ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ಪ್ರಕರಣದ ಆರೋಪಿಗಳಿಗೆ 22ರಂದು ಗಲ್ಲು

ಅತ್ಯಾಚಾರ, ಕೊಲೆ ಅಪರಾಧಿಗಳ ಮರಣದಂಡನೆಗೆ ದೆಹಲಿ ನ್ಯಾಯಾಲಯ ಆದೇಶ
Last Updated 8 ಜನವರಿ 2020, 4:25 IST
ಅಕ್ಷರ ಗಾತ್ರ

ನವದೆಹಲಿ: ‘ನಿರ್ಭಯಾ’ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಕ್ರೂರ ಕೃತ್ಯ ನಡೆದು ಏಳು ವರ್ಷಗಳ ಬಳಿಕ, ಅಪರಾಧಿಗಳಿಗೆ ಇದೇ 22ರಂದು ಮರಣ ದಂಡನೆ ಜಾರಿ ಮಾಡುವಂತೆ ದೆಹಲಿಯ ನ್ಯಾಯಾಲಯವೊಂದು ಆದೇಶಿಸಿದೆ.

ತಿಹಾರ್‌ ಜೈಲಿನಲ್ಲಿರುವ ಅಪರಾಧಿಗಳಾದ ಅಕ್ಷಯ್‌, ಮುಕೇಶ್‌, ಪವನ್‌ ಮತ್ತು ವಿಜಯ್‌ ಮುಂದೆ ಇರುವ ನ್ಯಾಯಾಂಗದ ಎಲ್ಲ ಅವಕಾಶಗಳು ಇನ್ನೂ ಮುಗಿದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಪರಿಹಾರಾತ್ಮಕ ಅರ್ಜಿ ಸಲ್ಲಿಕೆ ಮತ್ತು ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಕೆ ಅವಕಾಶ ಅವರಿಗೆ ಇನ್ನೂ ಇದೆ.

ಹಾಗಿದ್ದರೂ, ಇದೇ 22ರಂದು ಬೆಳಿಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಮರಣದಂಡನೆ ಜಾರಿ ಮಾಡುವಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸತೀಶ್‌ ಕುಮಾರ್‌ ಅರೋರಾ ಅವರು ಆದೇಶಿಸಿದ್ದಾರೆ. ಅಪರಾಧಿಗಳಿಗೆ ಮರಣದಂಡನೆಯನ್ನು ತ್ವರಿತವಾಗಿ ಜಾರಿ ಮಾಡಬೇಕು ಎಂದು ಕೋರಿ ನಿರ್ಭಯಾ ಹೆತ್ತವರು ಅರ್ಜಿ ಸಲ್ಲಿಸಿದ್ದರು.

ಅಪರಾಧಿಗಳು ಸಲ್ಲಿಸಿರುವ ಅರ್ಜಿ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲ ಎಂದು ಹೇಳಿದ ದೆಹಲಿ ಸರ್ಕಾರದ ಪರ ವಕೀಲ ರಾಜೀವ್‌ ಮೋಹನ್‌ ಅವರು ನಿರ್ಭಯಾ ಹೆತ್ತವರ ಅರ್ಜಿಗೆ ಬೆಂಬಲ ಸೂಚಿಸಿದರು. ರಾಷ್ಟ್ರಪತಿಯ ಮುಂದೆಯೂ ಅಪರಾಧಿಗಳ ಅರ್ಜಿಗಳು ಬಾಕಿ ಇಲ್ಲ. ಹಾಗಾಗಿ, ಮರಣದಂಡನೆ ಜಾರಿ ಆದೇಶ ನೀಡಲು ಯಾವ ತೊಡಕೂ ಇಲ್ಲ. ಅಪರಾಧಿಗಳು ಯಾವುದೇ ಅರ್ಜಿ ಸಲ್ಲಿಸಲು ಬಯಸಿದರೆ, ಮರಣದಂಡನೆ ಜಾರಿ ಆದೇಶ ಮತ್ತು ಅದರ ಜಾರಿಯ ನಡುವಣ ಅವಧಿಯಲ್ಲಿ ಸಲ್ಲಿಸಲು ಅವಕಾಶ ಇದೆ ಎಂದು ಮೋಹನ್‌ ಅವರು ಹೇಳಿದರು.

ಪರಿಹಾರಾತ್ಮಕ ಅರ್ಜಿ ಶೀಘ್ರ

ಈ ಪ್ರಕರಣದಲ್ಲಿ ನ್ಯಾಯಾಲಯದ ಸಹಾಯಕರಾಗಿ ನೇಮಕವಾಗಿರುವ ವೃಂದಾ ಗ್ರೋವರ್‌ ಅವರು ಅಪರಾಧಿಗಳನ್ನು ಸಂದರ್ಶಿಸಿ ಸಿದ್ಧಪಡಿಸಿದ ವರದಿಯನ್ನು ಸಲ್ಲಿಸಿದರು. ಪರಿಹಾರಾತ್ಮಕ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರವೇ ಪರಿಹಾರಾತ್ಮಕ ಅರ್ಜಿ ಸಲ್ಲಿಸಲಾಗುವುದು ಎಂದು ಅಕ್ಷಯ್‌ ಪರ ವಕೀಲ ಎಂ.ಎಲ್‌. ಶರ್ಮಾ ಅವರು ಹೇಳಿದ್ದಾರೆ.

ಗಲ್ಲು ಶಿಕ್ಷೆಯನ್ನು ವಿಳಂಬ ಮಾಡಲು ಅಪರಾಧಿಗಳು ತಂತ್ರ ಮಾಡುತ್ತಿದ್ದಾರೆ. ಮರಣದಂಡನೆಯನ್ನು ಸುಪ್ರೀಂ ಕೋರ್ಟ್‌ ಹಿಡಿದಿದೆ. ಅವರ ಮರುಪರಿಶೀಲನಾ ಅರ್ಜಿಯನ್ನು ಕೂಡ ವಜಾ ಮಾಡಲಾಗಿದೆ ಎಂದು ನಿರ್ಭಯಾ ಹೆತ್ತವರ ವಕೀಲ ಕೆ.ಕೆ. ಝಾ ಹೇಳಿದ್ದಾರೆ.

ಮನ ಕಲಕಿದ ಪ್ರಕರಣ

ದೆಹಲಿಯ ಅರೆವೈದ್ಯಕೀಯ ವಿದ್ಯಾರ್ಥಿನಿ 23 ವರ್ಷದ ನಿರ್ಭಯಾ ಮೇಲೆ 2012ರ ಡಿಸೆಂಬರ್‌ 16ರ ರಾತ್ರಿ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ನಡೆದಿತ್ತು. ಚಲಿಸುತ್ತಿದ್ದ ಬಸ್‌ನಲ್ಲಿ ಆರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದರು. ನಿರ್ಭಯಾ ಮತ್ತು ಅವರ ಜತೆಗಿದ್ದ ಗೆಳೆಯನನ್ನು ಬೆತ್ತಲಾಗಿಸಿ ರಸ್ತೆಗೆ ಎಸೆದಿದ್ದರು. ನಿರ್ಭಯಾ ಅವರು ಡಿ. 29ರಂದು ಸಿಂಗಪುರದ ಆಸ್ಪತ್ರೆಯಲ್ಲಿ ಮೃತಪಟ್ಟರು.

ಈ ಘಟನೆಯು ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಅತ್ಯಾಚಾರಕ್ಕೆ ಮರಣದಂಡನೆ ಗರಿಷ್ಠ ಶಿಕ್ಷೆ ಎಂದುಅಪರಾಧ ಕಾನೂನಿಗೆ 2013ರಲ್ಲಿ ತಿದ್ದುಪಡಿ ತರುವುದಕ್ಕೂ ಇದು ಕಾರಣವಾಗಿತ್ತು.

***

ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಈ ಆದೇಶವು ಇನ್ನಷ್ಟು ಗಟ್ಟಿಗೊಳಿಸಿದೆ. ನನ್ನ ಮಗಳಿಗೆ ನ್ಯಾಯ ಸಿಕ್ಕಿದೆ. ದೇಶದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿದೆ

-ನಿರ್ಭಯಾ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT