ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮವರ್ಗಕ್ಕೆ ಹೊಸ ಆರೋಗ್ಯ ಯೋಜನೆ

Last Updated 19 ನವೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕ ಆರೋಗ್ಯ ಯೋಜನೆ ಅಡಿಯಲ್ಲಿ ಇನ್ನೂ ಸೇರ್ಪಡೆಯಾಗದ ಮಧ್ಯಮ ವರ್ಗದ ಜನರಿಗಾಗಿ ಹೊಸ ಆರೋಗ್ಯ ಯೋಜನೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ನೀತಿ ಆಯೋಗ ಹೇಳಿದೆ.

‘ದೇಶದಲ್ಲಿ, ಕೆಳಹಂತದಲ್ಲಿರುವ ಶೇ 40ರಷ್ಟು ಜನರು ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯುತ್ತಿದ್ದಾರೆ. ಇವರನ್ನು ಹೊಸ ಯೋಜನೆಯಿಂದ ಹೊರಗಿಡಲಾಗುವುದು’ ಎಂದು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಬಿಲ್ ಆ್ಯಂಡ್ ಮೆಲಿಂದಾ ಗೇಟ್ಸ್ ಫೌಂಡೇಷನ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಉಪಸ್ಥಿತಿಯಲ್ಲಿ, ‘ನವ ಭಾರತಕ್ಕಾಗಿ ಆರೋಗ್ಯ ವ್ಯವಸ್ಥೆ’ ಕುರಿತ ವರದಿ ಬಿಡುಗಡೆ ಮಾಡಿ ರಾಜೀವ್ ಕುಮಾರ್ ಮಾತನಾಡಿದರು.

‘ಮೇಲ್ವರ್ಗದ ಜನರಿಗೆ ತಮ್ಮ ವೈದ್ಯಕೀಯ ವೆಚ್ಚ ಭರಿಸುವ ಸಾಮರ್ಥ್ಯ ಇದೆ.ಬಡವರಿಗೆ ಈಗಾಗಲೇ ಆಯುಷ್ಮಾನ್ ಭಾರತ ಸೌಲಭ್ಯ ಕಲ್ಪಿಸಲಾಗಿದೆ. ಶೇ 50ರಷ್ಟು ಮಧ್ಯಮವರ್ಗದವರಿಗೆ
ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ಆದ್ದರಿಂದ ಈ ವರ್ಗದ ಜನರಿಗೆದೀರ್ಘಾವಧಿಗೆ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಈ ವರದಿಯಲ್ಲಿ ಮಾರ್ಗಸೂಚಿಗಳನ್ನು ಹಾಕಿಕೊಳ್ಳಲಾಗಿದೆ’ ಎಂದು ಆಯೋಗದ ಸಲಹೆಗಾರ (ಆರೋಗ್ಯ) ಅಲೋಕ್ ಕುಮಾರ್ ತಿಳಿಸಿದ್ದಾರೆ.

ಸಚಿವಾಲಯದ ಜತೆ ಗೇಟ್ಸ್ ಫೌಂಡೇಷನ್ ಒಪ್ಪಂದ

ಪ್ರಾಥಮಿಕ ಆರೋಗ್ಯ ಸೌಲಭ್ಯ ಒದಗಿಸುವ ಕೇಂದ್ರದ ಯೋಜನೆಗಳಿಗೆ ತಾಂತ್ರಿಕ ಹಾಗೂ ನಿರ್ವಹಣಾ ನೆರವು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯದ ಜತೆ ಬಿಲ್‌ ಆ್ಯಂಡ್ ಮೆಲಿಂದಾ ಗೇಟ್ಸ್‌ ಫೌಂಡೇಷನ್ ಸಹಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ.

ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವುದು, ಪೌಷ್ಟಿಕಾಂಶ ಯೋಜನೆಗಳ ಸುಧಾರಣೆ ಸೇರಿದಂತೆ ಆರೋಗ್ಯ ಕ್ಷೇತ್ರದ ಹಲವು ವಿಭಾಗಗಳನ್ನು ಸದೃಢಗೊಳಿಸುವಲ್ಲಿ ಫೌಂಡೇಷನ್ ಬೆಂಬಲ ನೀಡಲಿದೆ.

ಎಸ್‌ಡಿಜಿ ಸಾಧಿಸಲು ಸಾರ್ವಜನಿಕ ಆರೋಗ್ಯ ಯೋಜನೆ ಮಹತ್ವದ್ದು

‘ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) 2030 ‘ಅಜೆಂಡಾ ಸಾಧಿಸಲು ಸಾರ್ವಜನಿಕ ಆರೋಗ್ಯ ಯೋಜನೆ ಮಹತ್ವದ ಅಂಶವಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ಜಾರಿಗೆ ಭಾರತ ಬದ್ಧವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

‘ವೈದ್ಯಕೀಯ ಉತ್ಪನ್ನಗಳ ಲಭ್ಯತೆ: ಸುಸ್ಥಿರ ಅಭಿವೃದ್ಧಿ ಗುರಿ 2030’ ಕುರಿತು ಅಂತರರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಎಲ್ಲರಿಗೂ ಉನ್ನತ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ನಿರಂತರ ಕ್ರಮ ಕೈಗೊಳ್ಳುತ್ತಿದೆ. ವೈದ್ಯಕೀಯ ಉತ್ಪನ್ನಗಳ ಲಭ್ಯತೆ, ಅವುಗಳ ಕಾನೂನುಬದ್ಧ ಮಾರಾಟ ವ್ಯವಸ್ಥೆ ಕಲ್ಪಿಸುವುದು ಸಹ ಈ ಗುರಿ ತಲುಪಲು ಮಹತ್ವದ್ದಾಗಿದೆ. ಸಮಾವೇಶದ ಮುಖ್ಯ ಉದ್ದೇಶ ಇದೇ ಆಗಿದೆ’ ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವಾಲಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಈ ಸಮಾವೇಶ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT