ಶನಿವಾರ, ಮೇ 28, 2022
27 °C

ಎಂ.ಕೆ.ಸ್ಟಾಲಿನ್‌ಗೆ ಆಸರೆಯಾದ ಅಳಿಯ ಶಬರೀಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತ ಗಳಿಸಿ ನರೇಂದ್ರ ಮೋದಿ ಅವರು ಪ್ರಧಾನಿಯಾದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದಾದ್ಯಂತ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದ್ದ ಮೋದಿ ಅವರು ಡಿಜಿಟಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಇದರ ಪ್ರಭಾವ ಪ್ರಾದೇಶಿಕ ಪಕ್ಷಗಳ ಮೇಲೂ ಆಯಿತು. ತಮಿಳುನಾಡಿನ ಡಿಎಂಕೆ ಸಹ (ದ್ರಾವಿಡ ಮುನ್ನೇತ್ರ ಕಳಗಂ) 2016ರ ವಿಧಾನಸಭೆ ಚುನಾವಣೆಗೂ ಒಂದು ವರ್ಷ ಮುನ್ನವೇ ಸಾಮಾಜಿಕ ಮಾಧ್ಯಮ ಸೇರಿದಂತೆ ಡಿಜಿಟಲ್ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು.

ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2016ರಲ್ಲಿ ಡಿಎಂಕೆಯ ಆಗಿನ ಖಜಾಂಚಿ ಎಂ.ಕೆ. ಸ್ಟಾಲಿನ್ ‘ನಮಕ್ಕು ನಾಮೇ (ನಮಗೆ ನಾವೇ)’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಾಮಾನ್ಯ ಧೋತಿ, ಅಂಗಿ ಧರಿಸಿಕೊಂಡು ತಮಿಳುನಾಡಿನ ಪಟ್ಟಣಗಳು, ಹಳ್ಳಿಹಳ್ಳಿಗೆ ತೆರಳುತ್ತಿದ್ದ ಅವರು ಸಾರ್ವಜನಿಕರೊಂದಿಗೆ ಸಂವಾದ ನಡೆಸುತ್ತಿದ್ದರು. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದ ಅವರು ಸೈಕಲ್, ದ್ವಿಚಕ್ರ ವಾಹನ ಅಥವಾ ಬಸ್‌ ಬಳಸಿ ಸಾಮಾನ್ಯರಂತೆಯೇ ಪ್ರಯಾಣ ಕೈಗೊಳ್ಳುತ್ತಿದ್ದರು. ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಯುವಕರ ಮತಗಳನ್ನು ಸೆಳೆಯುವುದರ ಜತೆಗೆ ಮುಂದಿನ ತಲೆಮಾರಿನ ನಾಯಕನೆಂದು ತಮ್ಮನ್ನು ಬಿಂಬಿಸಿಕೊಳ್ಳುವ ಉದ್ದೇಶವೂ ಅವರ ಈ ಕಾರ್ಯದ ಹಿಂದಿತ್ತು.

ಸ್ಟಾಲಿನ್‌ ಅವರ ಈ ಎಲ್ಲ ಕಾರ್ಯಕ್ರಮಗಳ ಕ್ಷಣಕ್ಷಣದ ಮಾಹಿತಿಯೂ ಡಿಜಿಟಲ್ ಮಾಧ್ಯಮಗಳ ಮೂಲಕ ಜನರನ್ನು ತಲುಪುತ್ತಿತ್ತು. ಜನರೊಂದಿಗಿನ ಸಂವಾದದ ಚಿತ್ರ, ವಿಡಿಯೊಗಳು ಕ್ಷಣಮಾತ್ರದಲ್ಲಿ ರಾಜ್ಯದಾದ್ಯಂತ ಪ್ರಸಾರವಾಗುತ್ತಿದ್ದವು. ಇದರ ಹಿಂದಿನ ಶ್ರಮ ಸ್ಟಾಲಿನ್ ಅವರ ಅಳಿಯ ಶಬರೀಶನ್ ಅವರದ್ದು.

ವೃತ್ತಿಯಲ್ಲಿ ಐಟಿ ಎಂಜಿನಿಯರ್ ಆಗಿರುವ ಶಬರೀಶನ್ ತಮ್ಮದೇ ಆದ ತಂಡ ಕಟ್ಟಿಕೊಂಡು ಡಿಜಿಟಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸುವ ಯೋಜನೆ ರೂಪಿಸಿದರು. ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೂ ಶಬರೀಶನ್ ಮತ್ತು ತಂಡದವರು ನೀಡಿದ ದತ್ತಾಂಶ ವಿಶ್ಲೇಷಣೆ ವರದಿಯನ್ನು ಡಿಎಂಕೆ ಪರಿಗಣಿಸಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಶಬರೀಶನ್‌ ಅವರು ರಾಜಕೀಯವಾಗಿ ಸ್ಟಾಲಿನ್‌ಗೆ ಮತ್ತಷ್ಟು ಹತ್ತಿರವಾದರು. ಡಿಎಂಕೆ ಮುಖ್ಯಸ್ಥರಾಗಿದ್ದ ಕರುಣಾನಿಧಿ ನಿಧನದ ಬಳಿಕ ಆ ಹುದ್ದೆಯನ್ನು ವಹಿಸಿಕೊಂಡ ಸ್ಟಾಲಿನ್, ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿಯೂ ಶಬರೀಶನ್ ಅವರನ್ನು ಅವಲಂಬಿಸಿದ್ದಾರೆ. ಶಬರೀಶನ್ ಏನೇ ಹೇಳಿದರೂ ಸ್ಟಾಲಿನ್ ಕೇಳುತ್ತಾರೆ ಎಂಬ ಮಾತೂ ಇತ್ತೀಚೆಗೆ ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಲು ಡಿಎಂಕೆ ಮುಂದಾಗಿದ್ದು ಶಬರೀಶನ್ ಅವರ ಮಾರ್ಗದರ್ಶನದಿಂದ ಎನ್ನಲಾಗಿದೆ. ಈ ನಿರ್ಧಾರಕ್ಕೆ ಕೆಲವೆಡೆ ಹಿರಿಯ ನಾಯಕರಿಂದ ವಿರೋಧ ವ್ಯಕ್ತವಾಗಬಹುದು ಎಂಬುದನ್ನೂ ಗಮನದಲ್ಲಿಟ್ಟುಕೊಂಡಿದ್ದ ಶಬರೀಶನ್, ಅಂತಹ ಕ್ಷೇತ್ರಗಳಲ್ಲಿ ಡಿಎಂಕೆ ನಾಯಕರ ಮಕ್ಕಳಿಗೇ ಆದ್ಯತೆ ನೀಡುವಂತೆ ಮಾಡಿದ್ದಾರೆ. ತನ್ಮೂಲಕ ಪಕ್ಷದ ಒಳಗಿನ ಅತೃಪ್ತಿಯನ್ನು ಕಡಿಮೆಗೊಳಿಸಲೂ ತಂತ್ರಗಾರಿಕೆ ರೂಪಿಸಿದ್ದಾರೆ.

ಸ್ಟಾಲಿನ್ ಅವರ ಮಗ ಉದಯನಿಧಿ ಅವರಂತೆ ಶಬರೀಶನ್ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ ಎನ್ನಲಾಗಿದೆ. ಆದರೂ ಸ್ಟಾಲಿನ್ ಅವರ ಆಪ್ತವಲಯದಲ್ಲಿ ಅವರಿಗೆ ಪ್ರಭಾವವಿರುವುದನ್ನು ಒಪ್ಪಿಕೊಳ್ಳಲೇಬೇಕು. 2018ರ ಡಿಸೆಂಬರ್‌ನಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಸ್ಟಾಲಿನ್ ಭೇಟಿ ಮಾಡಿ ಮಾತುಕತೆ ನಡೆಸಿದಾಗ ಶಬರೀಶನ್ ಸಹ ಜತೆಗಿದ್ದರು ಎಂಬುದು ಗಮನಾರ್ಹ.

ಇನ್ನಷ್ಟು...

ಉತ್ತರ ಪ್ರದೇಶ: ಅಸಾಧ್ಯ ಮೈತ್ರಿ ಸಾಧ್ಯವಾಗಿದ್ದು ಇವರಿಬ್ಬರ ತಂತ್ರಗಾರಿಕೆಯಿಂದ

ನಿತೀಶ್‌ ಕುಮಾರ್ ರಾಜಕೀಯ ಹಾದಿಗೆ ಬೆಳಕು ಚೆಲ್ಲಿದ ರಾಮ‘ಚಂದ್ರ’​

ತೆಲಂಗಾಣ: ಸಿಎಂ ಚಂದ್ರಶೇಖರ ರಾವ್ ಯಶಸ್ಸಿನ ಹಿಂದಿದೆ ಕೇಶವ ರಾವ್ ಶ್ರಮ

ಚಂದ್ರಬಾಬು ನಾಯ್ಡುಗೆ ಅಧಿಕಾರಿಗಳು, ಆಪ್ತರೇ ಆಧಾರ​

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು