ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ–ಬಿಜೆಪಿ ಮಧ್ಯೆ ವಾಕ್ಸಮರ

ನಿರ್ಭಯಾ ಪ್ರಕರಣ:
Last Updated 17 ಜನವರಿ 2020, 19:52 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಮೂರು ವಾರ ಬಾಕಿ ಇದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇನ್ನೊಂದೆಡೆ, ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ವಿಳಂಬಗೊಂಡಿದೆ ಎಂಬ ವಿಚಾರ ಬಿಜೆಪಿ ಮತ್ತು ಎಎಪಿ ಮುಖಂಡರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ನಿರ್ಭಯಾಳ ತಾಯಿಯ ಸಂಕಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಟೀಕಿಸಿದೆ. ಅಪರಾಧಿಗಳಲ್ಲೊಬ್ಬನಾದ ಬಾಲಕ ಶಿಕ್ಷೆ ಅನುಭವಿಸಿ, ಮನೆಗೆ ಮರಳಿದ ಮೇಲೆ ಆತನಿಗೆ ಹಣ ಮತ್ತು ಹೊಲಿಗೆ ಕಿಟ್‌ ನೀಡಲಾಗಿದೆ ಎಂದೂ ಬಿಜೆಪಿ ಆರೋಪಿಸಿದೆ. ಈ
ಆರೋಪವನ್ನು ಎಎಪಿ ಸಾರಾಸಗಟಾಗಿ ತಳ್ಳಿ ಹಾಕಿದೆ.

ಕಾಂಗ್ರೆಸ್‌ ಮುಖಂಡರೂ ಟ್ವೀಟ್‌ ಮೂಲಕ, ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ.

‘ನಿರ್ಭಯಾಳ ತಾಯಿಯನ್ನು ಕಾಂಗ್ರೆಸ್‌ ‍ಪಕ್ಷವು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ವಿರುದ್ಧ ಕಣಕ್ಕಿಳಿಸಲಿದೆ’ ಎಂಬುದಾಗಿ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ‘ಸ್ವಾಗತ’ ಎಂಬ ಒಕ್ಕಣೆಯೊಂದಿಗೆ ಕಾಂಗ್ರೆಸ್‌ ಮುಖಂಡ ಕೀರ್ತಿ ಆಜಾದ್‌ ಮರು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಸುಭಾಷ್‌ ಚೋಪ್ರಾ,‘ಇಂತಹ ಪ್ರಸ್ತಾವವೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಗಲ್ಲು ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದ ನಂತರ, ದೆಹಲಿ ಸರ್ಕಾರ ತ್ವರಿತವಾಗಿ ತನ್ನ ಕರ್ತವ್ಯ ನಿರ್ವಹಣೆ ಮಾಡಿದ್ದರೆ ಅಪರಾಧಿಗಳನ್ನು ಈಗಾಗಲೇ ಗಲ್ಲಿಗೇರಿಸಿರಲಾಗುತ್ತಿತ್ತು’ ಎಂದು ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್‌ ಟೀಕಿಸಿದ್ದಾರೆ.

‘ಅಪರಾಧಿಗಳನ್ನು ಗಲ್ಲಿಗೇರಿಸುವಲ್ಲಿ ವಿಳಂಬವಾಗುತ್ತಿರುವುದರಲ್ಲಿ ದೆಹಲಿ ಸರ್ಕಾರದ ಪಾತ್ರ ಇಲ್ಲ. ಸಂತ್ರಸ್ತೆಯ ತಾಯಿಗೆ ತಪ್ಪು ಮಾರ್ಗದರ್ಶನ ಮಾಡಲಾಗುತ್ತಿದೆ. ಪ್ರಕಾಶ್ ಜಾವಡೇಕರ್ ಸೇರಿದಂತೆ ಬಿಜೆಪಿ ಮುಖಂಡರು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟೀಕಿಸಿದ್ದಾರೆ.

***

‘ರಾಜಕೀಯಕ್ಕೆ ಮಗಳ ಸಾವು ಬಳಕೆ’

‘ನಮ್ಮ ಮಗಳ ಸಾವನ್ನು ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ಧಾರೆ’ ಎಂದು ನಿರ್ಭಯಾಳ ತಾಯಿ ಕಣ್ಣೀರು ಹಾಕಿದ್ದಾರೆ.

ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎಎಪಿ ನಾಯಕರು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

‘ನನ್ನ ಮಗಳ ಸಾವಿಗೆ ನ್ಯಾಯಬೇಕು ಎಂದು 2012ರಲ್ಲಿ ಪ್ರತಿಭಟನೆ ಮಾಡಿದವರು ಇವರೇ. ಈಗ ಇದೇ ಜನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಗಳ ಸಾವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮುಖ್ಯಮಂತ್ರಿ ಕೇಜ್ರಿವಾಲ್‌ ವಿರುದ್ಧ ಕಾಂಗ್ರೆಸ್‌ ತಮ್ಮನ್ನು ಕಣಕ್ಕಿಳಿಸುವ ಬಗ್ಗೆ ನನಗೆ ತಿಳಿದಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮೇಲಾಗಿ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನನ್ನ ಮಗಳ ಸಾವಿಗೆ ಕಾರಣದವರಿಗೆ ಗಲ್ಲು ಶಿಕ್ಷೆಯಾಗುವುದನ್ನು ನಾನು ನೋಡಬೇಕು ಅಷ್ಟೇ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

****

ಕರಾಳ ರಾತ್ರಿ

ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಾ (23) ಮೇಲೆ, ಚಲಿಸುತ್ತಿದ್ದ ಬಸ್‌ವೊಂದರಲ್ಲಿ 2012ರ ಡಿಸೆಂಬರ್‌ 16ರ ತಡರಾತ್ರಿ ಆರು ಜನರು ಸಾಮೂಹಿಕ ಅತ್ಯಾಚಾರ ನಡೆಸಿ, ಭೀಕರವಾಗಿ ಹಲ್ಲೆ ನಡೆಸಿದ್ದರು. ನಂತರ ಆಕೆಯನ್ನು ರಸ್ತೆ ಮೇಲೆ ಎಸೆದಿದ್ದರು. ಮೊದಲು ನವದೆಹಲಿಯಲ್ಲಿ ನಂತರ, ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ನಿರ್ಭಯಾಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಡಿ. 29ರಂದು ಕೊನೆಯುಸಿರೆಳೆದರು.

***

ಅಪರಾಧಿಯೊಬ್ಬ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿ ಅವರು ತಿರಸ್ಕರಿಸಿದ್ದನ್ನು ಸ್ವಾಗತಿಸುತ್ತೇನೆ. ಅಪರಾಧಿಗಳಿಗೆ ಶೀಘ್ರವೇ ಗಲ್ಲು ಶಿಕ್ಷೆಯಾಗುವ ಬಗ್ಗೆ ಈಗ ಭರವಸೆ ಮೂಡಿದೆ -ನಿರ್ಭಯಾಳ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT