ಮಹಾರಾಷ್ಟ್ರದಲ್ಲಿ ಶಿವಸೇನಾ–ಬಿಜೆಪಿ ಕದನ ವಿರಾಮ: ಮೈತ್ರಿಕೂಟಗಳ ನಡುವೆ ಹಣಾಹಣಿ

ಬುಧವಾರ, ಮೇ 22, 2019
32 °C
ಸಣ್ಣ ಪಕ್ಷಗಳಿಗೆ ಹೆಚ್ಚಿದ ಬೇಡಿಕೆ

ಮಹಾರಾಷ್ಟ್ರದಲ್ಲಿ ಶಿವಸೇನಾ–ಬಿಜೆಪಿ ಕದನ ವಿರಾಮ: ಮೈತ್ರಿಕೂಟಗಳ ನಡುವೆ ಹಣಾಹಣಿ

Published:
Updated:
Prajavani

ಮುಂಬೈ: ಮಹಾರಾಷ್ಟ್ರದಲ್ಲಿ ಎರಡು ಪ್ರಬಲ ವಿರೋಧ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ನಡೆಯುವುದು ಬಹುತೇಕ ಖಚಿತವಾಗಿದೆ.

ಕಳೆದ ಕೆಲವು ದಿನಗಳಿಂದ ಬಹಿರಂಗವಾಗಿ ಕಚ್ಚಾಡುತ್ತಿದ್ದ ಬಿಜೆಪಿ–ಶಿವಸೇನಾ ಮತ್ತೆ ಒಗ್ಗೂಡಿ ಲೋಕಸಭೆ ಚುನಾವಣೆ ಎದುರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಸ್ಪಷ್ಟ ರಾಜಕೀಯ ಚಿತ್ರಣ ಗೋಚರಿಸುತ್ತಿದೆ.

ಕಾಂಗ್ರೆಸ್ ಜೊತೆ ಎನ್‌ಸಿಪಿ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದು, ಔರಂಗಾಬಾದ್‌ ಮತ್ತು ಅಹಮದ್‌ನಗರ ಲೋಕಸಭಾ ಕ್ಷೇತ್ರಗಳ ಬಗ್ಗೆ ನಿರ್ಧಾರವಾಗಬೇಕಿದೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಮಂಗಳವಾರ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆ ಗಮನಿಸಿದ ನಂತರ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ಮತ್ತು ಕಾಂಗ್ರೆಸ್‌ –ಎನ್‌ಸಿಪಿ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾಗಿದೆ.

ಮಹಾರಾಷ್ಟ್ರದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಒಟ್ಟೊಟ್ಟಿಗೆ ನಡೆಯಲಿದ್ದು ಕಳೆದ ಚುನಾವಣೆ ಸನ್ನಿವೇಶವೇ ಕಂಡು ಬರಲಿದೆ. ರಾಮದಾಸ್‌ ಆಠವಲೆ ನೇತೃತ್ವದ ಆರ್‌ಪಿಐ (ಆಠವಲೆ), ವಿನಾಯಕ್‌ ಮೇಟೆ ನೇತೃತ್ವದ ಶಿವ ಸಂಗ್ರಾಮ ಮತ್ತು ಮಹಾದೇವ್‌ ಜಂಕಾರ್‌ ನೇತೃತ್ವದ ರಾಷ್ಟ್ರೀಯ ಸಮಾಜ ಪಕ್ಷವು ಬಿಜೆಪಿ–ಶಿವಸೇನಾ ನೇತೃತ್ವದ ‘ಮಹಾಯುಟಿ’ (ಮಹಾಮೈತ್ರಿ) ಭಾಗವಾಗಿವೆ.

ಕಾಂಗ್ರೆಸ್‌–ಎನ್‌ಸಿಪಿ ನೇತೃತ್ವದ ಮಹಾಘಟಬಂಧನದಲ್ಲಿ ಪ್ರೊ. ಜೋಗೇಂದ್ರ ಕಾವಡೆ ಅವರ ಪೀಪಲ್ಸ್‌ ರಿಪಬ್ಲಿಕನ್‌ ಪಾರ್ಟಿ, ರಾಜೇಂದ್ರ ಗವಾಯಿ ನೇತೃತ್ವದ ಆರ್‌ಪಿಐ, ಜಯಂತ್‌ ಪಾಟೀಲ ಅವರ ರೈತರು ಮತ್ತು ಕೂಲಿಕಾರ್ಮಿಕರ ಪಕ್ಷಗಳಿವೆ.

ಉಳಿದಂತೆ ಸಣ್ಣಪುಟ್ಟ ಪಕ್ಷಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಎರಡೂ ಮೈತ್ರಿಕೂಟಗಳು ಹವಣಿಸುತ್ತಿವೆ.

ಹಿತೇಂದ್ರ ಠಾಕೂರ್‌ ಅವರ ಬಹುಜನ ವಿಕಾಸ ಅಖಾಡಿ ಸೇರಿದಂತೆ ಹಲವು ಸಣ್ಣ ಪಕ್ಷಗಳು ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಯಾವ ಮೈತ್ರಿಕೂಟ ಸೇರಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿವೆ.

ರಾಜ್‌ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮತ್ತು ಪ್ರಕಾಶ್‌ ಅಂಬೇಡ್ಕರ್‌ ಅವರ ಭಾರಿಪ ಬಹುಜನ ಮಹಾಸಂಘವನ್ನು (ಬಿಬಿಪಿ) ತೆಕ್ಕೆಗೆ ತೆಗೆದುಕೊಳ್ಳುವುದು ಪವಾರ್‌ ಬಯಕೆಯಾಗಿದೆ. ಆದರೆ, ಇದಕ್ಕೆ ಕಾಂಗ್ರೆಸ್‌ ಒಪ್ಪುತ್ತಿಲ್ಲ.

ರಾಜ್ ಠಾಕ್ರೆ ಅವರ ಹಿಂದಿ ಭಾಷಿಕರ ವಿರೋಧಿ ನಿಲುವು ಉತ್ತರ ಪ್ರದೇಶ, ಬಿಹಾರದಲ್ಲಿ ತಮಗೆ ಮುಳುವಾಗಬಹುದು ಎನ್ನುವುದು ಕಾಂಗ್ರೆಸ್‌ ಆತಂಕ.

ಅದೇ ರೀತಿ ಓವೈಸಿ ಸಹೋದರರ ಎಐಎಂಐಎಂ ಮತ್ತು ಕೆ. ಚಂದ್ರಶೇಖರ್‌ ನೇತೃತ್ವದ ಟಿಆರ್‌ಎಸ್‌ ಜತೆಗೆ ಪ್ರಕಾಶ್ ಅಂಬೇಡ್ಕರ್‌ ಕೈಜೋಡಿಸಿರುವ ಕಾರಣ ಅವರನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ.

ಎನ್‌ಸಿಪಿಯು ರಾಜ್ಯ ರಾಜಕಾರಣದ ಲಾಭ, ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಕಾಂಗ್ರೆಸ್‌ಗೆ ರಾಷ್ಟ್ರ ರಾಜಕಾರಣದ ಲೆಕ್ಕಾಚಾರದ ಚಿಂತೆಯಾಗಿದೆ.

ಬಿಜೆಪಿ ಬೆಂಬಲ ಪಡೆದು ರಾಜ್ಯಸಭಾ ಸದಸ್ಯರಾದ ನಾರಾಯಣ ರಾಣೆ ಅವರ ಮಾಹಾರಾಷ್ಟ್ರ ಸ್ವಾಭಿಮಾನ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಮಹಾರಾಷ್ಟ್ರ ಕೊಂಕಣ್‌ (ಕರಾವಳಿ) ಭಾಗದಲ್ಲಿ ರಾಣೆ ಪ್ರಭಾವ ಹೊಂದಿದ್ದಾರೆ.

ಬಿಜೆಪಿ–ಸೇನಾ ಮೈತ್ರಿ ಅಚ್ಚರಿ ಮೂಡಿಸಿಲ್ಲ: ಪವಾರ್

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ನಡುವಿನ ಚುನಾವಣಾ ಪೂರ್ವ ಹೊಂದಾಣಿಕೆ ತಮಗೇನೂ ಅಚ್ಚರಿ ತಂದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

‘ಚುನಾವಣೆಯನ್ನು ಒಟ್ಟಿಗೆ ಎದುರಿಸಲು ನಿರ್ಧರಿಸುವ ಆ ಪಕ್ಷಗಳ ನಡೆಯಲ್ಲಿ ಹೊಸತೇನೂ ಇಲ್ಲ. 25 ವರ್ಷಗಳಿಂದ ಒಂದಾಗಿಯೇ ಚುನಾವಣೆ ಎದುರಿಸುತ್ತಿರುವ ಉಭಯ ಪಕ್ಷಗಳು, ಸೀಟು ಹೊಂದಾಣಿಕೆ ಮಾಡಿಕೊಳ್ಳುವ ನಿರೀಕ್ಷೆ ಇತ್ತು’ ಎಂದಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕ್ರಮವಾಗಿ 26 ಮತ್ತು 22 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

ಬುಧವಾರ ನಾಂದೇಡ್‌ನಲ್ಲಿ ಜಂಟಿ ಸಾರ್ವಜನಿಕ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಲಿದ್ದಾರೆ.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !