ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೇಶ ನಿರಾಕರಣೆ ಸರಿಯಲ್ಲ: ‘ಸುಪ್ರೀಂ’

ಎಂಬಿಬಿಎಸ್‌ ಸೀಟ್‌ವಂಚಿತ ಅರ್ಹರಿಗೆ ಸಾಂತ್ವನ
Last Updated 14 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ‘ವಿದ್ಯಾರ್ಥಿಯ ಕಡೆಯಿಂದ ಯಾವುದೇ ತಪ್ಪು ಆಗದಿದ್ದರೂ, ಅರ್ಹ ಪ್ರತಿಭಾವಂತರಿಗೆ ಎಂಬಿಬಿಎಸ್‌ ಸೀಟನ್ನು ನಿರಾಕರಿಸಲಾಗಿದ್ದರೆ, ಅಂಥವರಿಗೆ ಕೊನೆಯ ದಿನಾಂಕದ ನಂತರವೂ ಒಂದು ತಿಂಗಳೊಳಗಿನ ಅವಧಿಯಲ್ಲಿ ಪ್ರವೇಶ ನೀಡಬಹುದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಇಂಥವುಗಳನ್ನು ಅಪರೂಪದ ಪ್ರಕರಣವೆಂದು ಪರಿಗಣಿಸಿ, ಸೀಟುಗಳನ್ನು ಹೆಚ್ಚಿಸುವ ಮೂಲಕ ಅಥವಾ ಮೆರಿಟ್‌ ಲಿಸ್ಟ್‌ನ ಕೊನೆಯಲ್ಲಿರುವ ವಿದ್ಯಾರ್ಥಿಯ ಪ್ರವೇಶವನ್ನು ರದ್ದುಪಡಿಸುವ ಮೂಲಕವಾದರೂ ಪ್ರವೇಶ ನೀಡಬೇಕು ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ತನ್ನ ತಪ್ಪಿಲ್ಲದಿದ್ದರೂ, ಎಂಬಿಬಿಎಸ್‌ ಕೋರ್ಸ್‌ ಪ್ರವೇಶದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಪರಿಹಾರವನ್ನು ನೀಡುವ ಮೂಲಕ ಮಾತ್ರ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಬಹುದು ಎಂದು 2014ರಲ್ಲಿ ಕೋರ್ಟ್‌ ನೀಡಿದ್ದ ತೀರ್ಪನ್ನು ಈ ಪೀಠ ರದ್ದುಪಡಿಸಿದೆ. ‘ಇದು ಒಳ್ಳೆಯ ಕಾನೂನಲ್ಲ, ಈ ವಾದವನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿದೆ.

ಒಂದು ವೇಳೆ ಪ್ರವೇಶಾತಿಯ ಕೊನೆಯ ದಿನಾಂಕ (ಸೆ. 30) ಮುಗಿದು ಒಂದು ತಿಂಗಳಿಗೂ ಹೆಚ್ಚು ದಿನಗಳಾಗಿದ್ದರೆ ಅಂಥವರಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ನೀಡಬಹುದು. ಇಂಥ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷ ನಷ್ಟವಾಗುವುದರಿಂದ ಅವರಿಗೆ ಪರಿಹಾರ ನೀಡಬೇಕು ಎಂದಿದೆ.

‘ಅರ್ಹತೆ ಇದ್ದೂ ಎಂಬಿಬಿಎಸ್‌ ಸೀಟ್‌ನಿಂದ ವಂಚಿತರಾದ ವಿದ್ಯಾರ್ಥಿಯು, ಸಕಾಲದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರೂ ಅವರಿಗೆ ನಿಗದಿತ ಸಮಯದೊಳಗೆ ನ್ಯಾಯ ನೀಡಿಲ್ಲ ಎಂದಾದರೆ, ನ್ಯಾಯವನ್ನು ನಿರಾಕರಿಸಿದಂತಾಗುತ್ತದೆ. ಎಂಬಿಬಿಎಸ್‌ ಪ್ರವೇಶ ಪಡೆಯುವುದು ವಿದ್ಯಾರ್ಥಿಯ ಜೀವನದ ಮಹುಮುಖ್ಯ ಘಟ್ಟ. ಅರ್ಹ ವಿದ್ಯಾರ್ಥಿಗೆ ಸೀಟ್‌ ನಿರಾಕರಿಸುವುದೆಂದರೆ ಅವರ ಮೂಲಭೂತ ಹಕ್ಕನ್ನು ಕಿತ್ತುಕೊಂಡಂತೆ’ ಎಂದು ಕೋರ್ಟ್‌ ಹೇಳಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ 2012 ಹಾಗೂ 2014ರಲ್ಲಿ ಬಂದಿದ್ದ ಎರಡು ತೀರ್ಪುಗಳಿಂದಾಗಿ ಗೊಂದಲ ಸೃಷ್ಟಿಯಾಗಿತ್ತು. 2012ರಲ್ಲಿ ಆಶಾ ವರ್ಸಸ್‌ ಬಿ.ಡಿ. ಶರ್ಮಾ ಪ್ರಕರಣದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಇಂಥ ಪ್ರಕರಣಗಳಲ್ಲಿ ಪ್ರವೇಶಾತಿಯ ಕೊನೆಯ ದಿನಾಂಕದ ನಂತರ ಒಂದು ತಿಂಗಳೊಳಗೆ ಪ್ರವೇಶ ನೀಡುವಂತೆ ಸೂಚನೆ ನೀಡಬಹುದು’ ಎಂದಿತ್ತು.

2014ರಲ್ಲಿ ಇಂಥದ್ದೇ ಇನ್ನೊಂದು ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ಭಿನ್ನವಾದ ತೀರ್ಪು ನೀಡಿತ್ತು. ಈ ಗೊಂದಲವನ್ನು ಸರಿಪಡಿಸುವ ಉದ್ದೇಶದಿಂದ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ಒಪ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT