ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ–ದೀದಿ ಮತ್ತು ಲಡ್ಡು–ರಸಗುಲ್ಲ: ಬಂಗಾಳದ ಚುನಾವಣಾ ಸಭೆಗಳಲ್ಲಿ ಸಿಹಿಸವಿ ಮಾತು!

ಕಾಂಗ್ರೆಸ್ ಮಾಡಿದ ಈ ಕೆಲಸದಿಂದ ಬಿಜೆಪಿಗೆ ಖುಷಿಯಾಯ್ತು
Last Updated 8 ಮೇ 2019, 10:57 IST
ಅಕ್ಷರ ಗಾತ್ರ

ಚುನಾವಣೆ ಅಂದ ಮೇಲೆ ಆರೋಪ–ಪ್ರತ್ಯಾರೋಪ, ಲೇವಡಿ–ಕಿಡಿಕಿಡಿ–ಸಿಡಿಮಿಡಿ ಎಲ್ಲವೂ ಸಾಮಾನ್ಯ ತಾನೆ? ಆದರೆ ಒಂದಾನೊಂದು ಕಾಲದಲ್ಲಿ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಮತ್ತು ಅದೇ ಎನ್‌ಡಿಎ ಪ್ರಧಾನಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಬದ್ಧ ವೈರಿಗಳಂತೆ ಆಗಿದ್ದಾರೆ.

ಮೋದಿ ಅವರಿಗೆ ರಸಗುಲ್ಲ ಇಷ್ಟ ಎನ್ನುವುದನ್ನು ಅರಿತಿರುವ ಮಮತಾ ಬ್ಯಾನರ್ಜಿ ಅದನ್ನು ಒಂದು ರೂಪಕವಾಗಿಯೇ ಬಳಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಗಳಿಸುವ ಸೀಟುಗಳ ಸಂಖ್ಯೆ ಕಡಿಮೆಯಾದರೆ ಅದರ ನಷ್ಟವನ್ನು ಪಶ್ಚಿಮ ಬಂಗಾಳದಲ್ಲಿ ತುಂಬಿಕೊಳ್ಳಬೇಕು ಎನ್ನುವ ಬಿಜೆಪಿ ರಣತಂತ್ರದ ಅರಿವು ಮಮತಾ ಅವರಿಗೆ ಚೆನ್ನಾಗಿಯೇ ಇದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಎಂಬಂತೆ ಅವರು ‘ಬನ್ನಿಬನ್ನಿ, ನಿಮಗೆ ಬಂಗಾಳದ ಜನರು ರಸಗುಲ್ಲ ಕೊಡ್ತಾರೆ’ ಎಂದು ಬಿಜೆಪಿ ಪಾಳಯವನ್ನು ಆಹ್ವಾನಿಸುತ್ತಿದ್ದಾರೆ.

ರಸಗುಲ್ಲ ಗುಂಡಾಗಿರುವುದು ಎಲ್ಲರಿಗೂ ಗೊತ್ತುತಾನೆ? ಸೊನ್ನೆ ಕೂಡಾ ಗುಂಡಾಗಿಯೇ ಇರುತ್ತೆ ಅಲ್ವಾ. ದೀದಿ ಪ್ರಸ್ತಾಪಿಸುವ ‘ರಸಗುಲ್ಲ’ ಅರ್ಥವಾಗಬೇಕಾದರೆ ಈ ದುಂಡನೆ ಸಿಹಿಯ ಆಕಾರದ ಅರಿವು ನಮಗಿರಬೇಕು. 2016ರ ವಿಧಾನಸಭೆ ಚುನಾವಣೆಗಳಲ್ಲಿ ನರೇಂದ್ರ ಮೋದಿ ಲಾಡು ಬಗ್ಗೆ ಮಾತನಾಡಿದ್ದರು. ಈಗ ಅದನ್ನು ಪ್ರಸ್ತಾಪಿಸುತ್ತಿರುವ ದೀದಿ ‘ಬಂಗಾಳದ ಜನರಿಗೆ ಲಡ್ಡು ಕೊಡುವ ಮೋದಿ ಅವರ ಆಸೆ ಈಡೇರಲಿಲ್ಲ. ಕನಿಷ್ಠ ಅವರಿಗೆ ರಸಗುಲ್ಲ ಕೊಟ್ಟು ಖುಷಿಪಡಿಸೋಣ’ ಎಂದು ಜನರಿಗೆ ಕರೆ ನೀಡುತ್ತಿದ್ದಾರೆ. ದಕ್ಷಿಣ ದಿನಜ್‌ಪುರದ ಚುನಾವಣಾ ಪ್ರಚಾರ ಭಾಷಣದಲ್ಲಿ ದೀದಿ ಮಾಡಿದ ಲಡ್ಡು–ರಸಗುಲ್ಲ ಭಾಷಣ ಮಾಧ್ಯಮಗಳ ಗಮನ ಸೆಳೆದದ್ದು ಸುಳ್ಳಲ್ಲ.

ಕಮಾನ್ ದೀದಿ, ಹೊಡೀರಿ ಕಲ್ಲು...

ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಹಗ್ಗಜಗ್ಗಾಟ, ಮಾತಿನ ಚಕಮಕಿ ನೋಡಿ ಖುಷಿಪಟ್ಟವರು ಈಗ ಇವರಿಬ್ಬರ ಸಂಭಾಷಣೆಯ ಇನ್ನೊಂದು ತುಣುಕು ಹಂಚಿಕೊಂಡು ಸಂತಸಪಡುತ್ತಿದ್ದಾರೆ.

ಮೋದಿ ಅವರು ಈಚೆಗೆ ಸಂದರ್ಶನವೊಂದರಲ್ಲಿ ‘ಮಮತಾ ಬ್ಯಾನರ್ಜಿ ನನಗೆ ಪ್ರತಿವರ್ಷ ಕುರ್ತಾ ಮತ್ತು ಬೆಂಗಾಲಿ ಸಿಹಿ ತಿಂಡಿಗಳನ್ನು ಕಳುಹಿಸಿಕೊಡುತ್ತಾರೆ’ ಎಂದು ಹೇಳಿದ್ದರು. ಮೋದಿ ಮಾತಿಗೆ ಕೆರಳಿದ ದೀದಿ, ‘ಹೌದೌದು ನಾನು ಅವರಿಗೆ ಸಿಹಿ ಕಳುಹಿಸಿಕೊಡುತ್ತೇನೆ. ಆದರೆ ಬಂಗಾಳದ ಜನರು ಮೋದಿಗೆ ಈ ಬಾರಿ ಕಲ್ಲಿನಿಂದ ಮಾಡಿದ ರಸಗುಲ್ಲ ಕೊಡುತ್ತಾರೆ’ ಎಂದು ಲೇವಡಿ ಮಾಡಿದ್ದರು.

ಶ್ರೀರಾಮಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ದೀದಿ ಹೇಳಿಕೆ ಪ್ರಸ್ತಾಪಿಸಿದ ಮೋದಿ, ‘ನಿಮ್ಮ ಗಿಫ್ಟ್‌ ನನಗೆ ಅಮೂಲ್ಯವಾದುದು. ಕಲ್ಲಿನಿಂದ ಮಾಡಿದ ರಸಗುಲ್ಲಗಳು ನನಗೆ ಬಂದರೆ ಬಂಗಾಳದಲ್ಲಿ ಒಂದಿಷ್ಟು ಬಿಜೆಪಿ ಕಾರ್ಯಕರ್ತರ ತಲೆಗಳು ಉಳಿಯುತ್ತವೆ. ಕಾರ್ಯಕರ್ತರ ಜೀವ ಉಳಿಸಲು ನಿಮ್ಮ ಕಲ್ಲಿನ ರಸಗುಲ್ಲಗಳನ್ನು ನಾನು ಸ್ವೀಕರಿಸುತ್ತೇನೆ’ ಎಂದು ಕಿಚಾಯಿಸಿದರು.

ಇದು ಕೇವಲ ಬಾಯ್ತಪ್ಪಿನ ಮಾತೇ?

‘ಅಲ್ಲಾ ಕಣ್ರೀ, ನೀವು ಪ್ರಧಾನಿ ಆದ ಮೇಲೆ ಸ್ವದೇಶಕ್ಕಿಂತ ವಿದೇಶ ಸುತ್ತಿದ್ದೇ ಹೆಚ್ಚು, ಒಳ್ಳೇ ಟೂರಿಂಗ್ ಪ್ರಧಾನಿ ಆಗಿದ್ದೀರಿ’ ಎಂದೆಲ್ಲಾ ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗುವ ಮೋದಿ ವಿಶ್ವದ ಬಹುತೇಕ ಮುಂಚೂಣಿ ನಾಯಕರ ವಿಶ್ವಾಸ ಸಂಪಾದಿಸಿರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಇರಬಹುದು ಅನೇಕ ದೇಶಗಳ ನಾಯಕರಿಗೆ ಭಾರತದ ಚುನಾವಣೆ ಬಗ್ಗೆ ಇನ್ನಿಲ್ಲದ ಕುತೂಹಲ.

ಟರ್ಕಿ ಅಧ್ಯಕ್ಷ ತಯೀಪ್ ಎರ್ಡೊಗನ್ ಅವರ ವಿಶೇಷ ಸಲಹೆಗಾರ ಇಬ್ರಾಹಿಂ ಕಲಿನ್ ಈಚೆಗೆ ದೆಹಲಿಗೆ ಬಂದಿದ್ದರು. ಈ ಸಂದರ್ಭ ಮೋದಿ ಮತ್ತು ಎರ್ಡೊಗನ್ ನಡುವಣ ಸೌಹಾರ್ದ ಸಂಬಂಧ ಕುರಿತು ಪುಟ್ಟ ಭಾಷಣವನ್ನೇ ಮಾಡಿದರು ಅನ್ನಿ. ‘ಮೋದಿ ಅವರು ನಮ್ಮ ದೇಶಕ್ಕೆ ಈ ವರ್ಷದ ಕೊನೆಯಲ್ಲಿ ಮತ್ತೊಮ್ಮೆ ಭೇಟಿ ನೀಡಬೇಕೆಂಬುದು ನಮ್ಮ ಅಪೇಕ್ಷೆ’ ಎಂಬ ಪದಗಳೂ ಅವರ ಬಾಯಿಂದ ಹೊರಬಿತ್ತು. ಅಲ್ಲಿದ್ದವರ ಪ್ರತಿಕ್ರಿಯೆ ಗಮನಿಸಿದ ನಂತರ ಅವರಿಗೆ ಭಾರತದಲ್ಲಿ ನಡೆಯುತ್ತಿರುವ ಸಂಸತ್ ಚುನಾವಣೆಯ ನೆನಪಾಗಿರಬೇಕು.

‘ನನ್ನ ಮಾತಿನ ಅರ್ಥ, ಭಾರತದ ಪ್ರಧಾನಿಯಾಗಿ ಯಾರೇ ಆಯ್ಕೆಯಾದರೂ ಈ ವರ್ಷಾಂತ್ಯಕ್ಕೆ ಟರ್ಕಿ ಅವರನ್ನು ಆಹ್ವಾನಿಸಿ ಗೌರವಿಸಲಿದೆ’ ಎಂದು ಮತ್ತೊಂದು ಹೇಳಿಕೆ ಹೊರಳಿಸಿ ಮುಗುಳ್ನಕ್ಕರು.

ಬಿಜೆಪಿ ನಾಯಕರ ಖುಷಿಗೆ ಕಾಂಗ್ರೆಸ್ ಕಾರಣವಾಯ್ತೆ?

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ ನಾಮಪತ್ರ ಸಲ್ಲಿಸುವ ಮುನ್ನ ಅಭೂತಪೂರ್ವ ರೋಡ್ ಷೋ ನಡೆಸಿದ್ದು ನಿಮಗೆ ನೆನಪಿರಬಹುದು. ಅಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿ ಮಾತ್ರ ಬಿಕೋ ಎನ್ನುತ್ತಿತ್ತು. ಪಕ್ಷದ ಪದಾಧಿಕಾರಿಗಳು ಸೇರಿದಂತೆ ಬಹುತೇಕರು ವಾರಾಣಸಿಯಲ್ಲಿ ಮೊಕ್ಕಾಂ ಹೂಡಿ ರೋಡ್ ಷೋ ಯಶಸ್ಸಿಗೆ ಶ್ರಮಿಸುತ್ತಿದ್ದರು.

ರೋಡ್ ಷೋ ಯಶಸ್ಸಿಗಿಂತ ಕಾಂಗ್ರೆಸ್ ಪಕ್ಷದ ಒಂದು ನಿರ್ಧಾರ ದೆಹಲಿಯಲ್ಲಿದ್ದ ಅಳಿದುಳಿದ ಬಿಜೆಪಿ ನಾಯಕರ ಸಂತಸ ಇಮ್ಮಡಿಯಾಗಲು ಕಾರಣವಾಯಿತಂತೆ. ಪ್ರಿಯಂಕಾ ಗಾಂಧಿ ಅಥವಾ ಯಾವುದೇ ಪ್ರಭಾವಿ ಅಭ್ಯರ್ಥಿಯ ಬದಲು ಕಾಂಗ್ರೆಸ್‌ ನಾಮಕಾವಸ್ಥೆಗೆ ಎಂಬಂತೆ ಅಜಯ್ ರಾಯ್ ಅವರನ್ನು ತನ್ನ ವಾರಾಣಸಿ ಅಭ್ಯರ್ಥಿಯಾಗಿ ಘೋಷಿಸಿತು.

2014ರಲ್ಲಿಯೂ ಮೋದಿ ವಿರುದ್ಧ ಸ್ಪರ್ಧಿಸಿದ್ದ ಅಜಯ್ ರಾಯ್ 75,000ಕ್ಕೂ ಮತಗಳಿಸಿದ್ದರು. ಮೋದಿ ಬರೋಬ್ಬರಿ 5.81 ಲಕ್ಷ ಮತ ಗಳಿಸಿದ್ದರು. ಆಮ್ ಆದ್ಮಿ ಕೇಜ್ರೀವಾಲ್ 2.09 ಲಕ್ಷ ಮತ ಪಡೆದು ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT