ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿ ಇಲ್ಲ, ಕಾಂಗ್ರೆಸ್‌ ಸಭೆ ಆಹ್ವಾನ ಬಂದಿಲ್ಲ: ಶಿವಸೇನಾ ಸ್ಪಷ್ಟನೆ

Last Updated 13 ಜನವರಿ 2020, 13:09 IST
ಅಕ್ಷರ ಗಾತ್ರ

ಮುಂಬೈ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋದಂಣಿ (ಎನ್‌ಆರ್‌ಸಿ) ಕುರಿತು ಚರ್ಚಿಸಲು ಕಾಂಗ್ರೆಸ್‌ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಗೆ ಗೈರಾಗಿದ್ದರ ಬಗ್ಗೆ ಶಿವಸೇನೆ ಸ್ಪಷ್ಟನೆ ನೀಡಿದೆ.

ಸಭೆಗೆ ಹಾಜರಾಗದಿದ್ದಕ್ಕೆ ಸಂವಹನ ಕೊರತೆಯೇ ಕಾರಣ ಎಂದು ಹೇಳಿದೆ. ಜೊತೆಗೆ ಈಗಿರುವ ಮಾದರಿಯಲ್ಲಿ ಸಿಎಎ ಅನ್ನು ಮಹಾರಾಷ್ಟ್ರದಲ್ಲಿ ಅನುಷ್ಠಾನಗೊಳಿಸುವುದಿಲ್ಲ ಎಂದೂ ಸೋಮವಾರ ಶಿವಸೇನೆಘೋಷಿಸಿದೆ.

‘ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ ಕರೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಆಹ್ವಾನವೂ ಬಂದಿಲ್ಲ. ಹಾಗಾಗಿ ಇಲ್ಲಿಯವರೆಗೆ ನಾವು ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಶಿವಸೇನೆ ಸಂಸದ ವಿನಾಯಕ್‌ ರಾವುತ್‌ ತಿಳಿಸಿದರು.

‘ಕಾಂಗ್ರೆಸ್‌ ನೇತೃತ್ವದ ಸಭೆಗೆ ಹಾಜರಾಗದಿರುವುದಕ್ಕೆ ಮಹಾರಾಷ್ಟ್ರ ವಿಕಾಸ್‌ ಅಘಾಡಿಯಲ್ಲಿ ಭಿನ್ನಮತ ಎದ್ದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸಂವಹನ ಕೊರತೆಯಿಂದ ಸಭೆಗೆ ಹೋಗಲು ಸಾಧ್ಯವಾಗಿಲ್ಲವೇ ಹೊರತು, ಮೂರು ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ಶಿವಸೇನೆ ವಕ್ತಾರ ಸಂಜಯ್‌ ರಾವುತ್‌ ಸ್ಪಷ್ಟಪಡಿಸಿದ್ದಾರೆ.

ಸಿಎಎ ಮಸೂದೆ ಪರ ಮತ

ಲೋಕಸಭೆಯಲ್ಲಿ ಮಸೂದೆ ಮಂಡಿಸಿದಾಗ ಶಿವಸೇನೆ ಸಿಎಎ ಪರ ಮತಚಲಾಯಿಸಿತ್ತು. ಅದಾಗಲೇ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆ ಮೈತ್ರಿ ಸರ್ಕಾರ ರಚಿಸಿದ್ದರಿಂದ, ಆ ಪಕ್ಷಗಳ ಒತ್ತಾಯದ ಮೇರೆಗೆ ರಾಜ್ಯಸಭೆಯಲ್ಲಿ ಮಸೂದೆಯನ್ನು ವಿರೋಧಿಸಿತ್ತು.

‘ಈ ವಿಚಾರದ ಬಗ್ಗೆ ಮುಂಬೈನಲ್ಲಿನ ಶಿವಸೇನೆಯ ಮುಖಂಡರು ಮೌನವಹಿಸಲಿ ಹಾಗೂ ಶಿವಸೇನೆಯ ಲೋಕಸಭೆ ಮುಖ್ಯಸ್ಥರೇ ಈ ಬಗ್ಗೆ ನಿರ್ಧರಿಸಲಿ, ಮಾತನಾಡಲಿ’ ಎಂದು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.

ಇದಾಗ್ಯೂ ಮಹಾರಾಷ್ಟ್ರ ಮುಖ್ಯಮಂತ್ರಿ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ಮೂಲಕ ರಾಜ್ಯ ಯಾವುದೇ ಜನರಿಗೆ ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ’ ಎಂದು ಪದೇ ಪದೇ ಸ್ಪಷ್ಟಪಡಿಸಿದ್ದಾರೆ.

ಸಿಎಎ ಕಾಯ್ದೆ ವಿರುದ್ಧವಾಗಿ ಕಾಂಗ್ರೆಸ್‌ ಸಾಕಷ್ಟು ಪ್ರತಿಭಟನೆಗಳನ್ನು ನಡೆಸಿದೆ. ಜನವರಿ 24ರಂದು ನಡೆದ ಸಿಎಎ ವಿರೋಧಿ ಪ್ರತಿಭಟನೆಗೆ ಮೊದಲ ಬಾರಿಗೆ ಎನ್‌ಸಿಪಿ ನಾಯಕ ಶರದ್‌ ಪವಾರ್ ಅವರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT