ಮಂಗಳವಾರ, ಸೆಪ್ಟೆಂಬರ್ 17, 2019
21 °C

‘ಬಿಜೆಪಿ ಮೋದಿ ಕೇಂದ್ರಿತ ಅಲ್ಲ’- ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರತಿಪಾದನೆ

Published:
Updated:
Prajavani

ನವದೆಹಲಿ: ಬಿಜೆಪಿ ಸಿದ್ಧಾಂತ ಆಧಾರಿತ ಪಕ್ಷವೇ ಹೊರತು ವ್ಯಕ್ತಿ ಕೇಂದ್ರಿತ ಪಕ್ಷ  ಅಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. 

‘ಬಿಜೆಪಿ ಹಿಂದೆಂದೂ ಅಟಲ್‌ ಅಥವಾ ಅಡ್ವಾಣಿ ಅವರ ಪಕ್ಷವಾಗಿರಲಿಲ್ಲ. ಹಾಗೆಯೇ ಈಗ ಅದು ಅಮಿತ್ ಶಾ ಅಥವಾ ನರೇಂದ್ರ ಮೋದಿ ಅವರ ಪಕ್ಷವಾಗಿ ಬದಲಾಗಿಲ್ಲ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ. 

ಬಿಜೆಪಿ ಸಿದ್ಧಾಂತ ಆಧಾರಿತ ಪಕ್ಷವಾಗಿರುವುದರಿಂದ ತಮ್ಮ ಪಕ್ಷವನ್ನು ಮೋದಿ ಕೇಂದ್ರಿತ ಎಂದು ಹೇಳುವುದೇ ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬಿಜೆಪಿ ಮತ್ತು ಮೋದಿ ಪರಸ್ಪರ ಪೂರಕ ಎಂದೂ ಹೇಳಿದ್ದಾರೆ. 

1976ರಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ‘ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ’ ಎಂದು ಆಗ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಡಿ.ಕೆ. ಬರೂವಾ ಹೇಳಿದ್ದರು. ಅದೇ ರೀತಿ ಈಗ, ‘ಮೋದಿ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಮೋದಿ’ ಎಂದು ಹೇಳಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ, ‘ಬಿಜೆಪಿ ಯಾವತ್ತೂ ವ್ಯಕ್ತಿ ಕೇಂದ್ರಿತ ಆಗಿರಲಿಲ್ಲ. ಬಿಜೆಪಿಯಲ್ಲಿ ಕುಟುಂಬದ ಆಳ್ವಿಕೆ ಸಾಧ್ಯವಿಲ್ಲ. ಪಕ್ಷದ ಸಂಸದೀಯ ಮಂಡಳಿಯೇ ಎಲ್ಲ ನಿರ್ಧಾರಗಳನ್ನೂ ಕೈಗೊಳ್ಳುತ್ತದೆ’ ಎಂದು ಉತ್ತರಿಸಿದರು. 

‘ಪಕ್ಷ ಪ್ರಬಲವಾಗಿದ್ದು ನಾಯಕ ದುರ್ಬಲವಾಗಿದ್ದಾಗ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ. ಹಾಗೆಯೇ, ಪಕ್ಷದುರ್ಬಲವಾಗಿದ್ದು ನಾಯಕ ಪ್ರಬಲವಾಗಿದ್ದರೂ ಚುನಾವಣೆ ಗೆಲ್ಲಲಾಗದು. ಆದರೆ, ಕೆಲವೊಮ್ಮೆ ಜನಪ್ರಿಯ ನಾಯಕರು ಸಹಜವಾಗಿಯೇ ಮುನ್ನೆಲೆಗೆ ಬರುತ್ತಾರೆ’ ಎಂದು ಗಡ್ಕರಿ ಹೇಳಿದ್ದಾರೆ. 

Post Comments (+)