇ, ಹೇಳುತ್ತಿರುವವರು ಯಾರು ಎನ್ನುವುದೂ ಜನರಿಗೆ ಮುಖ್ಯವಾಗುತ್ತೆ. ಜನರಿಗೆ ನನ್ನ ಬಗ್ಗೆಯೇ ನಂಬಿಕೆ ಬರದಿದ್ರೆ ನಾನು ಹೇಳುವ ಮಾತುಗಳನ್ನು ನಂಬಲ್ಲ. ಜನರಿಗೆ ಕಾಂಗ್ರೆಸ್ ಕೊಡುವ ಭರವಸೆ ಬಗ್ಗೆ ಅಲ್ಲ, ಅದನ್ನು ಮುನ್ನಡೆಸುವ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆಯೇ ನಂಬಿಕೆ ಇಲ್ಲ. ಅದರ ಪರಿಣಾಮವನ್ನು ಕಾಂಗ್ರೆಸ್ ಈಗ ಎದುರಿಸ್ತಾ ಇದೆ.

ಹಮೀದ್: ಪ್ರಣಾಳಿಕೆ ಮಟ್ಟದಲ್ಲಿ ನೋಡಿದ್ರೆ, ಬಿಜೆಪಿಗಿಂತ ಕಾಂಗ್ರೆಸ್ ಪ್ರಣಾಳಿಕೆ ಚೆನ್ನಾಗಿದೆ.

ರವೀಂದ್ರ ಭಟ್: ಹೌದು, ಕಾಂಗ್ರೆಸ್ ಪ್ರಣಾಳಿಕೆ ಚೆನ್ನಾಗಿತ್ತು. ಅದರೂ ಜನರನ್ನು ನಂಬಿಸಲು ಅವರಿಗೆ ಸಾಧ್ಯವಾಗಲಿಲ್ಲ. ಜನರ ಮೇಲೆ ಪರಿಣಾಮ ಬೀರಲು ಆಗಲಿಲ್ಲ. ಕಾಂಗ್ರೆಸ್‌ನ ದೊಡ್ಡ ವೈಫಲ್ಯ ಅಂದ್ರೆ, ಅವರು ರೂಪಿಸಿದ್ದ ಮಹತ್ವದ ಯೋಜನೆಯಿಂದ ಜನರ ಬದುಕು ಹೇಗೆ ಸುಧಾರಿಸಬಹುದು ಎಂಬುದನ್ನು ಜನರ ಮುಂದೆ ಇಡಲು ಅವರಿಗೆ ಸಾಧ್ಯವಾಗಲಿಲ್ಲ. ಮೋದಿ ಸರ್ಕಾರ ಕಳೆದ ಐದು ವರ್ಷಗಳ ವೈಫಲ್ಯದಿಂದ ಜನರ ಬದುಕಿನ ಮೇಲೆ ಆದ ಪರಿಣಾಮಗಳನ್ನು ವಿವರಿಸಲೂ ಕಾಂಗ್ರೆಸ್ ವಿಫಲವಾಯಿತು. ಈ ಫಲಿತಾಂಶ ಅದನ್ನು ತೋರಿಸುತ್ತೆ.

ಹಮೀದ್: ರಮಿಳುನಾಡಿನಲ್ಲಿ ಡಿಎಂಕೆಗೆ ಹೆಚ್ಚು ಸೀಟ್ ಬಂದಿದೆ. ಆದರೆ ಅದೇನೂ ಲೋಕಸಭೆಯ ಮೇಲೆ ಪರಿಣಾಮ ಬೀರುವಂತೆ ಇಲ್ಲ. ಆದರೆ ತಮಿಳುನಾಡು ವಿಧಾನಸಭೆ ಮಾತ್ರ ಆಸಕ್ತಿಕರ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ...

ರವೀಂದ್ರ ಭಟ್: ಈಗಲೇ ಅದನ್ನೆಲ್ಲಾ ಹೇಳಲು ಆಗಲ್ಲ. ಇನ್ನೂ ಸ್ವಲ್ಪ ಸಮಯ ಕಳೆದ ಮೇಲೆ ಇಂಥ ಇನ್ನಷ್ಟು ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡಬಹುದು. ಮತ್ತೆ ಮಾತಿಗೆ ಕೂರೋಣ ಅಲ್ವಾ ಹಮೀದ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !