ಶುಕ್ರವಾರ, ಜುಲೈ 1, 2022
25 °C

ಸಿನಿಮಾ ಮಾತ್ರವಲ್ಲ, ಇನ್ನಿತರ ಕ್ಷೇತ್ರಗಳಲ್ಲಿಯೂ #MeToo ಕತೆಗಳಿವೆ: ಶೋಭಾ ಡೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆ ಎಂಬುದನ್ನು ನಂಬದೇ ಇದ್ದವರ ಬಗ್ಗೆ ನನಗಿರುವುದು ಸಹಾನುಭೂತಿ ಅಷ್ಟೇ ಎಂದು ಲೇಖಕಿ ಶೋಭಾ ಡೇ ಹೇಳಿದ್ದಾರೆ.  ಸಿನಿಮಾ ಮಾತ್ರವಲ್ಲ, ಇನ್ನಿತರ ಕ್ಷೇತ್ರಗಳಲ್ಲಿಯೂ ತೆರೆಮರೆ ಹಿಂದೆ ಇದೆಲ್ಲಾ ನಡೆಯುತ್ತಿದೆ.
ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಯಾರಾದರೂ ಹೇಳಿದರೆ ಅದನ್ನು ನಂಬದೇ ಇರುವ ವ್ಯಕ್ತಿಗಳ ಬಗ್ಗೆ ನನಗೆ ಮರುಕ ಇದೆ. ಸತ್ಯ ಯಾವತ್ತೂ ಸತ್ಯವಾಗಿಯೇ ಉಳಿಯುತ್ತದೆ. ಒಬ್ಬಾಕೆ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಿದಾಗ ಅದನ್ನು ನಂಬುವುದು ಅಥವಾ ಅದನ್ನು ನಂಬದೇ ಇರುವುದು ನೀವು ಯಾರು ಎಂಬುದನ್ನು ತೋರಿಸುತ್ತದೆ.
ನನಗೆ ವೈಯಕ್ತಿಕವಾಗಿ ಮಿಟೂ ಅನುಭವವನ್ನು ಹಂಚಿಕೊಳ್ಳುವುದಕ್ಕೇನೂ ಇಲ್ಲ. ಆದರೆ ಕ್ರೀಡೆ, ರಾಜಕೀಯ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಲೈಂಗಿಕ ದೌರ್ಜನ್ಯ ನಡೆಯುತ್ತದೆ.

ಹಾಲಿವುಡ್, ಬಾಲಿವುಡ್‍ನಲ್ಲಿ ಎಲ್ಲರೂ ಸಭ್ಯರಲ್ಲ. ನಾವು ನಟರು, ಹೋರಾಟಗಾರರಲ್ಲ ಎಂದು ಅವರು ಹೇಳುತ್ತಾರೆ. ಆದರೆ ಹೋರಾಟಗಾರರೇ ಆಗಬೇಕಾಗಿಲ್ಲ, ತಮ್ಮ ಸಹೋದ್ಯೋಗಿಗೆ ಬೆಂಬಲ ಸೂಚಿಸುವುದಕ್ಕೆ, ತಪ್ಪು ಕಂಡರೆ ಅದನ್ನು ಎತ್ತಿ ತೋರಿಸುವುದಕ್ಕೆ ಧೈರ್ಯ ಬೇಕು ಎಂದಿದ್ದಾರೆ ಶೋಭಾ ಡೇ.

ಚೇತನ್ ಭಗತ್ ವಿರುದ್ಧ ಲೈಂಗಿಕ ಆರೋಪ

ಅಕ್ಟೋಬರ್ 5 ರಂದು ಬಾಲಿವುಡ್  ನಟಿ ತನುಶ್ರೀ ದತ್ತ ಅವರು ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಸಿನಿಮಾ ರಂಗದಲ್ಲಿ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದನ್ನು ತನುಶ್ರೀ ಮಾಧ್ಯಮಗಳ ಮುಂದೆ ಹೇಳಿಕೊಂಡಾಗ ಎಲ್ಲೆಡೆಯಿಂದ ಆಕೆಗೆ ಬೆಂಬಲ ವ್ಯಕ್ತವಾಗಿತ್ತು.  
ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಿದ ತನುಶ್ರೀ #MeToo ಚಳವಳಿಗೆ ಜನಪ್ರಿಯ ಲೇಖಕ, ಅಂಕಣಕಾರ ಚೇತನ್‌ ಭಗತ್‌ ಸಹ  ಬೆಂಬಲ ಸೂಚಿಸಿದ್ದರು. ಇದರ ನಡುವೆಯೇ ಚೇತನ್ ಭಗತ್ ವಿರುದ್ಧ ಲೈಂಗಿಕ ಆರೋಪ ಕೇಳಿಬಂದಿದೆ. #MeToo ಚಳವಳಿ ಅಡಿಯಲ್ಲಿ ಚೇತನ್‌ ಭಗತ್‌ ವಿರುದ್ಧ  ಪತ್ರಕರ್ತೆಯೊಬ್ಬರು ವಾಟ್ಸ್ ಆ್ಯಪ್ ಸ್ಕ್ರೀನ್‌ ಶಾಟ್‌ ಸಮೇತ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಕಾವೇರಿದಾಗ ಈ ಬಗ್ಗೆ ಪ್ರತಿಕ್ರಿಯಿಸಿದ ಚೇತನ್ ಭಗತ್ ಸಂದೇಶಗಳನ್ನು 'ನಿಜ'ಎಂದು ಒಪ್ಪಿಕೊಂಡಿದ್ದು, ಮಹಿಳೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. ಫೋಟೋಗಳು ನಿಜವಾಗಿದ್ದು, ನಾನು ಈ ಬಗ್ಗೆ ಕ್ಷಮೆ ಕೇಳುತ್ತೇನೆ. ಮಹಿಳೆ ನನ್ನನ್ನು ಮನ್ನಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

ಏನಿದು #Metoo ಚಳವಳಿ?
ಕಳೆದ ಅಕ್ಟೋಬರ್‌ 5ರಂದು ಹಾಲಿವುಡ್‌ ನಿರ್ದೇಶಕರ ವಿರುದ್ಧ ಅಲಿಯಾಸ್‌ ಮಿಲಾನೋ ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್‌ ಟ್ಯಾಗ್‌ ಬಳಸಿ ಈ ಅಭಿಯಾನವನ್ನು ಆರಂಭಿಸಿದ್ದರು. ಅವರಿಗೆ ಹಾಲಿವುಡ್‌ನ ಹಿರಿಯ ನಟಿಯರೆಲ್ಲರೂ ಬೆಂಬಲಿಸಿದ್ದರು. ಇದಕ್ಕೂ ಮುನ್ನವೇ ಈ ನುಡಿಗಟ್ಟನ್ನು 2006ರಲ್ಲಿ ಮೊದಲ ಬಾರಿಗೆ ಬಳಸಲಾಗಿತ್ತು. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹತ್ತು ಹಲವು ಕತೆಗಳು ಹರಿದಾಡಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು