ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಸಂಸದ ಪ್ರಹ್ಲಾದ ಜೋಶಿಗೆ ಒಲಿದ ಸಚಿವ ಸ್ಥಾನ

Last Updated 30 ಮೇ 2019, 8:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಹ್ಲಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೊದಿ ಅವರ ಸಂಪುಟದಲ್ಲಿ ಸಚಿವರಾಗುವುದು ಬಹುತೇಕ ಖಚಿತವಾಗಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿ ಅಧ್ಯಕ್ಷರಾಗಿ ಈ ಹಿಂದೆ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಪ್ರಹ್ಲಾದ ಜೋಶಿ ಅವರು, ಉತ್ತಮ ಸಂಸದೀಯ ಪಟು ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಹಂಗಾಮಿ ಸ್ಪೀಕರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಮೇಲೆ ಹಿಡಿತ ಇರುವ ಅವರು ಈ ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಧಾರವಾಡಕ್ಕೆ ಐಐಟಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ, ಹುಬ್ಬಳ್ಳಿ ಸ್ಮಾರ್ಟ್‌ಸಿಟಿ ಸೇರಿದಂತೆ ಪ್ರಮುಖ ಯೋಜನೆಗಳನ್ನು ತಮ್ಮ ಈ ಹಿಂದಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಹಾಗೂ ಈ ಹಿಂದೆ ಮೋದಿ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದ ಅನಂತಕುಮಾರ್‌ ಅನಾರೋಗ್ಯದಿಂದ ನಿಧನರಾದ ಬಳಿಕ ದೆಹಲಿ ಮಟ್ಟದಲ್ಲಿ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸುವ ಯಾವೊಬ್ಬ ಮುಖಂಡರೂ ಇಲ್ಲವಾಗಿದ್ದು, ಆ ಸ್ಥಾನವನ್ನು ತುಂಬಬಲ್ಲ ಸಾಮಾರ್ಥ್ಯ ಪ್ರಹ್ಲಾದ ಜೋಶಿ ಅವರೊಬ್ಬರಿಗೆ ಮಾತ್ರ ಇದೆ ಎಂಬ ಲೆಕ್ಕಾಚಾರ ರಾಜ್ಯ ಬಿಜೆಪಿ ನಾಯಕರದ್ದಾಗಿದೆ.

ಜೋಶಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಬುಧವಾರ ಸಂಜೆಯೇ ಶಾಸಕ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ, ಅಮೃತ್‌ ಜೋಶಿ, ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಸೇರಿದಂತೆ ಜಿಲ್ಲೆಯ 30ಕ್ಕೂ ಅಧಿಕ ಮುಖಂಡರು ಹಾಗೂ ಜೋಶಿ ಅವರ ಕುಟುಂಬ ವರ್ಗ ನವದೆಹಲಿಗೆ ತೆರಳಿದ್ದಾರೆ.

ವೆಂಕಟೇಶ್ ಜೋಶಿ ಮತ್ತು ಮಾಲತಿಬಾಯಿ ಅವರ ಪುತ್ರನಾಗಿ ನವೆಂಬರ್‌ 1962ರಲ್ಲಿ ಜೋಶಿ ಜನಿಸಿದರು. ತಂದೆ ರೈಲ್ವೆ ನೌಕರರಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿಯ ರೈಲ್ವೆ ಶಾಲೆಯಲ್ಲಿ ಪೂರೈಸಿದರು. ಮಾಧ್ಯಮಿಕ ಶಿಕ್ಷಣವನ್ನು ನಗರದ ನ್ಯೂ ಇಂಗ್ಲಿಷ್‌ ಸ್ಕೂಲಿನಲ್ಲಿ ಹಾಗೂ ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿಯನ್ನು ಪಡೆದುಕೊಂಡಿದ್ದಾರೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಜೋಶಿ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ದಲ್ಲಿ ಆರಂಭದಿಂದಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಸಂಘದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

1992ರಲ್ಲಿ ಬಾಗಲಕೋಟೆ ಜಿಲ್ಲೆಯ ಐಹೊಳೆಯ ಜ್ಯೋತಿ ಅವರೊಂದಿಗೆ ಜೋಶಿ ಅವರ ವಿವಾಹವಾಯಿತು. ದಂಪತಿಗೆ ಮೂವರು ಪುತ್ರಿಯರಿದ್ದಾರೆ. 1992ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಈದ್ಗಾ ಮೈದಾನ ಉಳಿಸಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈದ್ಗಾ ಮೈದಾನ ಉಳಿಸಿ ಹೋರಾಟದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ನವದೆಹಲಿಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ನೂತನ ಸಚಿವರನ್ನು ಬಿಎಸ್‌ವೈ ಹಾಗೂ ಶಾಸಕರು ಅಭಿನಂದಿಸಿದರು.
ನವದೆಹಲಿಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ನೂತನ ಸಚಿವರನ್ನು ಬಿಎಸ್‌ವೈ ಹಾಗೂ ಶಾಸಕರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT