ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷಗಳಲ್ಲಿ ಹಣಬಲವಿದೆ ಅಂತಾರೆ ಮೋದಿ: ಆದ್ರೆ ಬಿಜೆಪಿ ಆದಾಯ ಎಷ್ಟು ಗೊತ್ತೇ?

2013ರ ಬಳಿಕ ಹೆಚ್ಚಾಗಿದೆ ಕೇಸರಿ ಪಕ್ಷದ ಆದಾಯ
Last Updated 23 ಜನವರಿ 2019, 16:26 IST
ಅಕ್ಷರ ಗಾತ್ರ

ನವದೆಹಲಿ:‘ಪ್ರತಿಪಕ್ಷಗಳ ಬಳಿ ಹಣಬಲವಿದೆ. ಆದರೆ ನಮ್ಮಲ್ಲಿ (ಬಿಜೆಪಿ ಬಳಿ) ಜನಬಲವಿದೆ’ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆದರೆ ವಾಸ್ತವವಾಗಿ 2013ರ ನಂತರದ ಅಂಕಿಅಂಶಗಳನ್ನು ಗಮನಿಸಿದಾಗ ಕಾಂಗ್ರೆಸ್‌ಗಿಂತ ಎರಡು ಪಟ್ಟಿಗೂ ಹೆಚ್ಚು ಆದಾಯವನ್ನು ಬಿಜೆಪಿ ಗಳಿಸಿರುವುದು ಬೆಳಕಿಗೆ ಬಂದಿದೆ.

2013ರಿಂದ 2018ರ ಅವಧಿಯಲ್ಲಿ ಬಿಜೆಪಿಯ ಘೋಷಿತ ಆದಾಯ ₹4,276 ಕೋಟಿ ಆಗಿದ್ದರೆ, ಕಾಂಗ್ರೆಸ್‌ನಘೋಷಿತ ಆದಾಯ ₹1,877 ಕೋಟಿ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆಯ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಅಂಕಿಅಂಶ ಉಲ್ಲೇಖಿಸಿ ದಿ ಪ್ರಿಂಟ್ ವರದಿ ಮಾಡಿದೆ.

ಪ್ರತಿಪಕ್ಷಗಳ ವಾರ್ಷಿಕ ಆದಾಯಕ್ಕೆ ಹೋಲಿಸಿದರೆ ಬಿಜೆಪಿಯದ್ದೇ ಬಹಳ ಹೆಚ್ಚಿದೆ.

ಪಕ್ಷ – ವಾರ್ಷಿಕ ಆದಾಯ (2017–18)

* ಬಿಜೆಪಿ – ₹1,027 ಕೋಟಿ

* ಕಾಂಗ್ರೆಸ್ – ₹199 ಕೋಟಿ

* ಸಿಪಿಐಎಂ – ₹105 ಕೋಟಿ

* ಬಿಎಸ್‌ಪಿ – ₹52 ಕೋಟಿ

* ಎನ್‌ಸಿಪಿ – ₹8 ಕೋಟಿ

* ಟಿಎಂಸಿ – ₹5 ಕೋಟಿ

* ಸಿಪಿಐ – ₹1.5 ಕೋಟಿ

ಮೋದಿ ಹೇಳಿದ್ದೇನು?:ನಮೋ ಆ್ಯಪ್‌ ಮೂಲಕ ಕೆಲವು ಲೋಕಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಜತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ್ದ ಮೋದಿ ಅವರು ಕಾಂಗ್ರೆಸ್, ಟಿಎಂಸಿ, ಟಿಡಿಪಿ ಸೇರಿದಂತೆ ಪ್ರತಿಪಕ್ಷಗಳನ್ನು ಅವಕಾಶವಾದಿ ಹಾಗೂ ಭ್ರಷ್ಟ ಪಕ್ಷಗಳು ಎಂದು ದೂರಿದ್ದರು. ಅಲ್ಲದೆ, ‘ಅವರ ಮತ್ತು ನಮ್ಮ ನಡುವಣ ವ್ಯತ್ಯಾಸ ಸ್ಪಷ್ಟವಾಗಿದೆ– ಒಂದು ಕಡೆ ಹಣಬಲವಿದೆ, ಆದರೆ ನಮ್ಮಲ್ಲಿ ಜನಬಲವಿದೆ... ಒಂದು ಕಡೆ ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಹಾಗೂ ಅದನ್ನು ಪೋಷಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ನಾವು ದೇಶವನ್ನು ಕಟ್ಟುತ್ತಿದ್ದೇವೆ’ ಎಂದು ಹೇಳಿದ್ದರು.

ಆದರೆ, 2014ರಲ್ಲಿ ಅಧಿಕಾರಕ್ಕೇರಿದ ಬಳಿಕ ಬಿಜೆಪಿಯ ಆದಾಯ ಗಣನೀಯವಾಗಿ ಹೆಚ್ಚಾಗಿರುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ ಎಂದು ದಿ ಪ್ರಿಂಟ್ ವರದಿ ಹೇಳಿದೆ.

ಕಾಂಗ್ರೆಸ್‌ಗೆ ಕಡಿಮೆ, ಬಿಜೆಪಿಗೆ ಹೆಚ್ಚಿತು ಆದಾಯ

2013–14ರಲ್ಲಿ ₹674 ಕೋಟಿ ಇದ್ದ ಬಿಜೆಪಿ ಆದಾಯ 2017–18ರಲ್ಲಿ ₹1,027 ಕೋಟಿ ತಲುಪಿದೆ.2013–14ರಲ್ಲಿ ₹598 ಕೋಟಿ ಇದ್ದ ಕಾಂಗ್ರೆಸ್ ಆದಾಯ 2017–18ರಲ್ಲಿ ₹199 ಕೋಟಿಗೆ ಇಳಿಕೆಯಾಗಿದೆ.

ದೇಣಿಗೆ ಪಡೆಯುವಲ್ಲೂ ಬಿಜೆಪಿಯೇ ಮುಂದು

ಬಿಜೆಪಿ ಸ್ವೀಕರಿಸುವ ₹20,000ಕ್ಕಿಂತ ಹೆಚ್ಚು ಮೊತ್ತದ ದೇಣಿಗೆ ಪ್ರಮಾಣವೂ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಈ ದೇಣಿಗೆಗಳು ಇತರ ಆದಾಯಗಳಿಗಿಂತ (ಬಾಡಿಗೆ, ಎಲೆಕ್ಟೊರಲ್ ಬಾಂಡ್‌ ಇತ್ಯಾದಿ) ಹೊರತಾಗಿವೆ.

2013–14ರಲ್ಲಿ ಬಿಜೆಪಿ ₹171 ಕೋಟಿ ದೇಣಿಗೆ ಸ್ವೀಕರಿಸಿತ್ತು. 2017–18ರ ಹೊತ್ತಿಗೆ ಇದು ₹437 ಕೋಟಿ ತಲುಪಿದೆ.ಕಾಂಗ್ರೆಸ್‌ ದೇಣಿಗೆ 2013–14ರಲ್ಲಿ ₹60 ಕೋಟಿ ಇದ್ದುದು 2017–18ರಲ್ಲಿ ₹26 ಕೋಟಿ ಆಗಿದೆ. 2014–15ರಲ್ಲಿ ₹141 ಕೋಟಿ ದೇಣಿಗೆ ಪಡೆಯುವಲ್ಲಿ ಕಾಂಗ್ರೆಸ್ ಸಫಲವಾಗಿದ್ದರೂ 2015–16 ಹಣಕಾಸು ವರ್ಷದಲ್ಲಿ ದೇಣಿಗೆ ₹20 ಕೋಟಿಗೆ ಕುಸಿದಿತ್ತು.

2017–18ರಲ್ಲಿ ಬ್ಯಾಂಕ್‌ಗಳು ಬಿಡುಗಡೆ ಮಾಡಿದ್ದ ಒಟ್ಟು ಬಾಂಡ್‌ನ ಶೇ 95ರಷ್ಟನ್ನು ಬಿಜೆಪಿಯೇ ಪಡೆದುಕೊಂಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT