ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರದ 2ನೇ ಕಂತು l ಕೇಂದ್ರದ‌ ದೃಷ್ಟಿ ವಲಸಿಗರತ್ತ

ಪರಿಹಾರದ 2ನೇ ಕಂತು l ರೈತರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗಕ್ಕೆ ಅನುಕೂಲ
Last Updated 14 ಮೇ 2020, 20:15 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೋವಿಡ್‌ ಪಿಡುಗಿನಿಂದ ಉಂಟಾಗಿರುವ ಸಂಕಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವು ಎರಡನೇ ಕಂತಿನ ಉಪಕ್ರಮಗಳನ್ನು ಗುರುವಾರ ಪ್ರಕಟಿಸಿದೆ.

ಒಟ್ಟು ₹3.16 ಲಕ್ಷ ಕೋಟಿಯ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ಉಚಿತ ವಿತರಣೆ, ರೈತರಿಗೆ ರಿಯಾಯಿತಿ ದರದಲ್ಲಿ ಸಾಲ, ಬೀದಿಬದಿ ವ್ಯಾಪಾರಿಗಳಿಗೆ ಸಾಲ ಮುಂತಾದ ಅಂಶಗಳು ಎರಡನೇ ಕಂತಿನಲ್ಲಿ ಸೇರಿವೆ. ಸುಮಾರು ₹6 ಲಕ್ಷ ಕೋಟಿಯ ಪರಿಹಾರ ಪ್ಯಾಕೇಜ್‌ ಅನ್ನು ಬುಧವಾರ ಪ್ರಕಟಿಸಲಾಗಿತ್ತು. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಕೇಂದ್ರೀಕರಿಸಿತ್ತು.

ಕೋವಿಡ್‌ ಪಸರಿಸುವಿಕೆ ತಡೆಗಾಗಿ ಹೇರಲಾದ ಲಾಕ್‌ಡೌ‌ನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ತಿಂಗಳಿಗೆ ಐದು ಕೆ.ಜಿ. ಅಕ್ಕಿ ಅಥವಾ ಗೋಧಿ ಮತ್ತು ಒಂದು ಕೆ.ಜಿ ಕಡಲೆ ಅಥವಾ ಇತರ ಕಾಳನ್ನು ಉಚಿತವಾಗಿ ವಿತರಿಸಲಾಗುವುದು. ಸುಮಾರು ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಇದರ ಪ್ರಯೋಜನ ದೊರೆಯಲಿದೆ. ಇದರ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ವಲಸೆ ಕಾರ್ಮಿಕರನ್ನು ಗುರುತಿಸುವುದು ಮತ್ತು ಯೋಜನೆ ಅನುಷ್ಠಾನದ ಹೊಣೆ ರಾಜ್ಯ ಸರ್ಕಾರಗಳದ್ದು ಎಂದು ನಿರ್ಮಲಾ ಹೇಳಿದ್ದಾರೆ.

ಬಜೆಟ್‌ನ ಹೊರಗೆ ಪ್ರಕಟಿಸುವ ಯೋಜನೆಗಳಿಗೆ ಸರ್ಕಾರದ ಬೊಕ್ಕಸ ದಿಂದ ವೆಚ್ಚ ಮಾಡಲಾಗುವುದಿಲ್ಲ. ಬದಲಿಗೆ, ಹೀಗೆ ಘೋಷಿಸಲಾಗುವ ಕ್ರಮ ಗಳು ನಗದು ಹರಿವಿನ ಸಮಸ್ಯೆಯನ್ನು ಪರಿಹರಿಸಲು ನೆರವಾಗುತ್ತವೆ.

***

ಜಿಡಿಪಿಯ ಶೇ 10ರಷ್ಟರ ಪ್ಯಾಕೇಜ್‌ ಪ್ರಕಟಿಸುತ್ತೇವೆ ಎಂದು ಪ್ರಧಾನಿ ಹೇಳಿದಾಗ ಅವರು ಗಂಭೀರವಾಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಈಗ ಎಲ್ಲ ಭರವಸೆಗಳೂ ನೆಲಕಚ್ಚಿವೆ

- ಆನಂದ್‌ ಶರ್ಮಾ, ಕಾಂಗ್ರೆಸ್‌ ವಕ್ತಾರ

***

ದೇಶ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಪ್ಯಾಕೇಜ್‌ನಲ್ಲಿ ಉತ್ತರ ಇಲ್ಲ. ಮನೆ ಸೇರಲು ಉಚಿತ ಸಾರಿಗೆ ವ್ಯವಸ್ಥೆಯೇ ವಲಸೆ ಕಾರ್ಮಿಕರ ಈಗಿನ ಅಗತ್ಯ

- ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಬೀದಿಬದಿ ವ್ಯಾಪಾರಿಗಳಿಗೆ ಬಂಡವಾಳ

ಬೀದಿಬದಿ ವ್ಯಾಪಾರಿಗಳು ಮತ್ತೆ ತಮ್ಮ ವ್ಯಾಪಾರ ಆರಂಭಿಸುವುದಕ್ಕಾಗಿ ತಲಾ ₹10 ಸಾವಿರ ಸಾಲ ನೀಡಲಾಗುವುದು. ಸುಮಾರು 50 ಲಕ್ಷ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ

ಸಣ್ಣ ವ್ಯಾಪಾರಕ್ಕೆ ಉತ್ತೇಜನ

-ಮುದ್ರಾ ಯೋಜನೆ ಅಡಿ ಶಿಶು ಸಾಲದ (₹50 ಸಾವಿರದ ವರೆಗೆ) ಬಡ್ಡಿಯ ಶೇ 2ರಷ್ಟನ್ನು ಸರ್ಕಾರ ಪಾವತಿಸಲಿದೆ. ಇದರಿಂದಾಗಿ ಸರ್ಕಾರಕ್ಕೆ ₹1,500 ಕೋಟಿ ವೆಚ್ಚವಾಗಲಿದೆ

ರೈತರಿಗೆ ಸಾಲ

-ಕಿಸಾನ್ ಕ್ರೆಡಿಟ್‌‌ ಕಾರ್ಡ್‌ಗಳ ಮೂಲಕ 2.5 ಕೋಟಿ ರೈತರಿಗೆ ಸಾಲ ನೀಡುವ ಯೋಜನೆ ಪ್ರಕಟಿಸಲಾಗಿದೆ. ಈ ಯೋಜನೆಗಾಗಿ ₹2 ಲಕ್ಷ ಕೋಟಿ ವೆಚ್ಚ ಆಗಲಿದೆ

-ಕೊಯ್ಲು ನಂತರದ ಅಗತ್ಯಗಳು ಮತ್ತು ಮೇ–ಜೂನ್‌ ಅವಧಿಯ ಬೆಳೆಯ ಅಗತ್ಯಗಳಿಗಾಗಿ ನಬಾರ್ಡ್‌ ಮೂಲಕ ತುರ್ತು ಸಾಲ ನೀಡಲಾಗುವುದು. ಗ್ರಾಮೀಣ ಸಹಕಾರ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಮೂಲಕ ಈ ಸಾಲ ನೀಡಲಾಗುವುದು. ಇದಕ್ಕಾಗಿ ₹30 ಸಾವಿರ ಕೋಟಿ ವೆಚ್ಚ ಆಗಲಿದೆ. ನಬಾರ್ಡ್‌ ಮೂಲಕ ಈ ವರ್ಷ ವಿತರಿಸಲು ಉದ್ದೇಶಿಸಲಾಗಿರುವ ₹90 ಸಾವಿರ ಕೋಟಿ ಸಾಲ ಯೋಜನೆಯು ಯಥಾರೀತಿ ಮುಂದುವರಿಯಲಿದೆ

ವಸತಿಗೆ ಒತ್ತು

ವಾರ್ಷಿಕ ₹6 ಲಕ್ಷದಿಂದ ₹18 ಲಕ್ಷ ಆದಾಯದ ಜನರು ಕೈಗೆಟಕುವ ಬೆಲೆಯ ಮನೆ ಖರೀದಿಸುವುದಕ್ಕೆ ಇದ್ದ ಸಾಲ ಸಹಾಯಧನ ಇನ್ನೊಂದು ವರ್ಷ ಮುಂದುವರಿಯಲಿದೆ. ಇದಕ್ಕಾಗಿ ಸರ್ಕಾರ ₹70 ಸಾವಿರ ಕೋಟಿ ವೆಚ್ಚ ಮಾಡಲಿದೆ. ಈ ಉಪಕ್ರಮದಿಂದ ಉಕ್ಕು, ಸಿಮೆಂಟ್‌ ಉದ್ಯಮಕ್ಕೆ ಪ್ರಯೋಜನ ಆಗಲಿದೆ, ಉದ್ಯೋಗ ಸೃಷ್ಟಿಯಾಗಲಿದೆ

ವಲಸಿಗರಿಗೆ ಮನೆ: ನಗರಕ್ಕೆ ಬರುವ ವಲಸೆ ಕಾರ್ಮಿಕರಿಗೆ ಕೈಗೆಟಕುವ ಬಾಡಿಗೆಯಲ್ಲಿ ಮನೆ ಒದಗಿಸುವ ಯೋಜನೆ ಸಿದ್ಧವಾಗುತ್ತಿದೆ. ನಗರಗಳಲ್ಲಿ ವಸತಿ ಸಂಕೀರ್ಣ ನಿರ್ಮಿಸಲಾಗುವುದು. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇದು ಅನುಷ್ಠಾನಗೊಳ್ಳಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ

ಒಂದು ದೇಶ–ಒಂದು ಕಾರ್ಡ್‌

ಪಡಿತರ ಚೀಟಿ ಹೊಂದಿರುವ ಕುಟುಂಬವು ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ದೇಶದ ಯಾವುದೇ ಭಾಗದಲ್ಲಿ ಉಚಿತ ಅಥವಾ ರಿಯಾಯಿತಿ ದರದಲ್ಲಿ ಪಡಿತರ ಪಡೆಯಬಹುದಾದ ವ್ಯವಸ್ಥೆ 2021ರ ಮಾರ್ಚ್‌‌ ಹೊತ್ತಿಗೆ ಜಾರಿಯಾಗಲಿದೆ\

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT