ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಿಪುರ: ಮೂಲಂಕಾವು–ಬೇಗೂರು ಪರ್ಯಾಯ ಮಾರ್ಗದ ಪ್ರಸ್ತಾವ

Last Updated 2 ಅಕ್ಟೋಬರ್ 2019, 17:49 IST
ಅಕ್ಷರ ಗಾತ್ರ

ತಿರುವನಂತಪುರ: ಬಂಡಿ‍ಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿನ ಸಂಚಾರ ನಿರ್ಬಂಧದ ವಿರುದ್ಧ ವಯನಾಡ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಈ ನಡುವೆ, ಅತ್ಯಂತ ಕಡಿಮೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಪರ್ಯಾಯ ಮಾರ್ಗವೊಂದರ ಪ್ರಸ್ತಾವವನ್ನು ಪರಿಸರವಾದಿಗಳು ಮುಂದಿಟ್ಟಿದ್ದಾರೆ.

ವಯನಾಡ್‌ನ ಮೂಲಂಕಾವು–ವುಲ್ಲುವಾಡಿಯಿಂದ ಗುಂಡ್ಲುಪೇಟೆಯ ಚಿಕ್ಕಬರದಿ–ಬೇಗೂರು ಮೂಲಕ ವಯನಾಡ್‌ ಮತ್ತು ಮೈಸೂರನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಯೇ ಈ ಪರ್ಯಾಯ ಮಾರ್ಗ ಸಲಹೆ. ಈ ರಸ್ತೆ ನಿರ್ಮಾಣವಾದರೆ ಮೈಸೂರು–ವಯನಾಡ್‌ ನಡುವಣ ದೂರ 20 ಕಿ.ಮೀ.ಗಳಷ್ಟು ಕಡಿಮೆಯಾಗಲಿದೆ.

ಕೇರಳ ಸರ್ಕಾರದ ರಾಷ್ಟ್ರೀಯ ಸಾರಿಗೆ ಯೋಜನೆ ಮತ್ತು ಸಂಶೋಧನಾ ಸಂಸ್ಥೆಯು 2014ರಲ್ಲಿಯೇ ಈ ಪ್ರಸ್ತಾವ ಇರಿಸಿತ್ತು.

ಕುಟ್ಟ–ಗೋಣಿಕೊಪ್ಪ (ರಾ. ಹೆ. 275 ಮತ್ತು ರಾಜ್ಯ ಹೆದ್ದಾರಿ 90) ಮೂಲಕ ರಸ್ತೆ ನಿರ್ಮಿಸಲು ಸುಪ್ರೀಂ ಕೋರ್ಟ್‌ ಸಲಹೆ ಕೊಟ್ಟಿತ್ತು. ಆದರೆ ಇದು ಸುಲ್ತಾನ್‌ ಬತ್ತೇರಿ–ಗುಂಡ್ಲುಪೇಟೆ ನಡುವಣ ದೂರವನ್ನು ಹೆಚ್ಚಿಸುತ್ತದೆ. ಹಾಗಾಗಿ, ಪರ್ಯಾಯ ಮಾರ್ಗದ ಬಗ್ಗೆ ವಯನಾಡ್‌ ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡಿದೆ.

ರಾ. ಹೆ. 766 ರಕ್ಷಣೆ ಕ್ರಿಯಾ ಸಮಿತಿಯು ಸಂಚಾರ ನಿರ್ಬಂಧದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿದೆ. ಈ ಸಮಿತಿಯ ಮುಖಂಡ ಆ್ಯಂಟೊ ಜಾರ್ಜ್ ಅವರು ಪರ್ಯಾಯ ರಸ್ತೆಯ ಬಗ್ಗೆ ಒಲವು ತೋರಿದ್ದಾರೆ. ಆದರೆ, ಈ ರಸ್ತೆ ನಿರ್ಮಾಣಕ್ಕೆ ಭಾರಿ ಸಂಖ್ಯೆಯಲ್ಲಿ ಮರಗಳನ್ನು ಕಡಿಯಬೇಕಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಸಂಚಾರ ನಿರ್ಬಂಧ ವಿರೋಧಿಸಿ ಸುಲ್ತಾನ್‌ ಬತ್ತೇರಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಎಂಟನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಗುಂಪುಗಳು ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಹೆಚ್ಚು ತೀವ್ರವೂ ಆಗಿದೆ.

ರಕ್ಷಿತಾರಣ್ಯಕ್ಕೆ ಕಡಿಮೆ ಧಕ್ಕೆ

ಪ್ರಸ್ತಾವಿತ ಮಾರ್ಗದಲ್ಲಿ ಸುಲ್ತಾನ್‌ ಬತ್ತೇರಿಯಿಂದ ಮೈಸೂರಿನ ದೂರವು 95ಕ್ಕೆ ಕಿ.ಮೀ.ಗೆ ಇಳಿಯಲಿದೆ. ಈಗಿನ ಮಾರ್ಗದಲ್ಲಿ ಈ ದೂರವು 115 ಕಿ.ಮೀ. ಎಂದು ಪರ್ಯಾಯ ಮಾರ್ಗದ ಪ್ರತಿಪಾದಕರು ಹೇಳುತ್ತಿದ್ದಾರೆ. ರಾ. ಹೆ. 766 ಸುಮಾರು 30 ಕಿ.ಮೀ.ಗಳಷ್ಟು ಅರಣ್ಯದ ಮೂಲಕ ಮತ್ತು 19 ಕಿ.ಮೀ.ನಷ್ಟು ಹುಲಿ ರಕ್ಷಿತಾರಣ್ಯದ ಮೂಲಕ ಹಾದು ಹೋಗುತ್ತದೆ. ಪ್ರಸ್ತಾವಿತ ಪರ್ಯಾಯ ಮಾರ್ಗವು ಅರಣ್ಯವನ್ನು ಹಾದು ಹೋಗುವ ದೂರ 9 ಕಿ.ಮೀ.ಮಾತ್ರ. ಹುಲಿ ರಕ್ಷಿತಾರಣ್ಯದ ಮೂಲಕ ಇದು ಹಾದುಹೋಗುವ ದೂರ ಸುಮಾರು ಆರು ಕಿ.ಮೀ. ಮಾತ್ರ. ಹೀಗಾಗಿ ಹುಲಿ ರಕ್ಷಿತಾರಣ್ಯಕ್ಕೆ ಆಗುವ ತೊಂದರೆ ಕನಿಷ್ಠವಾಗಲಿದೆಎಂಬುದು ಅವರ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT