ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಭಾರತದಲ್ಲಿ ಜಪಾನ್‌ ಬಂಧ ಇನ್ನೂ ಗಟ್ಟಿ

ಶಿಂಜೊ ಅಬೆ ಜತೆಗೆ ವಿವಿಧ ವಿಚಾರಗಳ ಚರ್ಚಿಸಿದ ಪ್ರಧಾನಿ ಮೋದಿ: ಭಾರತೀಯ ಸಮುದಾಯದ ಜತೆಗೆ ಸಂವಾದ
Last Updated 27 ಜೂನ್ 2019, 19:46 IST
ಅಕ್ಷರ ಗಾತ್ರ

ಒಸಾಕಾ (ಪಿಟಿಐ): ಜಾಗತಿಕ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು, ಪರಾರಿಯಾಗುತ್ತಿರುವ ಆರ್ಥಿಕ ಅಪರಾಧಿಗಳ ವಿಚಾರ ಮತ್ತು ವಿಪತ್ತು ನಿರ್ವಹಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರ ಜತೆ ಚರ್ಚೆ ನಡೆಸಿ
ದ್ದಾರೆ. 28–29ರಂದು ಇಲ್ಲಿ ನಡೆಯಲಿರುವ ಜಿ20 ಶೃಂಗಸಭೆಗಾಗಿ ಮೋದಿ ಅವರು ಜಪಾನ್‌ಗೆ ಭೇಟಿ ಕೊಟ್ಟಿದ್ದಾರೆ.

ನವಭಾರತದಲ್ಲಿ ಜಪಾನ್‌ ಜತೆಗಿನ ಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಕೋಬ್‌ನಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಹೇಳಿದ್ದಾರೆ. 61 ಕೋಟಿ ಜನರು ಭಾಗವಹಿಸಿದ್ದ ಲೋಕಸಭಾ ಚುನಾವಣೆಯ ಭಾಗವಾಗಿದ್ದಕ್ಕಾಗಿ ಇಲ್ಲಿನ ಭಾರತೀಯ ಸಮುದಾಯಕ್ಕೆ ಅವರು ಕೃತಜ್ಞತೆ ಅರ್ಪಿಸಿದರು.

ಮೋದಿ ಮತ್ತು ಅಬೆ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಮಾಹಿತಿ ನೀಡಿದರು.

‘ದೇಶ ಬಿಟ್ಟು ಪರಾರಿಯಾಗುವ ಆರ್ಥಿಕ ಅಪರಾಧಿಗಳ ಪ್ರಕರಣ ನಿರ್ವಹಣೆ ಬಗ್ಗೆ ಹಿಂದೆ ನಡೆದ ಜಿ20 ಸಭೆಗಳಲ್ಲಿ ಮೋದಿ ಅವರು ಪ್ರಸ್ತಾಪಿಸಿದ್ದನ್ನು ಅಬೆ ಉಲ್ಲೇಖಿಸಿದರು. ಭ್ರಷ್ಟಾಚಾರದ ವಿರುದ್ಧ ತಮ್ಮ ಸರ್ಕಾರದ ಕ್ರಮಗಳ ಭಾಗವಾಗಿ ಇದನ್ನು ಮೋದಿ ಅವರು ನಡೆಸುತ್ತಿದ್ದಾರೆ ಎಂದರು’ ಎಂದು ಗೋಖಲೆ ತಿಳಿಸಿದ್ದಾರೆ.

ಜಾಗತಿಕ ವ್ಯಾಪಾರ ಬಿಕ್ಕಟ್ಟುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಅಬೆ ಅವರು ಒತ್ತಿ ಹೇಳಿದರು. ದತ್ತಾಂಶ ಹರಿವು ಮತ್ತು ಹವಾಮಾನ ಬದಲಾವಣೆ ಬಗ್ಗೆಯೂ ಜಿ20 ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ವಿಪತ್ತು ನಿರ್ವಹಣೆಗಾಗಿ ಈಶಾನ್ಯ ಭಾರತದಲ್ಲಿ ಜಪಾನ್‌ ನೀಡುತ್ತಿರುವ ನೆರವನ್ನು ಮೋದಿ ಸ್ಮರಿಸಿದರು. ವಿಕೋಪ ನಿರ್ವಹಣೆ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣದಲ್ಲಿ ಜಪಾನ್‌ಗೆ ವ್ಯಾಪಕವಾದ ಅನುಭವ ಇದೆ. ಹಾಗಾಗಿ ಜಪಾನ್‌ನ ನೆರವು ಭಾರತಕ್ಕೆ ನಿರ್ಣಾಯಕ ಎಂದು ಅವರು ಹೇಳಿದರು.

ರಿಕ್ಟರ್‌ ಮಾಪಕದಲ್ಲಿ 6ಕ್ಕಿಂತ ಹೆಚ್ಚು ತೀವ್ರತೆಯ ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಶೇ 20ರಷ್ಟು ಜಪಾನ್‌ನಲ್ಲಿಯೇ ಘಟಿಸುತ್ತವೆ. ಅದಲ್ಲದೆ, ಚಂಡಮಾರುತ ಮತ್ತು ಜ್ವಾಲಾಮುಖಿಗಳಿಂದ ಆ ದೇಶದಲ್ಲಿ ಆಗುವ ಅನಾಹುತಗಳಿಗೂ ಲೆಕ್ಕವಿಲ್ಲ. ಹಾಗಾಗಿ ಈ ದೇಶಕ್ಕೆ ವಿಪತ್ತು ಅಪಾಯ ಕುಗ್ಗಿಸುವಿಕೆಯ ಜಾಗೃತಿಯ ಇತಿಹಾಸವೇ ಇದೆ.

ವಿಕೋಪಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೇಶಗಳ ಜತೆಗೆ ಸಹಭಾಗಿತ್ವ ಹೊಂದುವ ಅಗತ್ಯ ಭಾರತಕ್ಕೆ ಇದೆ ಎಂದು ಗೋಖಲೆ ತಿಳಿಸಿದರು.

‘ದೇಶಗಳ ವಿಪತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಜೋಡಿಸಲು ಮೋದಿ ಅವರು ಬಯಸಿದ್ದಾರೆ. ಹಾಗಾದಾಗ, ಯಾವುದೋ ಒಂದೆಡೆ ವಿಕೋಪ ಘಟಿಸಿದರೆ ಅಲ್ಲಿಗೆ ಯಾವ ರೀತಿಯ ನೆರವು ರವಾನಿಸಬೇಕು ಎಂಬುದನ್ನು ನಿರ್ಧರಿಸಬಹುದು’ ಎಂದು ಗೋಖಲೆ ತಿಳಿಸಿದ್ದಾರೆ.

ನೆರೆಯ ದೇಶಗಳಲ್ಲಿ ಜಂಟಿಯಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಇಬ್ಬರು ನಾಯಕರು ಸಹಮತ ಹೊಂದಿದ್ದಾರೆ. ಭಾರತ ಮತ್ತು ಜಪಾನ್‌ ಜತೆಯಾಗಿ ಕೆನ್ಯಾದಲ್ಲಿ ಕ್ಯಾನ್ಸರ್‌ ಆಸ್ಪತ್ರೆಯೊಂದನ್ನು ನಿರ್ಮಿಸುತ್ತಿವೆ.

ಅಕ್ಟೋಬರ್‌ನಲ್ಲಿ ನಡೆಯಲಿರುವ ಜಪಾನ್‌ ದೊರೆ ನರುಹಿಟೊ ಅವರ ಪಟ್ಟಾಭಿಷೇಕ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಗವಹಿಸಲಿದ್ದಾರೆ ಎಂದು ಮೋದಿ ಅವರು ಹೇಳಿದ್ದಾರೆ.

ನಾಯಕರ ಭೇಟಿ

ಶಿಂಜೊ ಅಬೆ ಅವರಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಜಿ20 ರಾಷ್ಟ್ರಗಳ ನಾಯಕರನ್ನು ಮೋದಿ ಅವರು ಭೇಟಿಯಾಗಲಿದ್ದಾರೆ. ಶುಕ್ರವಾರ ಮತ್ತು ಶನಿವಾರ ಜಿ20 ಶೃಂಗಸಭೆ ನಡೆಯಲಿದೆ. ಇದು ಮೋದಿ ಅವರು ಭಾಗವಹಿಸುತ್ತಿರುವ ಆರನೇ ಶೃಂಗಸಭೆಯಾಗಿದೆ.

ಮೂರು ಮಂಗಗಳ ಉಪಮೆ

ಮಹಾತ್ಮ ಗಾಂಧಿ ಅವರು ತಮ್ಮ ಬೋಧನೆಗಳಲ್ಲಿ ಬಳಸಿದ್ದ ಮೂರು ಮಂಗಗಳ ಉಪಮೆಯನ್ನು ಬಳಸಿಕೊಂಡು ಭಾರತ ಮತ್ತು ಜಪಾನ್‌ ನಡುವಣ ಸಂಬಂಧವನ್ನು ಮೋದಿ ಅವರು ಬಣ್ಣಿಸಿದರು.

‘ಜಪಾನ್‌ನ ಜತೆಗೆ ನಮ್ಮ ಸಂಬಂಧ ಶತಮಾನಗಳಷ್ಟು ಹಳೆಯದು. ಪರಸ್ಪರರ ಸಂಸ್ಕೃತಿ ಬಗ್ಗೆ ನಮಗೆ ಗೌರವ ಇದೆ. ಇದಕ್ಕೆ ಕಾರಣ ಬಾಪು (ಗಾಂಧೀಜಿ). ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಆಡಬೇಡ ಎಂಬ ಬಾಪು ಅವರ ಬೋಧನೆಯನ್ನು ನಾವು ಕೇಳಿದ್ದೇವೆ. ತಮ್ಮ ಸಂದೇಶವನ್ನು ಸಾರಲು ಅವರು ಬಳಸಿದ್ದ ಮೂರು ಮಂಗಗಳ ಮೂಲ 17ನೇ ಶತಮಾನದ ಜಪಾನ್‌ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ’ ಎಂದು ಮೋದಿ ಹೇಳಿದರು.

ಕಣ್ಣುಗಳನ್ನು ಮುಚ್ಚಿಕೊಂಡಿರುವ ಮಿಜರು ಎಂಬ ಮಂಗ ಕೆಟ್ಟದ್ದನ್ನು ನೋಡುವುದಿಲ್ಲ, ಕಿವಿ ಮುಚ್ಚಿಕೊಂಡ ಕಿಕಜರು ಎಂಬ ಮಂಗ ಕೆಟ್ಟದ್ದನ್ನು ಕೇಳುವುದಿಲ್ಲ, ಇವಜರು ಎಂಬ ಬಾಯಿ ಮುಚ್ಚಿಕೊಂಡಿರುವ ಮಂಗ ಕೆಟ್ಟದ್ದನ್ನು ಆಡುವುದಿಲ್ಲ.

‘ಭಾಷೆಯಲ್ಲಿ ಕೂಡ ನಮಗೆ ಸಾಮ್ಯಗಳಿವೆ. ನಾವು ಧ್ಯಾನ ಎಂದರೆ ಜಪಾನ್‌ನಲ್ಲಿ ಜೆನ್‌ ಎನ್ನುತ್ತಾರೆ. ನಮ್ಮ ಸೇವೆ ಎಂಬುದು ಜಪಾನ್‌ನಲ್ಲಿ ಸೇವ ಎಂದಾಗಿದೆ’ ಎಂದು ಮೋದಿ ವಿವರಿಸಿದರು.

ಕೋಬ್‌ನಲ್ಲಿರುವ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತ ಸುಂಕ ರಾಜ: ಹಂಗಿಸಿದ ಟ್ರಂಪ್‌

ವಾಷಿಂಗ್ಟನ್‌/ಒಸಾಕಾ (ಪಿಟಿಐ): ಅಮೆರಿಕದ ಸರಕುಗಳ ಮೇಲೆ ಭಾರತವು ಹೇರಿರುವ ‘ಅತಿ ಹೆಚ್ಚಿನ’ ಸುಂಕ ‘ಸ್ವೀಕಾರಾರ್ಹ’ ಅಲ್ಲವೇ ಇಲ್ಲ. ಇದನ್ನು ರದ್ದು ಮಾಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗ್ರಹಿಸಿದ್ದಾರೆ.

ಜಪಾನ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್‌ ಭೇಟಿ ಮಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಈ ಹೇಳಿಕೆ ನೀಡಿದ್ದಾರೆ.

‘ಅಮೆರಿಕ ಮೊದಲು’ ಎಂಬ ನೀತಿಯನ್ನು ಟ್ರಂಪ್‌ ಪ್ರತಿಪಾದಿಸುತ್ತಿದ್ದಾರೆ. ಅಮೆರಿಕದ ಸರಕುಗಳ ಮೇಲೆ ಭಾರತ ಸುಂಕ ವಿಧಿಸುತ್ತಿರುವುದನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಭಾರತವನ್ನು ‘ಸುಂಕ ರಾಜ’ ಎಂದು ಅವರು ಹಂಗಿಸಿದ್ದಾರೆ. ಅವರು ಅದಕ್ಕೂ ಮೊದಲು ಚೀನಾದ ವಿರುದ್ಧವೂ ಹರಿಹಾಯ್ದಿದ್ದರು. ಹಾಗಾಗಿ, ಈ ಬಾರಿಯ ಶೃಂಗಸಭೆಯಲ್ಲಿ ವ್ಯಾಪಾರದ ಬಿಕ್ಕಟ್ಟುಗಳೇ ಮುಖ್ಯವಾಗಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT