ಗುರುವಾರ , ಜುಲೈ 7, 2022
23 °C

ರಾಜಕೀಯ ವಿಶ್ಲೇಷಣೆ | ಮಹಾರಾಷ್ಟ್ರ–ಹರಿಯಾಣ ಫಲಿತಾಂಶ: ಬಿಜೆಪಿ, ಕಾಂಗ್ರೆಸ್‌ಗೆ ಪಾಠ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳ ಫಲಿತಾಂಶ ಬಹುತೇಕ ನಿಚ್ಚಳವಾಗುತ್ತಿದೆ. ಮಧ್ಯಾಹ್ನ 3 ಗಂಟೆ ವೇಳಗೆ ಮಹಾರಾಷ್ಟ್ರದಲ್ಲಿ ಬಿಜೆಪಿ 102, ಶಿವಸೇನೆ 55, ಕಾಂಗ್ರೆಸ್‌ 44, ಎನ್‌ಸಿಪಿ 55, ಇತರರು 32 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದ್ದರು. ಅತ್ತ ಹರಿಯಾಣದಲ್ಲಿ ಬಿಜೆಪಿ 36, ಕಾಂಗ್ರೆಸ್‌ 34, ಜೆಜೆಪಿ 10 ಮತ್ತು ಇತರರು 10 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದ್ದರು.

ಈ ಚುನಾವಣೆಯ ಫಲಿತಾಂಶ ದೇಶದ ಎರಡೂ ರಾಜಕೀಯ ಪಕ್ಷಗಳ ಚುಕ್ಕಾಣಿ ಹಿಡಿದವರ ಹುಬ್ಬೇರುವಂತೆ ಮಾಡಿರುವುದು ಸುಳ್ಳಲ್ಲ. ಗೆಲುವು ಸುಲಭದ ತುತ್ತು ಎಂದು ಬೀಗಿದ್ದ ಬಿಜೆಪಿಗೆ ‘ಜನರನ್ನು ಅರ್ಥ ಮಾಡಿಕೊಳ್ಳುವುದು ನೀವಂದುಕೊಂಡಷ್ಟು ಸುಲಭವಲ್ಲ’ ಎನ್ನುವ ಸಂದೇಶವನ್ನು ಈ ಫಲಿತಾಂಶ ರವಾನಿಸಿದೆ. ‘ತುಸು ಕಷ್ಟಪಟ್ಟಿದ್ದರೆ, ಸಂಘಟಿತ ಶ್ರಮ ಹಾಕಿದ್ದರೆ ಗೆಲುವಿನ ಸಾಧ್ಯತೆ ಇತ್ತು’ ಎಂಬ ಸಂದೇಶವನ್ನು ಕಾಂಗ್ರೆಸ್‌ ನಾಯಕರಿಗೆ ನೀಡಿದೆ.

ಫಲಿತಾಂಶ: ತಾಜಾ ಅಪ್‌ಡೇಟ್‌ಗೆ ಇಲ್ಲಿ ಕ್ಲಿಕ್ ಮಾಡಿ ಲಭ್ಯ


ಮಹಾರಾಷ್ಟ್ರದಲ್ಲಿ ಪಕ್ಷಗಳ ಬಲಾಬಲ ಮಧ್ಯಾಹ್ನ 3.36ರ ಪಟ್ಟಿ

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ–ಶಿವಸೇನೆ ಮೈತ್ರಿ 157 ಸ್ಥಾನಗಳೊಂದಿಗೆ ಅಧಿಕಾರದ ಸನಿಹಕ್ಕೆ ಬಂದು ನಿಂತಿದೆ. ಮಾಮೂಲಿ ಸಂದರ್ಭವಾಗಿದ್ದರೆ ಇದು ಬಿಜೆಪಿಗೆ ಖುಷಿಕೊಡಬೇಕಿದ್ದ ಸಂಗತಿ. ಈ ಬಾರಿ ಮಾತ್ರ ಪರಿಸ್ಥಿತಿ ಬೇರೆಯೇ ಆಗಿದೆ. ಶಿವಸೇನೆಯೊಂದಿಗೆ ಮೈತ್ರಿ ಮಾತುಕತೆ ಹಾಗೂ ಪ್ರಚಾರದ ಸಂದರ್ಭದಲ್ಲಿಯೂ ಬಿಜೆಪಿ ನಾಯಕರು ‘ಮಹಾರಾಷ್ಟ್ರದಲ್ಲಿ ನಾವು ಸ್ವಂತ ಬಲದ ಮೇಲೆ ಆಡಳಿತ ಮಾಡುತ್ತೇವೆ’ ಹೇಳುತ್ತಿದ್ದರು. ಆದರೆ ವಿದರ್ಭ ಸೇರಿದಂತೆ ರಾಜ್ಯದಲ್ಲಿ ಬಿಜೆಪಿಯ ಪ್ರಾಬಲ್ಯ ಇರುವ ಪ್ರದೇಶ ಎನ್ನಲಾದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅದರ ರಾಷ್ಟ್ರೀಯ ನಾಯಕರಿಗೆ ತೃಪ್ತಿ ತಂದಿಲ್ಲ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ

ಚುನಾವಣೆಗೆ ಮೊದಲು ನಡೆದ ಮೈತ್ರಿ ಮಾತುಕತೆಯಲ್ಲಿ ಸಮಸಮ ಸೀಟು ಹಂಚಿಕೆಗೆ ಪಟ್ಟು ಹಿಡಿದಿದ್ದ ಶಿವಸೇನೆ ಬಿಜೆಪಿಯ ಪಾರಮ್ಯವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿತ್ತು. ತಮಗೆ ಸಿಗಬೇಕಾದಷ್ಟು ಮನ್ನಣೆ ಸಿಗುತ್ತಿಲ್ಲ ಎನ್ನುವ ಅಸಮಾಧಾನವೂ ಶಿವಸೇನೆ ನಾಯಕರಿಗೆ ಇತ್ತು. ಆದರೆ ಈಗ ಶಿವಸೇನೆಯ ಸಾಧನೆ ನಿರೀಕ್ಷಿತ ಮಟ್ಟದಲ್ಲಿಯೇ ಇದ್ದು, ಅದರ ನಾಯಕರಿಗೆ ಖುಷಿ ಕೊಟ್ಟಿದೆ.

ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ನಿರೀಕ್ಷೆ ಮೀರಿದ ಸಾಧನೆ ಮಾಡಿವೆ. ಪ್ರಸ್ತುತ ಈ ಮೈತ್ರಿ ಒಟ್ಟು 99 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಕಳೆದ ಚುನಾವಣೆಯಲ್ಲಿ ಕ್ರಮವಾಗಿ ಈ ಎರಡೂ ಪಕ್ಷಗಳು ಸೇರಿ 83 (42+41) ಸ್ಥಾನಗಳನ್ನು ಗಳಿಸಿದ್ದವು ಎಂಬುದನ್ನು ಗಮನಿಸಿದರೆ ಈ ಪಕ್ಷಗಳಿಗೆ ಖುಷಿಪಡಲು ಇರುವ ಕಾರಣ ಅರ್ಥವಾಗುತ್ತದೆ.

ಇದನ್ನೂ ಓದಿ: ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ


ಹರಿಯಾಣದಲ್ಲಿ ಬಲಾಬಲ. ಮಧ್ಯಾಹ್ನ 3.34ರ ಪಟ್ಟಿ.

ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲು ನಾವು ಒಪ್ಪುವುದಿಲ್ಲ, ಮೈತ್ರಿಯ ನಿಯಮಗಳು ಮತ್ತು ರೂಪುರೇಖೆಗಳನ್ನು ನಾವೇ ನಿರ್ಧರಿಸುತ್ತೇವೆ ಎಂದು ಬಿಜೆಪಿ ನಾಯಕರು ಈವರೆಗೆ ಹೇಳುತ್ತಾ ಬಂದಿದ್ದರು. ಆದರೆ ಈಗ ಶಿವಸೇನೆಯ ಗಣನೀಯ ಸಾಧನೆಯ ಮುಂದೆ ಇಂಥ ಷರತ್ತುಗಳು ಅರ್ಥ ಕಳೆದುಕೊಂಡಿವೆ. ಮೈತ್ರಿಯಲ್ಲಿ ನಮಗೆ ಸಮಸಮ ಅಧಿಕಾರ ಬೇಕು, ನಮ್ಮನ್ನು ಬಿಟ್ಟು ನೀವು ಸರ್ಕಾರ ಮಾಡಲು ಸಾಧ್ಯವಿಲ್ಲ ಎನ್ನುತ್ತಿರುವ ಶಿವಸೇನೆ ಸಹಜವಾಗಿಯೇ ಹೆಚ್ಚಿನದ್ದನ್ನು ಕೇಳುವ ಇರಾದೆ ಇಟ್ಟುಕೊಂಡಿದೆ.

ಮಹಾರಾಷ್ಟ್ರದ 2014ರ ಚುನಾವಣೆಯಲ್ಲಿ ಬಿಜೆಪಿಯು ಶೇ 27.59 ಮತಗಳಿಕೆಯೊಂದಿಗೆ 122 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ಸ್ಥಾನ ಗೆದ್ದು ಗದ್ದುಗೆ ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿ ದೇವೇಂದ್ರ ಫಡಣವೀಸ್ ಇದ್ದರು. ಆದರೆ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ ಎಂಬಂತೆ ಆಗಿದೆ.

ಇದನ್ನೂ ಓದಿ: ಮಾತೋಶ್ರೀ ಇರುವಲ್ಲಿಯೇ ಶಿವಸೇನೆಗೆ ಸೋಲು: ಕಾಂಗ್ರೆಸ್‌ಗೆ ಗೆಲುವು

90 ಸದಸ್ಯ ಬಲದ ಹರಿಯಾಣದಲ್ಲಿ ಬಿಜೆಪಿ ‘ಮಿಷನ್ 75’ ಗುರಿಯೊಂದಿಗೆ ಚುನಾವಣೆ ಪ್ರಚಾರ ಆರಂಭಿಸಿತ್ತು. ಆದರೆ ಈಗ ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಿರುವ 46 ಸ್ಥಾನ ಮುಟ್ಟಲು ಇನ್ನೂ ಹೆಣಗಾಡುತ್ತಿದೆ. ಆಂತರಿಕ ಭಿನ್ನಮತದಿಂದಲೇ ಸುದ್ದಿಯಾಗಿದ್ದ ಕಾಂಗ್ರೆಸ್‌ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿ ಬೀಗಿದೆ.

ಹರಿಯಾಣದಲ್ಲಿ ಕಾಂಗ್ರೆಸ್‌ 34 ಸ್ಥಾನಗಳಲ್ಲಿ ಮುನ್ನಡೆ / ಗೆಲುವು ದಾಖಲಿಸಿದೆ. ಹೊಸ ಪಕ್ಷ ಜೆಜೆಪಿ 10 ಕ್ಷೇತ್ರಗಳಲ್ಲಿ ಗೆಲುವು / ಮುನ್ನಡೆಯಲ್ಲಿದ್ದು, ಕಿಂಗ್‌ಮೇಕರ್ ಆಗುವ ಎಲ್ಲ ಲಕ್ಷಣಗಳನ್ನು ತೋರಿಸಿದೆ. ಪಕ್ಷೇತರರು ಹರಿಯಾಣದ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಹರಿಯಾಣ ರಾಜಕೀಯ ತೆಗೆದುಕೊಳ್ಳುವ ತಿರುವು ಇಂಥದ್ದೇ ಎಂದು ಈಗಲೇ ಹೇಳಲು ಆಗುವುದಿಲ್ಲ.

ಇದನ್ನೂ ಓದಿ: ಹರಿಯಾಣದ 'ಕೀಲಿಕೈ' ಹಿಡಿದಿರುವ JJP: ಯಾವುದೀ ಹೊಸ ಪಕ್ಷ?


ಮಹಾರಾಷ್ಟ್ರ ಫಲಿತಾಂಶ. ಮಧ್ಯಾಹ್ನ 3.34ಕ್ಕೆ ಇದ್ದಂತೆ

ಈ ಫಲಿತಾಂಶವನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು

ರಾಜ್ಯಗಳ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳು ಮತ್ತು ರಾಷ್ಟ್ರಮಟ್ಟದ ಲೋಕಸಭೆ ಚುನಾವಣೆಗಳಲ್ಲಿ ಮತ ಚಲಾಯಿಸುವಾಗ ಮತದಾರರು ಖಂಡಿತ ಬೇರೇಬೇರೆ ದೃಷ್ಟಿಕೋನ ಹೊಂದಿರುತ್ತಾರೆ. ಈ ಎರಡೂ ರಾಜ್ಯಗಳ ಫಲಿತಾಂಶ ಈ ಅಂಶವನ್ನು ಸಾರಿ ಹೇಳುತ್ತದೆ. ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸಾಧಿಸಿರುವ ಹಿನ್ನಡೆಯನ್ನು ನರೇಂದ್ರ ಮೋದಿ ಆಡಳಿತದ ಹಿನ್ನಡೆ ಎಂದು ವ್ಯಾಖ್ಯಾನಿಸಲು ಆಗುವುದಿಲ್ಲ.

ರಾಷ್ಟ್ರೀಯವಾದ ಮತ್ತು ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಬಿಜೆಪಿ ಚುನಾವಣೆ ವಿಷಯವಾಗಿಸಲು ಯತ್ನಿಸಿತು. ಎರಡೂ ರಾಜ್ಯಗಳ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪ್ರಬಲವಾಗಿ ಇದೇ ವಿಷಯಗಳನ್ನು ಪ್ರಸ್ತಾಪಿಸುತ್ತಿತ್ತು. ಆದರೆ ಮತದಾರರು ಮಾತ್ರ ಇದಕ್ಕೆ ಹೊರತಾದ ಸಂಗತಿಗಳೂ ನಮಗೆ ಮುಖ್ಯ ಎಂದು ತೋರಿಸಿಕೊಟ್ಟರು.

ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನದ ಮೇಲೆ ಶಿವಸೇನೆ ಕಣ್ಣು: ಅಧಿಕಾರದ ಸಮಾನ ಹಂಚಿಕೆಗೂ ಪಟ್ಟು


ಹರಿಯಾಣ ಫಲಿತಾಂಶ. ಮಧ್ಯಾಹ್ನ 3.34ಕ್ಕೆ ಇದ್ದಂತೆ

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಬಿಜೆಪಿ–ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿಗಳು 2014 ಚುನಾವಣೆಯಲ್ಲಿ ಗಮನಾರ್ಹ ಸ್ಥಾನಗಳಲ್ಲಿ ಜಯಗಳಿಸಿದ್ದರು. ಈ ಬಾರಿ ವಿದರ್ಭ ಪ್ರಾಂತ್ಯದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಇದಕ್ಕೆ ಮತದಾನದ ಪ್ರಮಾಣ ಕಡಿಮೆಯಾದದ್ದು ಕಾರಣ ಎನ್ನಲಾಗುತ್ತಿದೆ. ಕೇಂದ್ರ ಸಚಿವ ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಭದ್ರಕೋಟೆ ವಿದರ್ಭ. ಬಿಜೆಪಿಯ ಉನ್ನತ ನಾಯಕರೊಂದಿಗೆ ನಿತಿನ್ ಗಡ್ಕರಿ ಹೊಂದಿರುವ ಭಿನ್ನಮತವೂ ಮೈತ್ರಿ ಅಭ್ಯರ್ಥಿಗಳ ಸಾಧನೆ ಕಳಪೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಬೇಸಾಯಗಾರರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿಯೂ ಮೈತ್ರಿ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ತಮ್ಮ ಸಂಕಷ್ಟಕ್ಕೆ ರಾಜ್ಯ ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಅಸಮಾಧಾನ ಈ ಪ್ರದೇಶಗಳಲ್ಲಿ ವಾಸಿಸುವ ಕೃಷಿಕ ಕುಟುಂಬಗಳಲ್ಲಿ ಮನೆಮಾಡಿರುವುದು ಇದಕ್ಕೆ ಕಾರಣ.

ಫಲಿತಾಂಶ: ತಾಜಾ ಅಪ್‌ಡೇಟ್‌ಗೆ ಇಲ್ಲಿ ಕ್ಲಿಕ್ ಮಾಡಿ ಲಭ್ಯ

ಆದರೆ ಹರಿಯಾಣಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ಅಷ್ಟು ಅತೃಪ್ತಿ ಇದ್ದಂತೆ ಇಲ್ಲ. ಚುನಾವಣೆ ಭರವಸೆಗಳನ್ನು ಈಡೇರಿಸದಿರುವುದು ಮತ್ತು ಬಿಗಿ ಆಡಳಿತ ಕೊಡುವಲ್ಲಿನ ವೈಫಲ್ಯ ಹರಿಯಾಣದಲ್ಲಿ ಬಿಜೆಪಿ ಸೋಲಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ಹೆಚ್ಚು ಗಮನ ನೀಡದಿದ್ದರೂ, ನಿರೀಕ್ಷೆಯನ್ನೇ ಮಾಡದಿದ್ದರೂ ಹರಿಯಾಣದಲ್ಲಿ ಜನರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಹರಿಯಾಣದ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಸಾಧನೆ ಸಹ ದೇಶದ ಗಮನ ಸೆಳೆದಿದೆ.

ಹರಿಯಾಣದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದರೂ, ಇದು ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಅಷ್ಟೇನೂ ಸಮಾಧಾನ ತರುವ ಸಂಗತಿಯಲ್ಲ. ಅಶೋಕ್ ತನ್ವಾರ್ ಅವರನ್ನು ಹರಿಯಾಣ ರಾಜ್ಯ ಘಟಕದ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ನೇಮಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ತನ್ವಾರ್‌ ಪಕ್ಷಕ್ಕೆ ಕೈಕೊಟ್ಟಿದ್ದರು. ಕೊನೇ ಗಳಿಗೆಯಲ್ಲಿ ಸೋನಿಯಾಗಾಂಧಿ ಸೂಚನೆಗೆ ಓಗೊಟ್ಟು ಭೂಪಿಂದರ್ ಸಿಂಗ್ ಹೂಡಾ ಪಕ್ಷ ಜವಾಬ್ದಾರಿ ಹೊತ್ತುಕೊಂಡಿದ್ದರು. ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯಾಗಿ ಕುಮಾರಿ ಸೆಲ್ಜಾ ಇದ್ದರೂ ಹರಿಯಾಣದಲ್ಲಿ ಕಾಂಗ್ರೆಸ್ ಮಾಡಿರುವ ಈ ಸಾಧನೆಗೆ ಹೂಡಾ ಅವರ ಪ್ರಭಾವ ಮತ್ತು ಪರಿಶ್ರಮ ಕಾರಣ ಎಂದೇ ರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು