ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್‌ ಸಂಪುಟ ವಿಸ್ತರಣೆ: ಬಿಜೆಪಿ ಸ್ಥಾನ ಖಾಲಿ

Last Updated 2 ಜೂನ್ 2019, 19:46 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಭಾನುವಾರ ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಎಲ್‌ಜೆಪಿಗೆ ನೀಡಿದ್ದ ಸ್ಥಾನಗಳನ್ನು ಖಾಲಿ ಬಿಟ್ಟು, ತಮ್ಮ ಪಕ್ಷದ ಎಂಟು ಮಂದಿಯನ್ನು ಮಾತ್ರ ಸಂಪುಟಕ್ಕೆ ಸೇರಿಸಿ ಕೊಂಡಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಜೆಡಿಯುಗೆ ಒಂದೇ ಸ್ಥಾನ ನೀಡಿದ್ದಕ್ಕೆ ಬಿಜೆಪಿ ಜೊತೆ ಮುನಿಸಿಕೊಂಡಿದ್ದ ನಿತೀಶ್‌ ಅವರು ಕೇಂದ್ರ ಸರ್ಕಾರದಲ್ಲಿ ಭಾಗಿಯಾಗದಿರಲು ತೀರ್ಮಾನಿಸಿದ್ದರು. ಬಿಹಾರದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಬಿಜೆಪಿಗೆ ಅವರು ಒಂದು ಸ್ಥಾನವನ್ನು ನೀಡಿದ್ದರು. ಆದರೆ ಬಿಜೆಪಿಯ ಯಾರೂ ಭಾನುವಾರ ಪ್ರಮಾಣವಚನ ಸ್ವೀಕರಿಸಲಿಲ್ಲ.

ಸಂಪುಟ ವಿಸ್ತರಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿತೀಶ್‌, ‘ಸಂಪುಟದಲ್ಲಿ ಬಿಜೆಪಿಗೆ ಒಂದು ಸ್ಥಾನ ನೀಡಲಾಗಿತ್ತು. ಆದರೆ ಆ ಪಕ್ಷ ಆಸಕ್ತಿ ತೋರಿಸಲಿಲ್ಲ’ ಎಂದರು.

ನರೇಂದ್ರ ಯಾದವ್‌, ಶ್ಯಾಮ ರಜಾಕ್‌, ಅಶೋಕ್‌ ಚೌಧರಿ, ಬಿಮಾ ಭಾರ್ತಿ, ಸಂಜಯ್‌ ಝಾ, ರಾಂಸೇವಕ್‌ ಸಿಂಗ್‌, ನೀರಜ್‌ ಕುಮಾರ್‌ ಮತ್ತು ಲಕ್ಷ್ಮೇಶ್ವರ ರಾಯ್‌ ಅವರು ಬಿಹಾರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದವರು. ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಲಾಲ್‌ಜಿತ್‌ ಟಂಡನ್‌ ಅವರು ಎಂಟು ಮಂದಿಗೆ ಪ್ರಮಾಣವಚನ ಬೋಧಿಸಿದರು.

ಇವರಲ್ಲಿ, ಸಂಜಯ್‌ ಝಾ ಅವರನ್ನು ದರ್ಭಾಂಗ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿಸಲು ನಿತೀಶ್‌ ಬಯಸಿದ್ದರು. ಆದರೆ ಅಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಎರಡು ದಿನಗಳ ಹಿಂದೆಯಷ್ಟೇ ಝಾ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿದ ನಿತೀಶ್‌, ಈಗ ಅವರಿಗೆ ಬಿಹಾರದ ಜಲಸಂಪನ್ಮೂಲ ಖಾತೆಯ ಹೊಣೆ ನೀಡಿದ್ದಾರೆ.

‘ನಮ್ಮಲ್ಲಿ ಯಾವುದೇ ಸಿಟ್ಟು ಇಲ್ಲ. ಬಿಜೆಪಿಯ ಜೊತೆ ಚರ್ಚಿಸಿಯೇ ಸಂಪುಟ ವಿಸ್ತರಣೆ ಮಾಡಲಾಗಿದೆ’ ಎಂದು ನಿತೀಶ್‌ ಹೆಳಿದ್ದಾರೆ. ಆದರೆ, ನಿತೀಶ್‌ ಅವರ ಕಾರ್ಯವೈಖರಿಯನ್ನು ತಿಳಿದಿರುವವರು, ‘ಮಿತ್ರಪಕ್ಷಗಳನ್ನು ಕೆಟ್ಟದಾಗಿ ನಡೆಸಿಕೊಂಡಿರುವ ಬಿಜೆಪಿ ನಾಯಕರಿಗೆ ಈ ಮೂಲಕ ಅವರು ಸಂದೇಶ ರವಾನಿಸಿದ್ದಾರೆ’ ಎನ್ನುತ್ತಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಪ್ರಾತಿನಿಧ್ಯ ನೀಡುವ ವಿಚಾರದಲ್ಲಿ ಬಿಜೆಪಿ– ಜೆಡಿಯು ನಡುವೆ ವೈಮನಸ್ಸು ಉಂಟಾಗಿದೆ. ‘ಸಂಸತ್‌ ಸದಸ್ಯರ ಸಂಖ್ಯೆಗೆ ಅನುಸಾರ ಪ್ರಾತಿನಿಧ್ಯ ಲಭಿಸದಿರುವುದರಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಭಾಗಿಯಾಗದಿರಲು ಪಕ್ಷ ತೀರ್ಮಾನಿಸಿದೆ’ ಎಂದು ನಿತೀಶ್‌ ಕುಮಾರ್‌ ಹೇಳಿದ್ದರು.

‘ನಿತೀಶ್‌ ನಮ್ಮ ನಾಯಕ’

‘ಎನ್‌ಡಿಎಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಿಹಾರದಲ್ಲಿ ನಿತೀಶ್‌ ಕುಮಾರ್‌ ನಮ್ಮ ನಾಯಕ’ ಎಂದು ಕೇಂದ್ರದ ಸಚಿವ, ಎಲ್‌ಜೆಪಿ ಮುಖ್ಯಸ್ಥ ರಾಮ್‌ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಭಾಗಿಯಾಗದಿರಲು ನಿತೀಶ್‌ ತೀರ್ಮಾನಿಸಿರುವುದಕ್ಕೆ ಸಂಬಂಧಿಸಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪಾಸ್ವಾನ್‌, ‘ಅವರ ಮಾತಿಗೆ ಬೇರೆಬೇರೆ ಅರ್ಥಗಳನ್ನು ಕಲ್ಪಿಸುವುದು ಸರಿಯಲ್ಲ. ನಾನು ಹಿಂದೆಯೂ ಮೈತ್ರಿಕೂಟದಲ್ಲಿದ್ದೆ, ಈಗಲೂ ಇದ್ದೇನೆ, ಮುಂದೆಯೂ ಇರುತ್ತೇನೆ ಎಂದು ಅವರು (ನಿತೀಶ್‌) ಸ್ಪಷ್ಟಪಡಿಸಿದ್ದಾರೆ’ ಎಂದರು.

ನಿತೀಶ್‌ ಅವರ ಮನವೊಲಿಸಿ, ಮೋದಿ ಸರ್ಕಾರವನ್ನು ಸೇರುವಂತೆ ತಾವು ಅವರ ಮೇಲೆ ಒತ್ತಡ ಹೇರುವಿರೇ ಎಂಬ ಪ್ರಶ್ನೆಗೆ, ‘ತಮ್ಮ ನಿರ್ಧಾರಗಳನ್ನು ಕೈಗೊಳ್ಳಲು ಅವರು ಶಕ್ತರಾಗಿದ್ದಾರೆ. ಸಂಪೂರ್ಣವಾಗಿ ಎನ್‌ಡಿಎ ಜೊತೆಗಿದ್ದೇನೆ ಎಂದು ಅವರೇ ಹೇಳಿದ ಮೇಲೆ ಮನವೊಲಿಸುವ ಅಗತ್ಯವಾದರೂ ಏನು’ ಎಂದು ಪ್ರಶ್ನಿಸಿದರು. ರಾಜ್ಯ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಪಾಸ್ವಾನ್‌ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT