ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್‌ ಜೈಲುವಾಸ ತಪ್ಪಿಸಿಕೊಂಡ ಚಿದಂಬರಂ

ನಾಳೆವರೆಗೆ ಸಿಬಿಐ ಕಸ್ಟಡಿಗೆ ನೀಡಲು 'ಸುಪ್ರೀಂ' ಸೂಚನೆ
Last Updated 3 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ಸೆ. 5ರವರೆಗೆ ವಿಸ್ತರಿಸಿ ದೆಹಲಿಯ ನ್ಯಾಯಾಲಯ ಆದೇಶ ನೀಡಿದೆ.

ಕಸ್ಟಡಿ ವಿಚಾರಣೆ ಅಗತ್ಯ ಇಲ್ಲ ಎಂದು ಸಿಬಿಐ ಹೇಳಿದರೂ ಚಿದಂಬರಂ ಅವರನ್ನು ಕಸ್ಟಡಿಯಲ್ಲಿ ಉಳಿಸಿಕೊಳ್ಳುವಂತೆ ಸೂಚಿಸಲಾಯಿತು. ಇದರಿಂದಾಗಿ, ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಅನುಮೋದನೆ ನೀಡಿಕೆಯಲ್ಲಿ ಅಕ್ರಮ ಆಗಿದೆ ಎಂಬ ಪ್ರಕರಣದಲ್ಲಿ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗುವುದು ತಪ್ಪಿತು. ನ್ಯಾಯಾಂಗ ಬಂಧನಕ್ಕೆ ಒಳಗಾದರೆ ಅವರು ತಿಹಾರ್‌ ಜೈಲಿಗೆ ಹೋಗಬೇಕಾಗುತ್ತಿತ್ತು.

ಚಿದಂಬರಂ ಅವರನ್ನು ಸೆ. 5ರವರೆಗೆ ಸಿಬಿಐ ಕಸ್ಟಡಿಯಲ್ಲಿ ಉಳಿಸಿಕೊಳ್ಳಬಹುದು ಎಂದು ದೆಹಲಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯವುದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ ಹೇಳಿತ್ತು.

ಚಿದಂಬರಂ ಅವರನ್ನು ಕಸ್ಟಡಿಯಲ್ಲಿ ಇನ್ನಷ್ಟು ತನಿಖೆಗೆ ಒಳಪಡಿಸುವ ಅಗತ್ಯ ಇಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದರು.

‘ಕಾನೂನು ಪ್ರಕಾರವೇ ಪ್ರಕ್ರಿಯೆ ನಡೆಯಲಿ. ಎರಡು ದಿನಗಳ ಮಟ್ಟಿಗೆ ವ್ಯಕ್ತಿಯೊಬ್ಬರು ನ್ಯಾಯಾಂಗ ಬಂಧನಕ್ಕೆ ಯಾಕೆ ಒಳಪಡಬಾರದು’ ಎಂದು ತುಷಾರ್‌ ಪ್ರಶ್ನಿಸಿದರು.

ಆದರೆ, ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಮತ್ತು ಎ.ಎಸ್‌. ಬೋಪಣ್ಣ ಅವರ ಪೀಠವು ಈ ವಾದವನ್ನು ಪುರಸ್ಕರಿಸಲಿಲ್ಲ. ‘ಅಧೀನ ನ್ಯಾಯಾಲಯದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಸಿಬಿಐ ಕಸ್ಟಡಿಗೆ ಸಂಬಂಧಿಸಿ ಯಥಾಸ್ಥಿತಿ ಮುಂದುವರಿಯುವುದೇ ಸರಿ. ಗುರುವಾರದವರೆಗೆ ಅವರು ಸಿಬಿಐ ಕಸ್ಟಡಿಯಲ್ಲಿಯೇ ಇರಲಿ’ ಎಂದು ಪೀಠ ಹೇಳಿತು. ಸಿಬಿಐ ಕಸ್ಟಡಿಯನ್ನು ಗುರುವಾರದವರೆಗೆ ವಿಸ್ತರಿಸಲು ಅಧೀನ ನ್ಯಾಯಾಲಯಕ್ಕೆ ಸೂಚಿಸಿತು.

ತಮ್ಮ ಬಂಧನ ಮತ್ತು ಕಸ್ಟಡಿಯ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಈ ಅರ್ಜಿಯ ವಿಚಾರಣೆ ನಡೆಯಲಿದೆ.

ಜಿಡಿಪಿ ಪ್ರಗತಿ ಕುಸಿತಕ್ಕೆ ವ್ಯಂಗ್ಯ

ವಿಚಾರಣಾ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಚಿದಂಬರಂ ಅವರು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತದ ಬಗ್ಗೆ ವ್ಯಂಗ್ಯವಾದ ಹೇಳಿಕೆ ನೀಡಿದರು. ಸಿಬಿಐ ಕಸ್ಟಡಿಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆಯೊಂದನ್ನು ಕೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಏನದು ಶೇ 5? ನಿಮಗೆ ಶೇ 5 ನೆನಪಿದೆಯೇ’ ಎಂದು ಪ್ರಶ್ನಿಸಿದರು.

ಈ ಪ್ರಸಂಗದ ಪುಟ್ಟ ವಿಡಿಯೊವನ್ನು ಚಿದಂಬರಂ ಮಗ ಕಾರ್ತಿ ರಿಟ್ವೀಟ್‌ ಮಾಡಿದ್ದಾರೆ. ‘ಆರ್ಥಿಕ ಸ್ಥಿತಿಯ ಬಗ್ಗೆ ಚಿದಂಬರಂ ಪ್ರತಿಕ್ರಿಯೆ’ ಎಂದು ಇದಕ್ಕೆ ಅವರು ಅಡಿಬರಹ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT