ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಮಹಾಯುತಿ: ಬಿಜೆಪಿಗೆ 150+14, ಶಿವಸೇನೆಗೆ 124

Last Updated 17 ಅಕ್ಟೋಬರ್ 2019, 9:53 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಈ ಬಾರಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯನ್ನು ಮಹಾಯುತಿ ಎಂದು ಮಹಾರಾಷ್ಟ್ರದ ದೋಸ್ತಿಗಳು ಕರೆದುಕೊಂಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳ ಪೈಕಿ ಶಿವಸೇನೆ 124 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದಾಗಿಯೂ, ಬಿಜೆಪಿ ತನ್ನ ಇತರ ಮಿತ್ರಪಕ್ಷಗಳಾದ ಆರ್‌ಪಿಐ, ಆರ್‌ಎಸ್‌ಪಿ ಜತೆ ಸೇರಿ 150+14 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿಯು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಶುಕ್ರವಾರ ಘೋಷಿಸಿದರು.

ನಾಗಪುರ ನೈರುತ್ಯ ಕ್ಷೇತ್ರದಿಂದ ಶುಕ್ರವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ ದೇವೇಂದ್ರ ಫಡಣವೀಸ್‌ ಅಲ್ಲಿಂದ ನೇರವಾಗಿ ಮುಂಬೈಗೆ ಆಗಮಿಸಿದರು. ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಸೀಟು ಹಂಚಿಕೆ ಘೋಷಿಸಿದರು.

‘ಶಿವಸೇನೆಯೊಂದಿಗೆ ಹಲವು ವಿಷಯಗಳಲ್ಲಿ ನಮಗೆ ಭಿನ್ನಾಭಿಪ್ರಾಯಗಳಿವೆ. ಆದರೂ ನಮ್ಮನ್ನು ಹಿಂದುತ್ವ ಎಂಬ ವಿಚಾರ ಬೆಸೆದಿದೆ. ಮಹಾ ಯುತಿ ಈ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಲಿದೆ,’ ಎಂದು ಪಡಣವೀಸ್‌ ಹೇಳಿದರು.

ಮಹಾರಾಷ್ಟ್ರ ವಿಧಾಸನಭೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ವಿಧಾನಸಭೆ ಒಟ್ಟು ಸ್ಥಾನಗಳ ಪೈಕಿ ಶೇ. 50ರಷ್ಟನ್ನು ಪಡೆಯಲು ಈ ಬಾರಿ ನಿರ್ಧರಿಸಿತ್ತು. 50:50 ಸೂತ್ರದ ಅನ್ವಯ ಸೀಟು ಹಂಚಿಕೆ ನಡೆಯಬೇಕು ಎಂದು ಶಿವಸೇನೆಯ ಹಲವು ನಾಯಕರು ಹೇಳಿಕೊಂಡಿದ್ದರು. ಇದು ಸಾಧ್ಯವಾಗದೇ ಹೋದರೆ, ಮೈತ್ರಿ ಮುರಿದುಕೊಳ್ಳುವುದಾಗಿಯೂ ಹೇಳಿಕೆ ನೀಡಿದ್ದರು. ಆದರೆ, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಮುತುವರ್ಜಿಯಿಂದಾಗಿ ಮೈತ್ರಿ ಗಟ್ಟಿಗೊಂಡಿದೆ.

2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆಯ ಮೈತ್ರಿ ಮುರಿದು ಬಿದ್ದಿತ್ತು. ಆದರೆ, ಅತಂತ್ರ ವಿಧಾನಸಭೆ ಸೃಷ್ಟಿಯ ನಂತರ ಎರಡೂ ಪಕ್ಷಗಳೂ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು.

ಮಹಾ ಯುತಿಯು ಕಾಂಗ್ರೆಸ್‌–ಎನ್‌ಸಿಪಿ ನೇತೃತ್ವದ ಮಹಾ ಅಘಾಡಿಯನ್ನು ಈಗಿರುವ ಸಂಖ್ಯೆಗಿಂತಲೂ ಕಡಿಮೆ ಸಂಖ್ಯೆಗೆ ಕುಗ್ಗಿಸಲಿದೆ ಎಂದು ಮೈತ್ರಿ ನಾಯಕರು ಅಬ್ಬರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT