ಶನಿವಾರ, ಜನವರಿ 18, 2020
19 °C

ದೇಶವ್ಯಾಪಿ ವಿಸ್ತರಿಸಿದ ‘ಪೌರತ್ವ’ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ಶನಿವಾರವೂ ಪ್ರತಿಭಟನೆ ನಡೆದಿವೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆದಿದೆ. ಅಸ್ಸಾಂನಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ. ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿಷೇಧಾಜ್ಞೆ ಮತ್ತು ಕರ್ಫ್ಯೂ ಜಾರಿಯಲ್ಲಿದ್ದರೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆಗೆ ಇಳಿದು ಈ ಕಾಯ್ದೆಯ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ

ಆಧಾರ: ಪಿಟಿಐ, ರಾಯಿಟರ್ಸ್, ಎಎಫ್‌ಪಿ

ಜಮ್ಮು–ಕಾಶ್ಮೀರ

ಅಖಿಲ ಭಾರತ ವಕೀಲರ ಸಂಘದ ಜಮ್ಮು–ಕಾಶ್ಮೀರ ಘಟಕದ ಸದಸ್ಯರು ಶನಿವಾರ ಜಮ್ಮುನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಜತೆ ಕೇಂದ್ರ ಸರ್ಕಾರವು ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಉತ್ತರಪ್ರದೇಶ

ಕಾನ್ಪುರದಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಘರ್ಷಣೆ ನಡೆದು ಪೊಲೀಸ್ ಚೌಕಿಗೆ ಬೆಂಕಿ ಹಚ್ಚಲಾಗಿದೆ. ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿವೆ. ರಾಮಪುರದಲ್ಲಿ ನಡೆದ ಘರ್ಷಣೆಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪೊಲೀಸರ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಬಿಹಾರ ಬಂದ್; ರಸ್ತೆ, ರೈಲು ತಡೆ

ಬಿಹಾರದಲ್ಲಿ ವಿರೋಧ ಪಕ್ಷ ಆರ್‌ಜೆಡಿ ನೀಡಿದ್ದ ಬಂದ್‌ ಕರೆಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರು ದೊಣ್ಣೆ ಮತ್ತು ಪಕ್ಷದ ಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಅಲ್ಲಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಪ್ರತಿಭಟನೆಗೆ ಕಾಂಗ್ರೆಸ್‌ ಮತ್ತು ಆರ್‌ಎಲ್‌ಎಸ್‌ಪಿ ಸಹ ಬೆಂಬಲ ನೀಡಿತ್ತು. ಪ್ರತಿಭಟನಕಾರರು ರೈಲು ತಡ ನಡೆಸಿದ ಕಾರಣ ಎಂಟು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಜಾಮಿಯಾ:ಮತ್ತೆ ಪ್ರತಿಭಟನೆ

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಹೊರಗೆ ಶನಿವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

ಉತ್ತರಾಖಂಡ

ಉತ್ತರಾಖಂಡದ ಹಲವೆಡೆ ಶನಿವಾರ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಹಲ್ದವಾನಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಅಸ್ಸಾಂ: ಮತ್ತೆ ಕರ್ಫ್ಯೂ

ಅಸ್ಸಾಂನ ತಿನ್ಸೂಕಿಯಾದಲ್ಲಿ ಶನಿವಾರ ಮತ್ತೆ ಭಾರಿ ಪ್ರತಿಭಟನೆ ನಡೆದಿದೆ. ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ತಿನ್ಸೂಕಿಯಾದಲ್ಲಿ ಪುನಃ ಕರ್ಫ್ಯೂ ಹೇರಲಾಗಿದೆ. ಗುವಾಹಟಿಯಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.

ಮಧ್ಯಪ್ರದೇಶ: 35 ಮಂದಿ ಬಂಧನ

ರಾಜ್ಯದ ಜಬಲ್‌ಪುರದಲ್ಲಿ ಶುಕ್ರವಾರ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು 35 ಮಂದಿಯನ್ನು ಬಂಧಿಸಿದ್ದಾರೆ. ಬೋಫಾಲ್‌ನಲ್ಲಿ ಇಂಟರ್‌ನೆಟ್ ಸೇವೆಗೆ ಮರುಚಾಲನೆ ನೀಡಲಾಗಿದೆ. ರಾಜ್ಯದ ಹಲವೆಡೆ ಶನಿವಾರವೂ ಪ್ರತಿಭಟನೆ ನಡೆದಿದೆ.

ಕೇರಳದಾದ್ಯಂತ ಪ್ರತಿಭಟನೆ

ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಶನಿವಾರ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್‌ನ ಶಾಸಕರು ಮತ್ತು ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕೆಲವು ಜಿಲ್ಲಾ ಕೇಂದ್ರಗಳಲ್ಲಿದ್ದ ಕೇಂದ್ರ ಸರ್ಕಾರದ ವಿವಿಧ ಕಚೇರಿ ಮತ್ತು ಸಂಸ್ಥೆಗಳಿಗೆ ನುಗ್ಗಲು ಪ್ರತಿಭಟನಕಾರರು ಯತ್ನಿಸಿದರು. ಆಗ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯಿತು. ರಾಜ್ಯದ ಹಲವೆಡೆ ಎಡಪಕ್ಷಗಳು ಶನಿವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿವೆ.

ಬಿಜೆಪಿ ಅಭಿಯಾನ

ಕಾಯ್ದೆಯ ಬಗ್ಗೆ ಜನರಲ್ಲಿ ಇರುವ ತಪ್ಪು ಮಾಹಿತಿಯನ್ನು ಹೋಗಲಾಡಿ
ಸುವ ಸಲುವಾಗಿ ಅಭಿಯಾನ ಆರಂಭಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ದೇಶದಾದ್ಯಂತ 250 ಮಾಧ್ಯಮಗೋಷ್ಠಿ ನಡೆಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಲಾಗುತ್ತದೆ. ಈ ಮೂಲಕ 3 ಕೋಟಿ ಕುಟುಂಬಗಳನ್ನು ತಲುಪಲು ಬಿಜೆಪಿ ಸಿದ್ಧತೆ ನಡೆಸಿದೆ.

ಗುಜರಾತ್‌: ಪೌರತ್ವ ಪತ್ರ ಹಸ್ತಾಂತರ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನೆಲೆಸಿರುವ ಪಾಕಿಸ್ತಾನ ಹಿಂದೂ ಕುಟುಂಬ
ವೊಂದಕ್ಕೆ ರಾಜ್‌ಕೋಟ್ ಲೋಕಸಭಾ ಕ್ಷೇತ್ರದ ಸಂಸದ ಮೋಹನ್ ಕುಂದಾರಿಯಾ ಪೌರತ್ವ ಪ್ರಮಾಣಪತ್ರವನ್ನು ಶನಿವಾರ ಹಸ್ತಾಂತರಿಸಿದರು. ಪೌರತ್ವ (ತಿದ್ದುಪಡಿ) ಕಾಯ್ದೆಯ ಅಡಿ ರಾಜ್ಯದಲ್ಲಿ ಪೌರತ್ವ ಪಡೆದ ಮೊದಲ ಕುಟುಂಬ ಇದಾಗಿದೆ.

ಚೆನ್ನೈ: ಬೀದಿಗಿಳಿದ ವಿದ್ಯಾರ್ಥಿಗಳು

ಚೆನ್ನೈನಲ್ಲಿ ಸಿಪಿಎಂ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಸಿಪಿಎಂನ ಯುವ ಘಟಕ ಮತ್ತು ವಿದ್ಯಾರ್ಥಿ ಘಟಕದ ಸದಸ್ಯರು ಎಂಜಿಆರ್‌ ರೈಲು ನಿಲ್ದಾಣಕ್ಕೆ ತೆರಳಿ, ರೈಲುಗಳನ್ನು ತಡೆದಿದ್ದಾರೆ. ನಂತರ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮೆರವಣಿಗೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೂ ಭಾಗವಹಿಸಿದ್ದರು. ತಮಿಳುನಾಡಿನ ಇತರ ಕೆಲವು ಪ್ರದೇಶಗಳಲ್ಲೂ ಶನಿವಾರ ಪ್ರತಿಭಟನೆ ನಡೆದಿದೆ.


ಚೆನ್ನೈನಲ್ಲಿ ಫಲಕ ಹಿಡಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿ

ಪೊಲೀಸರ ಗುಂಡಿಗೆ ಬಲಿಯಾಗಿದ್ದರೆ ತನಿಖೆ

ಲಖನೌ: ಉತ್ತರ ಪ್ರದೇಶದಲ್ಲಿ ಶುಕ್ರವಾರ ಮತ್ತು ಶನಿವಾರ ನಡೆದ ಪ್ರತಿಭಟನೆ ವೇಳೆ ಗುಂಡೇಟು ತಿಂದು ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿದೆ. ಇದರಲ್ಲಿ ಒಬ್ಬ ವ್ಯಕ್ತಿ ಮಾತ್ರ ನಮ್ಮ ಗುಂಡಿಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

‘ಪ್ರತಿಭಟನಕಾರರು ಪರಸ್ಪರ ಗುಂಡು ಹಾರಿಸಿಕೊಂಡು ಸತ್ತಿದ್ದಾರೆ. ಶವಪರೀಕ್ಷೆ ನಂತರ ಇದು ದೃಢಪಡಲಿದೆ. ಪೊಲೀಸರ ಗುಂಡಿಗೆ ಪ್ರತಿಭಟನಕಾರರು ಬಲಿಯಾಗಿದ್ದರೆ, ನ್ಯಾಯಾಂಗ ತನಿಖೆ ನಡೆಸಲಾಗುವುದು’ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಒ.ಪಿ.ಸಿಂಗ್ ಹೇಳಿದ್ದಾರೆ.

‘ಶುಕ್ರವಾರದ ಹಿಂಸಾಚಾರದಲ್ಲಿ ಮೃತಪಟ್ಟ 11 ಮಂದಿಯಲ್ಲಿ 8 ವರ್ಷದ ಒಬ್ಬ ಬಾಲಕ ಸೇರಿದ್ದಾನೆ. ವಾರಾಣಸಿಯಲ್ಲಿ ಪ್ರತಿಭಟನಕಾರರ ಕಾಲ್ತುಳಿತಕ್ಕೆ ಸಿಲುಕಿ ಬಾಲಕ ಮೃತಪಟ್ಟಿದ್ದಾನೆ. ಉಳಿದ 10 ಮಂದಿ ಗುಂಡೇಟಿನಿಂದ ಸತ್ತಿದ್ದಾರೆ. ಆದರೆ, ಪೊಲೀಸರು ಒಂದು ಗುಂಡನ್ನೂ ಹಾರಿಸಿಲ್ಲ’ ಎಂದು ಅವರು ಪುನರುಚ್ಚರಿಸಿದ್ದಾರೆ.

ರಾಜ್ಯದಲ್ಲಿ 10,000ಕ್ಕೂ ಹೆಚ್ಚು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂಸಾಚಾರ ನಡೆಸಿದ ವ್ಯಕ್ತಿಗಳ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರತಿಭಟನೆ ವೇಳೆ ಆಗಿರುವ ನಷ್ಟದ ಮೊತ್ತ ಅವರಿಂದ ವಸೂಲಿ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು